ನವದೆಹಲಿ : ತಮಿಳುನಾಡಿಗೆ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ಸೋಮವಾರಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಸದ್ಯ, ಅಂಕಿಅಂಶಗಳೊಂದಿಗೆ ಬರುವಂತೆ ಉಭಯ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿದೆ.
ತಮಿಳುನಾಡು ಪರ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ವಾದ ಮಂಡಿಸಿ, ನಿರ್ದೇಶನಗಳನ್ನು ಕರ್ನಾಟಕ ಪಾಲಿಸುತ್ತಿಲ್ಲ, ಕರ್ನಾಟಕ ನಮಗೆ ಪ್ರಮಾಣಾನುಗುಣವಾಗಿ ನೀರು ಹರಿಸುತ್ತಿಲ್ಲ. ಅಲ್ಪ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ತಮಿಳುನಾಡಿಗೆ ಬರಬೇಕಾದ ಪ್ರಮಾಣದ ನೀರು ಬರುತ್ತಿಲ್ಲ ಎಂದು ವಾದಿಸಿದರು.
ಕರ್ನಾಟಕ ಪರ ವಕೀಲರು ರಾಜ್ಯವು ಈಗಾಗಲೇ ತಮಿಳುನಾಡಿಗೆ ನೀರು ಹರಿಸುತ್ತಿದೆ, ನೀರು ಬಿಡುಗಡೆ ಮತ್ತು ಜಲಾಶಯಗಳ ಸ್ಥಿತಿಗತಿ ಸೇರಿದಂತೆ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಈಗ ಸಮಸ್ಯೆ ಏನಿದೆ? ಸಮಸ್ಯೆ ಇದ್ದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಹೋಗಿ” ಎಂದು ತಮಿಳುನಾಡಿಗೆ ಸೂಚಿಸಿತು.

