ಕೋಲಾರ, ಅ.08 : ಮನೆಯಲ್ಲಿದ್ದ ಒಂಟಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಆಕೆಯ ಕತ್ತಿನಲ್ಲಿದ್ದ ಸುಮಾರು 78 ಗ್ರಾಂ ತೂಕದ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಮುಳಬಾಗಲು ನಗರ ಪೊಲೀಸರು ಬಂದಿಸಿದ್ದಾರೆ.
ಬಂಧಿತ ಆರೋಪಿಯನ್ನು ತಮಿಳುನಾಡು ಪೆರೆಯ ಕುಲಂ ತಾಲೂಕಿನ ದೇವದಾನಪಟ್ಟೆ ಗ್ರಾಮದ ಸೆಲ್ವನ್ ದರನ್ ಎಂದು ಗುರುತಿಸಲಾಗಿದೆ.
ಸದರಿ ಆರೋಪಿ ಕಳೆದ 25 ರಂದು ಮುಳಬಾಗಿಲು ಪಟ್ಟಣದ ಶೃಂಗೇರಿ ಮಠದ ರಸ್ತೆಯಲ್ಲಿ ವಾಸವಾಗಿರುವ ವೀರಮಣಿ ಕೆಲಸಕ್ಕೆ ಎಂದು ಹೊರಗಡೆ ಹೋದಾಗ ಅವರ ಕುಟುಂಬಕ್ಕೆ ತೀರಾ ಪರಿಚಯಸ್ತನಾಗಿದ್ದ ಆರೋಪಿಯು ಮನೆಗೆ ನುಗ್ಗಿ ಒಂಟಿಯಾಗಿದ್ದ ಕಾಂತಿ ಎಂಬಾಕೆಯ ಮೇಲೆ ಹಲ್ಲೆ ನಡೆಸಿ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ.
ಈ ಕುರಿತಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ರಕ್ಷಣಾಧಿಕಾರಿ ಕನ್ನಿಕಾ ಸುಕ್ರಿಪಾಲ್ ಆರೋಪಿಯ ಬಂಧನಕ್ಕೆ ಪ್ರತ್ಯೇಕ ತಂಡಗಳನ್ನು ರಚಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಮುಳಬಾಗಲು ಪೊಲೀಸರು ಉಪಾದೀಕ್ಷಕರಾದ ಮನಿಷ ಹಾಗೂ ಇನ್ಸ್ಪೆಕ್ಟರ್ ಸುಧಾಕರ ರೆಡ್ಡಿ , ಪಿಎಸ್ಐ ರಾಮು ಮತ್ತವರ ತಂಡವು ಆರೋಪಿಯ ಜಾಡನ್ನು ಹಿಡಿದು ತಮಿಳುನಾಡಿನ ಕೊಡೈಕೆನಾಲ್ ಪ್ರದೇಶದಲ್ಲಿ ಬಂಧಿಸಿದ್ದಾರೆ.

