ವಿದೇಶದಲ್ಲಿ ಓದಿಕೊಂಡುಬಂದ ಕೃಷ್ಣ ಬೈರೇಗೌಡರು ಒಂದೇ ಒಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಿ ಸಾಕು. ಯಾಕೆ ತಲೆಮಾರುಗಳಿಂದ ಒಂದೇ ಸಾಮಾಜಿಕ ಸಮುದಾಯ ಈ ಕೆಲಸಕ್ಕೆ ಸೀಮಿತವಾಗಿದೆ? ಸಮಾಜದ ಕೊಳೆಯನ್ನು ತೊಳೆಯುವ, ಕಸ ಬಳಿಯುವ ಶ್ರೇಷ್ಠ ಕಾರ್ಯವನ್ನು ಮಾಡಲು ಸಮಾಜದ ಸೊ ಕಾಲ್ಡ್ ಉನ್ನತ ವರ್ಗದ ಜನರು ಯಾಕೆ ಬರುವುದಿಲ್ಲ?. ಈ ಪ್ರಶ್ನೆಗೆ ಉತ್ತರ ಸಿಕ್ಕರೆ ಸಚಿವರಿಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಬಹುದು. ಆನಂತರವಾದರೂ ಅವರು ಉದ್ಯೋಗ ಭದ್ರತೆ, ಸಮರ್ಪಕ ವೇತನ, ಸುರಕ್ಷತಾ ಸಾಧನಗಳು, ಆರೋಗ್ಯ ತಪಾಸಣೆ, ಸಾಮಾಜಿಕ ಭದ್ರತೆ, ವಸತಿ, ಮಕ್ಕಳ ಶಿಕ್ಷಣ ಮತ್ತು ಗುತ್ತಿಗೆದಾರರ ಮೇಲಿನ ಕಟ್ಟುನಿಟ್ಟಿನ ಮೇಲ್ವಿಚಾರಣೆ ಇದೆಲ್ಲದರ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬಹುದು – ದಿನೇಶ್ ಕುಮಾರ್ ಎಸ್ ಸಿ.
ಪೌರಕಾರ್ಮಿಕರ ಹಾಜರಾತಿ ಕುರಿತು ಮಾತನಾಡುವ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು, ನಗರ ಸ್ವಚ್ಛತೆಯಂತಹ ಅತ್ಯಗತ್ಯ ಸೇವೆಯಲ್ಲಿ ನಿರ್ಲಕ್ಷ್ಯವನ್ನು ಸಹಿಸಲಾಗದು ಎಂಬ ಅರ್ಥದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೌರಕಾರ್ಮಿಕರು ಕರ್ತವ್ಯಕ್ಕೆ ನಿಯಮಿತವಾಗಿ ಹಾಜರಾಗಬೇಕು, ಸಾರ್ವಜನಿಕ ಸೇವೆಯಲ್ಲಿ ದಕ್ಷತೆ ಮತ್ತು ಹೊಣೆಗಾರಿಕೆ ಇರಬೇಕು ಎಂಬುದು ಅವರ ಆಶಯದಂತೆ ತೋರುತ್ತದೆ. ಮೇಲ್ನೋಟಕ್ಕೆ ಇದು ತಾತ್ವಿಕವಾಗಿ ಸರಿ ಎಂಬಂತೆಯೇ ಕಾಣುತ್ತದೆ.
ಸರ್ಕಾರಿ ಸೇವೆಯಲ್ಲಿ ಇರುವವರು ಕರ್ತವ್ಯ ನಿರ್ವಹಿಸಬೇಕು. ಜನರಿಗೆ ಅಗತ್ಯವಾದ ಸೇವೆಗಳಲ್ಲಿ ಅಡಚಣೆಯಾಗಬಾರದು. ಈ ಮೂಲಭೂತ ನಿರೀಕ್ಷೆಗಳನ್ನು ಯಾರೂ ಪ್ರಶ್ನಿಸುವುದಿಲ್ಲ.
