ಅದೊಂದು ದೊಡ್ಡ ಕತೆ- ಆತ್ಮ ಕಥನ ಸರಣಿ- 32 |  ತಮಿಳುನಾಡಿನಲ್ಲಿ ಒಂದು ತಿಂಗಳು

ಎಂ ಸಿ ಎಫ್‌ ನ ಯುಟಿಲಿಟೀಸ್ ವಿಭಾಗದಲ್ಲಿ ಟ್ರೇನಿ (ಪ್ರಶಿಕ್ಷಣಾರ್ಥಿ) ಯಾಗಿ ಕೆಲಸ ಮಾಡುತ್ತಿದ್ದೆ. ಯುಟಿಲಿಟೀಸ್ ವಿಭಾಗದಲ್ಲಿ ಮುಖ್ಯವೆಂದರೆ, ಜಲಶುದ್ಧೀಕರಣ ಘಟಕ. ಇನ್ನುಳಿದ ವಿಭಾಗಗಳೆಂದರೆ ಎಬಿಸಿ (ಅಮೋನಿಯಂ ಬೈ ಕಾರ್ಬೋನೇಟ್,‌ ಅಂಬಿಕಾ, ಬೇಕಿಂಗ್‌ ನಲ್ಲಿ ಬಳಸುತ್ತಾರೆ), ಕೂಲಿಂಗ್‌ ಟವರ್, ನೈಟ್ರೋಜನ್‌ ತಯಾರಿಕಾ ಘಟಕ (ದ್ರವ ರೂಪದ ನೈಟ್ರೋಜನ್‌ ಮೈನಸ್‌ 219 ಡಿಗ್ರಿಯಷ್ಟು ತಂಪಾಗಿರುತ್ತದೆ. ಕೈಗಾರಿಕಾ ಉದ್ದೇಶಕ್ಕೆ ಮಾತ್ರವಲ್ಲ, ಜಾನುವಾರುಗಳ ವೀರ್ಯ ಸಂರಕ್ಷಣೆಗೂ ಬಳಸುತ್ತಾರೆ).

ನಮಗೆ ಮೂರು ಪಾಳಿಯಲ್ಲಿ (ಶಿಫ್ಟ್) ಕೆಲಸ. ಪಾಳಿಗಳು ವಾರಕ್ಕೊಮ್ಮೆ ಬದಲಾಗುತ್ತಿದ್ದವು. ಅಂದರೆ, ಒಂದು ವಾರ ರಾತ್ರಿ ಪಾಳಿ, ಇನ್ನೊಂದು ವಾರ ಬೆಳಗಿನ ಪಾಳಿ, ಮತ್ತೊಂದು ವಾರ ಮಧ್ಯಾಹ್ನದ ಪಾಳಿ. ಇದ್ದುದರಲ್ಲಿ ಮಧ್ಯಾಹ್ನದ ಪಾಳಿ ಆರೋಗ್ಯ, ನಿದ್ದೆ ಎಲ್ಲ ದೃಷ್ಟಿಯಿಂದಲೂ ಅನುಕೂಲಕರ, ಆಹ್ಲಾದಕರ. ಆದರೆ ನಾಟಕದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯವುದು ಸಂಜೆಯ ಹೊತ್ತು. ಅದಕ್ಕೆ ಹಾಜರಾಗುವುದು ಅಸಾಧ್ಯ. ಅದೊಂದು ಸಮಸ್ಯೆ.

ನಾವು ಟ್ರೇನಿಗಳಾಗಿದ್ದುದರಿಂದ ನಮಗೆ ಹೆಚ್ಚಿನ ಜವಾಬ್ದಾರಿಯಿರಲಿಲ್ಲ. ಕಲಿಯುವುದಷ್ಟೇ ಕೆಲಸ. ಸಂಜೆಯ ಹೊತ್ತು, ಕೆಲವೊಮ್ಮೆ ಅಲ್ಲೇ ಗುಡ್ಡ ಹತ್ತಿ, ಆರು ಮಿಲಿಯ ಗ್ಯಾಲನ್‌ ಜಲ ಸಂಗ್ರಹಣಾ ಸಾಮರ್ಥ್ಯದ ಸರೋವರದ (ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಬೆಂಕಿ ಆರಿಸಲು ಸಂಗ್ರಹಿಸಿಟ್ಟ ನೀರು) ಬಳಿ ತಿರುಗಾಡಿ ಬರುತ್ತಿದ್ದೆವು. ಅಲ್ಲಿಂದ ಮಂಗಳೂರು ಬಂದರಿನ ಮೋಹಕ ನೋಟ ಕೂಡಾ ಸಿಗುತ್ತಿತ್ತು. ಅಮೋನಿಯಾ‌, ಯೂರಿಯಾ ಘಟಕಗಳು ವಾರ್ಷಿಕ ದುರಸ್ತಿಗಾಗಿ ಬಂದ್ ಇದ್ದಾಗಲಂತೂ ನಾವು ಈ ಸರೋವರದ ಬಳಿ ಹೆಚ್ಚು ಸಮಯ ಕಳೆಯುತ್ತಿದ್ದೆವು. ನೇತ್ರಾವತಿಯಿಂದ ಬಂದ ಆ ಸ್ವಚ್ಛ ತಣ್ಣಗಿನ ನೀರಿನಲ್ಲಿ ಸಂಜೆಯ ಹೊತ್ತು ಕಾಲು ಇಳಿಬಿಟ್ಟು ಕೂರುವುದೇ ಒಂದು ಖುಷಿ.

ಎಂ ಸಿ ಎಫ್‌, ಮಂಗಳೂರು

ಎಬಿಸಿ ಘಟಕದಲ್ಲಿ ಕೆಲಸ ಸ್ವಲ್ಪ ಕಷ್ಟ. ಅಮೋನಿಯಾದ ವಿಪರೀತ ಘಾಟು, ಮಾತನಾಡಿದರೆ ಕೇಳಿಸದಷ್ಟು ಸದ್ದು. ಅಮೋನಿಯಾ ಮತ್ತು ಕಾರ್ಬನ್‌ ಡೈ ಆಕ್ಸೈಡ್‌ ರಾಸಾಯನಿಕ ಕ್ರಿಯೆಯಿಂದ ಅಮೋನಿಯಂ ಬೈ ಕಾರ್ಬೋನೇಟ್ ಎಂಬ ಬಿಳಿ ಹುಡಿ ಅಂತಿಮ ಉತ್ಪನ್ನವಾಗಿ ಹೊರಬೀಳುತ್ತದೆ. ಅದನ್ನು ಪ್ಲಾಸ್ಟಿಕ್‌ ಬ್ಯಾಗ್‌ ಗೆ ಹಾಕಿ ಅದರ ಬಾಯಿಯನ್ನು ಬಿಸಿಗೊಳಿಸಿ ಬಂದ್‌ ಮಾಡುವ ಕೆಲಸವನ್ನು ಮಾಡಲು ಲೇಬರ್‌ ಗಳಿರುತ್ತಿದ್ದರು. ಘಟಕದಲ್ಲಿ ಏನಾದರೂ ತೊಂದರೆಯಾದರೆ ಮಾತ್ರ ನಮಗೆ ಕೆಲಸ.

