ಎನ್ ಡಿ ಎ ಯಲ್ಲಿ ಒಡಕು ಉಂಟಾಗಿದೆ. ಚುನಾವಣಾ ಆಯೋಗದ ವಿರುದ್ಧ ಚಿರಾಗ್ ಪಾಸ್ವಾನ್ ಧ್ವನಿ ಎತ್ತಿದ್ದಾರೆ. ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಬೇಕು ಎಂದು ಜೆಡಿಎಸ್ ಕೂಡಾ ಹೇಳಿದೆ. 2023 ರಲ್ಲಿ ಚುನಾವಣಾಧಿಕಾರಿಗಳ ಆಯ್ಕೆಯ ಮಸೂದೆಯನ್ನು ತಾನು ಬೆಂಬಲಿಸಿದ್ದು ತಪ್ಪಾಯಿತು ಎಂದು ಎನ್ ಡಿ ಎ ಬೆಂಬಲಿಗ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಕಾಂಗ್ರೆಸ್ ವಿರುದ್ಧದ ಸಿಟ್ಟಿನಿಂದ ಡಿ ಎಂ ಕೆ ಮೋದಿ ಸರಕಾರವನ್ನು ಬೆಂಬಲಿಸುತ್ತದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಅದು ಈಗ ಗ್ಯಾನೇಶ್ ಕುಮಾರ್ ಹೋಗಲೇ ಬೇಕು, ಇದರಲ್ಲಿ ರಾಜಿ ಇಲ್ಲ ಎಂದಿದೆ. ಇನ್ನೂ ಎನ್ ಡಿ ಎ ಯೊಂದಿಗೆ ಇದ್ದರೆ ತಮಗೆ ಹೊಸ ತಲೆಮಾರಿನ ಓಟುಗಳು ಸಿಗಲಾರವು ಎಂದು ಎನ್ ಡಿ ಎ ಜತೆಗಿನ ಪಕ್ಷಗಳಿಗೆ ಅರಿವಾಗಲಾರಂಭಿಸಿದೆ. ಎನ್ ಡಿ ಎ ಮಾತ್ರವಲ್ಲ, ಬಿಜೆಪಿಯ ಒಳಗೂ ಅಪಸ್ವರಗಳು ಎದ್ದಿವೆ ಎನ್ನಲಾಗಿದೆ – ಶ್ರೀನಿವಾಸ ಕಾರ್ಕಳ, ಸಮಾಜ ಚಿಂತಕರು.
ನರೇಂದ್ರ ಮೋದಿಯವರ ನೇತೃತ್ವದ ಒಕ್ಕೂಟ ಸರಕಾರದ ಪಾಲಿಗೆ 2026 ಬಹುತೇಕ ಸುಗಮವಾಗಿಯೇ ಆರಂಭವಾಗಿತ್ತು. ಚುನಾವಣೆಗಳ ಆನಂತರ ಚುನಾವಣೆಗಳನ್ನು ಬಿಜೆಪಿ ಗೆಲ್ಲುತ್ತಲೇ ಹೋಯಿತು. ಬಿಹಾರವನ್ನು ಭಾರೀ ಬಹುಮತದೊಂದಿಗೆ ಗೆದ್ದಿತು, ದಶಕ ದಶಕಗಳ ಯತ್ನದ ಬಳಿಕ ಬಂಗಾಳವನ್ನೂ ಅದು ತನ್ನ ಬುಟ್ಟಿಗೆ ಹಾಕಿಕೊಂಡಿತು; ಹೇಗೆ ಎನ್ನುವುದು ಬೇರೆಯದೇ ಮಾತು.
ಬಂಗಾಳದಲ್ಲಿ ಅದು ಎಂತಹ ಬಹುಮತವನ್ನು ಗಳಿಸಿತು ಎಂದರೆ, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಅನ್ನು ಸರ್ವನಾಶ ಮಾಡಿತು ಎಂದರೂ ಅತಿಶಯದ ಮಾತಾಗದು. ಟಿಎಂಸಿ ಎರಡು ಹೋಳಾಗಿ ದೊಡ್ಡ ಹೋಳು ಬಿಜೆಪಿಯೊಂದಿಗೆ ಕೈಜೋಡಿಸಿತು. ಟಿಎಂಸಿಯ ಇಪ್ಪತ್ತು ಮಂದಿ ಸಂಸದರು ಪಕ್ಷ ತೊರೆದು ಎನ್ ಸಿ ಪಿ ಸಿ ಎಂಬ, ಯಾರೂ ಕೇಳಿಯೇ ಇರದ ಪಕ್ಷವನ್ನು ಸೇರಿಕೊಂಡರು (ಈ ಪಕ್ಷ ಮುಂದೆ ಬಿಜೆಪಿಯೊಂದಿಗೆ ವಿಲೀನ ಆಗುವುದರ ಬಗ್ಗೆ ಯಾರಿಗೂ ಅನುಮಾನವಿಲ್ಲ).
