ಬೆಂಗಳೂರು : ಕೃತಕ ಬುದ್ಧಿಮತ್ತೆಯನ್ನು ಕೇವಲ ತಂತ್ರಜ್ಞಾನ ಕ್ಷೇತ್ರಕ್ಕೆ ಸೀಮಿತಗೊಳಿಸದೆ, ಜನಸಾಮಾನ್ಯರ ದೈನಂದಿನ ಬದುಕು ಮತ್ತು ಸರ್ಕಾರಿ ಸೇವೆಗಳಿಗೆ ದಕ್ಷ ರೀತಿಯಲ್ಲಿ ಅನ್ವಯಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ.
ಕೌಶಲ ಅಭಿವೃದ್ಧಿ, ಆರೋಗ್ಯ, ಹೂಡಿಕೆ ಉತ್ತೇಜನ, ಆಡಳಿತ ಮತ್ತು ನಾಗರಿಕ ಸೇವೆಗಳಲ್ಲಿ ಧ್ವನಿ ಆಧಾರಿತ ಕೃತಕ ಬುದ್ಧಿಮತ್ತೆಯನ್ನು ಬಳಸುವ ಪ್ರಾಯೋಗಿಕ ಯೋಜನೆಗಳ ಕುರಿತು ರಾಜ್ಯ ಸರ್ಕಾರ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಧ್ವನಿ ತಂತ್ರಜ್ಞಾನದ ಜಾಗತಿಕ ಕಂಪನಿ ಎಲೆವೆನ್ಲ್ಯಾಬ್ಸ್ ಮಧ್ಯೆ ಇಂದು ಚರ್ಚೆ ನಡೆಯಿತು.
ಭಾಷೆಯ ಅಡೆತಡೆಗಳನ್ನು ನಿವಾರಿಸಿ, ತಂತ್ರಜ್ಞಾನವನ್ನು ಹೆಚ್ಚು ಜನಸ್ನೇಹಿಯಾಗಿಸುವುದು ಮತ್ತು ಸರ್ಕಾರಿ ಸೇವೆಗಳನ್ನು ನಾಗರಿಕರಿಗೆ ಇನ್ನಷ್ಟು ಸುಲಭವಾಗಿ ತಲುಪಿಸುವುದು ಈ ಸಹಭಾಗಿತ್ವದ ಪ್ರಮುಖ ಉದ್ದೇಶವಾಗಿದೆ. ವಿಶೇಷವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಕೌಶಲ ತರಬೇತಿ, ಹೂಡಿಕೆದಾರರಿಗೆ ಮಾಹಿತಿ, ಆರೋಗ್ಯ ಸೇವೆ ಹಾಗೂ ಮಾತನಾಡುವ ಸಾಮರ್ಥ್ಯ ಕಳೆದುಕೊಂಡವರಿಗೆ ಧ್ವನಿ ಮರುಸ್ಥಾಪನೆಯಂತಹ ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುವ ಪ್ರಾಯೋಗಿಕ ಸಾಧ್ಯತೆಗಳನ್ನು ಪರಿಶೀಲಿಸಲಾಗಿದೆ.
ನಾಗರಿಕ ಸೇವೆಗಳ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನ ದೊರೆಯಬಹುದಾದ ಕ್ಷೇತ್ರಗಳನ್ನು ಗುರುತಿಸುವುದು ಹಾಗೂ ಈ ತಂತ್ರಜ್ಞಾನವನ್ನು ಸರ್ಕಾರಿ ಹಾಗೂ ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಪರಿಣಾಮಕಾರಿಯಾಗಿ ಬಳಸುವ ಉದ್ದೇಶದಿಂದ ಈ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ.
ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ, ಎಲೆವೆನ್ಲ್ಯಾಬ್ಸ್ನ ಸಾರ್ವಜನಿಕ ವಲಯದ ಸಹಭಾಗಿತ್ವ ಮತ್ತು ನೀತಿ ವಿಭಾಗದ ಜಾಗತಿಕ ಮುಖ್ಯಸ್ಥ ಬೆನ್ ಸಪಲ್, ಏಷ್ಯಾ-ಪೆಸಿಫಿಕ್ ವಲಯದ ಸಾರ್ವಜನಿಕ ವಲಯದ ಸಹಭಾಗಿತ್ವ ಮತ್ತು ನೀತಿ ವಿಭಾಗದ ಮುಖ್ಯಸ್ಥ ನಿಹಾಲ್ ಚೌಹಾಣ್ ಹಾಗೂ ಸಿಬ್ಬಂದಿ ಮುಖ್ಯಸ್ಥೆ ಅರಿಯೆಲ್ ಆಂಡ್ರ್ಯೂಸ್ ಅವರ ಜೊತೆ ಇಂದು ಇಲ್ಲಿ ವಿಸ್ತೃತವಾಗಿ ಚರ್ಚಿಸಿದರು.
ಕರ್ನಾಟಕವು ಮುಂಚೂಣಿ ತಂತ್ರಜ್ಞಾನ ಸಂಸ್ಥೆಗಳ ಜೊತೆಗೆ ಸಹಭಾಗಿತ್ವ ಹೊಂದುವ ಮೂಲಕ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳನ್ನು ಪರಿಣಾಮಕಾರಿ ರೀತಿಯಲ್ಲಿ, ನಾಗರಿಕರಿಗೆ ಸುಲಭವಾಗಿ ಲಭ್ಯವಾಗುವ ಸೇವಾ ಮಾದರಿಗಳಾಗಿ ಪರಿವರ್ತಿಸುವ ವಿಶಾಲ ಪ್ರಯತ್ನದ ಭಾಗವಾಗಿ ಈ ಚರ್ಚೆ ನಡೆಯಿತು.
ವಿಶೇಷವಾಗಿ ನಾಗರಿಕರಿಗೆ ಸರ್ಕಾರಿ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು, ಕೌಶಲ ಮತ್ತು ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವುದು ಹಾಗೂ ನಾಗರಿಕರ ಅಗತ್ಯಗಳಿಗೆ ಸರ್ಕಾರವು ತ್ವರಿತವಾಗಿ ಸ್ಪಂದಿಸುವಂತೆ ಮಾಡುವುದು ಈ ತಂತ್ರಜ್ಞಾನ ಬಳಕೆಯ ಪ್ರಮುಖ ಉದ್ದೇಶಗಳಾಗಿವೆ.
ಕೃತಕ ಬುದ್ಧಿಮತ್ತೆ ಆಧಾರಿತ ಧ್ವನಿ ತಂತ್ರಜ್ಞಾನದ ಬಳಕೆ ಸಾಧ್ಯತೆಗಳು:
• ಧ್ವನಿ ಆಧಾರಿತ ಸಂದರ್ಶನ ಅಭ್ಯಾಸ ಮತ್ತು ಕೌಶಲ ಅಭಿವೃದ್ಧಿ: ಭಾರತೀಯ ಭಾಷೆಗಳಲ್ಲಿಯೂ ಸಂದರ್ಶನ ಅಭ್ಯಾಸ ಮತ್ತು ಕೌಶಲ ತರಬೇತಿ ನೀಡುವುದು.
• ಹೂಡಿಕೆದಾರರಿಗೆ ನೆರವು ಮತ್ತು ಮಾಹಿತಿ ಸೇವೆಗಳು: ಹೂಡಿಕೆ ಮಾಡಲು ಬಯಸುವವರಿಗೆ ವಿವಿಧ ಹೂಡಿಕೆ ಅವಕಾಶಗಳು ಮತ್ತು ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ನೀಡುವುದು ಹಾಗೂ ಅವುಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುವುದು.
• ಮಾತನಾಡುವ ಸಾಮರ್ಥ್ಯ ಕಳೆದುಕೊಂಡವರಿಗೆ ಧ್ವನಿ ಮರುಸ್ಥಾಪನೆ: ಮಾತನಾಡುವ ಸಾಮರ್ಥ್ಯ ಕಳೆದುಕೊಂಡಿರುವವರಿಗೆ ಕೃತಕ ಬುದ್ಧಿಮತ್ತೆಯ ನೆರವಿನಿಂದ ಅವರ ಧ್ವನಿಯನ್ನು ಮರುಸೃಷ್ಟಿಸುವ ಸಾಧ್ಯತೆ.
• ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಸಾರ್ವಜನಿಕ ಸೇವೆಗಳಲ್ಲಿ ಧ್ವನಿ ಆಧಾರಿತ ತಂತ್ರಜ್ಞಾನದ ಬಳಕೆ.
• ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಮತ್ತು ಧ್ವನಿ ಸುರಕ್ಷತೆ: ಧ್ವನಿ ನಕಲು, ವ್ಯಕ್ತಿಯಂತೆ ನಟಿಸುವುದು, ಕೃತಕವಾಗಿ ಸೃಷ್ಟಿಸಿದ ನಕಲಿ ವಿಡಿಯೊಗಳು ಮತ್ತು ತಪ್ಪು ಮಾಹಿತಿಯ ಹರಡುವಿಕೆ ತಡೆಯಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸುವುದು.
ಸಭೆಯಲ್ಲಿ ಎಲೆವೆನ್ಲ್ಯಾಬ್ಸ್ ತಂಡವು ಧ್ವನಿ ಆಧಾರಿತ ಸಂದರ್ಶನ ಅಭ್ಯಾಸ ಸಾಧನವನ್ನು ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸಿತು. ಇದೇ ವೇಳೆ ಕೃತಕವಾಗಿ ಸೃಷ್ಟಿಸಲಾದ ಧ್ವನಿ ಪತ್ತೆಹಚ್ಚುವುದು, ಅದರ ಮೂಲವನ್ನು ಗುರುತಿಸುವುದು, ಧ್ವನಿಯ ಬಳಕೆಯನ್ನು ಪತ್ತೆಹಚ್ಚುವ ವ್ಯವಸ್ಥೆ ಹಾಗೂ ಧ್ವನಿಗೆ ಗುರುತಿನ ಸಂಕೇತ ಅಳವಡಿಸುವ ತಂತ್ರಜ್ಞಾನಗಳ ಕುರಿತು ಸಂಸ್ಥೆಯ ಕಾರ್ಯವೈಖರಿಯನ್ನು ವಿವರಿಸಿತು.
ಸರ್ಕಾರದ ಆಡಳಿತದಲ್ಲಿ ಧ್ವನಿ ಆಧಾರಿತ ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಬಳಸುವ ಕುರಿತು ಸಭೆಯಲ್ಲಿ ವಿಶೇಷವಾಗಿ ಚರ್ಚಿಸಲಾಯಿತು. ಅದರಲ್ಲೂ ಸರ್ಕಾರಿ ಅಧಿಕಾರಿಗಳ ಧ್ವನಿಯನ್ನು ನಕಲು ಮಾಡಿ ಅವರಂತೆ ನಟಿಸುವ ಅಪಾಯ ಹಾಗೂ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾದ ನಕಲಿ ಧ್ವನಿಗಳನ್ನು ಬಳಸಿಕೊಂಡು ಸರ್ಕಾರಿ ಯೋಜನೆಗಳು ಮತ್ತು ಪ್ರಕಟಣೆಗಳ ಕುರಿತು ತಪ್ಪು ಮಾಹಿತಿಯನ್ನು ಹರಡುವ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಯಿತು.
ಗುರುತಿಸಲಾಗಿರುವ ಕ್ಷೇತ್ರಗಳಿಗೆ ಸ್ಪಷ್ಟವಾದ ಕಾರ್ಯಯೋಜನೆ ರೂಪಿಸುವಂತೆ ಹಾಗೂ ಸಾರ್ವಜನಿಕರಿಗೆ ನೇರವಾಗಿ ಪ್ರಯೋಜನವಾಗುವ ಫಲಿತಾಂಶಗಳನ್ನು ಒದಗಿಸುವ ಆರಂಭಿಕ ಪ್ರಾಯೋಗಿಕ ಯೋಜನೆ ರೂಪಿಸುವ ನಿಟ್ಟಿನಲ್ಲಿ ತಂಡಗಳು ಕಾರ್ಯನಿರ್ವಹಿಸುವಂತೆ ಸಚಿವ ಖರ್ಗೆ ಸೂಚಿಸಿದರು.
