ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆ ಚುನಾವಣೆ ನಡೆಯುವುದರಲ್ಲಿ ಮಾತ್ರವಿಲ್ಲ. ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನ ಮಾಡಲು ಸಾಧ್ಯವಾಗುತ್ತಿದೆಯೇ, ಚುನಾವಣಾ ವ್ಯವಸ್ಥೆಯ ಮೇಲೆ ವಿಶ್ವಾಸವಿದೆಯೇ ಮತ್ತು ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಸ್ವಾತಂತ್ರ್ಯ ಉಳಿದಿದೆಯೇ ಎಂಬುದರಲ್ಲಿದೆ. ಈ ಪ್ರಶ್ನೆಗಳಿಗೆ ನ್ಯಾಯಯುತ ಉತ್ತರಗಳನ್ನು ಹುಡುಕುವ ಹೋರಾಟವೇ ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಅತ್ಯಂತ ಮಹತ್ವದ ಪ್ರಜಾಸತ್ತಾತ್ಮಕ ಪರಂಪರೆಯಾಗಿದೆ ಹಾಗೂ ನಮ್ಮ ಸ್ವಾಭಿಮಾನದ ನಡಿಗೆಯೂ ಆಗಿದೆ – ಕಾಶಿನಾಥ ಮುದ್ದಾಗೋಳ, ಕಲಬುರ್ಗಿ.
ಭಾರತದ ಪ್ರಜಾಪ್ರಭುತ್ವದ ಶಕ್ತಿ ಕೇವಲ ಚುನಾವಣೆಗಳನ್ನು ನಡೆಸುವುದರಲ್ಲಿ ಇಲ್ಲ; ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಯಾವುದೇ ಭಯ, ಒತ್ತಡ ಅಥವಾ ತಾರತಮ್ಯವಿಲ್ಲದೆ ತನ್ನ ಪ್ರತಿನಿಧಿಯನ್ನು ಆಯ್ಕೆ ಮಾಡುವ ಅವಕಾಶವನ್ನು ಖಚಿತಪಡಿಸುವುದರಲ್ಲಿ ಇದೆ ಎಂದು ನಾನು ನಂಬುತ್ತೇನೆ. ಮತದಾನವೆಂದರೆ ಐದು ವರ್ಷಕ್ಕೊಮ್ಮೆ ನಡೆಯುವ ರಾಜಕೀಯ ಪ್ರಕ್ರಿಯೆ ಮಾತ್ರವಲ್ಲ. ಅದು ನಾಗರಿಕನ ಅಸ್ತಿತ್ವ, ಸಮಾನತೆ, ಸ್ವಾತಂತ್ರ್ಯ ಮತ್ತು ಘನತೆಯೊಂದಿಗೆ ಸಂಬಂಧ ಹೊಂದಿರುವ ಪ್ರಜಾಸತ್ತಾತ್ಮಕ ಹಕ್ಕು. ಆದರೆ ಇಂದು ಚುನಾವಣಾ ಆಯೋಗದ ಕಾರ್ಯವೈಖರಿ, ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಮತದಾನದ ಹಕ್ಕಿಗೆ ಸಂಬಂಧಿಸಿದಂತೆ ಎದ್ದಿರುವ ವಿವಾದಗಳು ಭಾರತದ ಪ್ರಜಾಪ್ರಭುತ್ವದ ಸ್ವರೂಪದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ದೇಶದ ವಿವಿಧ ಭಾಗಗಳಲ್ಲಿ ಯುವಜನರು ಮತ್ತು ನಾಗರಿಕರು ಪ್ರಶ್ನೆಗಳನ್ನು ಎತ್ತುತ್ತಿರುವುದು ಈ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision ( SIR ) ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಅರ್ಹರಲ್ಲದವರು, ಮೃತಪಟ್ಟವರು ಅಥವಾ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರನ್ನು ಗುರುತಿಸಿ ಪಟ್ಟಿಯನ್ನು ಶುದ್ಧೀಕರಿಸುವುದು ಚುನಾವಣಾ ಪ್ರಕ್ರಿಯೆಯ ಒಂದು ಅಗತ್ಯ ಭಾಗ. ಆದರೆ ಈ ಪ್ರಕ್ರಿಯೆಯಲ್ಲಿಯೇ ಅರ್ಹ ಮತದಾರರ ಹೆಸರುಗಳು ಕೈಬಿಟ್ಟರೆ, ಅದರಿಂದ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆಯಾಗುತ್ತದೆ.
