ಬೆಂಗಳೂರು, ಅ.13 : ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ವಿಧಾನಸಭಾ ಚುನಾವಣೆ ನಡೆದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದ ಸಚಿವರೂ ಸೇರಿ 25 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಅವರ ಪಕ್ಷದ ಸಚಿವರು, ಶಾಸಕರೇ ವಿಶ್ವಾಸ ಕಳೆದುಕೊಳ್ಳುವಂತಹ ರಾಜಕೀಯ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದರು.
ಕಳೆದ ಬಾರಿಯ ಚುನಾವಣೆಯಲ್ಲಿ ಜನ ಯಾಮಾರಿ ಯುಪಿಎಗೆ ಒಂದಷ್ಟು ಸ್ಥಾನ ನೀಡಿದ್ದರು. ಆದರೆ ಮುಂದಿನ ಬಾರಿ ಹಾಗಾಗಲು ಸಾಧ್ಯವೇ ಇಲ್ಲ. ಹಿಂದೆ ಐವತ್ತು ಅರವತ್ತು ಸಂಸದರು ಕಾಂಗ್ರೆಸ್ನಿಂದ ಗೆದ್ದಿದ್ದರು. ರಾಹುಲ್ ಗಾಂಧಿ ಅವರಿಂದ ಪಕ್ಷಕ್ಕೆ ಮುಂದಿನ ಬಾರಿ ಸೀಟು ಕಡಿಮೆಯಾಗಲಿದೆ ಎಂದು ಹೇಳಿದರು.
ಕರ್ನಾಟಕದ ರಾಜಕಾರಣ ಇಷ್ಟೊಂದು ಕೀಳು ಮಟ್ಟಕ್ಕೆ ಎಂದೂ ಹೋಗಿರಲಿಲ್ಲ. ದೇಶದಲ್ಲಿ ರಾಜಕಾರಣಿಗಳೆಂದರೆ ಜನ ಅಸಹ್ಯ ಪಡುವಂತಾಗಿದೆ. ಇಂತಹ ಹೊತ್ತಲ್ಲಿ ಸ್ಟಿಂಗ್ ಆಪರೇಷನ್ ಮುಂತಾದವು ನಡೆದರೆ ಖಂಡಿತಾ ಒಳ್ಳೆಯದಲ್ಲ. ಕಾಂಗ್ರೆಸ್ನಲ್ಲಿ ಕೆಲವರು ಅಧಿಕಾರಕ್ಕಾಗಿ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ ಎಂಬ ವಿಚಾರಗಳೂ ಚರ್ಚೆಯಲ್ಲಿವೆ. ಪ್ರತಿ ದಿನಕ್ಕೊಮೆ ಶಾಸಕರು, ಸಚಿವರು, ಮಾಜಿ ಸಿಎಂಗಳು ಸ್ಟಿಂಗ್ ಆಪರೇಷನ್ ಬಗ್ಗೆಯೇ ಮಾತನಾಡುತ್ತಾರೆ. ಮಂತ್ರಿಯಾಗಲು, ಮುಖ್ಯಮಂತ್ರಿಯಾಗಲು ಸ್ಟಿಂಗ್ ನಡೆದಿದೆಯಂತೆ. ಮುಂದಿನ ದಿನ ಎಲ್ಲವೂ ಬಹಿರಂಗವಾಗಲಿದೆ. ಇದೊಂದು ರಾಜಕಾರಣದ ವ್ಯಭಿಚಾರ. ಯಾರು ಇಂತಹ 420 ಕೆಲಸ ಮಾಡಿದ್ದಾರೆ ಅವರು ಅನುಭವಿಸುತ್ತಾರೆ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲ ಇದೆ. ರೈತರಿಗೆ ಭಿಕ್ಷೆ ನೀಡದಂತೆ ಎರಡೂವರೆ ಸಾವಿರ ಪರಿಹಾರ ಘೋಷಣೆ ಮಾಡಲಾಗಿದೆ. ಆದರೆ ಹಣ ನೀಡಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಮನೆ ಕಳೆದುಕೊಂಡವರಿಗೆ ಐದು ಲಕ್ಷ ಪರಿಹಾರ ನೀಡಿದ್ದರು. ಕೇವಲ ಪಾತ್ರೆಗೆ ಹತ್ತು ಸಾವಿರ ನೀಡಿದ್ದರು. ಈ ಸರ್ಕಾರಕ್ಕೆ ಪರಿಹಾರ ಕೊಡಲು ಸಾಧ್ಯವಾಗದೇ ಸ್ಟಿಂಗ್ ಆಪರೇಷನ್ ವಿಷಯ ಮುನ್ನೆಲೆಗೆ ತಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ನೋಡುತ್ತಿದೆ. ರಾಜ್ಯ ಆರ್ಥಿಕ ದಿವಾಳಿಯತ್ತ ಬಂದು ತಲುಪಿದೆ. ದಿವಾಳಿ ಆಗಿದೆ ಎಂದು ಒಪ್ಪಿಕೊಳ್ಳಲು ಸಿಎಂ ಮತ್ತು ಸರ್ಕಾರಕ್ಕೆ ಎದೆಗಾರಿಕೆ ಇಲ್ಲ. ಕೇಂದ್ರದ ಮೇಲೆ ಆರೋಪ ಮಾಡಿ ತಪ್ಪಿಸಿಕೊಳ್ಳುವುದೇ ಇವರ ಕೆಲಸ ಎಂದು ವಿವರಿಸಿದರು.
ಸರ್ಕಾರ ತೈಲ ಕಂಪನಿಗಳಿಗೆ ಬಾಕಿ ನೀಡದೆ ಸಾರಿಗೆ ಬಸ್ಗಳು ಡಿಪೋದಲ್ಲಿ ನಿಲ್ಲುತ್ತಿವೆ. ಈ ರಿಯಲ್ ಎಸ್ಟೇಟ್ ಸರ್ಕಾರಕ್ಕೆ ಹಣ ಇಲ್ಲದಿದ್ದರೂ ತಾಲೂಕುಗಳಲ್ಲಿ ರಿಂಗ್ ರಸ್ತೆ ಮಾಡಲು ಮುಂದಾಗಿದೆ. ಅಲ್ಲೂ ರಿಯಲ್ ಎಸ್ಟೇಟ್ ದಂಧೆ ಮಾಡಲು ನೋಡುತ್ತಿದೆ ಎಂದು ದೂರಿದರು.