ಆದರೆ ಸಚಿವರ ಮಾತು ಹುಟ್ಟುಹಾಕಿರುವ ಪ್ರಶ್ನೆ ಅದಕ್ಕಿಂತ ದೊಡ್ಡದು. ಅವರು ಮಾತನಾಡಿರುವ ಧಾಟಿಯನ್ನು ಗಮನಿಸಿದರೆ, ಅವರ ಅಸಹನೆ ಕೇವಲ ಪೌರಕಾರ್ಮಿಕರ ಹಾಜರಾತಿ ವಿಷಯಕ್ಕೆ ಮಾತ್ರ ಇದ್ದಂತೆ ಕಾಣುವುದಿಲ್ಲ. ಅವರ ಮಾತಿನಲ್ಲಿ ಮೇಲ್ ಮಧ್ಯಮ, ಶ್ರೀಮಂತ ಜನವರ್ಗದ ಎಂದಿನ ಗೊಣಗಾಟ, ಸಾಮಾಜಿಕ ಹಿನ್ನೆಲೆಯಿಂದ ದಕ್ಕುವ Feudal ಮನಸ್ಥಿತಿಯ ದಬ್ಬಾಳಿಕೆಯ ದನಿ ಢಾಳಾಗಿ ಕೇಳಿಸುತ್ತದೆ.
ಪೌರಕಾರ್ಮಿಕರಿಂದ ನಾವು ದಕ್ಷತೆಯನ್ನು ಕೇಳುತ್ತಿರುವಾಗ, ಅವರಿಂದ ಕೆಲಸ ಪಡೆಯುವ ವ್ಯವಸ್ಥೆ ಅವರಿಗೆ ನ್ಯಾಯ ಒದಗಿಸುತ್ತಿದೆಯೇ ಎಂದು ಸಚಿವರು ಯೋಚಿಸುವ ಗೋಜಿಗೆ ಹೋದಂತಿಲ್ಲ.
ಸಚಿವರು “ನಮ್ಮನ್ನು ಪರ್ಮನೆಂಟ್ ಮಾಡಿ” ಎಂದು ಕೇಳಿದ ಗುತ್ತಿಗೆ ನೌಕರರ ಜೊತೆ ಮಾತನಾಡುತ್ತಿದ್ದರು. ಅವರು ತಮ್ಮನ್ನು ಖಾಯಂಗೊಳಿಸಿ ಎಂದು ಕೇಳಿದ್ದೆ ತಪ್ಪು ಎನ್ನುವ ಧಾಟಿಯಲ್ಲಿ ಅವರು ಗದರಿದ್ದಾರೆ. ಈಗಾಗಲೇ ಪರ್ಮನೆಂಟ್ ಆದವರ ಕುರಿತೂ ಅವರು ಅಸಹನೆಯಿಂದ ಸಿಡುಕಿದ್ದಾರೆ. “ಪರ್ಮನೆಂಟ್ ಆದವರು ಕೆಲಸನೆ ಮಾಡಲ್ಲ, ಅಧಿಕಾರಿಗಳು ಅವರ ಜೊತೆ ಮಾತೆ ಆಡುವ ಹಾಗಿಲ್ಲ” ಎಂದು generalise ಮಾಡಿ ಹೇಳುತ್ತಾರೆ. ಅಲ್ಲಿಗೆ ಇಡೀ ಪೌರಕಾರ್ಮಿಕ ಜನವರ್ಗದ ಕುರಿತು ಸಚಿವರಿಗೆ ಪೂರ್ವಗ್ರಹವಿದ್ದಂತೆ ತೋರುತ್ತದೆ.