2026ರಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 13 ಕೋಟಿಗೂ ಅಧಿಕ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಅಂಕಿ-ಅಂಶವೊಂದೇ ಅಷ್ಟೂ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲಾಗಿದೆ ಎಂಬುದನ್ನು ಸಾಬೀತುಪಡಿಸುವುದಿಲ್ಲ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದ ಹೆಸರುಗಳನ್ನು ಕೈಬಿಡುವಾಗ ಯಾವ ಮಾನದಂಡಗಳನ್ನು ಅನುಸರಿಸಲಾಗಿದೆ. ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಎಷ್ಟು ಮುಖ್ಯವೋ, ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡದಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ. ಬಡವರು, ವಲಸೆ ಕಾರ್ಮಿಕರು, ದಲಿತರು, ಆದಿವಾಸಿಗಳು, ಮಹಿಳೆಯರು, ವೃದ್ಧರು, ಧಾರ್ಮಿಕ ಆಲ್ಪಸಂಖ್ಯಾತರು ಮತ್ತು ಅಗತ್ಯ ದಾಖಲೆಗಳನ್ನು ಹೊಂದಿರದ ನಾಗರಿಕರು ಈ ಪ್ರಕ್ರಿಯೆಯಲ್ಲಿ ಹೆಚ್ಚು ತೊಂದರೆ ಅನುಭವಿಸಿದ್ದಾರೆ. ಒಬ್ಬ ವ್ಯಕ್ತಿಯ ಹೆಸರನ್ನು ಪಟ್ಟಿಯಿಂದ ಕೈಬಿಟ್ಟರೆ, ಅದು ಕೇವಲ ಆಡಳಿತಾತ್ಮಕ ತಪ್ಪಾಗಿರುವುದಿಲ್ಲ, ಅದು ಅವರ ರಾಜಕೀಯ ಧ್ವನಿಯನ್ನೇ ಮೊಟಕಿಹಾಕಿದಂತ್ತೆ ಆಗುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಚುನಾವಣಾ ಆಯೋಗದ ವಿರುದ್ಧ ಕೇಳಿಬರುತ್ತಿರುವ ಅಕ್ರಮಗಳ ಆರೋಪಗಳನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು. ಆರೋಪಗಳ ಸತ್ಯಾಸತ್ಯತೆ, ಪರಿಷ್ಕರಣೆಯ ಮಾನದಂಡಗಳು ಮತ್ತು ತೆಗೆದುಕೊಂಡ ಕ್ರಮಗಳ ಕಾನೂನುಬದ್ಧತೆಯನ್ನು ಪಾರದರ್ಶಕವಾಗಿ ಪರಿಶೀಲಿಸುವುದು ಅಗತ್ಯ. ಪ್ರಜಾಪ್ರಭುತ್ವದಲ್ಲಿ ಯಾವುದೇ ಸಂಸ್ಥೆಯೂ ಪ್ರಶ್ನೆಗಳಿಗೆ ಅತೀತವಲ್ಲ ಮತ್ತು ಆಗಬಾರದು ಕೂಡ!.
ಮತದಾನದ ಹಕ್ಕು- ಹೋರಾಟದ ಫಲವೇ ಆಗಿದೆ.

