ರಾಜಧಾನಿ ಬೆಂಗಳೂರಿನ ಮಹಾನಗರದಲ್ಲಿ ಅತ್ಯಾಧುನಿಕ ಸೌಧಗಳು, ಸಾವಿರಾರು ಕೋಟಿ ರೂಪಾಯಿಗಳ ಮೇಲ್ಸೇತುವೆಗಳು ಮತ್ತು ಸುರಂಗ ಮಾರ್ಗಗಳ ಜಾಲ ನಿರ್ಮಾಣವಾಗುತ್ತಿದೆ.ಇದೇ ಹೊತ್ತಿನಲ್ಲಿಅದೇ ರಾಜ್ಯದ ಉತ್ತರ ಭಾಗದ ಕೊನೆಯ ಗಡಿ ಹಳ್ಳಿಯೊಂದರಲ್ಲಿ ಮಗುವೊಂದು ತರಗತಿ ಕೋಣೆಗೆ ಛಾವಣಿಯಿಲ್ಲದೆ, ಶಿಕ್ಷಕರಿಲ್ಲದೆ ಭವಿಷ್ಯದ ಕನಸು ಕಾಣುತ್ತಿದೆ. ಇದು ಕೇವಲ ಎರಡು ಪ್ರದೇಶಗಳ ನಡುವಿನ ಭೌಗೋಳಿಕ ಅಂತರವಲ್ಲ ಕರ್ನಾಟಕದಲ್ಲಿ ಬೆಳೆದು ನಿಂತಿರುವ ಅಭಿವೃದ್ಧಿಯ ಅಸಮಾನತೆಯ ತೀವ್ರ ಸ್ವರೂಪ.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 371(J) ತಿದ್ದುಪಡಿ ಜಾರಿಯಾಗಿ ದಶಕವೇ ಕಳೆದರೂ, ಬೀದರ್, ರಾಯಚೂರು ಮತ್ತು ಯಾದಗಿರಿಯ ಹಳ್ಳಿಗಳಲ್ಲಿ ಈ ಕಾಯ್ದೆ ಜನರ ಬದುಕನ್ನು ನಿಜವಾಗಿಯೂ ಬದಲಾಯಿಸಿತೇ? ಎಂಬ ಪ್ರಶ್ನೆ ಜೀವಂತವಾಗಿದೆ. ಕಾಗದದ ಮೇಲೆ ಹುದ್ದೆಗಳು ಕಾಯ್ದಿರಿಸಲ್ಪಟ್ಟಿವೆ, ಆಯವ್ಯಯದಲ್ಲಿ ನೂರಾರು ಕೋಟಿ ಘೋಷಣೆಯಾಗುತ್ತದೆ. ಆದರೆ ವಾಸ್ತವದಲ್ಲಿ ಸರ್ಕಾರಿ ಶಾಲೆಗಳು ಶಿಕ್ಷಕರಿಲ್ಲದೆ ಖಾಲಿ ಇವೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ ಗರ್ಭಿಣಿಯರು ಮತ್ತು ಸಣ್ಣ ಮಕ್ಕಳು ಸೂಕ್ತ ಚಿಕಿತ್ಸೆಗೆ ಪರದಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ನೆಪದಲ್ಲಿ ನಡೆಯುತ್ತಿರುವ ಪ್ರದರ್ಶನಾತ್ಮಕ ರಾಜಕಾರಣ ಮತ್ತು ಪ್ರಚಾರದ ವಂಚನೆಗಳು ಈ ಭಾಗದ ಜನರನ್ನು ಕೆರಳಿಸಿವೆ. ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ ಎಂಬ ಆಡಳಿತಗಾರರ ಮಾತುಗಳು ಕೇವಲ ಅಂಕಿ-ಅಂಶಗಳಾಗಿ ಉಳಿದಿವೆ. 371(J) ಅಡಿಯಲ್ಲಿ ಸಿಗಬೇಕಿದ್ದ ಉದ್ಯೋಗಗಳು ಹಿಂಬಾಕಿ ಪಟ್ಟಿಗಳಲ್ಲೇ ಕಳೆದುಹೋಗಿ, ಲಕ್ಷಾಂತರ ಯುವಕರು ಇಂದಿಗೂ ನೆರೆ ರಾಜ್ಯಗಳಿಗೆ ಅಥವಾ ಬೆಂಗಳೂರಿಗೆ ದಿನಗೂಲಿ ಕಾರ್ಮಿಕರಾಗಿ ವಲಸೆ ಹೋಗುತ್ತಿದ್ದಾರೆ.
ಬೀದರ್ ಮತ್ತು ಯಾದಗಿರಿಯ ಗಡಿ ಗ್ರಾಮಗಳಲ್ಲಿ ಕನ್ನಡ ಶಾಲೆಗಳ ಸ್ಥಿತಿ ಶೋಚನೀಯವಾಗಿದ್ದು, ನೆರೆಯ ರಾಜ್ಯಗಳ ಪ್ರಭಾವ ಹೆಚ್ಚುತ್ತಿದೆ. ಬೆಂಗಳೂರು ಕೇಂದ್ರಿತ ಅಭಿವೃದ್ಧಿ ಮಾದರಿಯನ್ನು ಬದಲಾಯಿಸಿ, ಗಡಿ ಭಾಗಗಳಿಗೆ ನೈಜ ಅಧಿಕಾರ ಹಾಗೂ ಸಂಪನ್ಮೂಲ ಹಂಚದಿದ್ದರೆ ಈ ಅಸಮಾನತೆಯ ಕಂದಕ ದೊಡ್ಡದಾಗಲಿದೆ. 371(J) ಕೇವಲ ಕಾಗದದ ತಿದ್ದುಪಡಿಯಾಗದೆ, ಅಂತಿಮ ಸಾಲಿನಲ್ಲಿ ನಿಂತಿರುವ ಮಗುವಿನ ಕೈಗೆ ಸಿಗುವ ಪುಸ್ತಕ ಮತ್ತು ರೋಗಿಗೆ ಸಿಗುವ ಔಷಧಿಯಾಗಬೇಕಿದೆ.

ಸುಜಾತ ನಾಯಕ್


