ರೇವಾ : “ಶುದ್ಧ ಪೆಟ್ರೋಲ್ ಏನು ನಿಮ್ಮ ಅಪ್ಪನ ಮನೆಯಿಂದ ಬರುತ್ತದೆಯೇ?” ಹೀಗೆಂದು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಿಶ್ರಣ ವಿರೋಧಿಸುವವರ ವಿರುದ್ಧ ಬಿಜೆಪಿ ಸಂಸದ ಜನಾರ್ಧನ ಮಿಶ್ರಾ, ಕಿಡಿಕಾರಿದ್ದಾರೆ.
ರೇವಾದಿಂದ ಭೋಪಾಲ್ ಮತ್ತು ಕೋಲ್ಕತ್ತಾಗೆ ಹೊಸ ವಿಮಾನ ಸೇವೆಗಳನ್ನು ಉದ್ಘಾಟನೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಎಥೆನಾಲ್ ಮಿಶ್ರಣ ವಿರೋಧಿಗಳನ್ನು ಪ್ರಶ್ನಿಸಿದರು.
“ಭಾರತವು ತನ್ನ ತೈಲದ ಶೇಕಡಾ 20 ರಷ್ಟನ್ನು ದೇಶೀಯವಾಗಿ ಉತ್ಪಾದಿಸುತ್ತದೆ, ಆದರೆ ಶೇಕಡಾ 80 ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ,” ಎಂದು ಹೇಳಿದ ಮಿಶ್ರಾ, ಪ್ರಸ್ತುತ ಭೌಗೋಳಿಕ-ರಾಜಕೀಯ ಪರಿಸ್ಥಿತಿಯಿಂದಾಗಿ ತೈಲವನ್ನು ಪಡೆಯುವುದು ಕಷ್ಟಕರವಾಗಿದೆ.
ಹೊರ್ಮುಜ್ ಜಲಸಂಧಿ ಬಂದ್ ಆಗಿದ್ದು, ಇಂಧನ ಆಮದು ಕಷ್ಟವಾಗಿದೆ. ಅಲ್ಲದೇ ಹೆಚ್ಚುವರಿ 18,000 ಕಿಲೋ ಮೀಟರ್ ಗಳಷ್ಟು ಸಮುದ್ರ ಮಾರ್ಗದಲ್ಲಿ ಇಂಧನ ತರಿಸಿಕೊಳ್ಳುವುದು ದುಬಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇ20 ಪೆಟ್ರೋಲ್ ಕುರಿತು ಪ್ರಸ್ತಾಪಿಸಿದಾಗ, ಜನರು ಪ್ರತಿಭಟನೆ ನಡೆಸುತ್ತಾರೆ. ನಾವು ಕೇವಲ ಶುದ್ಧ ಪೆಟ್ರೋಲ್ ಮಾತ್ರವೇ ಉಪಯೋಗಿಸುತ್ತೇವೆ ಎನ್ನುತ್ತಾರೆ. ಆದರೆ ಶುದ್ಧ ಪೆಟ್ರೋಲ್ ನಿಮ್ಮ ಅಪ್ಪನ ಮನೆಯಿಂದ ಬರುತ್ತದೆಯೇ? ಒಂದು ವೇಳೆ ನಮ್ಮ ದೇಶದಲ್ಲಿ ಶುದ್ಧ ಪೆಟ್ರೋಲ್ ಇಲ್ಲ ಎಂದಾದ ಮೇಲೆ….ಶುದ್ಧ ಪೆಟ್ರೋಲ್ ಎಲ್ಲಿಂದ ಬರಬೇಕು? ಎಂದು ಪ್ರಶ್ನಿಸಿದ್ದಾರೆ.
ಬ್ರೆಜಿಲ್ನಲ್ಲಿ ವಾಹನಗಳು ಶೇಕಡಾ 100ರಷ್ಟು ಎಥೆನಾಲ್ನಿಂದ ಚಲಿಸುತ್ತವೆ ಮತ್ತು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಮಿಶ್ರಾ ಪ್ರತಿಪಾದಿಸಿದರು. ವಾಹನ ತಯಾರಕರು ದೃಢಪಡಿಸಿರುವಂತೆ, ಭಾರತದಲ್ಲಿಯೂ ವಾಹನಗಳು ಎಥೆನಾಲ್ ಮಿಶ್ರಿತ ಇಂಧನದಲ್ಲಿ ಚಲಿಸಬಲ್ಲವು ಎಂದು ಅವರು ಹೇಳಿದರು.
“ವಾಹನ ತಯಾರಕರು ತಮ್ಮ ಬಳಿ ಸೂಕ್ತ ಎಂಜಿನ್ಗಳಿವೆ ಮತ್ತು ಯಾವುದೇ ಸಮಸ್ಯೆಗಳಾಗುವುದಿಲ್ಲ ಎಂದು ಹೇಳುತ್ತಾರೆ. ಎಥೆನಾಲ್ ಬಳಸಿ ವಾಹನಗಳನ್ನು ಚಲಾಯಿಸುವ ಸಾಮರ್ಥ್ಯ ಭಾರತಕ್ಕಿದೆ. ಭಾರತೀಯ ವಾಹನಗಳು ಎಥೆನಾಲ್ನಿಂದ ಚಲಿಸುತ್ತವೆ ಮತ್ತು ಚಲಿಸಬಲ್ಲವು ಎಂದಿದ್ದಾರೆ.
ಇಂದು ಜಗತ್ತಿನಲ್ಲಿ ಉದ್ಯೋಗಾವಕಾಶಗಳು ಅತಿ ಹೆಚ್ಚಾಗಿರುವ ಸ್ಥಳವಿದ್ದರೆ, ಅದು ಭಾರತ ಎಂದಿದ್ದಾರೆ.

