ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಕನ್ನಡವನ್ನು ಒಂದು ವಿಷಯವಾಗಿ ಕಲಿತ ಪದವೀಧರರಿಗೆ ಅವಕಾಶ ನಿರಾಕರಿಸಿ, ಸಮಾಜ ವಿಜ್ಞಾನ ಬೋಧಕರಿಂದಲೇ ಕನ್ನಡ ಬೋಧಿಸಲು ಹೊರಟಿರುವ ಶಿಕ್ಷಣ ಇಲಾಖೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕಿಡಿಕಾರಿದ್ದಾರೆ.
ನೇರವಾಗಿ ಹೇಳುತ್ತಿದ್ದೇನೆ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡ ಶಿಕ್ಷಕರ ನೇಮಕಾತಿ ಆಗದೆ ಹೋದರೆ ಇದಕ್ಕೆ ಕಾರಣಕರ್ತ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ. ಇದರಲ್ಲಿ ಯಾವ ಮುಲಾಜು ಇಲ್ಲ. ಬೇಕಿದ್ದರೆ ಈಗಲೇ ಪೊಲೀಸ್ ಭದ್ರತೆ ಪಡೆದುಕೊಂಡು ಬಿಡಿ. ನೀವು ನಿಮ್ಮ ಕಚೇರಿಗಳಿಗೆ ಕಾಲಿಡಲು ನಾವು ಬಿಡುವುದಿಲ್ಲ ಎಂದು ಅವರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿಕೆ ನೀಡಿರುವ ಅವರು, ಕನ್ನಡ ಭಾಷೆಯ ಪಾಠ ವನ್ನು ಸಮಾಜ ವಿಜ್ಞಾನ ಬೋಧಕರಿಂದ ಮಾಡಿಸುತ್ತಾರಂತೆ. ಕನ್ನಡ ಐಚ್ಛಿಕ ತೆಗೆದುಕೊಂಡು ಪದವಿ ಮಾಡಿದವರು ಏನು ಮಾಡಬೇಕು? ಆ ಲಕ್ಷಾಂತರ ಯುವಕ ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳಬೇಕೆ? ಎಂದು ಪ್ರಶ್ನಿಸಿದ್ದಾರೆ.
ಇವತ್ತು, ನಾಳೆ ಈ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ಅವಕಾಶ ಇದೆಯಂತೆ. ನಾನು ಬಹಿರಂಗವಾಗಿಯೇ ಆಕ್ಷೇಪಣೆ ಸಲ್ಲಿಸುತ್ತಿದ್ದೇನೆ. ಇದನ್ನು ಅವರು ಆಕ್ಷೇಪಣೆ ಎಂದಾದರೂ ಭಾವಿಸಲಿ ಅಥವಾ, ಎಚ್ಚರಿಕೆ, ಬೆದರಿಕೆ ಎಂದಾದರೂ ಭಾವಿಸಲಿ. ಕನ್ನಡ ಶಿಕ್ಷಕರಿಗೆ ಅನ್ಯಾಯವಾದರೆ ಇದಕ್ಕೆ ಕಾರಣಕರ್ತರನ್ನು ಕರ್ನಾಟಕದ ನೆಲದಲ್ಲಿ ಓಡಾಡಲು ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಐಚ್ಛಿಕ ವಿಷಯದಲ್ಲಿ ಪದವಿ, ಬಿ.ಎಡ್., ಟಿಇಟಿ ಸೇರಿದಂತೆ ಅಗತ್ಯ ವಿದ್ಯಾರ್ಹತೆಗಳನ್ನು ಪಡೆದು ವರ್ಷಗಳಿಂದ ಶಿಕ್ಷಕರ ನೇಮಕಾತಿಗಾಗಿ ಕಾಯುತ್ತಿರುವ ಲಕ್ಷಾಂತರ ಕನ್ನಡ ಪದವೀಧರರು ಏನು ತಪ್ಪು ಮಾಡಿದ್ದಾರೆ? ಅವರಿಗೆ ಯಾಕೆ ಈ ಅನ್ಯಾಯ? ಈ ದ್ರೋಹವನ್ನು ನಾವು ಸಹಿಸುವುದಿಲ್ಲ.
ರಾಜ್ಯ ಸರ್ಕಾರ ಏನು ಮಾಡುತ್ತಿದೆ? ಮಾನ್ಯ ಮುಖ್ಯಮಂತ್ರಿಗಳಿಗೆ ಈ ದುಷ್ಟ ಹುನ್ನಾರದ ಮಾಹಿತಿ ಇಲ್ಲವೇ? ಅಥವಾ ಅಧಿಕಾರಿಗಳ ಕೈಗೆ ಎಲ್ಲ ಅಧಿಕಾರವನ್ನು ಕೊಟ್ಟು ಕೂರಿಸಲಾಗಿದೆಯೇ?
ಸರ್ಕಾರಕ್ಕೂ ನನ್ನ ಎಚ್ಚರಿಕೆ, ಮೊದಲು ಆಗಿರುವ ಅನಾಹುತ ಸರಿಪಡಿಸಿ. ಇಲ್ಲವಾದಲ್ಲಿ ಇದರ ಪರಿಣಾಮವನ್ನು ನೀವೂ ಕೂಡ ಅನುಭವಿಸಬೇಕಾದೀತು. ಕನ್ನಡದ ಕೊಲೆ ನಡೆಯುತ್ತಿರುವಾಗ ಸರ್ಕಾರವೂ ನಮ್ಮ ಪಾಲಿಗೆ ಸತ್ತ ಸರ್ಕಾರವೇ ಆಗಿರುತ್ತದೆ, ನೆನಪಿಟ್ಟುಕೊಳ್ಳಿ ಎಂದು ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.