ಯಟಿಲಿಟೀಸ್‌ ವಿಭಾಗದಲ್ಲಿ ನೈಟ್ರೋಜನ್‌ ಉತ್ಪಾದನೆ ತುಂಬಾ ಸಂಕೀರ್ಣ ಪ್ರಕ್ರಿಯೆ. ಅದರ ಯಂತ್ರವನ್ನು ಅರ್ಥಮಾಡಿಕೊಳ್ಳಲು ನನಗೆ ಬಲು ಕಷ್ಟವಾಗುತ್ತಿತ್ತು. ಯಟಿಲಿಟೀಸ್‌ ವಿಭಾಗದ ಇನ್ನೊಂದು ಘಟಕ ಕೂಲಿಂಗ್‌ ಟವರ್.‌ ಕಾರ್ಖಾನೆಯ ಮುಖ್ಯ ಯಂತ್ರಗಳನ್ನು ತಣಿಸಿ ಬಿಸಿಯಾದ ನೀರು ಅಲ್ಲಿಗೆ ಬೃಹತ್‌ ಪೈಪ್‌ ಗಳ ಮೂಲಕ ಬರುತ್ತಿತ್ತು. ಅಲ್ಲಿ ಮರದ ಅಟ್ಟಳಿಗೆಗಳಿಂದಲೇ ಮಾಡಿದ ಸುಮಾರು 50 ಅಡಿ ಎತ್ತರದ ಟವರ್‌ ನಿಂದ ಅದು ಕೆಳಗೆ ಬೀಳುತ್ತದೆ. ಅದೇ ಹೊತ್ತಿನಲ್ಲಿ ಹೆಲಿಕಾಪ್ಟರ್‌ ನ ರೆಕ್ಕೆಗಳಂತಹ ಬ್ಲೇಡ್‌ ಗಳನ್ನು ಹೊಂದಿರುವ ಐದು ಬೃಹದಾಕಾರದ ಫ್ಯಾನ್‌ ಗಳು ತಿರುಗುತ್ತಾ ಕೆಳಗಿನಿಂದ ಗಾಳಿಯನ್ನು ಮೇಲಕ್ಕೆ ಎತ್ತುತ್ತವೆ. ಮೇಲಿನಿಂದ ಬೀಳುವ ಬಿಸಿ ನೀರು ಮತ್ತು ಕೆಳಗಿನಿಂದ ಮೇಲಕ್ಕೆ ಸಾಗುವ ಗಾಳಿ ಇವೆರಡರ ಸಂಘರ್ಷದಿಂದ ನೀರು ತಣಿದು ಕೆಳಕ್ಕೆ ಬರುತ್ತದೆ. ಅಲ್ಲಿಂದ ಮತ್ತೆ ಕಾರ್ಖಾನೆಯ ಮುಖ್ಯ ಯಂತ್ರಗಳನ್ನು ತಣಿಸಲು ಸಾಗುತ್ತದೆ. ಈ ಪ್ರಕ್ರಿಯೆ ಮುಂದುವರಿಯುತ್ತಲೇ ಇರುತ್ತದೆ. ಈ ಫ್ಯಾನ್‌ ಗಳು ಸರಿಯಾಗಿ ಕೆಲಸ ಮಾಡುತ್ತಿವೆಯೋ ಎಂದು ತಪಾಸಣೆ ಮಾಡುವ ಜವಾಬ್ದಾರಿ ನಮ್ಮದು.

ತಪ್ಪಿದ ದುರಂತ

ಒಮ್ಮೆ ಬಹುದೊಡ್ಡ ಅವಘಡವೊಂದು ನಡೆದು ನನ್ನಿಂದಾಗಿಯೇ ಒಂದು ಜೀವಹಾನಿಯಾಗುವ ಪ್ರಸಂಗ ಸಣ್ಣದರಲ್ಲಿಯೇ ತಪ್ಪಿ ಹೋಯಿತು. ಅದೇನಾಯಿತೆಂದರೆ, ಆಪರೇಟರ್‌ ನಾರಾಯಣ ರಾವ್‌ ಮತ್ತು ನಾನು ಕೂಲಿಂಗ್‌ ಟವರ್‌ ಏರಿದೆವು. ಒಂದು ಕೂಲಿಂಗ್‌ ಫ್ಯಾನ್‌ ಬಂದ್‌ ಇತ್ತು. ʼನಾನು ಹೇಳಿದಾಗ ನೀನು ಚಾಲೂ ಮಾಡು, ಈಗ ಕೆಳಗೆ ಹೋಗುʼ ಎಂದು ನಾರಾಯಣ ರಾವ್‌ ನನಗೆ ನಿರ್ದೇಶನ ನೀಡಿದರು. ನಾನು ಕೆಳಗೆ ಬಂದೆ. ಯಾಕೆಂದರೆ, ಫ್ಯಾನ್‌ ಚಾಲೂ ಮಾಡುವ ಬಟನ್‌ ಕೆಳಗೆ ಇತ್ತು. ಸ್ವಲ್ಪ ಹೊತ್ತಿನ ಆನಂತರ, ಅವರೇನೋ ಸನ್ನೆ ಮಾಡಿದರು. ಚಾಲೂ ಮಾಡಲು ಹೇಳಿದರು ಎಂದು ತಪ್ಪಾಗಿ ತಿಳಿದು ನಾನು ಬಟನ್‌ ದಬ್ಬಿ ಬಿಟ್ಟೆ. ಬೃಹದಾಕಾರದ ಫ್ಯಾನ್‌ ಭಾರೀ ಸದ್ದು ಮಾಡುತ್ತಾ ತಿರುಗತೊಡಗಿತು. ಕೆಲವೇ ಕ್ಷಣಗಳಲ್ಲಿ ಭಯಭೀತ ನಾರಾಯಣ ರಾವ್‌ ಕೆಳಗೆ ಓಡಿಬರುತ್ತಾ, “ಏನು ಮಾಡಿದಿ ಮಾರಾಯ? ಫ್ಯಾನ್‌ ಚಾಲೂ ಮಾಡಲು ನಾನು ಹೇಳಿಯೇ ಇಲ್ಲ, ನನ್ನ ಕುತ್ತಿಗೆ ಫ್ಯಾನ್‌ ಬ್ಲೇಡ್‌ ಗೆ ಸಿಕ್ಕಿ ಕತ್ತರಿಸಿಹೋಗುವುದು ಸ್ವಲ್ಪದರಲ್ಲೇ ತಪ್ಪಿತು, ನನ್ನ ಬದಲಿಗೆ ಒಂದು ಕಾಗೆ ಸತ್ತು ಬಿತ್ತು” ಎಂದರು. ನಾನು ಭಯದಿಂದ ಬೆವತುಹೋದೆ. ವಿಷಯ ನಮ್ಮಲ್ಲೇ ಉಳಿಯಿತು. ಹಾಗಾಗಿ ನಾನು ಶಿಕ್ಷಾ ಕ್ರಮದಿಂದ ಪಾರಾದೆ. ಇಷ್ಟು ವರ್ಷಗಳ ಬಳಿಕವೂ ಆ ಘಟನೆಯನ್ನು ನೆನಪಿಸುವಾಗ ಮೈ ಕಂಪಿಸುತ್ತದೆ.