ಇಂದು ನಾವು ಮತದಾನವನ್ನು ಸಹಜ ಹಕ್ಕಿನಂತೆ ಪರಿಗಣಿಸುತ್ತೇವೆ. ಆದರೆ ಭಾರತದ ಇತಿಹಾಸದಲ್ಲಿ ಪ್ರತಿಯೊಬ್ಬ ವಯಸ್ಕನಿಗೂ ಮತದಾನದ ಹಕ್ಕು ದೊರೆಯುವ ಕಲ್ಪನೆ ದೀರ್ಘ ಹೋರಾಟ ಮತ್ತು ರಾಜಕೀಯ ಚರ್ಚೆಗಳ ಮೂಲಕ ರೂಪುಗೊಂಡಿತು. ಬ್ರಿಟಿಷರ ಆಳ್ವಿಕೆಯಲ್ಲಿ ಮತದಾನದ ಅವಕಾಶವು ಸೀಮಿತವಾಗಿತ್ತು. ಆಸ್ತಿ, ಆದಾಯ, ಶಿಕ್ಷಣ ಮುಂತಾದ ಅರ್ಹತೆಗಳ ಆಧಾರದ ಮೇಲೆ ಕೆಲವೇ ಜನರಿಗೆ ಮತದಾನದ ಅವಕಾಶವಿತ್ತು. ಬಹುಸಂಖ್ಯಾತ ಬಡವರು, ಕಾರ್ಮಿಕರು, ಮಹಿಳೆಯರು ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳು ರಾಜಕೀಯ ನಿರ್ಧಾರ ಪ್ರಕ್ರಿಯೆಯಿಂದ ಹೊರಗುಳಿದಿದ್ದರು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಈ ಅಸಮಾನ ವ್ಯವಸ್ಥೆಯನ್ನು ಪ್ರಶ್ನಿಸಲಾಯಿತು. ಸ್ವತಂತ್ರ ಭಾರತದಲ್ಲಿ ಪ್ರತಿಯೊಬ್ಬ ವಯಸ್ಕ ನಾಗರಿಕನಿಗೂ ಮತದಾನದ ಹಕ್ಕು ಇರಬೇಕು ಎಂಬ ಬೇಡಿಕೆ ಬಲಗೊಂಡಿತು. ಸಂವಿಧಾನ ರಚನೆಯ ಸಂದರ್ಭದಲ್ಲಿ ಈ ಆಶಯಕ್ಕೆ ಕಾನೂನುಬದ್ಧ ರೂಪ ದೊರೆಯಿತು. ಭಾರತೀಯ ಸಂವಿಧಾನದ 326ನೇ ವಿಧಿಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆಗಳನ್ನು ವಯಸ್ಕ ಮತದಾನದ ತತ್ವದ ಆಧಾರದ ಮೇಲೆ ನಡೆಸಬೇಕೆಂದು ಹೇಳುತ್ತದೆ. ಆರಂಭದಲ್ಲಿ ಮತದಾನದ ವಯಸ್ಸು 21 ವರ್ಷಗಳಾಗಿದ್ದು, 61ನೇ ತಿದ್ದುಪಡಿಯ ಮೂಲಕ ಅದನ್ನು 18 ವರ್ಷಗಳಿಗೆ ಇಳಿಸಲಾಗಿದೆ. 1951–52ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸುಮಾರು 17.3 ಕೋಟಿ ಮತದಾರರು ಭಾಗವಹಿಸುವ ಅವಕಾಶ ಪಡೆದರು. ಬಡತನ, ಅನಕ್ಷರತೆ ಮತ್ತು ಸಾಮಾಜಿಕ ಅಸಮಾನತೆಗಳು ವ್ಯಾಪಕವಾಗಿದ್ದ ಸಂದರ್ಭದಲ್ಲಿ ಪ್ರತಿಯೊಬ್ಬ ವಯಸ್ಕನಿಗೂ ಮತದಾನದ ಹಕ್ಕು ನೀಡಿದ್ದು ಭಾರತೀಯ ಪ್ರಜಾಪ್ರಭುತ್ವದ ಮಹತ್ವದ ಸಾಧನೆಯಾಗಿತ್ತು.
ಗಾಂಧಿ ಮತ್ತು ಅಂಬೇಡ್ಕರ್: ಪ್ರಜಾಪ್ರಭುತ್ವದ ಕುರಿತು ವಿಭಿನ್ನ ದೃಷ್ಟಿಕೋನಗಳು.