ಈ ಬೆಳವಣಿಗೆಗಳು ಕೇವಲ ರಾಜ್ಯಗಳನ್ನು ಗೆದ್ದುಕೊಳ್ಳುವಲ್ಲಿಗೆ ಸೀಮಿತವಾಗಲಿಲ್ಲ. ಬಿಜೆಪಿಗೆ ಬೇರೆಯದೇ ಅದ ಕೆಲವು ಕನಸುಗಳಿದ್ದವು. ಪಕ್ಷವನ್ನು ನೂರ್ಕಾಲ ಅಧಿಕಾರದಲ್ಲಿ ಉಳಿಯುವಂತೆ ಮಾಡುವ ಯೋಜನೆಗಳು. ಅದರಲ್ಲಿ ಒಂದು, ʼಕ್ಷೇತ್ರ ಮರುವಿಂಗಡಣೆ ಅಥವಾ ಡಿಲಿಮಿಟೇಶನ್ʼ, ಇನ್ನೊಂದು ʼಒಂದು ರಾಷ್ಟ್ರ ಒಂದು ಚುನಾವಣೆʼ. ಕ್ಷೇತ್ರ ಮರುವಿಂಗಡಣೆಯನ್ನು ತನಗೆ ಬೇಕಾದಂತೆ ಮಾಡಿದರೆ (ಜೆರ್ರಿ ಮ್ಯಾಂಡರಿಂಗ್) ಸದಾ ಕಾಲವೂ ಪಕ್ಷ ಗೆಲ್ಲುತ್ತಲೇ ಹೋಗುವಂತೆ ಮಾಡುವುದು ಸುಲಭ. ಇದನ್ನು ಜಮ್ಮು ಕಾಶ್ಮೀರ ಮತ್ತು ಅಸ್ಸಾಂ ನಲ್ಲಿ ಈಗಾಗಲೇ ನೋಡಿದ್ದೇವೆ.
ಆದರೆ, ಕ್ಷೇತ್ರ ಮರುವಿಂಗಡಣೆ ಮಸೂದೆ ಪಾಸು ಮಾಡುವುದು ಅಷ್ಟು ಸುಲಭವಲ್ಲ. ಈಗಾಗಲೇ ಅದಕ್ಕೆ ದಕ್ಷಿಣದ ರಾಜ್ಯಗಳು ಪ್ರಬಲ ವಿರೋಧ ವ್ಯಕ್ತಪಡಿಸಿವೆ. ಸದರಿ ಮಸೂದೆ ಪಾಸ್ ಆಗಬೇಕಾದರೆ ಬೇರೆಯದೇ ಆದ ಕುತಂತ್ರದ ದಾರಿ ಅನುಸರಿಸಬೇಕು. ಅದಕ್ಕೆ ಸರಕಾರ ಕ್ಷೇತ್ರ ಮರುವಿಂಗಡಣೆ ಬಿಲ್ ನೊಂದಿಗೆ ಮಹಿಳಾ ಮಸೂದೆಯನ್ನೂ ಜೋಡಿಸಿತು. ಮತ್ತೆ ಇದು ಸಂಸತ್ತಿನಲ್ಲಿ ಅಂಗೀಕಾರವಾಗಬೇಕಾದರೆ ಸಂವಿಧಾನ ತಿದ್ದುಪಡಿಯಾಗಬೇಕು. ಸಂವಿಧಾನ ತಿದ್ದುಪಡಿಯಾಗಬೇಕಾದರೆ ಸಂಸತ್ತಿನಲ್ಲಿ ಮೂರನೇ ಎರಡು ಬಹುಮತವಿರಬೇಕು. ಅದು ಮೋದಿ ಸರಕಾರದ ಬಳಿ ಇಲ್ಲ. ಕಳೆದ ಎಪ್ರಿಲ್ ನಲ್ಲಿ ಈ ಮಸೂದೆಯನ್ನು ಮಂಡಿಸಹೋಗಿ ಅದು ಮೊದಲ ಬಾರಿಗೆ ಭಾರೀ ಮುಖಭಂಗ ಅನುಭವಿಸಿತ್ತು. ಇನ್ನೂ ಒಂದಷ್ಟು ಸಂಸದರನ್ನು ಬುಟ್ಟಿಗೆ ಹಾಕಿಕೊಂಡು ಮುಂದೆ ಮತ್ತೆ ಮಸೂದೆಯನ್ನು ಮಂಡಿಸುವ ಲೆಕ್ಕ ಅದು ಹಾಕಿಕೊಂಡಿತ್ತು.