ಕೂಲಿಂಗ್‌ ಟವರ್‌

ಯಟಿಲಿಟೀಸ್‌ ವಿಭಾಗದ ಕಂಟ್ರೋಲ್‌ ರೂಮ್‌ ನಲ್ಲಿ ಸೀನಿಯರ್‌ ಆಪರೇಟರ್‌ ಸುಬ್ಬಾ ಕಾರಡಕ ಇದ್ದರು. ಅವರು ಆಗಲೇ ಮಹಾ ಕಾಂಗ್ರೆಸ್‌ ಬೆಂಬಲಿಗ. ರಾಜಕೀಯದ ಬಗ್ಗೆ ಬಹಳ ತಿಳಿದುಕೊಂಡ ಮತ್ತು ಆಸಕ್ತಿ ಹೊಂದಿದ ಮನುಷ್ಯ. ಹಾಗಾಗಿ, ರಾಜಕೀಯದ ಬಿಸಿ ಬಿಸಿ ಚರ್ಚೆಗಳು ಅಲ್ಲಿ ನಡೆಯುತ್ತಿದ್ದವು. ಎಂದೇ, ಶಿಫ್ಟ್‌ ಮುಗಿದುದೇ ತಿಳಿಯುತ್ತಿರಲಿಲ್ಲ. ಹೀಗೆ ದಿನಗಳು ತಕ್ಕ ಮಟ್ಟಿಗೆ ಖುಷಿಯಲ್ಲಿಯೇ ಸಾಗುತ್ತಿದ್ದವು.

ಇದೇ ದಿನಗಳಲ್ಲಿ ಎಂ ಸಿ ಎಫ್‌ ನ ವಿಸ್ತರಣೆಯಾಗುತ್ತದೆ. ಡಿಎಪಿ (ಡೈ ಅಮೋನಿಯಂ ಫಾಸ್ಫೇಟ್) ಘಟಕ ಸ್ಥಾಪಿಸುತ್ತಾರೆ ಎಂಬ ಸುದ್ದಿ ಹರಡತೊಡಗಿತು. ಡಿಎಪಿ ಕೂಡಾ ಮಂಗಳಾ ಯೂರಿಯಾದ ಹಾಗೆಯೇ ಒಂದು ರಸಗೊಬ್ಬರ. ಆದರೆ ಫಾಸ್ಪೇಟ್‌ ಗೊಬ್ಬರ. ಅಮೋನಿಯಾ ಮತ್ತು ಫಾಸ್ಫಾರಿಕ್‌ ಆಸಿಡ್‌ ರಾಸಾಯನಿಕ ಕ್ರಿಯೆಯಿಂದ ಉಂಟಾಗುವುದು (ಅಮೋನಿಯಾ ಮತ್ತು ಫಾಸ್ಪಾರಿಕ್‌ ಆಸಿಡ್‌ ಎರಡೂ ವಿದೇಶದಿಂದ ಆಮದಾಗುತ್ತಿದ್ದವು. ಮಂಗಳೂರು ಬಂದರು ಬಳಿ ಅವುಗಳ ಬೃಹತ್‌ ಸಂಗ್ರಹಾಗಾರಗಳನ್ನು ಕಾಣಬಹುದು).

ಸ್ವಲ್ಪವೇ ದಿನಗಳಲ್ಲಿ, ಅಲ್ಲೇ ಪಕ್ಕದ ಖಾಲಿ ನಿವೇಶನವೊಂದರ ಮಣ್ಣು ಪರೀಕ್ಷೆ ಮಾಡುತ್ತಿರುವುದು ಕಂಡುಬಂತು. ಇನ್ನು ಕೆಲವು ತಿಂಗಳಲ್ಲಿ ಸಿಖ್‌ ಕಾರ್ಮಿಕರು ರಿಗ್‌ ಬಳಸಿ ಭೂಮಿ ಅಗೆದು ಕಾರ್ಖಾನೆಯ ಕಟ್ಟಡ ಕಟ್ಟ ತೊಡಗಿದರು. ಕಟ್ಟಡದ ಕೆಲಸ ಮುಗಿಯುತ್ತಲೇ ಬೃಹತ್ ಯಂತ್ರಗಳು ಬರಲಾರಂಭಿಸಿದವು. ಹೊಸ ಡಿಎಪಿ ಘಟಕದ ನಿರ್ಮಾಣವನ್ನು ಜಪಾನಿನ ಸಂಸ್ಥೆಯೊಂದು ವಹಿಸಿಕೊಂಡಿತ್ತು. ಜಪಾನಿ ಎಂಜೀನಿಯರ್‌ ಗಳು ಕೆಲಸ ಶುರುಮಾಡಿದರು. ಇದು ತೀರಾ ಆಧುನಿಕ ತಂತ್ರಜ್ಞಾನದ ಡಿಎಪಿ ಕಾರ್ಖಾನೆ. ಕಿರು ರೂಪದಲ್ಲಿ ಜಪಾನಿನಲ್ಲಿ ತಯಾರಿಸಿ ಅವರು ಯಶಸ್ವಿಯಾಗಿದ್ದರು. ಅದರ ಹಿರಿರೂಪ ಇಲ್ಲಿ. ಹಾಗಾಗಿ ಅದು ಯಶಸ್ವಿಯಾಗುವ ಬಗ್ಗೆ ಕಾಲವೇ ಹೇಳಬೇಕಾಗಿತ್ತು.

ಕಾರ್ಖಾನೆ ಸಿದ್ಧಗೊಂಡಾಗ ಅದನ್ನು ಆಪರೇಟ್‌ ಮಾಡುವವರು ಬೇಕಲ್ಲ? ಯಟಿಲಿಟೀಸ್‌, ಯೂರಿಯಾ ಪ್ಲಾಂಟ್‌, ಅಮೋನಿಯಾ ಪ್ಲಾಂಟ್‌ ನಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಕೆಲವರನ್ನು ಇದಕ್ಕೆ ಆಯ್ಕೆ ಮಾಡಿದರು. ಇಲ್ಲಿ ಥಿಯರಿ ಜ್ಞಾನವನ್ನು ನೀಡಬಹುದು, ಆದರೆ ಪ್ರಾಯೋಗಿಕ ಅನುಭವ? ಇದಕ್ಕಾಗಿ ನಮ್ಮನ್ನು ತಮಿಳುನಾಡಿನ ತೂತುಕುಡಿಯ (ಟ್ಯೂಟಿಕೋರಿನ್) SPIC (Southern Petrochemical Industries Corporation) ಕಾರ್ಖಾನೆಗೆ ಕರೆದೊಯ್ಯುವುದು ಎಂದು ನಿರ್ಧಾರವಾಯಿತು.