ಸಚಿವರಿಗೆ ಅರ್ಥವಾಗದೆ ಇರುವುದು ಏನೆಂದರೆ ಅವರು ಯಾವ ಸಮೂಹದೊಂದಿಗೆ ಮಾತನಾಡುತ್ತಿದ್ದಾರೋ ಅವರು ಸಾಮಾಜಿಕವಾಗಿ ಬಲಿಷ್ಠರಲ್ಲ, ಇವರಂತೆ ವಿದೇಶದಲ್ಲಿ ಓದಿಕೊಂಡವರಲ್ಲ, ರಾಜಕಾರಣಿಗಳ ಕುಟುಂಬದ ಪ್ರಿವಿಲೆಜ್ ಅಂತೂ ಇಲ್ಲವೇ ಇಲ್ಲ. ಹಾಜರಾತಿಯ ಸಮಸ್ಯೆ ಅವರಿಗೆ ಒಂದು ಆಶಿಸ್ತಿನ ವಿಷಯವಾಗಿ ಮಾತ್ರ ಕಂಡಿತು. ಕಾರ್ಮಿಕರ ಬದುಕಿನ ಪ್ರಶ್ನೆ, ಗುತ್ತಿಗೆ ವ್ಯವಸ್ಥೆಯ ಪ್ರಶ್ನೆ, ಜಾತಿ ಮತ್ತು ಸಾಮಾಜಿಕ ತಾರತಮ್ಯದ ಪ್ರಶ್ನೆ, ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯ ಪ್ರಶ್ನೆ, ಅಂತಿಮವಾಗಿ, ಸರ್ಕಾರ ತನ್ನ ಅತ್ಯಂತ ದುರ್ಬಲ ನಾಗರಿಕರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬ ಪ್ರಶ್ನೆ ಅವರಿಗೆ ಹೊಳೆಯಲೇ ಇಲ್ಲ.

ಪೌರ ಕಾರ್ಮಿಕರು ಒಂದು ದಿನ ಕೆಲಸಕ್ಕೆ ಬರದಿದ್ದರೆ ಬೆಂಗಳೂರಿನ ಅಥವಾ ಯಾವುದೇ ನಗರದ ಸ್ಥಿತಿ ಅದೇ ದಿನ ಬದಲಾಗುತ್ತದೆ. ಕಸದ ರಾಶಿ ಹೆಚ್ಚುತ್ತದೆ, ದುರ್ವಾಸನೆ ಹರಡುತ್ತದೆ, ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲಿಗೆ ಅವರ ಕೆಲಸ ಎಷ್ಟು ಅನಿವಾರ್ಯ ಎಂಬುದು ನಮಗೆಲ್ಲ ಗೊತ್ತಿದೆ. ಸಚಿವರಿಗೂ ಗೊತ್ತಿದೆ.
ಆದರೆ ನಗರದ ಆರೋಗ್ಯವನ್ನು ಕಾಪಾಡುವ ವ್ಯಕ್ತಿಯ ಆರೋಗ್ಯದ ಬಗ್ಗೆ ಸರ್ಕಾರ ಎಷ್ಟು ಕಾಳಜಿ ವಹಿಸುತ್ತದೆ? ಪ್ರತಿದಿನ ತ್ಯಾಜ್ಯ ಮತ್ತು ಕೊಳಚೆಯ ನಡುವೆ ಕೆಲಸ ಮಾಡುವ ಕಾರ್ಮಿಕರಿಗೆ ಸಾಕಷ್ಟು ಸುರಕ್ಷತಾ ಸಾಧನಗಳಿವೆಯೇ? ಕೆಲಸದ ವೇಳೆ ಅನಾರೋಗ್ಯಕ್ಕೊಳಗಾದರೆ ಸಮರ್ಪಕ ವೈದ್ಯಕೀಯ ನೆರವು ಸಿಗುತ್ತದೆಯೇ? ಅಪಾಯಕಾರಿ ಕೆಲಸದಲ್ಲಿ ಜೀವ ಕಳೆದುಕೊಂಡರೆ ಅವರ ಕುಟುಂಬದ ಭವಿಷ್ಯಕ್ಕೆ ಏನು ಭದ್ರತೆ? ದಶಕಗಳ ಕಾಲ ದುಡಿದರೂ ಗುತ್ತಿಗೆ ಕೆಲಸದ ಅಸ್ಥಿರತೆಯಿಂದ ಹೊರಬರಲಾಗದ ಪರಿಸ್ಥಿತಿಗೆ ಯಾರು ಹೊಣೆ?