ಬಂಗಾಳ ಗೆದ್ದು ಟಿಎಂಸಿ ಛಿದ್ರವಾಗುವಂತೆ ಮಾಡುತ್ತಲೇ ಅದರ ಕನಸು ಚಿಗುರಿಕೊಂಡಿತು. ಒಮ್ಮೆಲೇ 20 ಸಂಸದರು ಬುಟ್ಟಿಗೆಬಿದ್ದರು. ಸಾಲದೆಂಬಂತೆ ಉದ್ಧವ್ ಠಾಕ್ರೆಯವರ ಶಿವಸೇನೆಯನ್ನು ಒಡೆದು ಅದರ 7 ಸಂಸದರನ್ನು ಒಳಗೆ ಹಾಕಿಕೊಳ್ಳಲಾಯಿತು. ಅಲ್ಲಿಗೆ ಒಮ್ಮಲೇ 27 ಸಂಸದರು ಸಿಕ್ಕಂತಾಯಿತು. ಸಂಸತ್ತಿನಲ್ಲಿ ಎನ್ ಡಿ ಎ ಕೈ ಮೇಲಾಯಿತು, ಇನ್ನು ಯಾವುದೇ ಸಂವಿಧಾನ ತಿದ್ದುಪಡಿ ಮಾಡಬಹುದು ಎಂಬ ಮಾತು ಎಲ್ಲೆಲ್ಲೂ ಕೇಳಿಬರಲಾರಂಭಿಸಿತು.
ಸವಾಲುಗಳ ಆರಂಭ
ಇಷ್ಟು ಹೊತ್ತಿಗಾಗುವಾಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು ನಿರುದ್ಯೋಗಿ ಯುವಕರನ್ನು ʼಕಾಕ್ರೋಚ್ʼ ಗಳು ಎಂದು ಕರೆದುಬಿಟ್ಟರು. ಇದರಿಂದ ಕೋಟಿಗಟ್ಟಲೆ ಯುವಜನರು ಆಕ್ರೋಶಿತರಾದರು. ಅಭಿಜಿತ್ ದೀಪ್ಕೆ ನೇತೃತ್ವದಲ್ಲಿ ʼಕಾಕ್ರೋಚ್ ಜನತಾಪಾರ್ಟಿʼಯ (ಸಿಜೆಪಿ) ಉದಯಕ್ಕೆ ಕಾರಣವಾಯಿತು. ನೀಟ್ ಪರೀಕ್ಷಾ ಸೋರಿಕೆ ನೆಪ ಮಾಡಿಕೊಂಡು, ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ರಾಜಿನಾಮೆಯನ್ನು ಆಗ್ರಹಿಸಿ ದೆಹಲಿಯ ಜಂತರ ಮಂತರ್ ನಲ್ಲಿ ಸಾವಿರ ಸಾವಿರ ಯುವಮಂದಿ ಪ್ರತಿಭಟನೆ ನಡೆಸಿದರು. ಅಂತಿಮವಾಗಿ ಪ್ರಧಾನ್ ರಾಜಿನಾಮೆ ಕೊಡಬೇಕಾಯಿತು. ಇನ್ನು ಸಮಸ್ಯೆ ಇಲ್ಲ ಎಂದು ಮೋದಿ ಸರಕಾರ ಅಂದುಕೊಂಡಿರಬಹುದು.