ಮಲಬಾರ್‌ ಎಕ್ಸ್‌ ಪ್ರೆಸ್‌ ನಲ್ಲಿ ತಮಿಳುನಾಡಿನತ್ತ

1984 ರ ಜೂನ್‌ ತಿಂಗಳಿರಬಹುದು. ಸತೀಶ್‌ ಭಂಡಾರಿ, ರಘುರಾಮ್‌ ರಾವ್‌, ರೊನಾಲ್ಡ್‌ ಡಿಸೋಜಾ, ದೇವಿದಾಸ, ಅಶೋಕ ರಾವ್‌, ಮೊದಲಾದ ಸಹೋದ್ಯೋಗಿಗಳ ನಮ್ಮ ತಂಡ ಮೇಲ್ವಿಚಾರಕ ಪಿ ಕೆ ಕಾರಂತರ ನೇತೃತ್ವದಲ್ಲಿ ಮಲಬಾರ್‌ ಎಕ್ಸ್‌ಪ್ರೆಸ್‌ ನಲ್ಲಿ ತಿರುವನಂತಪುರದತ್ತ ಪ್ರಯಾಣ ಬೆಳೆಸಿತು. ನಮ್ಮ ಜತೆ ಎಂ ಸಿ ಎಫ್‌ ನಲ್ಲಿ ಈಗಾಗಲೇ ಖಾಯಂ ಆದ ನಾಲ್ಕೈದು ಮಂದಿ ಎಂಜೀನಿಯರ್‌ ಗಳು ಕೂಡಾ ಇದ್ದರು. ಅವರಿಗೆ ಆಗಲೇ ಕೈತುಂಬಾ ಸಂಬಳವಿತ್ತು. ಆದ್ದರಿಂದ ಹಣದ ಚಿಂತೆ ಇರಲಿಲ್ಲ. ಆದರೆ ನಾವು 450 ರುಪಾಯಿ ಸ್ಟೈಪೆಂಡ್‌ ನಲ್ಲಿ ಬದುಕುವ ಟ್ರೇನಿಗಳು. ಕೈಯಲ್ಲಿ ಕಾಸಿಲ್ಲ. ಬೇರೆಯವರ ಬಳಿ ಕಡ ತೆಗೆದುಕೊಳ್ಳೋಣ ಎಂದರೆ ಬೇರೆಯವರಲ್ಲೂ ಹಣ ಇರದ ಕಾಲ ಅದು. ಹಾಗಾಗಿ ಅಷ್ಟು ದೂರ ಹೋಗುವಾಗಲೂ ನನ್ನ ಕೈಯಲ್ಲಿದ್ದುದು ಬಿಡಿಗಾಸು. ಆದರೆ ಪಯಣ, ವಸತಿ, ಆಹಾರ ಇತ್ಯಾದಿಗಳಿಗೆ ಚಿಂತೆ ಮಾಡಬೇಕಾಗಿರಲಿಲ್ಲ. ಅವೆಲ್ಲವನ್ನೂ ಕಂಪೆನಿ ನೋಡಿಕೊಳ್ಳುತ್ತಿತ್ತು.

ಮಲಬಾರ್‌ ಎಕ್ಸ್‌ಪ್ರೆಸ್

ಅದಾಗ ನನ್ನದು ಜೀವನದಲ್ಲಿ ಮೊದಲ ಬಾರಿಯ ರೈಲು ಯಾನ. ಸಂಜೆ 6 ಗಂಟೆಯ ಸುಮಾರಿಗೆ ಮಲಬಾರ್‌ ಎಕ್ಸ್‌ಪ್ರೆಸ್ ರೈಲು ಮಂಗಳೂರು ನಿಲ್ದಾಣವನ್ನು ಬಿಟ್ಟಿತು. ಕೆಲವೇ ನಿಮಿಷಗಳಲ್ಲಿ ಕೇರಳವನ್ನು ಪ್ರವೇಶಿಸಿತು. ಕೇರಳದಲ್ಲಿ ಸಂಚರಿಸುವುದೇ ಒಂದು ಸುಖ. ಇಕ್ಕೆಲದಲ್ಲಿಯೂ‌ ಕಣ್ಮನ ತಣಿಸುವ ಹಸಿರು ಹೊಲಗಳು, ತೋಟಗಳು. ನನ್ನೆಲ್ಲ ಗೆಳೆಯರು ಗದ್ದಲದಲ್ಲಿ ಮೈ ಮರೆತಿದ್ದರೆ, ನಾನು ಹೊರಗಡೆ ನೋಡುತ್ತ ಸುಂದರ ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳುತ್ತಾ ಮೈಮರೆತಿದ್ದೆ. ರೈಲು ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಕೊಚ್ಚಿ ಕೇರಳದ ಅನೇಕ ಪೇಟೆ ಪಟ್ಟಣ ನಗರಗಳ ಮೂಲಕ ಓಡುತ್ತಲೇ ಇತ್ತು. ರಾತ್ರಿ ನನಗೆ ಹೆಚ್ಚು ನಿದ್ದೆ ಬರಲಿಲ್ಲ.

ಬೆಳಗಾಯಿತು. ಕೆಲವು ಘಂಟೆ ಓಡಿದ ರೈಲು ಒಂದೆಡೆ ನಿಂತುಬಿಟ್ಟಿತು.‌ ಅದು ಕೊಲ್ಲಂ (ಕ್ವಿಲಾನ್)‌ ಎಂದು ಯಾರೋ ಹೇಳಿದರು. ಎಷ್ಟು ಹೊತ್ತಾದರೂ ಹೊರಡಲಿಲ್ಲ. ಸ್ಥಳೀಯ ಮೀನುಗಾರರು ತಮ್ಮ ಪ್ರತಿಭಟನೆಯಾಗಿ ರೈಲು ಹಳಿಯ ಮೇಲೆ ಕುಳಿತುಬಿಟ್ಟಿದ್ದರು. ಕೊನೆಗೆ ಅವರನ್ನು ಎಬ್ಬಿಸಿ, ರೈಲು ಹೋಗುವಂತೆ ಮಾಡಲು ಪೊಲೀಸರು ಬರಬೇಕಾಯಿತು. ನಮ್ಮ ಬೋಗಿಯಲ್ಲಿ ನೀರೂ ಮುಗಿದಿತ್ತು. ಶೌಚಕ್ಕೂ ನೀರಿಲ್ಲ. ನಮ್ಮ  ಕೆಲ ಗೆಳೆಯರು ಪಕ್ಕದ ಬೋಗಿಗೆ ನುಗ್ಗಿ ಎಲ್ಲ ಮುಗಿಸಿಬಂದರು.

ಅಂತೂ ಮಧ್ಯಾಹ್ನವಾಗುವಾಗ ನಾವು ತಿರುವನಂತಪುರ ತಲಪಿದೆವು. ಅಲ್ಲಿ ಊಟ ಮಾಡಿ, ಬಸ್‌ ಹಿಡಿದು ನಾಗರಕೋಯಿಲ್‌ ಗೆ ಹೋದೆವು. ಅಲ್ಲಿಂದ ಕನ್ಯಾಕುಮಾರಿಯ ಮೂಲಕ ಪೂರ್ವ ಕರಾವಳಿಯ ಗುಂಟ ಸಾಗಿ ತೂತುಕುಡಿ ತಲಪುವಾಗ ರಾತ್ರಿ ಎಂಟಾಗಿತ್ತು. ದಣಿದ ದೇಹ, ನಿದ್ದೆಯಿಲ್ಲದ ರಾತ್ರಿ, ಊಟ ಮಾಡಿ ಹಾಸ್ಟೆಲ್‌ ಸೇರಿಕೊಂಡು ಮಲಗಿಬಿಟ್ಟೆವು.

ಮಾರನೆಯ ದಿನದಿಂದ ಅಲ್ಲಿನ ಸ್ಪಿಕ್‌ ಕಂಪೆನಿಯ ಡಿಎಪಿ ಸ್ಥಾವರದಲ್ಲಿ ನಮ್ಮ ಭೇಟಿ, ತರಗತಿ ಎಲ್ಲ ಆರಂಭವಾಯಿತು. ಯೂರಿಯಾ, ಎನ್‌ ಪಿ ಕೆ ರಸಗೊಬ್ಬರಗಳು, ಡಿ ಎ ಪಿ ಮೊದಲಾದ ರಸಗೊಬ್ಬರಗಳನ್ನು ಉತ್ಪಾದಿಸುವ ಪ್ರಸಿದ್ಧ ಮತ್ತು ಹಳೆಯ ಒಂದು ಕಂಪೆನಿ ಇದು. ಎರಡು ಪಾಳಿಯಲ್ಲಿ ನಾವು ಸ್ಥಾವರಕ್ಕೆ ಭೇಟಿ ನೀಡುತ್ತಿದ್ದೆವು. ಡಿ ಎ ಪಿ ಕಾರ್ಖಾನೆಯಲ್ಲವೇ? ಎಲ್ಲೆಲ್ಲೂ ಧೂಳು ಮತ್ತು ಡಿಎಪಿಯ ಘಾಟು. ಅಲ್ಲದೆ ಎಲ್ಲೆಲ್ಲೂ ಹಾರುವ ಜಿಪ್ಸಂ. ವಾತಾವರಣ ಅನುಕೂಲಕರವಾಗಿರಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಇದೆಲ್ಲ ನಮಗೆ ಅಭ್ಯಾಸವಾಗಿಹೋಯಿತು. ನಾವು ಇಲ್ಲಿ ಪಡೆಯುತ್ತಿದ್ದ ತರಬೇತಿ ಹಳೆಯ ತಂತ್ರಜ್ಞಾನದ ಡಿಎಪಿ ಉತ್ಪಾದನೆಗೆ ಸಂಬಂಧಿಸಿದ್ದು. ಎಂ ಸಿ ಎಫ್‌ ನಲ್ಲಿ ಸಿದ್ಧಗೊಳ್ಳುತ್ತಿದ್ದುದು ತೀರಾ ಹೊಸ ತಂತ್ರಜ್ಞಾನದ್ದು.