ಈ ಪ್ರಶ್ನೆಗಳಿಗೆ ಉತ್ತರಿಸದೆ ಕೇವಲ ಹಾಜರಾತಿಯ ಲೆಕ್ಕ ಕೇಳುವುದು ಅಮಾನವೀಯ. ಸರ್ಕಾರ ನಡೆಸುವುದು ಎಂದರೆ multinational ಕಂಪನಿ ನಡೆಸಿದಂತಲ್ಲ. ಮುಖ್ಯಮಂತ್ರಿಗಳು, ಮಂತ್ರಿಗಳು ಕಂಪನಿ ಎಂಡಿ, ಸಿಇಓ ಗಳ ಹಾಗೆ ವರ್ತಿಸಲು ಸಾಧ್ಯವಿಲ್ಲ. ಸಾಮಾಜಿಕ ಸಂವೇದನೆಗಳು ಇಲ್ಲದ ಸರ್ಕಾರ ಸರ್ಕಾರವೇ ಅಲ್ಲ. ನಮ್ಮ ಕಂಪನಿ ಬಾಸ್ ಗಳು ಇವರು ಎಂದು ನಾವು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದಿಲ್ಲ.
ಕೃಷ್ಣ ಬೈರೇಗೌಡರು ತಮ್ಮ ದಕ್ಷತೆಗೆ, ಪ್ರಾಮಾಣಿಕತೆಗೆ ಹೆಸರಾದವರು. ಭವಿಷ್ಯದ ಕರ್ನಾಟಕ ನಿರ್ಮಾಣದಲ್ಲಿ ಅವರ ಪಾತ್ರ ಬಹಳ ಮುಖ್ಯ. ಅವರು ರಾಜಕೀಯ ಅಧಿಕಾರಕ್ಕೆ ಮಾತ್ರ ಹಪಹಪಿಸುವ ಇತರ ರಾಜಕಾರಣಿಗಳ ಹಾಗೆ ಇಲ್ಲ. ಅವರು ಇಷ್ಟು ಅಸೂಕ್ಷ್ಮವಾಗಿ ಹೇಗೆ ಮಾತನಾಡಿದರು?
ಪೌರಕಾರ್ಮಿಕರು ನಮ್ಮ ಮಾತೇ ಕೇಳುವುದಿಲ್ಲ ಎಂದು ತಮ್ಮ ಕಿವಿ ಚುಚ್ಚಿರುವ ಅಧಿಕಾರಿಗಳಿಂದಲೇ ಕೆಲವು ಮಾಹಿತಿಗಳನ್ನು ಸಚಿವರು ಕೇಳಬಹುದಿತ್ತು.
ಕಾರ್ಮಿಕರ ಹೆಸರಿನಲ್ಲಿ ಸರ್ಕಾರ ಪಾವತಿಸುವ ಮೊತ್ತ ಎಷ್ಟು? ಅವರ ಕೈಗೆ ತಲುಪುವ ವೇತನ ಎಷ್ಟು? ಗುತ್ತಿಗೆದಾರನ ಲಾಭ ಎಷ್ಟು? ಕಾರ್ಮಿಕರಿಗೆ ಕಾನೂನುಬದ್ಧ ಸೌಲಭ್ಯಗಳು ದೊರೆಯುತ್ತಿವೆಯೇ? ಸುರಕ್ಷತಾ ಸಾಧನಗಳ ಖರೀದಿ ಮತ್ತು ಬಳಕೆಯನ್ನು ಯಾರು ಪರಿಶೀಲಿಸುತ್ತಾರೆ?
