ಬೆಂಗಳೂರು, ಸೆ.10 : ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2026ನೇ ಸಾಲಿನ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಹಾಗೂ ಸುರಕ್ಷಿತವಾಗಿ ಆಚರಿಸುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಹಾಗೂ ಅಧಿಕೃತ ಆದೇಶದನ್ವಯ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗಿರುತ್ತದೆ.
ಏಕಗವಾಕ್ಷಿ ವ್ಯವಸ್ಥೆಗೆ ಕ್ರಮ
ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ವ್ಯಾಪ್ತಿಯ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಬೆಂಗಳೂರು ಉತ್ತರ ನಗರ ಪಾಲಿಕೆ, ಪೊಲೀಸ್ ಇಲಾಖೆ, ಬೆಸ್ಕಾಂ, ಅಗ್ನಿಶಾಮಕ ಇಲಾಖೆ ಹಾಗೂ ಸಂಬಂಧಪಟ್ಟ ಇತರೆ ಇಲಾಖೆಗಳ ಅಧಿಕಾರಿಗಳ ಏಕ ಗವಾಕ್ಷಿ ತಂಡವು ಸಮನ್ವಯದೊಂದಿಗೆ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಅನುಮತಿ ನೀಡಲು ಕ್ರಮವಹಿಸಲಾಗುವುದು.
ಮಾಲಿನ್ಯಕಾರಕ ವಸ್ತುಗಳ ಬಳಕೆ ನಿಷೇಧ – ದಂಡ ವಿಧಿಸಲು ಕ್ರಮ
ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್, ಥರ್ಮಾಕೋಲ್ ಹಾಗೂ ರಾಸಾಯನಿಕ ಬಣ್ಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಷೇಧಿತ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸುವ ಅಥವಾ ಮಾರಾಟ ಮಾಡುವ ಸ್ಥಳಗಳನ್ನು ಏಕ ಗವಾಕ್ಷಿ ನೋಡಲ್ ಅಧಿಕಾರಿಗಳ ತಂಡವು ಸಂಬಂಧಪಟ್ಟ ಪಾಲಿಕೆ, ಪೊಲೀಸ್, ಅಗ್ನಿಶಾಮಕ ಹಾಗೂ ಬೆಸ್ಕಾಂ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಅಗತ್ಯ ನೋಟಿಸ್ ನೀಡುವುದು, ನಿಯಮಾನುಸಾರ ದಂಡ ವಿಧಿಸುವುದು, ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳುವುದು ಹಾಗೂ ಅನ್ವಯಿಸುವ ಕಾನೂನುಗಳನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಗಳ ಮೇಲ್ವಿಚಾರಣೆಯನ್ನು ವಲಯ ಮಟ್ಟದಲ್ಲಿ ಆರೋಗ್ಯಾಧಿಕಾರಿಗಳು ನಿರ್ವಹಿಸಲಿದ್ದಾರೆ.
ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಕೆಗೆ ಜಾಗೃತಿ
ವಶಪಡಿಸಿಕೊಳ್ಳಲಾದ ನಿಷೇಧಿತ ವಸ್ತುಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಗಣೇಶ ಮೂರ್ತಿ ತಯಾರಕರು ಮಣ್ಣು ಸೇರಿದಂತೆ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಮೂರ್ತಿಗಳನ್ನು ತಯಾರಿಸುವಂತೆ ಸಾರ್ವಜನಿಕರಲ್ಲಿ ಹಾಗೂ ತಯಾರಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಗುವುದು.
ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಸಾಧ್ಯವಾದಷ್ಟು ಸಾರ್ವಜನಿಕರು ತಮ್ಮ ಮನೆಗಳಲ್ಲಿಯೇ ಬಕೆಟ್‌ಗಳಲ್ಲಿ ಕೈಗೊಂಡು, ವಿಸರ್ಜನೆಯ ನಂತರ ದೊರೆಯುವ ಮಣ್ಣನ್ನು ಕೈತೋಟಗಳು ಹಾಗೂ ಹೂವಿನ ಕುಂಡಗಳಿಗೆ ಬಳಸುವ ಕುರಿತು ಅರಿವು ಮೂಡಿಸಲು ಕ್ರಮವಹಿಸಲಾಗುವುದು.
ವಿಸರ್ಜನಾ ಸ್ಥಳಗಳಲ್ಲಿ ಅಗತ್ಯ ವ್ಯವಸ್ಥೆಯೊಂದಿಗೆ NDRF ತಂಡದ ಸಹಕಾರ
ದೊಡ್ಡ ಗಾತ್ರದ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಪಾಲಿಕೆಯ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಹಾಗೂ ವಿಧಾನಸಭಾ ಕ್ಷೇತ್ರವಾರು ಸೂಕ್ತ ವಿಸರ್ಜನಾ ಸ್ಥಳಗಳನ್ನು ಗುರುತಿಸಿ, ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಲಾಗುವುದು. ವಿಧಾನಸಭಾ ಕ್ಷೇತ್ರವಾರು ಸ್ಥಾಪಿಸಲಾಗುವ ತಾತ್ಕಾಲಿಕ ವಿಸರ್ಜನಾ ಸ್ಥಳಗಳು ಹಾಗೂ ನಿಗದಿಪಡಿಸಲಾದ ಕಲ್ಯಾಣಿಗಳಲ್ಲಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಇದರ ಸಂಪೂರ್ಣ ಮೇಲ್ವಿಚಾರಣೆಯನ್ನು ವಲಯ ಮುಖ್ಯ ಅಭಿಯಂತರರವರಿಗೆ ವಹಿಸಲಾಗಿದೆ.