ಹಾಸ್ಟೆಲ್‌ ನಲ್ಲಿ ರುಚಿಕರವಾದ ಊಟ ಸಿಗುತ್ತಿತ್ತು. ಹಣ ನಾವು ತೆರಬೇಕಾಗಿರಲಿಲ್ಲ. ಚಿಕನ್‌ ಖಾದ್ಯ ಕೂಡಾ ಸಿಗುತ್ತಿತ್ತು. ಆದರೆ ಇದು ನಮಗೆ ಗೊತ್ತೇ ಇರಲಿಲ್ಲ. ಗೊತ್ತಾಗುವಾಗ ತಡವಾಗಿತ್ತು. ನಮಗೆ ಗೊತ್ತಾದುದು ನಮ್ಮ ಎಂಜೀನಿಯರ್‌ ಗಳು ಅದನ್ನು ನಿತ್ಯವೂ ಸವಿಯುತ್ತಿರುವ ಸುದ್ದಿ ಸಿಕ್ಕಿದ ಬಳಿಕ.

ಬಿಡುವಿನಲ್ಲಿ ಒಮ್ಮೊಮ್ಮೆ ಸಿನಿಮಾ ನೋಡಲು ಹೋಗುತ್ತಿದ್ದೆವು. ಸ್ಟಾಫ್‌ ಕ್ಲಬ್‌ ಗೆ ಹೋದರೆ ಅಲ್ಲಿ ದಿನಪತ್ರಿಕೆಗಳ ಸಹಿತ ಓದುವ ಸಾಮಗ್ರಿ ಸಿಗುತ್ತಿತ್ತು. ಮಾತ್ರವಲ್ಲ, ಶ್ರೀಲಂಕಾ ಹತ್ತಿರದಲ್ಲಿಯೇ ಇದ್ದುದರಿಂದ ಅಲ್ಲಿನ ದೂರದರ್ಶನ ವಾಹಿನಿ ಕೂಡಾ ವೀಕ್ಷಿಸಬಹುದಿತ್ತು. ಅದರ ಪ್ರಸಾರ ಗುಣಮಟ್ಟ ಅತ್ಯುತ್ತಮವಾಗಿತ್ತು.

ಒಮ್ಮೆ ತೂತುಕುಡಿಯ ಬಂದರು ನೋಡಲು ಹೋಗಿದ್ದೆವು. ಕಡಲನ್ನು ಸೀಳಿ ಹಿರಿದಾದ ಮಾರ್ಗ ಮಾಡಿ ಇಕ್ಕೆಲದಲ್ಲಿಯೂ ಹಡಗು ಲಂಗರು ಹಾಕುವಂತೆ ನಿರ್ಮಿಸಲಾಗಿದ್ದ (ಬ್ರೇಕ್‌ ವಾಟರ್) ಸುಂದರ ಬಂದರು ಅದು.‌ ನಾವು ಅಲ್ಲಿಗೆ ಹೋಗಿದ್ದಾಗ ಮೊರಾಕ್ಕೋದಿಂದ ಫಾಸ್ಪಾರಿಕ್‌ ಆಸಿಡ್‌ ಹೊತ್ತು ತಂದಿದ್ದ ಕೆಸಬ್ಲಾಂಕಾ ಎಂಬ ಹಡಗು ಇತ್ತು. ಅಲ್ಲಿಂದ ಸ್ಪಿಕ್‌ ಕಾರ್ಖಾನೆಗೆ ಆ ಆಸಿಡ್‌ ಪಂಪ್‌ ಆಗುತ್ತಿತ್ತು. ಅವನ್ನೆಲ್ಲ ಹತ್ತಿರದಿಂದ ನೋಡುವ ಅಪೂರ್ವ ಅವಕಾಶ ನಮಗೆ ಸಿಕ್ಕಿತು.

ಸಿಕ್ಕ ಅವಕಾಶದಲ್ಲಿ ಒಂದಷ್ಟು ಪ್ರವಾಸಗಳು

ಮಧುರೈ ಮೀನಾಕ್ಷಿ ದೇವಾಲಯ

ಹೀಗಿರುತ್ತಾ, ಹೇಗೂ ತಮಿಳುನಾಡಿಗೆ ಬಂದಿದ್ದೇವಲ್ಲ, ಅಲ್ಲಿನ ಕೆಲವಾದರೂ ಪ್ರವಾಸಿ ತಾಣಗಳನ್ನು ನೋಡಬೇಡವೇ? ಎಲ್ಲಿಗಾದರೂ ಪ್ರವಾಸ ಹೋಗೋಣ ಎಂದು ನಿರ್ಧಾರವಾಯಿತು. ಇದಕ್ಕೆ ಕಾರಣವೂ ಇತ್ತು. ನಮ್ಮೊಡನೆ ಬಂದಿದ್ದ ಎಂಜೀನಿಯರ್‌ ಗಳು ನಮ್ಮೊಡನೆ ಸೇರುತ್ತಿರಲಿಲ್ಲ. ಅವರು ಬೇರೆಯೇ ಇದ್ದುಕೊಂಡು ಪ್ರವಾಸ ಮಾಡುತ್ತಿದ್ದರು, ಮಜಾ ಮಾಡುತ್ತಿದ್ದರು. ಇದು ನಮ್ಮ ಕೆಲವರಿಗೆ ಸರಿಹೋಗಲಿಲ್ಲ. ಅವರು ಪ್ರವಾಸ ಹೋಗುತ್ತಿದ್ದುದನ್ನು ಕಂಡು ನಮ್ಮವರೂ ಹತ್ತಿರದ ಕುಟ್ರಾಲಂ ಜಲಪಾತಕ್ಕೆ ಹೋಗುವ ಯೋಜನೆ ಹಾಕಿಕೊಂಡರು. ಹೀಗೆ ಒಂದು ದಿನ ಅಲ್ಲಿಗೆ ಹೋದೆವು. ಕುಟ್ರಾಲಂ ಇರುವುದು ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ. ಮೋಹಕ ಕುಟ್ರಾಲಂ ಜಲಪಾತ ಇರುವುದು ಚಿತ್ತಾರ್‌ ನದಿಯ ಮೇಲೆ. ಎರಡು ಮೂರು ಹಂತಗಳಲ್ಲಿ ಧುಮುಕುವ ಅಲ್ಲಿನ ಜಲಪಾತದ ಕೊನೆಯ ಹಂತದಲ್ಲಿ ಸ್ನಾನಕ್ಕೆಂದು ಸುರಕ್ಷಿತ ವ್ಯವಸ್ಥೆಯೂ ಇತ್ತು. ಗಂಡು ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಪವಿತ್ರ ಸ್ನಾನ ಮಾಡುವವರೇ. ಕಿಡಿಗೇಡಿಗಳನ್ನು ನಿಯಂತ್ರಿಸಲು ಸಮವಸ್ತ್ರದ ಪೊಲೀಸರೂ ಇದ್ದರು.