ಆದರೆ, ʼಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿʼ ಎಂಬಂತೆ ಮುಖ್ಯ ಚುನಾವಣಾಧಿಕಾರಿ ಗ್ಯಾನೇಶ್ ಕುಮಾರ್ ನ ಎಸ್ ಐ ಆರ್ ಅಕ್ರಮಗಳು ನಿಧಾನಕ್ಕೆ ಸದ್ದುಮಾಡತೊಡಗಿದವು. ಈ ಎಸ್ ಐ ಆರ್ ದೇಶದ ಕೋಟಿಗಟ್ಟಲೆ ಜನರಿಗೆ ತೊಂದರೆ ಕೊಟ್ಟಿತ್ತು.13 ಕೋಟಿ ಪ್ರಜೆಗಳ ಮತಾಧಿಕಾರವನ್ನು ಕಿತ್ತು ಹಾಕಿತ್ತು. ಅವರೆಲ್ಲರ ಆಕ್ರೋಶ ಮಡುಗಟ್ಟಿಕೊಂಡಿದ್ದ ಹೊತ್ತಿನಲ್ಲಿಯೇ ʼಇಂಡಿಯನ್ ಎಕ್ಸ್ ಪ್ರೆಸ್ʼ ಪತ್ರಿಕೆ ಚುನಾವಣಾ ಆಯೋಗದ ಒಳ ಅಕ್ರಮಗಳನ್ನು ಎಳೆ ಎಳೆಯಾಗಿ ಬಯಲಿಗೆಳೆಯಿತು. ಪರಿಣಾಮ, ಒಮ್ಮೆಗೇ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿತು. ಎಡಸಂಘಟನೆಗಳು ದೊಡ್ಡ ಮಟ್ಟದಲ್ಲಿ ಬೀದಿಗಿಳಿದವು. ಇಂಡಿಯಾ ಒಕ್ಕೂಟವೂ ಕೈಜೋಡಿಸಿತು.
ಈ ಹೋರಾಟಕ್ಕೂ ದೇಶದ ಹೊಸತಲೆಮಾರಿನ (ಜೆನ್ ಝಿ ) ಯುವಕರ ಭಾರೀ ಬೆಂಬಲ ಇದೆ ಎನ್ನುವುದು ಅರಿವಾಗುತ್ತಲೇ ದೇಶದ ರಾಜಕೀಯ ಸಮೀಕರಣಗಳಲ್ಲಿ ಭಾರೀ ಬದಲಾವಣೆಯಾಯಿತು. ಜನರ ಸಿಟ್ಟು ಗ್ಯಾನೇಶ ಕುಮಾರ್ ಗೆ ನಿಲ್ಲಲಿಲ್ಲ, ಆತನ ಸೂತ್ರಧಾರಿಗಳಾದ ಮೋದಿ ಮತ್ತು ಶಾ, ಒಟ್ಟಾರೆಯಾಗಿ ಒಕ್ಕೂಟ ಸರಕಾರದ ಮೇಲೆ ತಿರುಗಿತು. ಪರಿಣಾಮ ಈಗ ನಮ್ಮ ಕಣ್ಣ ಮುಂದಿದೆ. ಎನ್ ಡಿ ಎ ಯಲ್ಲಿ ಒಡಕು ಉಂಟಾಗಿದೆ. ಚುನಾವಣಾ ಆಯೋಗದ ವಿರುದ್ಧ ಚಿರಾಗ್ ಪಾಸ್ವಾನ್ ಧ್ವನಿ ಎತ್ತಿದ್ದಾರೆ. ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಬೇಕು ಎಂದು ಜೆಡಿಎಸ್ ಕೂಡಾ ಹೇಳಿದೆ. 2023 ರಲ್ಲಿ ಚುನಾವಣಾಧಿಕಾರಿಗಳ ಆಯ್ಕೆಯ ಮಸೂದೆಯನ್ನು ತಾನು ಬೆಂಬಲಿಸಿದ್ದು ತಪ್ಪಾಯಿತು ಎಂದು ಎನ್ ಡಿ ಎ ಬೆಂಬಲಿಗ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಕಾಂಗ್ರೆಸ್ ವಿರುದ್ಧದ ಸಿಟ್ಟಿನಿಂದ ಡಿ ಎಂ ಕೆ ಮೋದಿ ಸರಕಾರವನ್ನು ಬೆಂಬಲಿಸುತ್ತದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಅದು ಈಗ ಗ್ಯಾನೇಶ್ ಕುಮಾರ್ ಹೋಗಲೇ ಬೇಕು, ಇದರಲ್ಲಿ ರಾಜಿ ಇಲ್ಲ ಎಂದಿದೆ. ಇನ್ನೂ ಎನ್ ಡಿ ಎ ಯೊಂದಿಗೆ ಇದ್ದರೆ ತಮಗೆ ಹೊಸ ತಲೆಮಾರಿನ ಓಟುಗಳು ಸಿಗಲಾರವು ಎಂದು ಎನ್ ಡಿ ಎ ಜತೆಗಿನ ಪಕ್ಷಗಳಿಗೆ ಅರಿವಾಗಲಾರಂಭಿಸಿದೆ. ಎನ್ ಡಿ ಎ ಮಾತ್ರವಲ್ಲ, ಬಿಜೆಪಿಯ ಒಳಗೂ ಅಪಸ್ವರಗಳು ಎದ್ದಿವೆ ಎನ್ನಲಾಗಿದೆ.

