ಮಣಿಪುರ: ಮಣಿಪುರದ ಕಾಮ್‌ಜೋಂಗ್ ಮತ್ತು ಉಖ್ರುಲ್ ಜಿಲ್ಲೆಗಳಲ್ಲಿ ಶನಿವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ. ಇದೇ ವೇಳೆ, ಚಸ್ಸಾದ್ ಪ್ರದೇಶದಲ್ಲಿ ಕನಿಷ್ಠ 10 ಮನೆಗಳು ಮತ್ತು 20 ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಘಟನೆಯಿಂದಾಗಿ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚಿನ ದಿನಗಳಲ್ಲಿ ನಾಗಾ ಮತ್ತು ಕುಕಿ-ಜೋ ಸಮುದಾಯಗಳ ನಡುವೆ ಸಂಘರ್ಷ ತೀವ್ರಗೊಂಡಿದ್ದು, ಇದರ ಬೆನ್ನಲ್ಲೇ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಶನಿವಾರ ಸಂಜೆ 6 ಗಂಟೆಯಿಂದ 24 ಗಂಟೆಗಳ ಸಂಪೂರ್ಣ ಬಂದ್‌ಗೆ ಬುಡಕಟ್ಟು ಏಕತಾ ಸಮಿತಿ (CoTU) ಕರೆ ನೀಡಿದೆ.
ಚಸ್ಸಾದ್‌ನಲ್ಲಿ ಯುವಕನ ಹತ್ಯೆ
ಕಾಮ್‌ಜೋಂಗ್ ಜಿಲ್ಲೆಯ ಚಸ್ಸಾದ್‌ನಲ್ಲಿ ಶನಿವಾರ ಬೆಳಗ್ಗೆ ಶಸ್ತ್ರಸಜ್ಜಿತ ಗುಂಪುಗಳು ಗುಂಡಿನ ದಾಳಿ ನಡೆಸಿವೆ ಎನ್ನಲಾಗಿದೆ. ಈ ವೇಳೆ 23 ವರ್ಷದ ಮೈಕೆಲ್ ನ್ಗಮ್ಮಿನ್ಲೆನ್ ಹೌಕಿಪ್ ಗುಂಡೇಟಿಗೆ ಬಲಿಯಾಗಿದ್ದಾರೆ.
ಇದಕ್ಕೂ ಮುನ್ನ ಶುಕ್ರವಾರ ರಾತ್ರಿ ಸುಮಾರು 9.40ರ ವೇಳೆಗೆ ಚಸ್ಸಾದ್‌ನಲ್ಲಿ ಕುಕಿ ಸಮುದಾಯದ ಮಹಿಳೆ, ಐವರು ಮಕ್ಕಳ ತಾಯಿ ಡೊಮ್ಖೋನೈ ತೌಥಾಂಗ್ ಗುಂಡೇಟಿನಿಂದ ಮೃತಪಟ್ಟಿದ್ದರು ಎಂದು ವರದಿಯಾಗಿದೆ.
ಉಖ್ರುಲ್‌ನಲ್ಲಿ ಹೊಂಚುದಾಳಿ: ಮತ್ತೊಬ್ಬ ಬಲಿ
ಉಖ್ರುಲ್ ಜಿಲ್ಲೆಯ ಟಿ.ಎಂ. ಕಸೋಮ್ ಸಮೀಪದ ಯಾಒಲೆನ್ ಪ್ರದೇಶದಲ್ಲಿ 40 ವರ್ಷದ ಸಂದೀಪ್ ರೈ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರು ಚಲಾಯಿಸುತ್ತಿದ್ದ ನಾಲ್ಕು ಚಕ್ರದ ವಾಹನದ ಮೇಲೆ ಶಂಕಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಹೊಂಚುದಾಳಿ ನಡೆಸಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ಸಂದೀಪ್ ರೈ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ.
ಭಾರತ–ಮ್ಯಾನ್ಮಾರ್ ಗಡಿ ಗ್ರಾಮದಲ್ಲೂ ಗುಂಡಿನ ದಾಳಿ
ಕಾಮ್‌ಜೋಂಗ್ ಜಿಲ್ಲೆಯ ಭಾರತ–ಮ್ಯಾನ್ಮಾರ್ ಗಡಿಯಲ್ಲಿರುವ ನಿಂಗ್‌ಚೌ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಸುಮಾರು 9.30ರ ವೇಳೆಗೆ ಇಬ್ಬರು ನಾಗಾ ಗ್ರಾಮಸ್ಥರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಮೃತರನ್ನು 35 ವರ್ಷದ ನ್ಗಾಚಾನ್ಸೊ ನಿಂಗ್ಶೆನ್ ಮತ್ತು 48 ವರ್ಷದ ಲೈಶಿಶಾನ್ ಲೈಶಾದಾಂಗ್ ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಯ ಹಿಂದಿನ ಕಾರಣ ಹಾಗೂ ದಾಳಿಕೋರರ ಗುರುತು ಇನ್ನೂ ಸ್ಪಷ್ಟವಾಗಿಲ್ಲ.
ಇತ್ತೀಚಿನ ಘಟನೆಗಳೊಂದಿಗೆ ಹಿಂಸಾಚಾರಕ್ಕೆ ಸಂಬಂಧಿಸಿದ ಸಾವಿನ ಸಂಖ್ಯೆ ಐದಕ್ಕೆ ಏರಿದೆ ಎಂದು ವರದಿಯಾಗಿದೆ. ಈ ಪೈಕಿ ನಾಲ್ಕು ಸಾವುಗಳು ಕಾಮ್‌ಜೋಂಗ್ ಜಿಲ್ಲೆಯಲ್ಲಿ ಹಾಗೂ ಒಂದು ಸಾವು ನೆರೆಯ ಉಖ್ರುಲ್ ಜಿಲ್ಲೆಯಲ್ಲಿ ಸಂಭವಿಸಿದೆ.