ಇನ್ನೊಮ್ಮೆ ರಜಾದಿನ ನೋಡಿಕೊಂಡು ನಾವು ದೀರ್ಘ ಪ್ರವಾಸವೊಂದನ್ನು ಹಮ್ಮಿಕೊಂಡೆವು. ಬಸ್‌ ನಲ್ಲಿ ಮಧುರೈಗೆ ಹೋದೆವು. ಅಲ್ಲಿನ ಇತಿಹಾಸ ಪ್ರಸಿದ್ಧ, ಸುಂದರ ಮೀನಾಕ್ಷಿ ದೇಗುಲವನ್ನು ಸಂದರ್ಶಿಸಿ ಬಳಿಕ ಅಲ್ಲಿಂದ ಮಂಡಪಂ, ರಾಮನಾಥಪುರಂ ಮೂಲಕ ರಾಮೇಶ್ವರಕ್ಕೆ ಹೋದೆವು. ರಾಮೇಶ್ವರಕ್ಕೆ ಆಗ ರಸ್ತೆ ಸಂಪರ್ಕ ಇರಲಿಲ್ಲ. ರೈಲು ಸಂಪರ್ಕ ಮಾತ್ರ ಇತ್ತು. ರೈಲು ಹಳಿಗೆ ಸಮಾನಾಂತರವಾಗಿ ರಸ್ತೆ ಮಾರ್ಗಕ್ಕೆ ಪಿಲರ್‌ ಗಳ ನಿರ್ಮಾಣ ನಡೆಯುತ್ತಿತ್ತು. ರಾಮನಾಥಪುರಂ ನಿಂದ ರೈಲು ಕಡಲಿನಲ್ಲಿ ಸಾಗುವುದು ಒಂದು ರುದ್ರ ಭಯಾನಕ ಅನುಭವ. ರಾಮೇಶ್ವರ ದೇಗುಲ ಅತ್ಯಂತ ವಿಸ್ತಾರವಾದುದು. ಅದೊಂದು ಶಾಂತ ಸುಂದರ ಸ್ಥಳ. ಆದರೆ ಅಲ್ಲಿಯೂ ಪಿಂಡ ಬಿಡುವ ನೆಪದಲ್ಲಿ ಪುರೋಹಿತರಿಂದ ಮುಗ್ಧ ಭಕ್ತರ ಶೋಷಣೆ ಸಾಮಾನ್ಯವಾಗಿತ್ತು!

ರೈಲು ಕಡಲಿನಲ್ಲಿ ಸಾಗುತ್ತಿರುವುದು

ನೆನಪಿಡಿ, ಅದು ಲಂಕಾದಲ್ಲಿ ಎಲ್‌ ಟಿ ಟಿ ಇ ಸಂಘರ್ಷ ನಡೆಯುತ್ತ ಇದ್ದ 1984 ರ ಕಾಲ. ಎಲ್‌ ಟಿ ಟಿ ಇ ಮತ್ತು ಶ್ರೀಲಂಕಾ ಸೇನೆಯ ನಡುವಿನ ಕದನದಲ್ಲಿ ಅಪಾರ ಸಾವು ನೋವುಗಳು ಸಂಭವಿಸಿದ್ದವು. ದೊಡ್ಡ ದೊಡ್ಡ ರಾಜಕಾರಣಿಗಳು, ಮಂತ್ರಿಗಳು ಉಗ್ರರ ಬಾಂಬುಗಳಿಗೆ ಹತರಾಗಿದ್ದರು. ಅಲ್ಲಿನ ಉಗ್ರರು ಭಾರತಕ್ಕೆ ಆರಾಮ ಬಂದು ಹೋಗುತ್ತಿದ್ದರು, ತಮಿಳುನಾಡಿನಲ್ಲಿಯೂ ಅವರಿಗೆ ಸಾಕಷ್ಟು ಬೆಂಬಲ ಇತ್ತು ಎಂಬ ವದಂತಿಯಿತ್ತು.‌ ನಾವು ತಮಿಳುನಾಡಿಗೆ ಹೋದಾಗ ಇನ್ನೇನು ಇಂದಿರಾರಿಂದ ಅಮೃತಸರ ದೇಗುಲದ ಮೇಲೆ ಬ್ಲೂಸ್ಟಾರ್‌ ಆಪರೇಶನ್‌ ನಡೆದು ಬಿಂದ್ರನ್ ವಾಲೆ ಹತನಾಗಿದ್ದ. ಮುಂದೆ ಸಿಖ್ಖರು ಪ್ರತೀಕಾರ ಕೈಗೊಂಡು ಅದೇ ವರ್ಷ ಅಕ್ಟೋಬರ್‌ ನಲ್ಲಿ ಇಂದಿರಾರನ್ನು ಹತ್ಯೆಗೈದರು. ಬಳಿಕ ರಾಜೀವ ಗಾಂಧಿ ಪ್ರಧಾನಿಯಾಗಿ ಶ್ರೀಲಂಕಾದ ಎಲ್‌ ಟಿ ಟಿ ಇ ಉಗ್ರರನ್ನು ಸದೆಬಡಿಯಲು ಐಪಿಕೆಎಫ್‌ ಕಳುಹಿಸಿದರು. ಇದರ ಪರಿಣಾಮವಾಗಿ 1991 ರಲ್ಲಿ ರಾಜೀವಗಾಂಧಿ ಕೂಡಾ ಉಗ್ರರ ಆತ್ಮಾಹುತಿ ಬಾಂಬ್‌ ಗೆ ಬಲಿಯಾದರು. ಅದೊಂದು ಬೇರೆಯದೇ ಕತೆ.

