ತುಳು ನುಡಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿ: ಕರವೇ ಆಗ್ರಹ

ಬೆಂಗಳೂರು ಸೆ. 17: ತುಳು ನುಡಿಯನ್ನು ತುಳು ಮಾತನಾಡುವ ಪ್ರದೇಶಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡುವ ಕುರಿತು ಕರ್ನಾಟಕ ಸರ್ಕಾರ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕ ತೀರ್ಮಾನ ಕೈಗೊಂಡು ಘೋಷಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಒತ್ತಾಯಿಸಿದ್ದಾರೆ.

ತುಳು ನುಡಿಯ ಉಳಿವು, ಬೆಳವಣಿಗೆ ಮತ್ತು ಗೌರವಕ್ಕಾಗಿ ತುಳುವರು ಹಲವು ವರ್ಷಗಳಿಂದ ಮಂಡಿಸುತ್ತಿರುವ ಹಕ್ಕೊತ್ತಾಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಕನ್ನಡದ ಸೋದರ ನುಡಿಯಾದ ತುಳು ಮತ್ತು ಕನ್ನಡ ನುಡಿಗಳು ಸಾವಿರಾರು ವರ್ಷಗಳಿಂದ ಕರಾವಳಿ ಕರ್ನಾಟಕದ ನೆಲದಲ್ಲಿ ಜೊತೆಯಾಗಿ ಬೆಳೆದಿವೆ. ಎರಡೂ ನುಡಿಗಳ ನಡುವೆ ಗಾಢವಾದ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಸಂಬಂಧವಿದೆ. ಕನ್ನಡ ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಗೆ ತುಳುವರ ಕೊಡುಗೆ ಅಪಾರವಾಗಿದೆ ಎಂದು ಅವರು ಹೇಳಿದ್ದಾರೆ.

ಕರಾವಳಿ ಕರ್ನಾಟಕದ ಜನಜೀವನದಲ್ಲಿ ತುಳು ನುಡಿ ಆಳವಾಗಿ ಬೇರೂರಿದೆ. ಅದು ಕೇವಲ ಸಂವಹನದ ನುಡಿಯಲ್ಲ. ಜನರ ಬದುಕು, ಸಂಸ್ಕೃತಿ, ಜನಪದ, ಕಲೆ, ಸಾಹಿತ್ಯ, ಆಚರಣೆ, ನಂಬಿಕೆ ಮತ್ತು ಇತಿಹಾಸದ ಜೀವಂತ ಅಭಿವ್ಯಕ್ತಿಯಾಗಿದೆ. ಯಕ್ಷಗಾನ, ದೈವಾರಾಧನೆ ಸೇರಿದಂತೆ ಕರಾವಳಿಯ ಅನೇಕ ಕಲಾ ಪರಂಪರೆಗಳೊಂದಿಗೆ ತುಳು ನುಡಿ ನಿಕಟ ಸಂಬಂಧ ಹೊಂದಿದೆ. ಆದ್ದರಿಂದ ತುಳು ನುಡಿಯನ್ನು ಉಳಿಸಿ ಬೆಳೆಸುವುದು ಅದರೊಂದಿಗೆ ಬೆಸೆದುಕೊಂಡಿರುವ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದೂ ಆಗಿದೆ ಎಂದು ನಾರಾಯಣಗೌಡ ಹೇಳಿದ್ದಾರೆ.

ತುಳು ನುಡಿಯನ್ನು ತುಳು ಮಾತನಾಡುವ ಪ್ರದೇಶಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡುವುದರಿಂದ ಜನರು ತಮ್ಮ ತಾಯಿನುಡಿಯಲ್ಲಿ ಸರ್ಕಾರಿ ಸೇವೆಗಳನ್ನು ಪಡೆಯಲು ಸಹಕಾರಿಯಾಗಬಹುದು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

8ನೇ ಅನುಸೂಚಿಗೆ ತುಳು ಸೇರ್ಪಡೆಗೆ ಆಗ್ರಹ

ತುಳು ನುಡಿಗೆ ಸಂವಿಧಾನದ 8ನೇ ಅನುಸೂಚಿಯಲ್ಲಿ ಸ್ಥಾನ ನೀಡಬೇಕೆಂದು ಕೇಂದ್ರ ಸರ್ಕಾರವನ್ನೂ ನಾರಾಯಣಗೌಡ ಒತ್ತಾಯಿಸಿದ್ದಾರೆ.

ಸಂವಿಧಾನದ 8ನೇ ಅನುಸೂಚಿಯಲ್ಲಿ ಪ್ರಸ್ತುತ 22 ನುಡಿಗಳಿವೆ. ತುಳು ಮತ್ತು ಕೊಡವ ಸೇರಿದಂತೆ ಇನ್ನೂ ಹಲವು ನುಡಿಗಳನ್ನು 8ನೇ ಅನುಸೂಚಿಗೆ ಸೇರಿಸಬೇಕೆಂಬ ಬೇಡಿಕೆಗಳು ಹಲವು ವರ್ಷಗಳಿಂದ ಕೇಂದ್ರ ಸರ್ಕಾರದ ಮುಂದೆ ಇವೆ. 2003ರಲ್ಲಿ ಸೀತಾಕಾಂತ ಮೊಹಾಪಾತ್ರ ಅವರ ಅಧ್ಯಕ್ಷತೆಯಲ್ಲಿ ಹೆಚ್ಚಿನ ಭಾಷೆಗಳನ್ನು 8ನೇ ಅನುಸೂಚಿಗೆ ಸೇರಿಸುವ ಕುರಿತು ಮಾನದಂಡಗಳನ್ನು ರೂಪಿಸಲು ಸಮಿತಿ ರಚಿಸಲಾಗಿತ್ತು. ಸಮಿತಿ 2004ರಲ್ಲಿ ತನ್ನ ವರದಿ ಸಲ್ಲಿಸಿತ್ತು. ಕರ್ನಾಟಕ ಸರ್ಕಾರವೂ ತುಳು ಮತ್ತು ಕೊಡವ ನುಡಿಗಳನ್ನು 8ನೇ ಅನುಸೂಚಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಆದರೂ ಈ ಬೇಡಿಕೆ ಇನ್ನೂ ಈಡೇರಿಲ್ಲ ಎಂದು ಅವರು ತಿಳಿಸಿದ್ದಾರೆ.

ಬಹುತ್ವಕ್ಕೆ ಗೌರವ ಇರಲಿ

ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ‘ವಿವಿಧತೆಯಲ್ಲಿ ಏಕತೆ’ಯನ್ನು ಪ್ರತಿಪಾದಿಸುತ್ತ ಬಂದಿದೆ. ಬಹುತ್ವವನ್ನು ಗೌರವಿಸದೆ ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಹಿಂದಿ ಹೇರಿಕೆಯನ್ನು ಯಾವ ಕಾರಣಕ್ಕಾಗಿ ವಿರೋಧಿಸುತ್ತೇವೆಯೋ, ಅದೇ ಕಾರಣಕ್ಕಾಗಿ ತುಳು, ಕೊಡವದಂಥ ಸೋದರ ನುಡಿಗಳಿಗೂ ಸೂಕ್ತ ಅಧಿಕೃತ ಮಾನ್ಯತೆ ದೊರೆಯಬೇಕು ಎಂಬುದು ಕರವೇಯ ನಿಲುವು ಎಂದು ಟಿ.ಎ. ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ.

More articles

Latest article

Most read