ಭಾರತದ ಪ್ರಜಾಪ್ರಭುತ್ವದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಗಮನಿಸುವುದು ಮುಖ್ಯ. ಇಬ್ಬರೂ ಸಮಾಜದ ಪರಿವರ್ತನೆಯನ್ನು ಬಯಸಿದವರೇ ಆಗಿದ್ದರೂ, ಸಾಮಾಜಿಕ ನ್ಯಾಯ, ರಾಜಕೀಯ ಪ್ರಾತಿನಿಧ್ಯ ಮತ್ತು ಪ್ರಜಾಪ್ರಭುತ್ವದ ಸ್ವರೂಪದ ಕುರಿತು ಅವರ ದೃಷ್ಟಿಕೋನಗಳಲ್ಲಿ ಗಮನಾರ್ಹ ಭಿನ್ನತೆಗಳಿದ್ದವು. ಗಾಂಧಿಯವರ ರಾಜಕೀಯ ಚಿಂತನೆಯ ಕೇಂದ್ರದಲ್ಲಿ ಗ್ರಾಮ ಸ್ವರಾಜ್ಯ, ಜನರ ಭಾಗವಹಿಸುವಿಕೆ, ನೈತಿಕ ಹೊಣೆಗಾರಿಕೆ ಮತ್ತು ವಿಕೇಂದ್ರೀಕೃತ ಆಡಳಿತಕ್ಕೆ ಮಹತ್ವವಿತ್ತು. ಜನರು ತಮ್ಮ ಸಮುದಾಯದ ನಿರ್ಧಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ವಿರುದ್ಧದ ಹೋರಾಟದ ಸ್ವರೂಪ ಸೇರಿದಂತೆ ಹಲವು ವಿಚಾರಗಳಲ್ಲಿ ಅಂಬೇಡ್ಕರ್ ಅವರೊಂದಿಗೆ ಗಾಂಧಿಯವರಿಗೆ ಭಿನ್ನಾಭಿಪ್ರಾಯಗಳಿದ್ದವು. ಅಂಬೇಡ್ಕರ್ ಅವರಿಗೆ ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಸಾಮಾಜಿಕ ಪ್ರಜಾಪ್ರಭುತ್ವವೂ ಅಗತ್ಯವಾಗಿತ್ತು. ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಗಳು ಮುಂದುವರಿದಿರುವ ಸಮಾಜದಲ್ಲಿ ಕೇವಲ ಮತದಾನದ ಹಕ್ಕು ದೊರೆತರೆ ಸಾಕಾಗುವುದಿಲ್ಲ ಎನ್ನುವುದು ಬಾಬಾ ಸಾಹೇಬರ ಬಲವಾದ ನಂಬಿಕೆ ಆಗಿತ್ತು.
1932ರ ಪೂನಾ ಒಪ್ಪಂದದ ಸಂದರ್ಭದಲ್ಲಿ ಪ್ರತ್ಯೇಕ ಮತದಾರರ ಮಂಡಳಿಯ ಪ್ರಶ್ನೆಯ ಕುರಿತು ಗಾಂಧಿ ಮತ್ತು ಅಂಬೇಡ್ಕರ್ ನಡುವೆ ತೀವ್ರ ಭಿನ್ನಾಭಿಪ್ರಾಯವಿತ್ತು. ಈ ಚರ್ಚೆ ರಾಜಕೀಯ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯದ ಕುರಿತ ಅವರ ವಿಭಿನ್ನ ನಿಲುವುಗಳನ್ನು ಪ್ರತಿಬಿಂಬಿಸುತ್ತದೆ. ಈ ಐತಿಹಾಸಿಕ ಭಿನ್ನಮತಗಳಿಂದ ಕಲಿಯಬೇಕಾದ ಪಾಠವೆಂದರೆ, ಪ್ರಜಾಪ್ರಭುತ್ವವು ಕೇವಲ ಬಹುಮತದ ನಿರ್ಧಾರವಲ್ಲ. ಅಲ್ಪಸಂಖ್ಯಾತರ ಹಕ್ಕುಗಳು, ದುರ್ಬಲ ಸಮುದಾಯಗಳ ಧ್ವನಿ ಮತ್ತು ಪ್ರತಿಯೊಬ್ಬ ನಾಗರಿಕನ ಸಮಾನ ಸ್ಥಾನಮಾನಕ್ಕೂ ಅದರಲ್ಲಿ ಅವಕಾಶವಿರಬೇಕು ಎನ್ನುವ ಮಹದಾಶಯ. ಚುನಾವಣಾ ಪ್ರಕ್ರಿಯೆಯ ಕುರಿತು ಇಂದು ನಡೆಯುತ್ತಿರುವ ಚರ್ಚೆಗಳನ್ನು ಈ ವಿಶಾಲ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಲೇ ಬೇಕಾಗಿದೆ.
