ಕೀವ್: ಉಕ್ರೇನ್ ನ ಕೀವ್‌ನ ಪಶ್ಚಿಮ ಉಪನಗರಗಳ ಸಮೀಪವಿರುವ ಡಿಪೋವೊಂದರ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿದ್ದು, ಸುಮಾರು 27 ಮಂದಿ ಮೃತಪಟ್ಟಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಗೆ ಆ ಡಿಪೋದಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಲಾಗಿತ್ತು ಎಂದು ಉಕ್ರೇನ್‌ನ ಅಭಿಯೋಜಕರು (ಪ್ರಾಸಿಕ್ಯೂಟರ್‌ಗಳು) ಹೇಳಿದ್ದಾರೆ. ಅಧ್ಯಕ್ಷ ವ್ಲಾಲಡಿಮಿರ್ ಝೆಲೆನ್ಸ್ಕಿ ಅವರು ಇದಕ್ಕೆ ಮದ್ದುಗುಂಡುಗಳ ಸಂಗ್ರಹಣೆಯೇ ಕಾರಣ ಎಂದಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾ ಮತ್ತು ಉಕ್ರೇನ್ ಪರಸ್ಪರರ ವಿರುದ್ಧ ದೂರಗಾಮಿ ದಾಳಿಗಳನ್ನು ತೀವ್ರಗೊಳಿಸಿವೆ. ಇದರಿಂದಾಗಿ ಬೆಂಕಿ ಅವಘಡಗಳು ಸಂಭವಿಸುತ್ತಿದ್ದು, 2022ರಲ್ಲಿ ಮಾಸ್ಕೋ ಆಕ್ರಮಣ ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ ನಾಗರಿಕರ ಸಾವುನೋವುಗಳ ಸಂಖ್ಯೆ ಗರಿಷ್ಠ ಮಟ್ಟವನ್ನು ತಲುಪಿದೆ.
ರಾಜಧಾನಿಯ ಪಶ್ಚಿಮ ಉಪನಗರಗಳ ಮೇಲೆ ದಟ್ಟವಾದ ಕಪ್ಪು ಹೊಗೆಯ ರಾಶಿ ಏಳುತ್ತಿರುವುದನ್ನು ಎಎಫ್‌ಪಿ ವರದಿಗಾರರು ಕಂಡಿದ್ದಾರೆ. ಈ ಪ್ರದೇಶದಿಂದ ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸ್ಫೋಟದಿಂದ ಸುತ್ತಮುತ್ತಲಿನ ವಸತಿ ಪ್ರದೇಶಗಳು ಹಾಗೂ ವೃದ್ಧರು ಮತ್ತು ಅಂಗವಿಕಲರಿಗಾಗಿರುವ ಆರೈಕೆ ಕೇಂದ್ರವೊಂದು ಹಾನಿಗೀಡಾಗಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಸದ್ಯದ ಮಾಹಿತಿಯ ಪ್ರಕಾರ, 27 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಡಿಮಿಟ್ರಿವ್ಕಾ ಸಮುದಾಯದ ಮುಖ್ಯಸ್ಥರಾದ ತಾರಾಸ್ ಡಿಡಿಚ್ ಕೂಡ ಒಬ್ಬರು. ಅವರು ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದರು ಎಂದು ಸೇರಿಸಿದರು.
ಈ ಡಿಪೋ ಕೀವ್‌ನ ಪಶ್ಚಿಮ ಹೊರವಲಯದಲ್ಲಿರುವ ಮೈಲಾ ಪಟ್ಟಣದಲ್ಲಿತ್ತು. ಅದು ಮಿಲಿಟರಿ ಅಥವಾ ನಾಗರಿಕ ಸಂಸ್ಥೆಯೇ ಎಂಬುದರ ಕುರಿತು ಅಧಿಕಾರಿಗಳು ಏನನ್ನೂ ಹೇಳಿಲ್ಲ. ತನಿಖೆಯನ್ನು ಪ್ರಾರಂಭಿಸಿರುವುದಾಗಿ ಉಕ್ರೇನ್‌ನ ಅಭಿಯೋಜಕರು ತಿಳಿಸಿದ್ದಾರೆ.
ಆಗಸ್ಟ್ 28 ರಂದು ಸಂಜೆ ಸುಮಾರು 8:10 ರ ಸುಮಾರಿಗೆ , ಮಾನವರಹಿತ ವೈಮಾನಿಕ ವಾಹನವೊಂದು (ಡ್ರೋನ್) ಮೈಲಾ ಪಟ್ಟಣದಲ್ಲಿರುವ ಸಂಸ್ಥೆಯೊಂದರ ಆವರಣದ ಮೇಲೆ ಬಿದ್ದಿದೆ ಅಥವಾ ಡಿಕ್ಕಿ ಹೊಡೆದಿದೆ ಎಂದು ಉಕ್ರೇನ್‌ನ ಪ್ರಾಸಿಕ್ಯೂಟರ್ ಜನರಲ್ ಕಚೇರಿ ತಿಳಿಸಿದೆ.
ತನಿಖೆಯು ಸಂಸ್ಥೆಯ ಆವರಣದಲ್ಲಿ ಸ್ಫೋಟಕ ವಸ್ತುಗಳು ಮತ್ತು ಸಾಮಾಗ್ರಿಗಳನ್ನು ಸಂಗ್ರಹಿಸಿರುವುದರ ಕಾನೂನುಬದ್ಧತೆ ಹಾಗೂ ಹೆಸರನ್ನು ಬಹಿರಂಗಪಡಿಸದ ಮಾಲೀಕರು ಅಗತ್ಯ ಪರವಾನಗಿಗಳು ಮತ್ತು ಅನುಮೋದನೆಗಳನ್ನು ಹೊಂದಿದ್ದರೇ ಎಂಬ ವಿಷಯಗಳ ಮೇಲೆ ಕೇಂದ್ರೀಕರಿಸಲಿದೆ ಎಂದು ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