ಚಸ್ಸಾದ್‌ನಲ್ಲಿ ಮನೆ, ಅಂಗಡಿಗಳಿಗೆ ಬೆಂಕಿ
ಚಸ್ಸಾದ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಕನಿಷ್ಠ 10 ಮನೆಗಳು ಹಾಗೂ 20 ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಆಸ್ತಿಪಾಸ್ತಿಗೆ ಉಂಟಾದ ನಷ್ಟದ ಪ್ರಮಾಣ ಮತ್ತು ಸ್ಥಳಾಂತರಗೊಂಡವರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ.
ಪರಿಸ್ಥಿತಿಯನ್ನು ನಿಯಂತ್ರಿಸಲು ಕಾಮ್‌ಜೋಂಗ್ ಜಿಲ್ಲಾಡಳಿತವು ಚಸ್ಸಾದ್ ಪೊಲೀಸ್ ಗೇಟ್ ಜಂಕ್ಷನ್ ಸುತ್ತಮುತ್ತ ನಿರ್ಬಂಧಾಜ್ಞೆಗಳನ್ನು ಜಾರಿಗೊಳಿಸಿದೆ. ಅಕ್ಟೋಬರ್ 9ರಂದು ಹೊರಡಿಸಿದ ಆದೇಶದಲ್ಲಿ ಜಿಲ್ಲಾಧಿಕಾರಿ ಎಲ್.ಎನ್. ಕಶುಂಗ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಸೆಕ್ಷನ್ 163ರ ಅಡಿಯಲ್ಲಿ ನಿರ್ಬಂಧ ವಿಧಿಸಿದ್ದಾರೆ.
ಜಂಕ್ಷನ್‌ನ 400 ಮೀಟರ್ ವ್ಯಾಪ್ತಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು, ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಹಾಗೂ ಮನೆಗಳಿಂದ ಹೊರಗೆ ಸಂಚರಿಸುವುದನ್ನು ನಿಷೇಧಿಸಲಾಗಿದೆ. ಮುಂದಿನ ಆದೇಶದವರೆಗೆ ನಿರ್ಬಂಧಗಳು ಜಾರಿಯಲ್ಲಿರಲಿದ್ದು, ಭದ್ರತಾ ಸಿಬ್ಬಂದಿ, ಕರ್ತವ್ಯದಲ್ಲಿರುವ ಮ್ಯಾಜಿಸ್ಟ್ರೇಟ್‌ಗಳು, ಅಗತ್ಯ ಸೇವೆಗಳ ಸಿಬ್ಬಂದಿ ಮತ್ತು ವಿಶೇಷ ಅನುಮತಿ ಪಡೆದವರಿಗೆ ವಿನಾಯಿತಿ ನೀಡಲಾಗಿದೆ.
ಕಾಂಗ್‌ಪೋಕ್ಪಿಯಲ್ಲಿ 24 ಗಂಟೆಗಳ ಬಂದ್
ಚಸ್ಸಾದ್‌ನಲ್ಲಿ ನಡೆದ ಹತ್ಯೆಗಳು ಹಾಗೂ ಚಸ್ಸಾದ್, ಉಖ್ರುಲ್ ಜಿಲ್ಲೆಯ ಯಾಒಲೆನ್ ಮತ್ತು ಇಂಫಾಲ್–ತೆಂಗ್ನೌಪಾಲ್ ರಸ್ತೆಯುದ್ದಕ್ಕೂ ನಡೆದಿವೆ ಎನ್ನಲಾದ ಸಂಘಟಿತ ದಾಳಿಗಳನ್ನು ಖಂಡಿಸಿ CoTU, ಸದರ್ ಹಿಲ್ಸ್ ಸಂಘಟನೆಯು ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಶನಿವಾರ ಸಂಜೆ 6 ಗಂಟೆಯಿಂದ 24 ಗಂಟೆಗಳ ಬಂದ್‌ಗೆ ಕರೆ ನೀಡಿದೆ. ತುರ್ತು ವೈದ್ಯಕೀಯ ಸೇವೆಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ.
ಕುಕಿ ವರ್ಕರ್ಸ್ ಯೂನಿಯನ್ (KWU) ಕೂಡ ಡೊಮ್ಖೋನೈ ತೌಥಾಂಗ್ ಮತ್ತು ಮೈಕೆಲ್ ನ್ಗಮ್ಮಿನ್ಲೆನ್ ಹೌಕಿಪ್ ಅವರ ಹತ್ಯೆಗಳನ್ನು ಖಂಡಿಸಿದೆ. ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103 ಮತ್ತು 105ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು, ಐಆರ್‌ಬಿ (IRB) ಭದ್ರತಾ ಪೋಸ್ಟ್ ಅನ್ನು ತೆರವುಗೊಳಿಸಬೇಕು ಹಾಗೂ ಸ್ವತಂತ್ರ ತನಿಖೆ ನಡೆಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಮಣಿಪುರದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಹಿಂಸಾಚಾರದಿಂದಾಗಿ ಹಲವು ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿಯ ಮೇಲೆ ಅಧಿಕಾರಿಗಳು ನಿಗಾ ಇರಿಸಿದ್ದಾರೆ.

