ಈಗ ದಾಖಲೆಗಳಲ್ಲಿ ಕಾಣುತ್ತಿರುವ ಕಾಡು ಅಕ್ಷರಶಃ ಕುರುಚಲು ಕಾಡಾಗಿದೆ. ಅಲ್ಲಿ ಒಂದೆರಡು ಎಕರೆ ಬಗರ್ ಹುಕುಂ ಕೃಷಿ ಮಾಡುತ್ತಿರುವವರೂ ಈ ಕಾಡು ಒತ್ತುವರಿ ಮಾಡಿ ಕೃಷಿ ಪರಂಪರೆ ಬೆಳೆಸಿದವರ ಸಾಲಿನ ಗ್ರೂಪ್ ಫೋಟೊದ ಹಿಂದಿನ ಸಾಲಿನಲ್ಲಿ ಕಾಣಿಸಿಕೊಳ್ಳುವ ಉಮೇದು ತಪ್ಪೇನು? ಈಗ ತೋರುತ್ತಿರುವ ಕಾಡುಳಿಸುವ ಕಾಳಜಿಯೂ ಈ ಸಾಮಾಜಿಕ ಬಂಡವಾಳದ ಕಂದರದ ಮುಂದುವರಿಕೆ ಎಂದು ಕಂಡರೆ ಅದಕ್ಕೆ ಪ್ರತಿಕ್ರಿಯೆ ಏನು? – ಕೆ ಪಿ ಸುರೇಶ್, ಚಿಂತಕರು.
ತೇಜಸ್ವಿಯವರ ಮನೆಗೆ ಯಾರಾದರೂ ಹೋಗಿದ್ದರೆ ಅವರ ಮನೆಗೆ ಹೋಗುವ ಎಡಭಾಗದಲ್ಲಿ ಒಂದು ದೈತ್ಯ ಫರ್ನ್ ಇದೆ. ಅದಕ್ಕೀಗ ೨೫ ವರ್ಷ ಕಳೆದಿರಬಹುದು. ಅದನ್ನು ತೋರಿಸುತ್ತಾ ತೇಜಸ್ವಿಯವರು ಇದು ಚಾರ್ಮಾಡಿಯ ದಟ್ಟ ಮಳೆ ಅರಣ್ಯದಲ್ಲಿರುವ ಫರ್ನ್ ಎಂದರು. ನಾನು ನನ್ನೂರಿಗೆ ಮರಳಿದ ಮೇಲೆ ನಮ್ಮ ಕುಡಿಯುವ ನೀರಿನ ಝರಿಯಲ್ಲಿ ಕುಸಿದ ಮಣ್ಣು ತೆಗೆವಾಗ ದರೆ ಮೇಲೆ ಈ ಫರ್ನ್ ಯಥೇಚ್ಛ ಇತ್ತು. ನಾನು ತೇಜಸ್ವಿಯವರಿಗೆ ಫೋನಲ್ಲಿ, “ ಸಾರ್, ಅದೇನೋ ಡೀಪ್ ರೈನ್ ಫಾರೆಸ್ಟಲ್ಲಿರೋ ಫರ್ನ್ ಅಂದ್ರಲ್ಲಾ, ಅದು ನಮ್ಮ ಮನೆ ಹಿಂದೆ ಝರಿಗೆ ಅಂಟ್ಕೊಂಡಿದೆ” ಅಂದೆ.
ಅವರು, “ ಮುಠ್ಠಾಳಾ, ಅದು ಇರೋದೇ ದಟ್ಟ ಅರಣ್ಯದಲ್ಲಿ. ಒತ್ತುವರಿ ಮಾಡಿರೋದು ನೀವು. ಮೊದಲು ಜಾಗ ಖಾಲಿ ಮಾಡು!” ಅಂದರು.