ಹೀಗೆ ಲಂಕಾದಲ್ಲಿ ತೀವ್ರ ಸಂಘರ್ಷ ನಡೆಯುತ್ತಿದ್ದ ಕಾಲದಲ್ಲಿ ನಾವು ರಾಮೇಶ್ವರದಲ್ಲಿದ್ದೆವು. ರಾಮೇಶ್ವರಕ್ಕೆ ಭಾರತಕ್ಕಿಂತಲೂ ಶ್ರೀಲಂಕಾ ಹತ್ತಿರ. ಹಿಂದೆಯಂತೂ ಅಲ್ಲಿಗೆ ರೈಲುಮಾರ್ಗವೇ ಇತ್ತು, ಚಂಡಮಾರುತದಿಂದಾಗಿ ಅದು ಕುಸಿದುಹೋಯಿತು ಎಂದು ಹೇಳುವುದನ್ನು ಕೇಳಿದ್ದೆವು. ಲಂಕಾ ಸಂಬಂಧದಿಂದಾಗಿ ರಾಮೇಶ್ವರದಲ್ಲಿ ವಿದೇಶೀ ವಸ್ತುಗಳು (ವಾಚು, ಪರಿಮಳದ್ರವ್ಯ) ಬೀದಿ ಬದಿಯಲ್ಲಿಯೇ ದೊರೆಯುತ್ತಿದ್ದವು. ನಮ್ಮ ಸತೀಶ ಭಂಡಾರಿ ಊರಿಗೆ ಒಯ್ಯಲೆಂದು ಒಂದು ಸೆಂಟ್ ಬಾಟಲಿ ಕೊಂಡುಕೊಂಡ. ಬ್ಯಾಗಿನಲ್ಲಿ ಸುರಕ್ಷಿತವಾಗಿ ಇರಿಸಿಕೊಂಡ. ಇದು ಹೇಗೋ ನಮ್ಮ ಗೆಳೆಯರಿಗೆ ತಿಳಿದುಬಿಟ್ಟಿತ್ತು. ರಾಮೇಶ್ವರ ಬಿಡುವಾಗ ಬ್ಯಾಗು ರೈಲಿನಲ್ಲಿಟ್ಟು ಕೊಂಚ ಕಾಲದ ಮಟ್ಟಿಗೆ ರೈಲಿನಿಂದ ಇಳಿದ. ಆತ ಇಳಿದದ್ದೇ ತಡ, ಗೆಳೆಯರು ಸೇರಿ ಆತನ ಪರಫ್ಯೂಮ್‌ ತೆರೆದು ಧಾರಾಳ ಹಚ್ಚಿಕೊಂಡರು. ಬಾಟಲಿ ಬಹುತೇಕ ಖಾಲಿಯಾಗಿತ್ತು. ಏನನ್ನು ಕದ್ದರೂ ಪರ್ಫ್ಯೂಮ್‌ ಕದಿಯಬಾರದು. ಭಂಡಾರಿ ಒಳಗೆ ಬಂದವನೇ ಪರಿಮಳದಿಂದಲೇ ಸತ್ಯ ಪತ್ತೆ ಹಚ್ಚಿದ. ವಿಷಯ ತಿಳಿದು, ಸಿಟ್ಟುಗೊಂಡು ಎಲ್ಲ ಕಳ್ಳರಿಗೂ ವಾಚಾಮಗೋಚರ ಬೈದ.

ಶಿವಪೂಜೆಯಲ್ಲಿ ಕರಡಿಯಂತೆ ನಮ್ಮಲ್ಲಿ ಒಬ್ಬ ಕ್ರಿಶ್ಚಿಯನ್‌ ಇದ್ದ; ರೊನಾಲ್ಡ್ (ರೋನಿ).‌ ಕೇರಳದ ಕೆಲವು ದೇಗುಲಗಳಲ್ಲಿ ʼಹಿಂದೂಗಳಿಗೆ ಮಾತ್ರ ಪ್ರವೇಶʼ ಎಂಬ ಬೋರ್ಡ್‌ ಇತ್ತು. ರೋನಿ ಹಿಂದೂ ಅಲ್ಲ ಎಂದು ಹೇಗೆ ಗೊತ್ತಾಗುತ್ತದೆ? ನಾವು ಆತನಿಗೊಂದು ಹಿಂದೂ ಹೆಸರಿಟ್ಟು ದೇಗುಲದೊಳಗೆ ಕರೆದುಕೊಂಡು ಹೋದೆವು. ದೇವರು ಸ್ವಲ್ಪವೂ ಆಕ್ಷೇಪಿಸಲಿಲ್ಲ. ದೇವರಿಗೆ ಎಲ್ಲರೂ ತನ್ನ ಮಕ್ಕಳಲ್ಲವೇ? ಸಮಾನರಲ್ಲವೇ? ಅದಕ್ಕೇ ಆತ ದೇವರಲ್ಲವೇ? ರೋನಿ ನಮ್ಮೊಂದಿಗೆ ಎಲ್ಲಾ ದೇಗುಲಗಳಿಗೂ ಹೊಕ್ಕು ಪವಿತ್ರ ತೀರ್ಥ ಸ್ನಾನ ಮಾಡಿ, ದೇವರಿಗೆ ಕೈಮುಗಿದು ಹೊರಬಂದು ಪರಮ ಪಾವನನಾದ. ಆತ ಸ್ನಾನ ಮಾಡಿ ಸ್ವಾಮೀಜಿಯ ಹಾಗೆ ಬಟ್ಟೆ ತೊಟ್ಟು (ದೇಗುಲದವರೇ ಕೊಡುತ್ತಿದ್ದ ವೇಸ್ಟಿ) ದೇಗುಲದ ಅಂಗಳ ಸುತ್ತು ಬರುವಾಗ ನಾವು ಆತನ ಶಿಷ್ಯರಂತೆ ಒದ್ದೆ ಬಟ್ಟೆಯಲ್ಲಿ ಅವನನ್ನು ಅನುಸರಿಸುತ್ತಿದ್ದೆವು. ಆತನೋ ನಟಭಯಂಕರ. ನೋಡಿದವರು ಇವರು ಯಾರೋ ಸ್ವಾಮೀಜಿ ಎಂದೇ ಅಂದುಕೊಳ್ಳುತ್ತಿದ್ದರು. ಭಕ್ತಿ ಭಾವದಿಂದ ನಮಸ್ಕರಿಸುತ್ತಿದ್ದರು. ನಮಗೋ ಒಳಗೊಳಗೇ ನಗು.

ಅಂತೂ ರಾಮೇಶ್ವರ ಬಿಟ್ಟೆವು. ರೈಲಿನಲ್ಲಿ ಕುಳಿತುಕೊಳ್ಳಲು ಜಾಗವಿರಲಿಲ್ಲ. ಸಿಕ್ಕ ಸಿಕ್ಕಲ್ಲಿ ಮಲಗಿ ಮಧುರೈ ತಲಪಿದೆವು. ಮಧುರೈಯಿಂದ ಬಸ್‌ ಹಿಡಿದು ತೂತುಕುಡಿ ಸೇರಿಕೊಂಡೆವು. ತೂತುಕುಡಿಯ ಸ್ಪಿಕ್‌ ಸಂಸ್ಥೆಯಲ್ಲಿ ಒಂದು ತಿಂಗಳ ತರಬೇತಿ ಮುಗಿಯುತ್ತಿದ್ದಂತೆ, ಆ ಬಿಸಿಯ ನಾಡಿಗೆ ವಿದಾಯ ಹೇಳುವ ದಿನ ಬಂತು (ಮಂಗಳೂರಿನಲ್ಲಿ ಅರ್ಧ ಮಳೆಗಾಲ ಕಳೆದಿತ್ತು, ಆದರೆ ತಮಿಳುನಾಡಿನಲ್ಲಿ ಮಳೆಗಾಲ ಡಿಸೆಂಬರ್‌ ನಲ್ಲಿ). ನಾವು ತಕ್ಷಣ ಹೊರಡಬೇಕಿತ್ತು. ಯಾಕೆಂದರೆ ತರಬೇತಿಗೆಂದು ಇನ್ನೊಂದು ತಂಡ ಮಂಗಳೂರಿನಿಂದ ಬರುವುದಿತ್ತು.