ಪೌರಕಾರ್ಮಿಕನ ಒಂದು ದಿನದ ಗೈರುಹಾಜರಿಯನ್ನು ಪತ್ತೆಹಚ್ಚುವ ತಂತ್ರಜ್ಞಾನ ಇರುವ ವ್ಯವಸ್ಥೆಗೆ, ಕಾರ್ಮಿಕನಿಗೆ ಸಿಗಬೇಕಾದ ವೇತನ ಮತ್ತು ಸೌಲಭ್ಯಗಳು ನಿಜವಾಗಿ ತಲುಪುತ್ತಿವೆಯೇ ಎಂಬುದನ್ನು ಪತ್ತೆಹಚ್ಚುವ ವ್ಯವಸ್ಥೆಯೂ ಇರಬೇಕು. ಗೈರು ಹಾಜರಾದ ಸಿಬ್ಬಂದಿಗೆ ಪುಗಸಟ್ಟೆ ಸಂಬಳವನ್ನೇನು ಜಿಬಿಎ ಕೊಡುವುದಿಲ್ಲ. ಹಾಜರಾತಿ ಕೊರತೆಗೆ ಇರುವ ಕಾರಣವನ್ನು ಮಾನವೀಯತೆ ನೆಲೆಯಲ್ಲಿ ಶೋಧಿಸಿದರೆ ನಿಜವಾದ ಸಮಸ್ಯೆ ಅರ್ಥವಾಗುತ್ತದೆ. ಬೇರೇನೂ ಬೇಡ ಪೌರಕಾರ್ಮಿಕರು ಯಾಕೆ ಚಿಕ್ಕ ವಯಸ್ಸಿನಲ್ಲೇ ಸಾಯುತ್ತಾರೆ? ಅವರ ಅಂದಾಜು ಜೀವಿತಾವಧಿ ಯಾಕೆ ಕಡಿಮೆ ಇದೆ?
ಕೃಷ್ಣ ಬೈರೇಗೌಡರು ಇತ್ತೀಚೆಗೆ ಬೆಂಗಳೂರಿನ ವ್ಯವಸ್ಥೆ ಸುಧಾರಣೆಗೆ ಜನಪ್ರಿಯವಲ್ಲದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದು ಅವರ ದೃಷ್ಟಿಕೋನ, ಅವರ ಕಾರ್ಯಶೈಲಿ. ತಪ್ಪೇನೂ ಇಲ್ಲ. ಸರ್ಕಾರ ಜನರಿಗೆ ಹೊಣೆಗಾರಿಕೆ ನಿಗದಿಪಡಿಸುವುದು ತಪ್ಪಲ್ಲ. ಸಚಿವರು ಅದನ್ನು ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ಗದರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಜಡಗಟ್ಟಿದ ವ್ಯವಸ್ಥೆ ಸುಧಾರಿಸುವುದು ಅಷ್ಟು ಸುಲಭವಲ್ಲ.