ಈ ಬಂಟಮಲೆ ಉದ್ದಕ್ಕೂ ಒಂದೂವರೆ ಶತಮಾನದ ಹಿಂದೆ ಹತ್ತಾರು ಎಕರೆ ಜಮೀನು ಪಡಕೊಂಡು ಅದರಲ್ಲಿ ಕುಮರಿ ಬಿತ್ತಿ ಕಾಡು ಸವರಿ ನೆಲ ಹಸನುಮಾಡಲು “ ಮೂಲದ ಹೊಲೆಯ”ರ ಸಹಿತ ದಲಿತ ಕುಟುಂಬಗಳನ್ನು ಬಳಸಿ ಅದು ಹಸನಾದ ಮೇಲೆ ಗದ್ದೆ, ಅಡಿಕೆ ಬೆಳೆಯಲು ಶುರುಮಾಡಿದ್ದು. ಬಹುತೇಕ ಸುಳ್ಯದ ಕಾಡಿನ ದರ್ಕಾಸ್ತು ಬ್ರಾಹ್ಮಣರು, ಗೌಡರಿಗೇ ಸಿಕ್ಕಿದ್ದು. ಅಡಿಕೆ ಮಾಡುವುದಾದರೆ ಅದಕ್ಕೆ ಒಂದೆಕರೆಗೆ ಎರಡೆಕರೆ ಬಾಣೆ (ಉತ್ತರ ಕನ್ನಡ, ಸಾಗರದಲ್ಲಿ ಸೊಪ್ಪಿನ ಗುಡ್ಡೆ) ಜಾಗೆ ಸೊಪ್ಪು ಸೌದೆಗೆ ಪಡೆದಿದ್ದರು. ಇಂದಿಗೂ ಈ ಬಾಣೆ ಜಾಗೆ ಬಹುತೇಕ ಈ ಅಡಿಕೆ ತೋಟದ ಮಗ್ಗುಲಿಗೇ ಇದೆ!
ಈ ಚಾರಿತ್ರಿಕ ಸಂಗತಿ ಪಶ್ಚಿಮ ಘಟ್ಟದ ಈಗಿನ “ ಪಶ್ಚಿಮ ಘಟ್ಟ ಉಳಿಸಿ” ನಿಲುವಿನ ಭಿನ್ನ ನೆಲೆಗಳ ಬಗ್ಗೆ ಹೇಳುತ್ತದೆ.
ಬಹುತೇಕ ಪಶ್ಚಿಮ ಘಟ್ಟದ ಕೃಷಿಗೊಳಪಟ್ಟಿರುವ ಜಾಗಗಳೆಲ್ಲಾ ಕಾಡನ್ನು ಒತ್ತುವರಿ ಮಾಡಿರುವ ಜಾಗಗಳೇ. ತಲೆಮಾರುಗಳ ಹಿಂದೆ ಈ ಜಮೀನು ಪಡೆದು ಆ ಕಾಲದಲ್ಲಿ ಏಗಿದ ಹೋರಾಟದ ಕತೆಗಳು ನಮ್ಮಲ್ಲಿವೆ ( ಬೆಟ್ಟದ ಜೀವ) ಆದರೆ ಈ ಜಮೀನೆಲ್ಲಾ ಪಡೆದಿದ್ದು ಆ ಕಾಲದಲ್ಲೂ, (ಈ ಕಾಲದಲ್ಲೂ ಮುಂದುವರಿದಿರುವ) ಸೋಷಿಯಲ್ ಕ್ಯಾಪಿಟಲ್ ಹೊಂದಿರುವ ಜಾತಿಗಳೇ. ಈ ಕೃಷಿ ಜಮೀನೆಲ್ಲಾ ಈಗ ಟೇಕನ್ ಫಾರ್ ಗ್ರಾಂಟೆಡ್ ಎಂಬ ಕೃಷಿ ಪರಂಪರೆಯ ಭಾಗ. ಆಗಲೂ ಈ ಪ್ರಿವಿಲೇಜ್ಡ್ ಜಾತಿಗಳು ಬಿಟ್ಟರೆ ಕೆಳ ಜಾತಿಗಳಿಗೆ ಈ ಭೂಮಿ ಹೊಂದುವ ಅವಕಾಶವೇ ಇರಲಿಲ್ಲ ( ಮತ್ತೆ ವೈರುಧ್ಯಪೂರ್ಣವಾಗಿ ಕಾರಂತರ “ ಚೋಮನ ದುಡಿ”)