ತೂತುಕುಡಿ ತೊರೆದವರೇ ಕನ್ಯಾಕುಮಾರಿಗೆ ಹೋದೆವು. ಅಲ್ಲಿ ವಿವೇಕಾನಂದ ರಾಕ್‌ ಗೆ ಭೇಟಿ ಕೊಟ್ಟು, ಒಂದು ರಾತ್ರಿ ಅಲ್ಲೇ ಕಾಲ ಕಳೆದೆವು. ಮಾರನೇ ದಿನ ತಿರುವನಂತಪುರ ಸೇರಿದೆವು. ಗುರುವಾಯೂರು ದೇಗುಲ ನೋಡಿ, ಕೋವಳಂ ಬೀಚು ಅಡ್ಡಾಡಿ, ಮಲಬಾರ್‌ ಎಕ್ಸ್‌ಪ್ರೆಸ್‌ ಏರಿದೆವು. ಈಗ ನನ್ನಲ್ಲಿ ಅಕ್ಷರಶಃ ಒಂದು ನಯಾಪೈಸೆಯೂ ಉಳಿದಿರಲಿಲ್ಲ. ತಿರುವನಂತಪುರದಿಂದ ಮಂಗಳೂರು ವರೆಗೂ ರೈಲಿನಲ್ಲಿ ಕೇವಲ ಬ್ರೆಡ್‌ ತಿಂದು ಸುಧಾರಿಸಿದೆ. ಮಾರನೇ ದಿನ ಸುಮಾರು ಹತ್ತು ಗಂಟೆಗೆ ಇರಬಹುದು ರೈಲು ಮಂಗಳೂರು ತಲಪಿತು. ಸಿಟಿಬಸ್‌ ಟಿಕೇಟಿಗೆ ಕಾಸಿಲ್ಲದ ಕಾರಣ ನಿಲ್ದಾಣದಿಂದ ಹಂಪನಕಟ್ಟೆ, ಜ್ಯೋತಿ, ಬಂಟ್ಸ್ ಹಾಸ್ಟೆಲ್‌ ಮೂಲಕ ನಡೆದೇ ಕದ್ರಿಯ ರೂಮು ಸೇರಿಕೊಂಡೆ.

ಕಾರ್ಕಳದ ಮನೆ ಮಾರಿದ್ದರು

ಕಾರ್ಕಳದಿಂದ ಮಂಗಳೂರಿಗೆ ಬಂದ ಬಳಿಕ ನನಗೆ ಕಾರ್ಕಳಕ್ಕೆ ಆಗಾಗ ಹೋಗಲು ಆಗುತ್ತಿರಲಿಲ್ಲ. ಯಾಕೆಂದರೆ ಭಾನುವಾರ ಮಾತ್ರ ರಜಾದಿನ. ಇತರ ರಜೆಗಳಿಲ್ಲ. ಅಲ್ಲದೆ, ಇದ್ದ ಆ ಒಂದು ದಿನ ಕೂಡಾ ನಾನು ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೆ. ಹಾಗಾಗಿ, ಕಾರ್ಕಳದ ನಮ್ಮ ಮನೆಯಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ಕೂಡಾ ನನ್ನಲ್ಲಿರಲಿಲ್ಲ. ಸಾಲದೆಂಬಂತೆ 1984ರ ಜೂನ್‌ ನಲ್ಲಿ ನಾನು ತರಬೇತಿಗಾಗಿ ತಮಿಳುನಾಡಿಗೆ ಹೋಗಿದ್ದೆ. ವಾಪಸ್ ಬಂದಾಗ ಸಿಕ್ಕ ಸುದ್ದಿಯೇನೆಂದರೆ, ನಮ್ಮ ಕಾರ್ಕಳದ ಮನೆಯನ್ನು ಮಾರಲು ಕಿರಿಯ ಅಣ್ಣ ಉಮೇಶ್ ನಿರ್ಧರಿಸಿದ್ದ. ಒಂದು ಎಕರೆ ಜಮೀನು, ಬಾವಿ ಸಹಿತ ಮನೆ ಎಲ್ಲವೂ ಇದ್ದ ಮನೆಯನ್ನು 65 ಸಾವಿರ ರುಪಾಯಿಗೆ ಮಾರಿ, ಬಿಡಾರ ಸಾಮಗ್ರಿಯನ್ನು ಸುಳ್ಯದ ಗುತ್ತಿಗಾರು ಬಳಿಯ ವಳಲಂಬೆಯ ನಮ್ಮ ದೊಡ್ಡಪ್ಪನ ಔಟ್‌ ಹೌಸ್‌ ಗೆ ಸಾಗಿಸಲಾಗಿತ್ತು (ಅಲ್ಲೇ ಎಲ್ಲಾದರೂ ಜಮೀನು ತೆಗೆದು ಮನೆ ಕಟ್ಟುವ ಯೋಚನೆ. ಮಾರನೇ ವರ್ಷ ಅಂದರೆ 1985 ರಲ್ಲಿ ವಳಲಂಬೆಯ ಹೊಸೋಳಿಕೆ ಎಂಬಲ್ಲಿ ಒಂದು ಎಕರೆ ಗದ್ದೆ ತೋಟ ಖರೀದಿಸಿ ಮನೆ ಕಟ್ಟಿದೆವು ಕೂಡಾ). ತಮ್ಮಂದಿರು ತಂಗಿಯರು ಅಲ್ಲಿನ ವಳಲಂಬೆ ಹಿರಿಯ ಪ್ರಾಥಮಿಕ ಶಾಲೆ ಮತ್ತು ಗುತ್ತಿಗಾರಿನ ಹೈಸ್ಕೂಲು ಸೇರಿಕೊಂಡಿದ್ದರು. ‌

ಕಾರ್ಕಳದ ಮನೆ ಮಾರಲು ಎರಡು ಪ್ರಬಲ ಕಾರಣಗಳಿದ್ದವು. ಮೊದಲನೆಯದಾಗಿ ನಾವು ಮೂಲತಃ ಸುಳ್ಯ ಭಾಗದವರು. ಸುಖ ಕಷ್ಟಕ್ಕೆ ನಮ್ಮ ಸಮುದಾಯದವರು ಯಾರೂ ಕಾರ್ಕಳದಲ್ಲಿ ಇರಲಿಲ್ಲ. ಎರಡನೆಯದಾಗಿ, ಅಪ್ಪ ಮೂಡಬಿದಿರೆಯಲ್ಲಿ ಕೆಲಸ ಮಾಡುತ್ತಿದ್ದರು, ಹಿರಿಯ ಅಣ್ಣ‌ ಸುಬ್ರಹ್ಮಣ್ಯ ಮತ್ತು ನಾನು ಮಂಗಳೂರಿನಲ್ಲಿ ಉದ್ಯೋಗಿಗಳಾಗಿದ್ದೆವು. ಕಿರಿಯ ಅಣ್ಣ ಉಮೇಶ್ ದೂರದ ಕೊಡಗಿನ ಹುದಿಕೇರಿಯ ಹೈಸ್ಕೂಲ್‌ ನಲ್ಲಿ ಉದ್ಯೋಗಿಯಾಗಿದ್ದ. ಅಂದ ಮೇಲೆ ಕಾರ್ಕಳ ಕುಕ್ಕುಂದೂರಿನಲ್ಲಿ ನಮಗೇನು ಕೆಲಸ?

ಕಾರ್ಕಳದ ಮನೆಯನ್ನು ಮಾರುವುದರೊಂದಿಗೆ ಕಾರ್ಕಳದೊಂದಿಗಿನ ನನ್ನ ನಂಟು ಸಂಪೂರ್ಣ ಕಳಚಿಕೊಂಡಿತ್ತು. ಉಳಿದುದು ಅಲ್ಲಿನ ಸುಂದರ ನೆನಪುಗಳು ಮಾತ್ರ.

ಶ್ರೀನಿವಾಸ ಕಾರ್ಕಳ
ಸಮಾಜ ಚಿಂತಕರು.

ಇದನ್ನೂ ಓದಿ- ಅದೊಂದು ದೊಡ್ಡ ಕತೆ-ಆತ್ಮಕಥನ ಸರಣಿ – 31 | ಮಂಗಳೂರು ವಾಸ ಆರಂಭ

More articles

Latest article

Most read