ಕೆರೆಗಳು ಹಾಗೂ ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯಿಂದ ಉಂಟಾಗಬಹುದಾದ ಮಾಲಿನ್ಯವನ್ನು ತಡೆಗಟ್ಟಲು ಸೂಕ್ತ ಪರ್ಯಾಯ ವಿಸರ್ಜನಾ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ವಿಸರ್ಜನಾ ಸ್ಥಳಗಳಲ್ಲಿ ಅಗತ್ಯವಿರುವಂತೆ ತಾತ್ಕಾಲಿಕ ಟ್ಯಾಂಕ್‌ಗಳು ಹಾಗೂ ಡ್ರಮ್‌ಗಳ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ಬ್ಯಾರಿಕೇಡಿಂಗ್, ಕಿಯಾಸ್ಕ್‌ಗಳು, ಆಂಬ್ಯುಲೆನ್ಸ್, ವೈದ್ಯರು ಹಾಗೂ ಶುಶ್ರೂಷಕಿಯರ ನಿಯೋಜನೆ ಮತ್ತು ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ನುರಿತ ಈಜುಗಾರರನ್ನು ನಿಯೋಜಿಸುವುದರ ಜೊತೆಗೆ, ಅಗತ್ಯವಿರುವ ಸ್ಥಳಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡದ ಸಹಕಾರ ಪಡೆಯಲು ಕ್ರಮವಹಿಸಲಾಗುವುದು.
ವಿಸರ್ಜನೆ ನಂತರ ಸಂಗ್ರಹವಾಗುವ ತ್ಯಾಜ್ಯವನ್ನು ಸುಸಜ್ಜಿತ ವಿಲೇವಾರಿಗೆ ಕ್ರಮ
ಗಣೇಶ ಮೂರ್ತಿಗಳ ವಿಸರ್ಜನೆಯ ಸಂದರ್ಭದಲ್ಲಿ ಸಂಗ್ರಹವಾಗುವ ಮಣ್ಣು, ಪೂಜಾ ಹೂವು, ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಂಗಡಿಸಿ, ಹಸಿ ತ್ಯಾಜ್ಯವನ್ನು ಹಸಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಹಾಗೂ ಒಣ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗೆ ರವಾನಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಸರ್ಜನಾ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಸ್ವಚ್ಛತೆ ಕಾಪಾಡಲು ಅಗತ್ಯ ಸಿಬ್ಬಂದಿ ಮತ್ತು ತಂಡಗಳನ್ನು ನಿಯೋಜಿಸಲಾಗುವುದು ಹಾಗೂ ಈ ಕಾರ್ಯದ ಮೇಲ್ವಿಚಾರಣೆಯನ್ನು ನಗರ ಪಾಲಿಕೆಯ ಉಪ ಪ್ರಧಾನ ವ್ಯವಸ್ಥಾಪಕರು (DGM) ರವರಿಗೆ ವಹಿಸಲಾಗಿದೆ.
ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ
ಗಣೇಶ ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ವಲಯವಾರು ತಂಡಗಳನ್ನು ರಚಿಸಿ ಪರಿಶೀಲನೆ ನಡೆಸಲಾಗುವುದು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ನಿಯಮಾನುಸಾರ ದಂಡ ವಿಧಿಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಈ ಎಲ್ಲಾ ಕಾರ್ಯಗಳ ಮೇಲ್ವಿಚಾರಣೆಯನ್ನು ವಲಯದ ಜಂಟಿ ಆಯುಕ್ತರು ವಹಿಸಲಿದ್ದಾರೆ.
ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸಿ, ನಿಷೇಧಿತ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸಿ, ಸರ್ಕಾರದ ಮಾರ್ಗಸೂಚಿಗಳು ಹಾಗೂ ಕಾನೂನು ನಿಯಮಗಳನ್ನು ಪಾಲಿಸುವ ಮೂಲಕ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ, ಸುರಕ್ಷಿತವಾಗಿ ಹಾಗೂ ಜವಾಬ್ದಾರಿಯುತವಾಗಿ ಆಚರಿಸುವಂತೆ ಬೆಂಗಳೂರು ಉತ್ತರ ನಗರ ಪಾಲಿಕೆ ಮನವಿ ಮಾಡಿದೆ.