ನಮ್ಮ ಪುರಾತನ ಜಮೀನು ಈಗ ಅಜ್ಜಂದಿರಿಗೆ ಪಾಲಾಗಿ ಮತ್ತೆ ನನ್ನ ಕಸಿನ್ಸ್ ಪಾಲಿಗೆ ಬಂದಲ್ಲೂ ಚೋಮ ಗುಂಡಿ, ಚನಿಯ ತಟ್ಟು ಎಂಬ ಹೆಸರಿದೆ. ಆ ಬಗ್ಗೆ ನನ್ನ ದೊಡ್ಡಪ್ಪನಲ್ಲಿ ಕೇಳಿದಾಗ ಆ ಕಾಲದಲ್ಲಿ ಅಂದರೆ ಒಂದೂವರೆ ಶತಮಾನದ ಹಿಂದೆ ಕಾಡು ಸವರಿ ಕೆಲವು ವರ್ಷ ಕುಮರಿ ಬೆಳೆದು ನೆಲ ಹಸನ ಮಾಡಲು ಈ ಜಮೀನನ್ನು ದಲಿತರಿಗೆ ನೀಡುತ್ತಿದ್ದರಂತೆ. ಅದು ಹಸನಾದಾಗ ಅದೇ ಕುಟುಂಬವನ್ನು ಆ ಜಮೀನಿನ ಅಂಚಲ್ಲಿ ಒಂದು ಗುಡಿಸಲು ಕಟ್ಟಿಸಿ ಅಲ್ಲಿರಿಸುತ್ತಿದ್ದರು! ಬಹುತೇಕ ಮಲೆನಾಡಿನ ಕೃಷಿಯ ಇತಿಹಾಸ ಇದು.
ಉತ್ತರ ಕನ್ನಡದಲ್ಲಿ ಅಡಿಕೆ ತೋಟಕ್ಕೆ ಸೊಪ್ಪಿನ ಬೆಟ್ಟ ಇತ್ತು. ಆದರೆ ಕೆಳಗೆ ನೀರು ನಿಲ್ಲುವ ಜಾಗೆ ಗದ್ದೆ. ಅದಕ್ಕೆ ಸೊಪ್ಪಿನ ಗುಡ್ಡೆ ಇಲ್ಲ. ಕಾಲಾನುಕ್ರಮದಲ್ಲಿ ಈ ಭತ್ತದ ಗದ್ದೆಗಳನ್ನು ಹಾಲಕ್ಕಿ ಗೌಡರಿಂದ ಹಿಡಿದು ದೀವರೇ ಬೇಸಾಯ ಮಾಡುತ್ತಿದ್ದುದು. ದಶಕದ ಹಿಂದೆ ನಾನು ಭೆಟ್ಟಿ ಮಾಡಿದ ಈ ಭತ್ತದ ಗದ್ದೆ ಬೇಸಾಯ ಮಾಡುವವರು ಸೊಪ್ಪಿಗೆ ತತ್ವಾರ ಎಂದು ಗೋಳು ತೋಡಿಕೊಂಡಿದ್ದರು. ಮೇಲಿನ ಅಡಿಕೆ ತೋಟದ ದಣಿಗಳ ಮನೆಯಾಚೆ ಇರುವ ಸೊಪ್ಪಿನ ಗುಡ್ಡ ಇವರಿಗೆ ಲಭ್ಯ ಇರಲಿಲ್ಲ!
ನಮ್ಮಲ್ಲೂ ಈ ಬಾಣೆ ಜಾಗದಲ್ಲೂ ರಬ್ಬರ್ ಹಾಕಿ ಬಾಣೆ ಜಾಗ ಕೃಷಿ ಮಾಡಿದ ಉದಾಹರಣೆ ಇದೆ.