ಇಂದು ಯುವಜನರು ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ, ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ಮತದಾರರ ಹಕ್ಕುಗಳ ಕುರಿತು ಪ್ರಶ್ನೆಗಳನ್ನು ಎತ್ತುತ್ತಿರುವುದು ಮತ್ತು ಪಾಠ ಮಾಡುತ್ತಿರುವುದು ನಿಜಕ್ಕೂ ಅರ್ಥ ಪೂರ್ಣ ಹಾಗೂ ಪ್ರಜಾಪ್ರಭುತ್ವದ ದೃಷ್ಟಿಯಿಂದ ಮಹತ್ವದ್ದಾಗಿದೆ. ಬೆಂಗಳೂರು, ದೆಹಲಿಯೂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಡೆದ ಪ್ರತಿಭಟನೆಗಳು ಮತ್ತು ವಿದ್ಯಾರ್ಥಿ ಗುಂಪುಗಳ ಭಾಗವಹಿಸುವಿಕೆ ಈ ಚರ್ಚೆಯನ್ನು ಸಾರ್ವಜನಿಕ ವಲಯಕ್ಕೆ ತಂದಿವೆ. ಯುವಜನರ ಪ್ರಶ್ನೆಗಳನ್ನು ಯಾವುದೇ ಒಂದು ರಾಜಕೀಯ ಪಕ್ಷದ ಬೆಂಬಲ ಅಥವಾ ವಿರೋಧಕ್ಕೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ಅವರು ಕೇಳುತ್ತಿರುವ ಪ್ರಶ್ನೆಗಳ ಸತ್ಯಾಸತ್ಯತೆ, ಅವುಗಳ ಹಿಂದಿರುವ ಸಾಕ್ಷ್ಯಗಳು ಮತ್ತು ಪ್ರಸ್ತಾಪಿಸುತ್ತಿರುವ ಪರಿಹಾರಗಳನ್ನು ಪರಿಶೀಲಿಸಬೇಕು. ಅದೇ ಸಮಯದಲ್ಲಿ, ಪ್ರತಿಭಟನೆಗಳಲ್ಲಿ ಭಾಗವಹಿಸುವವರನ್ನು ಕೇವಲ ರಾಜಕೀಯ ಉದ್ದೇಶದಿಂದ ಪ್ರೇರಿತರಾದವರು ಎಂದು ತಳ್ಳಿಹಾಕುವುದೂ ಸಾಂವಿಧಾನಿಕ ವ್ಯವಸ್ಥೆಗೆ ಅಗೌರವ ಮಾಡಿದಹಾಗೆ ಆಗುತ್ತದೆ. ಒಂದು ಪ್ರಜಾಪ್ರಭುತ್ವದಲ್ಲಿ ನಾಗರಿಕರಿಗೆ ಪ್ರಶ್ನಿಸುವ ಹಕ್ಕಿದೆ; ಸರ್ಕಾರ ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಉತ್ತರಿಸುವ ಹೊಣೆಗಾರಿಕೆಯಿದೆ. ಪ್ರತಿಭಟನೆಗಳು ಶಾಂತಿಯುತವಾಗಿ, ಸಂವಿಧಾನಾತ್ಮಕ ಮೌಲ್ಯಗಳಿಗೆ ಬದ್ಧವಾಗಿ ನಡೆಯಬೇಕು. ಆಡಳಿತವು ಅವುಗಳನ್ನು ವಿರೋಧದ ಧ್ವನಿಯೆಂದು ಮಾತ್ರ ಕಾಣದೆ, ಸಾರ್ವಜನಿಕ ಆತಂಕಗಳನ್ನು ಅರ್ಥಮಾಡಿಕೊಳ್ಳುವ ಅವಕಾಶವೆಂದು ಪರಿಗಣಿಸಬೇಕು. ಈ ಹೋರಾಟಗಳನ್ನು ಪಕ್ಷಾತೀತವಾಗಿ ನೋಡಬೇಕಾಗಿದೆ.

ಚುನಾವಣಾ ಆಯೋಗದ ವಿವಾದವನ್ನು ಕೇವಲ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಸಂಘರ್ಷವೆಂದು ನೋಡುವುದು ಸಮಸ್ಯೆಯ ಮೂಲವನ್ನು ಮರೆಮಾಚಬಹುದು. ಇಂದು ಒಂದು ಪಕ್ಷಕ್ಕೆ ಅನುಕೂಲವಾಗುವ ವ್ಯವಸ್ಥೆ ನಾಳೆ ಮತ್ತೊಂದು ಪಕ್ಷಕ್ಕೆ ಅನುಕೂಲವಾಗಬಹುದು. ಆದರೆ ಮತದಾನದ ಹಕ್ಕು ಕಳೆದುಕೊಳ್ಳುವ ಅಪಾಯ ಎದುರಿಸುವ ಸಾಮಾನ್ಯ ನಾಗರಿಕನಿಗೆ ಪಕ್ಷದ ಗುರುತು ಮುಖ್ಯವಲ್ಲ; ತನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಮತ್ತು ತನ್ನ ಮತಕ್ಕೆ ಮೌಲ್ಯವಿದೆಯೇ ಎಂಬುದೇ ಮುಖ್ಯ.