ಆದರೆ ಅದೇ ವೇಗದಲ್ಲಿ ಅವರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡಲು ನಿಲ್ಲಬಾರದು. ಅದು ವಿವೇಕವಲ್ಲ, ಪ್ರಜ್ಞಾವಂತಿಕೆಯಲ್ಲ. ವಿಶೇಷವಾಗಿ ಸಮಾಜದ ದುರ್ಬಲ ವರ್ಗದೊಂದಿಗೆ ಮಾತನಾಡುವಾಗ ಭಾಷೆ ಒರಟಾಗಿರಬಾರದು. ಇದನ್ನು ಯೂನಿವರ್ಸಿಟಿಗಳು ಕಲಿಸುವುದಿಲ್ಲ. ಇದನ್ನು ಕಲಿಯಲು ನಮ್ಮ ಕಂಫರ್ಟ್ ಜೋನ್ ನಿಂದ ಹೊರಗೆ ಬಂದು ನಮಗಿಂತ ಕೆಳಸ್ತರದಲ್ಲಿ ಇರುವವರ ಚಪ್ಪಲಿಯೊಳಗೆ ಕಾಲಿಟ್ಟು ನೋಡಬೇಕಾಗುತ್ತದೆ. ಒಂದೇ ಒಂದು ದಿನ ಪೌರಕಾರ್ಮಿಕರು ಮಾಡುವ ಕೆಲಸವನ್ನು privileged ಜನರು ಮಾಡಲು ಸಾಧ್ಯವೇ? ಇದೊಂದು ಪ್ರಶ್ನೆಯಲ್ಲೇ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಇವೆ. ನಮ್ಮ ದೇಶದ ಸಾಮಾಜಿಕ ಸಂರಚನೆ ಅರ್ಥವಾದರೆ ನಮ್ಮ ಭಾಷೆಯೂ ಸರಿಹೋಗುತ್ತದೆ.
ಸರ್ಕಾರ ನಿಜವಾಗಿಯೂ ದಕ್ಷತೆಯನ್ನು ಗುರಿಯಾಗಿಸಿಕೊಂಡಿದ್ದರೆ, ಪೌರಕಾರ್ಮಿಕರ ಹಾಜರಾತಿಯಿಂದ ಆರಂಭಿಸಿ ಗುತ್ತಿಗೆ ವ್ಯವಸ್ಥೆಯ ಅಂತ್ಯದವರೆಗೂ ಇಡೀ ಸರಪಳಿಯನ್ನು ಪರಿಶೀಲಿಸಬೇಕು. ಇಲ್ಲವಾದರೆ ದಕ್ಷತೆ ಎಂಬ ಪದವು ದುರ್ಬಲರ ಮೇಲೆ ಮಾತ್ರ ಬಳಸುವ ಅಧಿಕಾರಸ್ಥರ ಪೊಗರಿನ ಮಾತಾಗುತ್ತದೆ.
ಪೌರಕಾರ್ಮಿಕರಿಗೆ ಸಮರ್ಪಕ ವೇತನ ಬೇಕು. ಸುರಕ್ಷಿತ ಕೆಲಸದ ಪರಿಸ್ಥಿತಿ ಬೇಕು. ಆರೋಗ್ಯ ರಕ್ಷಣೆ ಬೇಕು. ಉದ್ಯೋಗ ಭದ್ರತೆ ಬೇಕು. ಗುತ್ತಿಗೆದಾರರ ಶೋಷಣೆಯಿಂದ ರಕ್ಷಣೆ ಬೇಕು. ಮುಖ್ಯವಾಗಿ, ಮನುಷ್ಯರಾಗಿ ಗೌರವದಿಂದ ಬದುಕುವ ಹಕ್ಕು ಬೇಕು.
ನಗರವನ್ನು ಸ್ವಚ್ಛವಾಗಿಡುವ ಕೈಗಳನ್ನು ಅವಮಾನಿಸಿ ಸ್ವಚ್ಛ ನಗರ ನಿರ್ಮಿಸಲು ಸಾಧ್ಯವಿಲ್ಲ. ಅಂಥ ನಗರ ನಿರ್ಮಾಣವಾದರೂ ಅದು ಹೈಟೆಕ್ ಸ್ಮಶಾನದಂತೆ ತೋರುತ್ತದೆ ಅಷ್ಟೇ.
ದಿನೇಶ್ ಕುಮಾರ್ ಎಸ್ ಸಿ
ಸಂಪಾದಕರು, ಕನ್ನಡ ಪ್ಲಾನೆಟ್
ಇದನ್ನೂ ಓದಿ- ಸಂಪಾದಕೀಯ | ಸುದ್ದಿ ಮಾರಾಟಕ್ಕಿದೆಯೇ?