‘ಕೃತಕ ಬುದ್ಧಿಮತ್ತೆಯ ಆವಿಷ್ಕಾರಗಳನ್ನು ನಾಗರಿಕರಿಗೆ ಉತ್ತಮ ಹಾಗೂ ದಕ್ಷ ಸೇವೆಯನ್ನಾಗಿ ಪರಿವರ್ತಿಸುವಲ್ಲಿ ಮುಂಚೂಣಿಯಲ್ಲಿರಲು ಕರ್ನಾಟಕವು ಉತ್ತಮ ಅವಕಾಶ ಹೊಂದಿದೆ’ ಎಂದು ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಎಂ. ಖರ್ಗೆ ಹೇಳಿದರು.
‘ಜಾಗತಿಕ ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿರುವ ಸಂಸ್ಥೆಗಳ ಜೊತೆಗೆ ನಾವು ಸಹಭಾಗಿತ್ವ ಹೊಂದಬೇಕು. ಇಂತಹ ತಂತ್ರಜ್ಞಾನಗಳು ನೈಜ ಸಮಸ್ಯೆಗಳನ್ನು ಯಾವ ರೀತಿಯಲ್ಲಿ ಪರಿಹರಿಸಬಲ್ಲವು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಂತರ ಪ್ರಾಯೋಗಿಕ ಯೋಜನೆಗಳ ಮೂಲಕ ಅವುಗಳ ಬಳಕೆಯನ್ನು ಪರೀಕ್ಷಿಸಿ, ಯಶಸ್ವಿಯಾದ ಮಾದರಿಗಳನ್ನು ರಾಜ್ಯದಾದ್ಯಂತ ವಿಸ್ತರಿಸುವತ್ತ ಸಾಗಬೇಕು. ಯುವಕರು ಉದ್ಯೋಗ ಪಡೆಯಲು ಸನ್ನದ್ಧಗೊಳ್ಳಲು ನೆರವಾಗುವುದು, ಹೂಡಿಕೆದಾರರಿಗೆ ಅಗತ್ಯ ಮಾಹಿತಿಯನ್ನು ಸುಲಭವಾಗಿ ಒದಗಿಸುವುದು, ನಾಗರಿಕ ಸೇವೆಗಳನ್ನು ಮತ್ತಷ್ಟು ಸುಗಮಗೊಳಿಸುವುದು, ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸುವುದು- ಹೀಗೆ ಯಾವುದೇ ಕ್ಷೇತ್ರವಾಗಿರಲಿ, ದಕ್ಷ, ಸುಲಭವಾಗಿ ಲಭ್ಯವಾಗುವ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಆಧಾರಿತ ಸೇವಾ ಮಾದರಿಗಳನ್ನು ರೂಪಿಸುವುದರ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿರಬೇಕು” ಎಂದು ಹೇಳಿದರು.
ಅಕ್ಟೋಬರ್ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಎಲೆವೆನ್ಲ್ಯಾಬ್ಸ್ ಇಂಡಿಯಾ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಎಲೆವೆನ್ಲ್ಯಾಬ್ಸ್ ತಂಡವು ಸಚಿವರನ್ನು ಆಹ್ವಾನಿಸಿತು. ಈ ಶೃಂಗಸಭೆಯಲ್ಲಿ ಸಂಸ್ಥೆಯ ಹಿರಿಯ ನಾಯಕರು ಧ್ವನಿ ಆಧಾರಿತ ಕೃತಕ ಬುದ್ಧಿಮತ್ತೆಯಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಭಾರತದಲ್ಲಿ ಅದರ ವಿವಿಧ ಬಳಕೆಗಳ ಕುರಿತು ಚರ್ಚಿಸಲಿದ್ದಾರೆ.
ಸಭೆಯಲ್ಲಿ ಕಿಯೊನಿಕ್ಸ್ ಅಧ್ಯಕ್ಷ ಶರತ್ ಕುಮಾರ್ ಬಚ್ಚೇಗೌಡ, ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಹಾಗೂ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