ಆದ್ದರಿಂದ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪಕ್ಷಾತೀತವಾಗಿ ಪರಿಶೀಲಿಸುವುದು ಅತ್ಯಂತ ಅಗತ್ಯ. ಆಯೋಗವು ಸರ್ಕಾರದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆಯೇ?, ಮತದಾರರ ಪಟ್ಟಿಯ ಪರಿಷ್ಕರಣೆಗೆ ಸ್ಪಷ್ಟ ಮಾನದಂಡಗಳಿವೆಯೇ? ಹೆಸರುಗಳನ್ನು ಕೈಬಿಡುವಾಗ ಸೂಕ್ತ ನೋಟಿಸ್ ಮತ್ತು ಮೇಲ್ಮನವಿ ಅವಕಾಶ ನೀಡಲಾಗಿದೆಯೇ? ದೂರುಗಳಿಗೆ ಸಮಯೋಚಿತ ಪರಿಹಾರ ದೊರೆಯುತ್ತಿದೆಯೇ?…ಹೀಗೆ. ಚುನಾವಣಾ ಆಯೋಗವು ತನ್ನ ನಿರ್ಧಾರಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಅಂಕಿ-ಅಂಶಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ರಾಜಕೀಯ ಪಕ್ಷಗಳು ತಮ್ಮ ಆರೋಪಗಳಿಗೆ ಸಾಕ್ಷ್ಯಗಳನ್ನು ಒದಗಿಸಬೇಕು. ನ್ಯಾಯಾಂಗವು ತನ್ನ ವ್ಯಾಪ್ತಿಯಲ್ಲಿ ಕಾನೂನುಬದ್ಧತೆಯನ್ನು ಪರಿಶೀಲಿಸಬೇಕು. ನಾಗರಿಕ ಸಮಾಜ ಮತ್ತು ಮಾಧ್ಯಮಗಳು ಸ್ವತಂತ್ರವಾಗಿ ಮಾಹಿತಿಯನ್ನು ಪರಿಶೀಲಿಸಬೇಕು ಅದು ಈಗ ನಡೆಯುತ್ತಿಲ್ಲ. ನಾವು ಮುಂದಿನ ಪೀಳಿಗೆಗೆ ನೀಡಬೇಕಾದದ್ದು ಕೇವಲ ಚುನಾವಣೆಗಳಿರುವ ದೇಶವಲ್ಲ, ಪ್ರಶ್ನೆಗಳನ್ನು ಕೇಳಬಹುದಾದ, ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾದ, ಅಧಿಕಾರವನ್ನು ಹೊಣೆಗಾರರನ್ನಾಗಿ ಮಾಡಬೇಕಾದ ಮತ್ತು ಪ್ರತಿಯೊಬ್ಬ ನಾಗರಿಕನ ಮತಕ್ಕೂ ಸಮಾನ ಮೌಲ್ಯವಿರುವ ಪ್ರಜಾಪ್ರಭುತ್ವವನ್ನು ವರ್ಗಾಯಿಸಬೇಕು. ಇದಕ್ಕಾಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಸಂವಿಧಾನ, ಮತದಾನದ ಹಕ್ಕು ಮತ್ತು ನಾಗರಿಕ ಹೊಣೆಗಾರಿಕೆಯ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆಯಬೇಕು. ಅದೇ ರೀತಿ, ರಾಜಕೀಯ ಪಕ್ಷಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳು ನಾಗರಿಕರ ಪ್ರಶ್ನೆಗಳನ್ನು ಗೌರವದಿಂದ ಸ್ವೀಕರಿಸಬೇಕು. ತಪ್ಪುಗಳು ಕಂಡುಬಂದರೆ ಅವುಗಳನ್ನು ಸರಿಪಡಿಸಬೇಕು. ಉದ್ದೇಶಪೂರ್ವಕ ಅಕ್ರಮಗಳು ನಡೆದಿರುವುದು ಸಾಕ್ಷ್ಯಗಳಿಂದ ಸಾಬೀತಾದರೆ, ಹೊಣೆಗಾರರನ್ನು ಕಾನೂನಿನ ಪ್ರಕಾರ ಹೊಣೆಗಾರರನ್ನಾಗಿ ಮಾಡಬೇಕು.
