ಬೆಂಗಳೂರು. ಅ. 13 : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಇಂದು ನಟರಾದ ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಅವರ ಸಾಕ್ಷ್ಯ ವಿಚಾರಣೆ ನಡೆದಿದೆ. ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಲು ನಟ ಚಿಕ್ಕಣ್ಣ ವಿಫಲರಾದರು. ನಟ ಯಶಸ್ ದರ್ಶನ್ ಪರ ಸಾಕ್ಷ್ಯ ನುಡಿದಿದ್ದಾರೆ. ಯಶಸ್ ಅವರ ಹೇಳಿಕೆಯನ್ನು ಪ್ರಶ್ನಿಸಿದ ವಿಶೇಷ ಸರ್ಕಾರಿ ಅಭಿಯೋಜಕರು (ಎಸ್‌ಪಿಪಿ), ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಿ ಅಡ್ಡ ವಿಚಾರಣೆಗೆ ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳುವಾಗ ನಟ ಚಿಕ್ಕಣ್ಣ ತಡವರಿಸಿದ್ದಾರೆ. ಇದನ್ನು ಗಮನಿಸಿದ ನ್ಯಾಯಾಲಯ, ಸಹಜವಾಗಿ ಹೇಳಿಕೆ ನೀಡಲು ಸಾಧ್ಯವಾಗದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದೆ. ಈ ವೇಳೆ ತಮಗೆ ಟೆನ್ಶನ್ ಆಗುತ್ತಿದೆ ಎಂದು ಚಿಕ್ಕಣ್ಣ ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಅವರನ್ನು 10 ನಿಮಿಷಗಳ ಕಾಲ ಕೂರಿಸಿ, ಮನಸ್ಸು ಶಾಂತಗೊಳಿಸಿಕೊಂಡು ಸಾಕ್ಷ್ಯ ಹೇಳುವಂತೆ ನ್ಯಾಯಾಲಯ ಸೂಚಿಸಿದೆ.
ಆದರೆ, ಸುಮಾರು 15 ನಿಮಿಷಗಳ ವಿಶ್ರಾಂತಿಯ ಬಳಿಕವೂ ಚಿಕ್ಕಣ್ಣ ಆತಂಕ ವ್ಯಕ್ತಪಡಿಸಿದ್ದು, ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇದರಿಂದಾಗಿ ಅವರ ಸಾಕ್ಷ್ಯ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.
ಇದೇ ಪ್ರಕರಣದಲ್ಲಿ ನಟ ಯಶಸ್ ದರ್ಶನ್ ಪರವಾಗಿ ಸಾಕ್ಷ್ಯ ನುಡಿದಿದ್ದಾರೆ. ಯಶಸ್ ಅವರ ಹೇಳಿಕೆಗಳು ಸುಳ್ಳಾಗಿವೆ ಎಂದು ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕರು, ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಿ ಪಾಟಿ ಸವಾಲು ನಡೆಸಲು ಅನುಮತಿ ನೀಡುವಂತೆ ಕೋರಿದ್ದಾರೆ. ನ್ಯಾಯಾಲಯ ಇದಕ್ಕೆ ಅವಕಾಶ ನೀಡಿದ್ದು, ಅಡ್ಡ ವಿಚಾರಣೆಗೆ ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ ಆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಇಬ್ಬರು ನಟರ ಸಾಕ್ಷ್ಯಗಳು ಮತ್ತು ಮುಂದಿನ ಪಾಟೀಸವಾಲು ಮಹತ್ವ ಪಡೆದುಕೊಂಡಿವೆ.

