ತುಮಕೂರು: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಜಾತಿ ತಾರತಮ್ಯದಿಂದಾಗಿ ಯುವಕನನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ತುಮಕೂರು ಜಿಲ್ಲೆಯ ಕಸಾಪುರದಲ್ಲಿ ಘಟನೆ ನಡೆದಿದ್ದು, ಮೃತ ಯುವಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತ ಯುವಕನನ್ನು ಸಿಂಹಾದ್ರಿ (17) ಎಂದು ಗುರುತಿಸಲಾಗಿದೆ. ಮಾರುತೇಶ ಎಂಬಾತನ ವಿರುದ್ಧ ಹತ್ಯೆ ಆರೋಪ ಮಾಡಲಾಗಿದ್ದು, ಮಗನ ಸಾವಿಗೆ ಜಾತಿ ಕಾರಣ ಎಂದು ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ.
ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಉತ್ಸವದಲ್ಲಿ ಸಿಂಹಾದ್ರಿ ಕುಣಿಯಲು ಹೋಗಿದ್ದಕ್ಕೆ ವಿರೋಧ ವ್ಯಕ್ತಪಡಿಸಲಾಗಿತ್ತು ಎನ್ನಲಾಗಿದೆ. ಈ ವಿಚಾರವನ್ನು ಸಿಂಹಾದ್ರಿ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಆತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಎದೆಗೆ ಕಲ್ಲಿನಿಂದ ಗುದ್ದಿ ಸಿಂಹಾದ್ರಿಯನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪೊಲೀಸ್ ತನಿಖೆ ಪೂರ್ಣಗೊಂಡ ಬಳಿಕ ಘಟನೆಯ ನಿಖರ ಕಾರಣ ಹಾಗೂ ಆರೋಪಗಳ ಸತ್ಯಾಸತ್ಯತೆ ಸ್ಪಷ್ಟವಾಗಬೇಕಿದೆ.