ಆಗ ಗೇಣಿಗೆ ಭತ್ತ ಬೆಳೆಯುತ್ತಿದ್ದ ಹಾಲಕ್ಕಿ ಗೌಡರು, ದೀವರು, ಬಿಲ್ಲವರಿಗೆ ಸ್ವಂತದ ಒಂದೆರಡು ಎಕರೆ ಬೇಕು ಅಂತ ಕಂಡದ್ದು, ಅವರುಈ ಅರಣ್ಯ/ ಸರಕಾರಿ ಜಾಗದಲ್ಲಿ ಕೃಷಿ ಮಾಡುತ್ತಿರುವುದು ಅಪರಾಧ ಎಂದು ಕಂಡರೆ ಈ cut off yearನ್ನು ಇನ್ನೂ ಶತಮಾನ ಹಿಂದೆ ಒಯ್ದರೆ ಹೇಗಿರುತ್ತದೆ.?
ಕಾಫಿ ಕೃಷಿಯಲ್ಲಿ ಇದು ಹೀಗೇ ಇರಬಹುದು. ಒತ್ತುವರಿಯ ಪ್ರಮಾಣ ದೊಡ್ಡ ಎಸ್ಟೇಟ್ ಮಾಲೀಕರದ್ದೇ ಹೆಚ್ಚು ಎನ್ನುತ್ತಾರೆ.
ಶತಮಾನದ ಹಿಂದೆ ನಾಲ್ವಡಿಯವರು, ಅಲೆಮಾರಿ ಕುಮರಿ ಕೃಷಿ ಮಾಡುತ್ತಿದ್ದವರಿಗೆ ಒಂದೇ ಕಡೆ ಜಮೀನು ಕೊಟ್ಟು, ಬೀಜ, ಗೊಬ್ಬರ ಕೊಟ್ಟು ಕೃಷಿಗೆ ಹಚ್ಚಲು ನೋಡಿದ್ದರು.. ಆದರೆ ಅವೆಲ್ಲಾ ಕಾಡಂಚಿನ ಜಮೀನು. ಕಾಡು ಪ್ರಾಣಿಗಳ ಹಾವಳಿಯಿಂದ ಅವರು ಉದ್ಧಾರವೇ ಆಗಲಿಲ್ಲ.
ಈಗ ದಾಖಲೆಗಳಲ್ಲಿ ಕಾಣುತ್ತಿರುವ ಕಾಡು ಅಕ್ಷರಶಃ ಕುರುಚಲು ಕಾಡಾಗಿದೆ. ಅಲ್ಲಿ ಒಂದೆರಡು ಎಕರೆ ಬಗರ್ ಹುಕುಂ ಕೃಷಿ ಮಾಡುತ್ತಿರುವವರೂ ಈ ಕಾಡು ಒತ್ತುವರಿ ಮಾಡಿ ಕೃಷಿ ಪರಂಪರೆ ಬೆಳೆಸಿದವರ ಸಾಲಿನ ಗ್ರೂಪ್ ಫೋಟೊದ ಹಿಂದಿನ ಸಾಲಿನಲ್ಲಿ ಕಾಣಿಸಿಕೊಳ್ಳುವ ಉಮೇದು ತಪ್ಪೇನು? ಈಗ ತೋರುತ್ತಿರುವ ಕಾಡುಳಿಸುವ ಕಾಳಜಿಯೂ ಈ ಸಾಮಾಜಿಕ ಬಂಡವಾಳದ ಕಂದರದ ಮುಂದುವರಿಕೆ ಎಂದು ಕಂಡರೆ ಅದಕ್ಕೆ ಪ್ರತಿಕ್ರಿಯೆ ಏನು?
ಈ ಒತ್ತುವರಿ ಮಾಡಿ ಕೃಷಿ ಮಾಡುತ್ತಿರುವ ರೈತರಿಗೆ ಈಗಾಗಲೇ ಸೆಟ್ ಆಗಿರುವ ತೋಟಗಳಲ್ಲೇ ಒಂದೆಕರೆ ಹಂಚಿದರೆ ಹೇಗಿರುತ್ತದೆ? ಈ ತ್ಯಾಗ ಮಾಡಲು ಅಡಿಕೆ, ಕಾಫಿ ಮಾಲೀಕರು ತಯಾರಿದ್ದಾರೆಯೇ?
