ಮುಂಬೈ : ಇಳಿ ವಯಸ್ಸಿನಲ್ಲೂ ಲೈಂಗಿಕ ದೌರ್ಜನ್ಯ ಎಸಗಿ ಸಿನಿಮಾ ನಿರ್ದೇಶಕನೋರ್ವ ಜೈಲು ಪಾಲಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
73 ವರ್ಷದ ಚಲನಚಿತ್ರ ನಿರ್ದೇಶಕ ಶಕೀಲ್ ನೂರಾನಿ 33 ವರ್ಷದ ನಟಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ.
ಮುಂಬೈನ ಮಲ್ವಾನಿಯಲ್ಲಿರುವ ತಮ್ಮ ಮನೆಗೆ ಮುಂಬರುವ ಚಲನಚಿತ್ರವೊಂದರ ಕುರಿತು ಚರ್ಚಿಸುವ ನೆಪದಲ್ಲಿ ಆ ನಟಿಯನ್ನು ಕರೆಸಿಕೊಂಡಿದ್ದ ನಿರ್ದೇಶಕರು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸ್ ದೂರಿನ ಪ್ರಕಾರ, ಅವರು ನಟಿಗೆ ಮಾದಕ ದ್ರವ್ಯ ನೀಡಿ, ಆಕೆಯನ್ನು ಬೆದರಿಸಿದ್ದಾರೆ ಎಂದು ಹೇಳಲಾಗಿದೆ. ಬೊರಿವಲಿ ಹಾಲಿಡೇ ಕೋರ್ಟ್ (ರಜಾಕಾಲದ ನ್ಯಾಯಾಲಯ) ಮುಂದೆ ಹಾಜರುಪಡಿಸಲಾಯಿತು. ಆಗಸ್ಟ್ 12 ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ನೂರಾನಿ “ಬಡೆ ದಿಲ್ವಾಲಾ” (1999) ಮತ್ತು “ಜೋರು ಕಾ ಗುಲಾಮ್” (2000) ನಂತಹ ಜನಪ್ರಿಯ ಚಲನಚಿತ್ರಗಳ ರಚನೆ, ನಿರ್ಮಾಣ ಮತ್ತು ನಿರ್ದೇಶನಕ್ಕೆ ಹೆಸರುವಾಸಿಯಾಗಿದ್ದಾರೆ.

