ಯುವಕರು ಪ್ರಶ್ನಿಸುವುದಕ್ಕೆ ಹೆದರಬಾರದು : ಜೆನ್‌ ಜೀಗಳಿಗೆ ಮೋದಿ ಉಪದೇಶ

ನವದೆಹಲಿ, ಆ.8: ಜೀವನವನ್ನು ಇತರರ ಸಾಧನೆಗಳೊಂದಿಗೆ ಹೋಲಿಸಿಕೊಳ್ಳದೆ, ಪ್ರತಿದಿನವೂ ಹಿಂದಿನ ದಿನಕ್ಕಿಂತ ಉತ್ತಮವಾಗಲು ಪ್ರಯತ್ನಿಸಬೇಕು. ಜೀವನ ಯಾವುದೇ ಲೀಡರ್‌ಬೋರ್ಡ್ ಅಲ್ಲ, ನಿಮ್ಮ ನಿಜವಾದ ಸ್ಪರ್ಧೆ ನಿಮ್ಮೊಂದಿಗೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಐಐಟಿ ದೆಹಲಿಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಐಐಟಿ ದೆಹಲಿಯ 57ನೇ ಘಟಿಕೋತ್ಸವದಲ್ಲಿ ಶನಿವಾರ ಮಾತನಾಡಿದ ಪ್ರಧಾನಿ, ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಜಾಗತಿಕ ವ್ಯವಸ್ಥೆಯ ನಡುವೆ ಯುವಕರು ನಿರಂತರವಾಗಿ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಪದವಿ ಪಡೆಯುವುದು ಶಿಕ್ಷಣದ ಅಂತ್ಯವಲ್ಲ, ಹೊಸ ಕಲಿಕೆಯ ಆರಂಭ ಎಂದು ಅವರು ಹೇಳಿದರು. ಕುತೂಹಲವನ್ನು ಜೀವಂತವಾಗಿಟ್ಟುಕೊಂಡು, ಹೊಸ ಕೌಶಲ್ಯಗಳನ್ನು ಕಲಿಯುತ್ತಾ, ಬದಲಾಗುತ್ತಿರುವ ಜಗತ್ತಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಐಐಟಿ ಕ್ಯಾಂಪಸ್‌ನಲ್ಲಿರುವಾಗ ವಿದ್ಯಾರ್ಥಿಗಳಿಗೆ ಸಿಲಬಸ್, ಪರೀಕ್ಷೆ ಮತ್ತು ಪ್ರಶ್ನೆಪತ್ರಿಕೆಗಳಿರುತ್ತವೆ. ಆದರೆ ಕ್ಯಾಂಪಸ್‌ನಿಂದ ಹೊರಬಂದ ಬಳಿಕ ಜೀವನವೇ ಒಂದು ದೊಡ್ಡ ಪರೀಕ್ಷೆಯಾಗಿರುತ್ತದೆ. ಅಲ್ಲಿ ಎಲ್ಲ ಪ್ರಶ್ನೆಗಳಿಗೂ ಸಿದ್ಧ ಉತ್ತರಗಳಿರುವುದಿಲ್ಲ. ಕೆಲವೊಮ್ಮೆ ಯಾವುದು ನಿಜವಾದ ಪ್ರಶ್ನೆ ಎಂಬುದನ್ನೇ ಗುರುತಿಸಬೇಕಾಗುತ್ತದೆ. ಜಗತ್ತು ಪ್ರಶ್ನಿಸುವುದನ್ನೇ ನಿಲ್ಲಿಸಿರುವ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ಮೋದಿ ಹೇಳಿದರು.

ಯುವಕರು ಪ್ರಶ್ನಿಸುವುದಕ್ಕೆ ಹೆದರಬಾರದು. ಆದರೆ ಪ್ರಶ್ನಿಸುವುದರಲ್ಲೇ ನಿಲ್ಲದೆ ಪರಿಹಾರ ಹುಡುಕುವ ಧೈರ್ಯವೂ ಇರಬೇಕು. ಕುತೂಹಲ, ಕಲಿಕೆಯ ಮನೋಭಾವ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವೇ ಭವಿಷ್ಯದ ಯಶಸ್ಸಿಗೆ ಪ್ರಮುಖ ಸಾಧನಗಳಾಗಲಿವೆ ಎಂದು ಪ್ರಧಾನಿ ಹೇಳಿದರು.

ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಯುವಕರು ತಮ್ಮ ಸಾಧನೆಗಳನ್ನು ಇತರರೊಂದಿಗೆ ಹೋಲಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಯಾರಿಗೆ ಹೆಚ್ಚು ಸಂಬಳ, ಯಾರಿಗೆ ದೊಡ್ಡ ಉದ್ಯೋಗ, ಯಾರು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಹೋಲಿಕೆ ಜೀವನದ ಮಾನದಂಡವಾಗಬಾರದು. ಜೀವನ ಯಾವುದೇ ಲೀಡರ್‌ಬೋರ್ಡ್ ಅಲ್ಲ. ಪ್ರತಿದಿನವೂ ಸ್ವಂತ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಮತ್ತು ನಿನ್ನೆಗಿಂತ ಇಂದು ಉತ್ತಮವಾಗುವುದು ಮುಖ್ಯ ಎಂದು ಮೋದಿ ಹೇಳಿದರು.

ಭಾರತದ ಮುಂದಿನ ಅಭಿವೃದ್ಧಿಯ ಹಂತದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಬಾಹ್ಯಾಕಾಶ, ಸೆಮಿಕಂಡಕ್ಟರ್, ಡ್ರೋನ್, ಕೃತಕ ಬುದ್ಧಿಮತ್ತೆ, ಕ್ವಾಂಟಂ ಕಂಪ್ಯೂಟಿಂಗ್, ಡೇಟಾ ಸೆಂಟರ್, ಆಳ ಸಮುದ್ರ ಸಂಶೋಧನೆ, ಕ್ರಿಟಿಕಲ್ ಮಿನರಲ್ಸ್ ಮತ್ತು ಇಂಧನ ಭದ್ರತೆ ಸೇರಿದಂತೆ ಹಲವು ಹೊಸ ಕ್ಷೇತ್ರಗಳು ಯುವಕರಿಗಾಗಿ ತೆರೆದುಕೊಳ್ಳುತ್ತಿವೆ. ಇಂತಹ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಅವಕಾಶವನ್ನು ಯುವಕರು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಭಾರತದಲ್ಲಿ ರಾಕೆಟ್ ನಿರ್ಮಿಸುವ ಮೊದಲ ವ್ಯಕ್ತಿ, ದೇಶದಲ್ಲೇ ಚಿಪ್ ತಯಾರಿಸುವ ಕ್ಷೇತ್ರಕ್ಕೆ ಪ್ರವೇಶಿಸುವ ಮೊದಲ ವ್ಯಕ್ತಿ ಅಥವಾ ಡ್ರೋನ್ ತಂತ್ರಜ್ಞಾನದಲ್ಲಿ ಹೊಸ ಸಾಧನೆ ಮಾಡುವ ಮೊದಲ ವ್ಯಕ್ತಿ ತಮ್ಮ ಕುಟುಂಬದಲ್ಲೇ ತಾವಾಗಿರಬಹುದು. ಅಂತಹ ಹೊಸ ಅವಕಾಶಗಳನ್ನು ಯುವಕರು ಬಳಸಿಕೊಂಡು ‘ನನ್ನ ಕುಟುಂಬದ ಈ ಕ್ಷೇತ್ರದಲ್ಲಿ ಮೊದಲಿಗ ನಾನು’ ಎಂದು ಹೆಮ್ಮೆಯಿಂದ ಹೇಳುವಂತಹ ಸಾಧನೆ ಮಾಡಬೇಕು ಎಂದು ಪ್ರಧಾನಿ ಹೇಳಿದರು.

‘ಚಿಪ್‌ನಿಂದ ಹಡಗಿನವರೆಗೆ’ ಭಾರತದಲ್ಲೇ ಉತ್ಪಾದಿಸುವ ಸಾಮರ್ಥ್ಯವನ್ನು ದೇಶ ಬೆಳೆಸಿಕೊಳ್ಳಬೇಕು ಎಂದು ಮೋದಿ ಹೇಳಿದರು. ಆತ್ಮನಿರ್ಭರ ಭಾರತವು ಕೇವಲ ಆರ್ಥಿಕ ಸ್ವಾವಲಂಬನೆಯ ವಿಚಾರವಲ್ಲ. ತಂತ್ರಜ್ಞಾನ, ಸಂಶೋಧನೆ, ಕೈಗಾರಿಕೆ ಮತ್ತು ರಾಷ್ಟ್ರೀಯ ಭದ್ರತೆಯಲ್ಲೂ ಭಾರತ ಸ್ವಾವಲಂಬಿಯಾಗಬೇಕು ಎಂಬುದು ಅದರ ಉದ್ದೇಶ ಎಂದು ವಿವರಿಸಿದರು.

ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು. ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ, ಪ್ರಧಾನಮಂತ್ರಿಗಳ ಸಂಶೋಧನಾ ಫೆಲೋಶಿಪ್ ಮತ್ತು ಸಂಶೋಧನೆ, ಅಭಿವೃದ್ಧಿ ಹಾಗೂ ಆವಿಷ್ಕಾರ ಯೋಜನೆಗಳ ಮೂಲಕ ದೇಶದಲ್ಲಿ ಸಂಶೋಧನಾ ಪರಿಸರವನ್ನು ಬಲಪಡಿಸಲಾಗುತ್ತಿದೆ. ಸಂಶೋಧನಾ ಕ್ಷೇತ್ರಕ್ಕೆ ₹1 ಲಕ್ಷ ಕೋಟಿವರೆಗೆ ಹಣಕಾಸು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ‘ಒನ್ ನೇಷನ್, ಒನ್ ಸಬ್‌ಸ್ಕ್ರಿಪ್ಶನ್’ ಯೋಜನೆಯ ಮೂಲಕ ದೇಶದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಜಾಗತಿಕ ಸಂಶೋಧನಾ ಜರ್ನಲ್‌ಗಳನ್ನು ತಲುಪಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಮುಂದಿನ ಮೂರು ದಶಕಗಳಲ್ಲಿ ವಿದ್ಯಾರ್ಥಿಗಳು ತೆಗೆದುಕೊಳ್ಳುವ ನಿರ್ಧಾರಗಳು ಭಾರತದ ಅಭಿವೃದ್ಧಿಯ ದಿಕ್ಕಿನ ಮೇಲೂ ಪರಿಣಾಮ ಬೀರಲಿವೆ. ಉದ್ಯೋಗ ಆಯ್ಕೆ ಮಾಡಿಕೊಳ್ಳುವಾಗ, ಉದ್ಯಮ ಆರಂಭಿಸುವಾಗ ಅಥವಾ ಸಂಶೋಧನಾ ಕ್ಷೇತ್ರಕ್ಕೆ ಪ್ರವೇಶಿಸುವಾಗ ‘ಇದರಿಂದ ದೇಶಕ್ಕೆ ಏನು ಪ್ರಯೋಜನ?’ ಮತ್ತು ‘ಯಾವ ರಾಷ್ಟ್ರೀಯ ಅಗತ್ಯವನ್ನು ಇದು ಪೂರೈಸಲಿದೆ?’ ಎಂಬ ಪ್ರಶ್ನೆಗಳನ್ನು ತಮ್ಮ ಮುಂದೆ ಇಟ್ಟುಕೊಳ್ಳಬೇಕು ಎಂದು ಮೋದಿ ಸಲಹೆ ನೀಡಿದರು.

ಐಐಟಿ ಪದವಿ ಎಂದರೆ ಕೇವಲ ಉತ್ತಮ ಉದ್ಯೋಗ ಅಥವಾ ಹೆಚ್ಚಿನ ವೇತನ ಪಡೆಯುವ ಅರ್ಹತೆಯಲ್ಲ. ಕಠಿಣ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂಬುದಕ್ಕೆ ಅದು ಜಾಗತಿಕ ಪ್ರಮಾಣಪತ್ರವಾಗಬೇಕು ಎಂದು ಪ್ರಧಾನಿ ಹೇಳಿದರು. ಜೀವನದಲ್ಲಿ ಎದುರಾಗುವ ದೊಡ್ಡ ಸಮಸ್ಯೆಗಳನ್ನು ಪ್ರಯೋಗಾಲಯದಲ್ಲಿನ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುವಂತೆ ಸಣ್ಣ ಸಣ್ಣ ಭಾಗಗಳಾಗಿ ವಿಭಜಿಸಿ, ಒಂದೊಂದಾಗಿ ಪರಿಹರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.

ಘಟಿಕೋತ್ಸವದಲ್ಲಿ ಪದಕ ವಿಜೇತರನ್ನು ಅಭಿನಂದಿಸಿದ ಪ್ರಧಾನಿ, ತಾಂತ್ರಿಕ ಶಿಕ್ಷಣ ಮತ್ತು ಉನ್ನತ ಸಾಧನೆಗಳಲ್ಲಿ ಇನ್ನಷ್ಟು ಮಹಿಳೆಯರು ಮುಂಚೂಣಿಗೆ ಬರಬೇಕಾಗಿದೆ ಎಂದು ಹೇಳಿದರು. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತಷ್ಟು ಹೆಚ್ಚಬೇಕು. ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನಾಯಕತ್ವ ವಹಿಸಬೇಕು ಎಂದರು.

ಭಾಷಣದ ವೇಳೆ ಐಐಟಿ ದೆಹಲಿಯ ವಿದ್ಯಾರ್ಥಿ ಜೀವನದ ಹಲವು ನೆನಪುಗಳನ್ನು ಪ್ರಸ್ತಾಪಿಸಿದ ಮೋದಿ, ಹಾಸ್ಟೆಲ್‌ಗಳು, ಸ್ನೇಹಿತರು, ಪ್ರಾಧ್ಯಾಪಕರು ಹಾಗೂ ಕ್ಯಾಂಪಸ್‌ನ ಅನುಭವಗಳನ್ನು ವಿದ್ಯಾರ್ಥಿಗಳು ಜೀವನಪೂರ್ತಿ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು. ಕ್ಯಾಂಪಸ್‌ನಲ್ಲಿ ನಿರ್ಮಾಣವಾಗುವ ಸ್ನೇಹ, ಗುರುಗಳ ಮಾರ್ಗದರ್ಶನ ಮತ್ತು ಸಿಬ್ಬಂದಿಯ ಸಹಕಾರ ಮುಂದಿನ ಜೀವನದಲ್ಲೂ ಅಮೂಲ್ಯ ಸಂಪತ್ತಾಗಿರುತ್ತದೆ ಎಂದು ಹೇಳಿದರು.

ಘಟಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ಐಐಟಿ ದೆಹಲಿಯ ಸೋನಿಪತ್ ಕ್ಯಾಂಪಸ್‌ನಲ್ಲಿ ‘ಪರಮ್ ಪ್ರಜ್ಞಾ’ ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಹೈ-ಪರ್ಫಾರ್ಮೆನ್ಸ್ ಸೂಪರ್‌ಕಂಪ್ಯೂಟಿಂಗ್ ಸೌಲಭ್ಯಕ್ಕೂ ಚಾಲನೆ ನೀಡಿದರು. ಈ ಸೌಲಭ್ಯವು ಕೃತಕ ಬುದ್ಧಿಮತ್ತೆ ಹಾಗೂ ಮುಂದುವರಿದ ಸಂಶೋಧನಾ ಕ್ಷೇತ್ರಗಳಲ್ಲಿ ಭಾರತದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.

ಐಐಟಿ ದೆಹಲಿಯಿಂದ ಪದವಿ ಪಡೆದು ಹೊರಬರುತ್ತಿರುವ ವಿದ್ಯಾರ್ಥಿಗಳು ಕೇವಲ ಉದ್ಯೋಗ ಹುಡುಕುವವರಾಗದೆ, ಹೊಸ ತಂತ್ರಜ್ಞಾನಗಳನ್ನು ರೂಪಿಸುವವರು, ಹೊಸ ಸಮಸ್ಯೆಗಳನ್ನು ಗುರುತಿಸುವವರು, ಪರಿಹಾರಗಳನ್ನು ಸೃಷ್ಟಿಸುವವರು ಮತ್ತು ಭಾರತದ ಭವಿಷ್ಯವನ್ನು ಮುನ್ನಡೆಸುವವರಾಗಬೇಕು ಎಂಬ ಸಂದೇಶವನ್ನು ಪ್ರಧಾನಿ ನೀಡಿದರು. ನಿರಂತರವಾಗಿ ಕಲಿಯುವುದು, ಪ್ರಶ್ನಿಸುವುದು, ಪರಿಹಾರ ಹುಡುಕುವುದು ಮತ್ತು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳದೆ ತಮ್ಮೊಂದಿಗೆ ತಾವೇ ಸ್ಪರ್ಧಿಸುವುದು ಯಶಸ್ಸಿನ ದಾರಿ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

More articles

Latest article

Most read