ನವದೆಹಲಿ ಸೆ. 5: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಭಾರೀ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ತಗ್ಗು ಪ್ರದೇಶಗಳ ಮನೆಗಳು, ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.
ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಭಾರೀ ಮಳೆಯಿಂದ ನೀರು ನಿಂತು ಪ್ರಯಾಣಿಕರಿಗೆ ತೀವ್ರ ತೊಂದರೆಯಾಯಿತು. ಟರ್ಮಿನಲ್-2 ಮತ್ತು ಟರ್ಮಿನಲ್-3ರ ಸಮೀಪದ ಅಪ್ರೋಚ್ ರಸ್ತೆ ಹಾಗೂ ಫೋರ್‌ಕೋರ್ಟ್ ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿತ್ತು. ಶುಕ್ರವಾರ ಮಳೆಯ ಪರಿಣಾಮ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ 9 ವಿಮಾನಗಳನ್ನು ಜೈಪುರ, ಲಖನೌ ಮತ್ತು ಅಹಮದಾಬಾದ್‌ಗೆ ತಿರುಗಿಸಲಾಗಿತ್ತು.
ದೆಹಲಿಯ ಪಾಲಂ ಪ್ರದೇಶದಲ್ಲಿ ಕೇವಲ ಮೂರು ಗಂಟೆಗಳಲ್ಲಿ 72.2 ಮಿ.ಮೀ. ಮಳೆ ದಾಖಲಾಗಿದ್ದು, ನಾರಾಯಣಾದಲ್ಲಿ 54 ಮಿ.ಮೀ., ಜನಕ್‌ಪುರಿಯಲ್ಲಿ 48.5 ಮಿ.ಮೀ., ಲೋಧಿ ರಸ್ತೆಯಲ್ಲಿ 34.6 ಮಿ.ಮೀ. ಹಾಗೂ ಸಫ್ದರ್‌ಜಂಗ್‌ನಲ್ಲಿ 32.6 ಮಿ.ಮೀ. ಮಳೆ ದಾಖಲಾಗಿದೆ. ಪಾಲಂನಲ್ಲಿ ಗಾಳಿಯ ವೇಗ 76 ಕಿ.ಮೀ. ವೇಗದವರೆಗೂ ತಲುಪಿತ್ತು.
ಭಾರೀ ಮಳೆಯ ಹಿನ್ನೆಲೆಯಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಸಂಚಾರಕ್ಕೂ ಅಡಚಣೆ ಉಂಟಾಗಿದ್ದು, ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ.
ಉತ್ತರ ಪ್ರದೇಶದಲ್ಲೂ ಪ್ರವಾಹದ ಆತಂಕ
ಉತ್ತರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, 26 ಜಿಲ್ಲೆಗಳು ಪ್ರವಾಹದಿಂದ ಬಾಧಿತವಾಗಿವೆ. ಸುಮಾರು 3.53 ಲಕ್ಷ ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. 17,544 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 4,847 ಮಂದಿ ಪ್ರಸ್ತುತ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ರಾಜ್ಯದಲ್ಲಿ 1,312 ಪ್ರವಾಹ ಪರಿಹಾರ ಶಿಬಿರಗಳು, 1,697 ದೋಣಿಗಳು ಹಾಗೂ 1,068 ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ.
ಅಮ್ರೋಹ, ಅಯೋಧ್ಯೆ, ಆಜಂಘಢ, ಬದಾಯೂಂ, ಬಲಿಯಾ, ಬಾರಾಬಂಕಿ, ಬಸ್ತಿ, ಚಂದೌಲಿ, ಫರೂಕಾಬಾದ್, ಗಾಜಿಯಾಬಾದ್, ಗೋಂಡಾ, ಗೋರಖ್‌ಪುರ, ಹರ್ದೋಯಿ, ಕಾಸ್ಗಂಜ್, ಕಾನ್ಪುರ, ಲಖಿಂಪುರ ಖೇರಿ, ಮಿರ್ಜಾಪುರ, ಮೊರಾದಾಬಾದ್, ಪಿಲಿಭಿತ್, ಪ್ರಯಾಗ್‌ರಾಜ್, ರಾಯ್‌ಬರೇಲಿ, ರಾಂಪುರ, ಸಂತ ಕಬೀರ್ ನಗರ, ಶಹಜಹಾನ್‌ಪುರ, ಉನ್ನಾವ್ ಮತ್ತು ವಾರಾಣಸಿ ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ.
ಬಿಹಾರದಲ್ಲೂ ಐದು ಜಿಲ್ಲೆಗಳಲ್ಲಿ ಪ್ರವಾಹದ ಸ್ಥಿತಿ
ಇತ್ತ ಬಿಹಾರದಲ್ಲಿ ಐದು ಜಿಲ್ಲೆಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೇಪಾಳದ ಮೇಲ್ದಂಡೆ ಪ್ರದೇಶಗಳು ಮತ್ತು ನೆರೆಯ ಜಾರ್ಖಂಡ್‌ನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಗಂಗಾ, ಗಂಡಕ್, ಕೋಸಿ, ಬೂಢಿ ಗಂಡಕ್, ಬಾಗ್ಮತಿ, ಪುನ್ಪುನ್ ಮತ್ತು ಘಾಘ್ರಾ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಪಾಟ್ನಾ, ವೈಶಾಲಿ, ಮುಜಫರ್‌ಪುರ, ಭಾಗಲ್ಪುರ, ಭೋಜ್‌ಪುರ ಸೇರಿದಂತೆ ಹಲವು ತಗ್ಗು ಪ್ರದೇಶಗಳಲ್ಲಿ ಪ್ರವಾಹದಂತಹ ಸ್ಥಿತಿ ಕಂಡುಬಂದಿದೆ. ಬಿಹಾರ ಮುಖ್ಯಮಂತ್ರಿ ಸಮ್ರಾಟ್ ಚೌಧರಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಮಳೆ ಮುಂದುವರಿಯುವ ಮುನ್ಸೂಚನೆ
ಉತ್ತರ ಭಾರತದಲ್ಲಿ ಸಕ್ರಿಯವಾಗಿರುವ ಕಡಿಮೆ ಒತ್ತಡದ ಪ್ರದೇಶ ಹಾಗೂ ಮುಂಗಾರು ಅಕ್ಷದ ಪರಿಣಾಮ ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಸೆಪ್ಟೆಂಬರ್ 5ರಂದು ದೇಶದ ಹಲವು ಭಾಗಗಳಲ್ಲಿ ಗುಡುಗು-ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