ಕಸ್ತೂರಿ ರಂಗನ್ ವರದಿ ಹೊಗೆ ಹಾಕಿರುವುದು ಈ ಜೇನು ಹುಟ್ಟಿಗೆ.
ಶತಮಾನಗಳಿಂದ ಕಾಡೇ ಮನೆಯಾಗಿದ್ದ ಆದಿವಾಸಿಗಳಿಂದ ಆ ಬಳಿಕ ಅದರ ಮಾಲೀಕತ್ವ ತನ್ನದೆಂದು ಸಾರಿದ ಸರಕಾರ, ಈ ಆದಿವಾಸಿಗಳನ್ನೇ ಕಾಡು ಆಕ್ರಮಿಸಿಕೊಂಡವರು ಎಂದು ಹೊರ ಹಾಕುತ್ತಿದೆ. ಇನ್ನೊಂದೆಡೆ, ಶತಮಾನದ ಹಿಂದೆ ಸಾಮಾಜಿಕ ಸ್ಥಾನಮಾನದ ಕಾರಣ ಕಾಡನ್ನೇ ಅಡಿಕೆ ತೋಟ ಮಾಡಿದವರಿದ್ದಾರೆ.
ಸಾಮಾಜಿಕ ನ್ಯಾಯದ ಲಭ್ಯತೆ ಪ್ರಾಕೃತಿಕ ಸಂಪನ್ಮೂಲಗಳ ಹಂಚಿಕೆ ವಿಷಯಕ್ಕೆ ಬಂದಾಗ ಎಷ್ಟು ಅಡೆ ತಡೆ? ಅದರ ಚಾರಿತ್ರಿಕ ಟೈಮ್ ಲೈನ್ ಎಷ್ಟು ಪೆಡಸು?
ಹೀಗೆ ನೋಡಿದಾಗ ಪಶ್ಚಿಮ ಘಟ್ಟ ಅಷ್ಟೇ ಅಲ್ಲ ಕೃಷಿ ಭೂಮಿಯನ್ನೂ ಉಳಿಸುವುದು ದೊಡ್ಡ ಸಾಮಾಜಿಕ ನ್ಯಾಯದ ಸವಾಲಿನ ಪ್ರಶ್ನೆಯಾಗಿ ಕಂಡು ಬರುವುದಿಲ್ಲವೇ?
ಇದರಲ್ಲಿ ನ್ಯಾಯ ದೊರಕಬಹುದೆಂಬ ಭ್ರಮೆ ಒಬಿಸಿ/ ದಲಿತ ಕೂಲಿಕಾರರಿಗೆ ಇಲ್ಲ. ಆದರೆ ಈ ಕನಸಿಗೇನಾದರೂ ಕಿಡಿ ಹಚ್ಚಿದರೆ ?
ಕೆ.ಪಿ. ಸುರೇಶ್
ಇವರು ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಯ ಬಗ್ಗೆ ನಿರಂತರವಾಗಿ ತಮ್ಮ ಬರಹಗಳ ಮೂಲಕ ಧ್ವನಿ ಎತ್ತುತ್ತಿದ್ದಾರೆ. ಸಾಹಿತ್ಯ ಮತ್ತು ಸಾಮಾಜಿಕ ವಿಚಾರಗಳ ಕುರಿತು ಆಳವಾದ ಚಿಂತನೆ ನಡೆಸಿ ಗಂಭೀರ ವಿಮರ್ಶೆಗಳನ್ನು ಮಾಡುತ್ತಾರೆ.
ಇದನ್ನೂ ಓದಿ- ಕುಸಿಯುತ್ತಿರುವ ಕಟ್ಟಡಗಳು: ನಗರಾಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿ


