ಚೆನ್ನೈ : ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಅಭಿವೃದ್ಧಿ ನೀತಿಯು ‘ಗುಜರಾತ್-ಕೇಂದ್ರಿತ’ವಾಗಿದೆ ಎಂದು ತಮಿಳುನಾಡಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ‘ವಿ ದ ಲೀಡರ್ಸ್’ ಚಳುವಳಿಯ ಸ್ಥಾಪಕ ಕೆ. ಅಣ್ಣಾಮಲೈ ಟೀಕಿಸಿದ್ದಾರೆ.
ಬೃಹತ್ ಹೂಡಿಕೆಗಳು, ತಂತ್ರಜ್ಞಾನ ಯೋಜನೆಗಳು ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳನ್ನೆಲ್ಲವನ್ನೂ ಒಂದೇ ರಾಜ್ಯದಲ್ಲಿ ಕೇಂದ್ರೀಕರಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
‘ಇಂಡಿಯಾ ಟುಡೇ ತಮಿಳುನಾಡು ರೌಂಡ್ ಟೇಬಲ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅಣ್ಣಾಮಲೈ, ಬಿಜೆಪಿಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಹೆಚ್ಚಾಗಿ “ದೆಹಲಿ-ಕೇಂದ್ರಿತ”ವಾಗಿದೆ ಎಂದು ಹೇಳಿದರಲ್ಲದೆ, ರಾಜ್ಯ ಮಟ್ಟದ ನಾಯಕರಿಗೆ ಹೆಚ್ಚಿನ ಅಧಿಕಾರ ಮತ್ತು ಸ್ವಾತಂತ್ರ್ಯವನ್ನು ನೀಡುವ ಅಗತ್ಯವಿದೆ ಎಂದರು.
ದೆಹಲಿಯಿಂದ ನಡೆಯುವ ಅಭಿವೃದ್ಧಿಯಲ್ಲಿನ ಗುಜರಾತ್-ಕೇಂದ್ರಿತ ಮಾದರಿಯನ್ನು ಟೀಕಿಸಿದರು ಹಾಗೂ ಪ್ರಮುಖ ಹೂಡಿಕೆಗಳು ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳು ಗುಜರಾತ್ಗೆ ಮಾತ್ರ ಸೀಮಿತವಾಗುತ್ತಿರುವುದನ್ನು ಪ್ರಶ್ನಿಸಿದರು. ದೆಹಲಿಯಿಂದ ನಡೆಯುವ ಅಭಿವೃದ್ಧಿಯ ಈ ಗುಜರಾತ್-ಕೇಂದ್ರಿತ ಮಾದರಿಯು ಸ್ವಲ್ಪ ಬದಲಾಗಬೇಕಿದೆ ಎಂದು ಅಣ್ಣಾಮಲೈ ಹೇಳಿದರು.
ಎಲ್ಲಾ ಕೃತಕ ಬುದ್ಧಿಮತ್ತೆ (AI) ಕಂಪನಿಗಳು ಅಥವಾ ವೇಫರ್ (ಚಿಪ್) ತಯಾರಿಕಾ ಕಂಪನಿಗಳು ಅಲ್ಲಿಗೇ ಹೋಗುವುದು, 2030ರ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಪೊಲೀಸ್ ಕ್ರೀಡಾಕೂಟಗಳು ಅಲ್ಲಿ ನಡೆಯುವುದು ಹಾಗೂ 2036ರ ಒಲಿಂಪಿಕ್ ಕ್ರೀಡಾಕೂಟ ಅಹಮದಾಬಾದ್ಗೆ ಹೋಗುವುದು – ಹೀಗೆಲ್ಲಾ ಆಗಲು ಸಾಧ್ಯವಿಲ್ಲ. ಇಡೀ ಭಾರತದ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಂತಹ ‘ಗುಜರಾತ್ ಮಾದರಿ’ಯನ್ನು ಅನುಸರಿಸಲು ಸಾಧ್ಯವಿಲ್ಲ ಎಂದರು.
ಬಿಜೆಪಿಯ ನಿರ್ಧಾರಗಳು ದೆಹಲಿ-ಕೇಂದ್ರಿತವಾಗುತ್ತಿವೆ ಎಂದು ನಾನು ಭಾವಿಸುತ್ತೇನೆ, ಇದು ಅತ್ಯಂತ ದುರದೃಷ್ಟಕರ. ಈ ಪರಿಸ್ಥಿತಿ ಬದಲಾಗಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಅವುಗಳನ್ವಯ ಕ್ರಮ ಕೈಗೊಳ್ಳಲು ರಾಜ್ಯ ಮಟ್ಟದ ನಾಯಕರಿಗೆ ಹೆಚ್ಚಿನ ಅಧಿಕಾರವನ್ನು ನೀಡಬೇಕು. ವಾಸ್ತವವಾಗಿ, ರಾಜ್ಯ ಮಟ್ಟದ ನಾಯಕರಿಗೆ ಅಧಿಕಾರ ನೀಡಲೇಬೇಕು. ಇದು ನಡೆಯಲೇಬೇಕಾದ ವಿಷಯ ಎಂದು ಹೇಳಿದರು.

