ಬೆಂಗಳೂರು : ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಜಲ ಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, CWAC ನೀಡಿರುವ ಆದೇಶವನ್ನು CWMA ಕೂಡ ಎತ್ತಿಹಿಡಿದಿದೆ. ಆದರೆ ರಾಜ್ಯದ ಜಲಾಶಯಗಳ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ತಮಿಳುನಾಡಿಗೆ ನೀರು ಹರಿಸಲು ರಾಜ್ಯದ ಬಳಿ ಸಾಕಷ್ಟು ನೀರಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಕಾನೂನು ತಜ್ಞರ ತಂಡದೊಂದಿಗೆ ಸಮಾಲೋಚನೆ ನಡೆಸಿ, ನಾಳೆಯೇ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರ ಜತೆಗೆ CWAC ಮುಂದೆಯೂ Review Petition ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಸದ್ಯ ರಾಜ್ಯದಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ. ಇದರ ಜತೆಗೆ ಬತ್ತಿಹೋಗಿರುವ ಕೆರೆ-ಕಟ್ಟೆಗಳನ್ನು ತುಂಬಿಸುವ ಅಗತ್ಯವೂ ಇದೆ. ತಮಿಳುನಾಡಿಗೆ ನೀರು ಹರಿಸುವ CWAC ಆದೇಶವನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳುವುದಿಲ್ಲ ಎಂದು ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ಹಿಂದೆ 100 ಟಿಎಂಸಿ ನೀರು ಬಿಡಲಾಗಿತ್ತು. ಆದರೆ ಈ ಬಾರಿ ಕೇವಲ 30 ಟಿಎಂಸಿ ನೀರು ಮಾತ್ರ ನೀಡಲಾಗಿದೆ. ಆದರೂ ತಮಿಳುನಾಡು ಸರ್ಕಾರ ನಿರಂತರವಾಗಿ ಒತ್ತಡ ಹೇರುತ್ತಿದೆ. ರಾಜ್ಯದ ಜಲ ಸಂಪನ್ಮೂಲಗಳ ಪ್ರಸ್ತುತ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾವೇರಿ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡಲು ಕಾನೂನು ಹೋರಾಟ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಸಲಹೆಯಂತೆ ವಿಶೇಷ ವಕೀಲರನ್ನು ನೇಮಿಸುವ ವಿಚಾರವನ್ನು ಪರಿಶೀಲಿಸಲಾಗುವುದು. ಈ ಸಂಬಂಧ ಬಸವರಾಜ ಬೊಮ್ಮಾಯಿ ಅವರೊಂದಿಗೂ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.