ಮುಂದಿನ ದಿನಗಳು ಕಷ್ಟಕರವಾಗಲಿವೆ
ಎಂದೇ, ಮೋದಿ ಸರಕಾರಕ್ಕೆ ಮುಂದಿನ ದಿನಗಳು ಕಷ್ಟಕರವಾಗಲಿವೆ. ಮಸೂದೆಗಳ, ಅದರಲ್ಲೂ ಸಂವಿಧಾನ ತಿದ್ದುಪಡಿ ಅಗತ್ಯ ಇರುವ ʼಡಿಲಿಮಿಟೇಶನ್ʼ ಮತ್ತು ʼಒಂದು ರಾಷ್ಟ್ರ ಒಂದು ಚುನಾವಣೆʼಯಂತಹ ಮಸೂದೆಗಳ ಅಂಗೀಕಾರ ಸುಲಭವಾಗಲಾರದು. ಈ ಒತ್ತಡ ಹೀಗೆಯೇ ಮುಂದುವರಿದು, ನಿತೀಶ್ ಕುಮಾರ್ ಮತ್ತು ಚಂದ್ರ ಬಾಬು ನಾಯ್ಡು ಅವರು ಬೆಂಬಲ ಹಿಂದೆಗೆದುಕೊಂಡರೆ ಸರಕಾರ ಯಾವ ಕ್ಷಣವೂ ಬೀಳಬಹುದು ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ.
ಒಟ್ಟಿನಲ್ಲಿ ಗ್ಯಾನೇಶ ಕುಮಾರನ ಚುನಾವಣಾ ಆಯೋಗ ಮೋದಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವುದಂತೂ ಸತ್ಯ. ನುಂಗಲೂ ಆಗದ ಉಗಿಯಲೂ ಆಗದ ಪರಿಸ್ಥಿತಿ. ಆತನನ್ನು ರಾಜಿನಾಮೆ ಕೊಡುವಂತೆ ಕೇಳಲು ʼಈಗೋʼ ಬಿಡುವುದಿಲ್ಲ. ಆತ ಮುಂದುವರಿದರೆ ಹೋರಾಟಗಳು ನಿತ್ಯವೂ ನಡೆದು ಸರಕಾರಕ್ಕೆ ಕೆಟ್ಟ ಹೆಸರು ಬರುತ್ತಲೇ ಹೋಗುತ್ತದೆ.
ಗ್ಯಾನೇಶ ಕುಮಾರನನ್ನು ಇಳಿಸುವ ಅಧಿಕಾರ ಸರಕಾರಕ್ಕೆ ಇಲ್ಲ. ಆದರೆ ಅವರಾಗಿಯೇ ರಾಜೀನಾಮೆ ನೀಡುವಂತೆ ಮಾಡಬಹುದು. ಆದರೆ, ಇದರಿಂದ ಸಮಸ್ಯೆ ಪರಿಹಾರವಾಗುವುದೇ? ಹೊಸ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವುದು ಮತ್ತೆ ಮೋದಿ ಮತ್ತು ಶಾ ಅವರ ಸಮಿತಿಯೇ ಅಲ್ಲವೇ? ಇನ್ನೂ ಮುಖ್ಯವಾಗಿ ಇಂದಿನ ಸಮಸ್ಯೆಗೆ ಗ್ಯಾನೇಶ್ ಒಬ್ಬರೇ ಕಾರಣರೇ? ಖ್ಯಾತ ಲೇಖಕಿ ಅರುಂಧತಿ ರಾಯ್ ಹೇಳುವ ಹಾಗೆ, ʼಗ್ಯಾನೇಶ್, ಮೋದಿ, ಶಾ ಬೇರೆ ಬೇರೆಯಲ್ಲ; ಒಂದೇ. ಒಂದರೊಳಗೊಂದು ಐಕ್ಯವಾದ ಮಿಶ್ರಲೋಹದ (ಅಲಾಯ್) ಹಾಗೆ. ಸಮಸ್ಯೆ ಇಷ್ಟೊಂದು ಜಿಗುಟಾಗಲು ಕಾರಣ ಇದುವೇ.
ಶ್ರೀನಿವಾಸ ಕಾರ್ಕಳ
ಸಮಾಜ ಚಿಂತಕರು
ಇದನ್ನೂ ಓದಿ – ಭಾರತಕ್ಕೆ ಕಾಂಗ್ರೆಸ್ ಅನಿವಾರ್ಯವೇ? ಅಥವಾ ಆಯ್ಕೆಯೇ?