ಪ್ರಜಾಪ್ರಭುತ್ವ ಉಳಿಯುವುದು ಪ್ರಶ್ನಿಸುವ ನಾಗರಿಕರಿಂದ.
ಭಾರತದ ಪ್ರಜಾಪ್ರಭುತ್ವವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಸಾಮಾಜಿಕ ನ್ಯಾಯಕ್ಕಾಗಿ ನಡೆದ ಚಳವಳಿಗಳು ಮತ್ತು ಸಂವಿಧಾನ ರಚನಾಕಾರರ ದೂರದೃಷ್ಟಿಯ ಫಲವಾಗಿದೆ. ಮತದಾನದ ಹಕ್ಕು ಐತಿಹಾಸಿಕ ಮಹತ್ವದ ಸಾಧನೆಯಾಗಿದೆ. ಅದನ್ನು ಕಾಪಾಡುವುದು ಕೇವಲ ಚುನಾವಣಾ ಆಯೋಗದ ಜವಾಬ್ದಾರಿಯಲ್ಲ; ಸರ್ಕಾರ, ರಾಜಕೀಯ ಪಕ್ಷಗಳು, ನ್ಯಾಯಾಂಗ, ಮಾಧ್ಯಮ, ನಾಗರಿಕ ಸಮಾಜ ಮತ್ತು ಪ್ರತಿಯೊಬ್ಬ ಮತದಾರನ ಹೊಣೆಗಾರಿಕೆಯೂ ಹೌದು. ಇಂದು ಯುವಜನರು ಚುನಾವಣಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿರುವುದನ್ನು ಒಂದು ಅವಕಾಶವಾಗಿ ನೋಡಬೇಕು. ಆ ಪ್ರಶ್ನೆಗಳನ್ನು ಪಕ್ಷದ ಕನ್ನಡಕದಿಂದ ನೋಡುವ ಬದಲು ಸಂವಿಧಾನದ ಮೌಲ್ಯಗಳ ಮೂಲಕ ಪರಿಶೀಲಿಸಬೇಕು. ಆರೋಪಗಳನ್ನು ಸಾಕ್ಷ್ಯಗಳಿಂದ ಪರೀಕ್ಷಿಸಬೇಕು. ತಪ್ಪುಗಳನ್ನು ಸರಿಪಡಿಸಬೇಕು, ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸಬೇಕು. ಏಕೆಂದರೆ ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆ ಚುನಾವಣೆ ನಡೆಯುವುದರಲ್ಲಿ ಮಾತ್ರವಿಲ್ಲ. ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನ ಮಾಡಲು ಸಾಧ್ಯವಾಗುತ್ತಿದೆಯೇ, ಚುನಾವಣಾ ವ್ಯವಸ್ಥೆಯ ಮೇಲೆ ವಿಶ್ವಾಸವಿದೆಯೇ ಮತ್ತು ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಸ್ವಾತಂತ್ರ್ಯ ಉಳಿದಿದೆಯೇ ಎಂಬುದರಲ್ಲಿದೆ. ಈ ಪ್ರಶ್ನೆಗಳಿಗೆ ನ್ಯಾಯಯುತ ಉತ್ತರಗಳನ್ನು ಹುಡುಕುವ ಹೋರಾಟವೇ ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಅತ್ಯಂತ ಮಹತ್ವದ ಪ್ರಜಾಸತ್ತಾತ್ಮಕ ಪರಂಪರೆಯಾಗಿದೆ ಹಾಗೂ ನಮ್ಮ ಸ್ವಾಭಿಮಾನದ ನಡಿಗೆಯೂ ಆಗಿದೆ.
ಕಾಶಿನಾಥ ಮುದ್ದಾಗೋಳ
ಕಲಬುರ್ಗಿ
ಇದನ್ನೂ ಓದಿ- ದೇಹ ಕಾಣುತ್ತೆ, ದನಿ ಕೇಳಲ್ಲ!


