ನವದೆಹಲಿ, ಜುಲೈ 29: ಜುಲೈ 20ರಂದು ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಸಿಜೆಪಿ (CJP) ಪ್ರತಿಭಟನೆಯ ವೇಳೆ ಕಲ್ಲು ಹಾಗೂ ಜಲ್ಲಿಯಿಂದ ತುಂಬಿದ್ದ ಡಂಪರ್ ಲಾರಿಯೊಂದು ಕಾಣಿಸಿಕೊಂಡ ಘಟನೆ ಕುರಿತು ಸ್ವತಂತ್ರ ಮಾಧ್ಯಮ ನ್ಯೂಸ್ಲಾಂಡ್ರಿ ತನಿಖಾ ವರದಿ ಪ್ರಕಟಿಸಿದ್ದು, ಲಾರಿಯ ಚಲನವಲನ ಮತ್ತು ದೆಹಲಿ ಪೊಲೀಸರ ವಿವಿಧ ಅಧಿಕಾರಿಗಳು ನೀಡಿರುವ ಹೇಳಿಕೆಗಳಲ್ಲಿ ವೈರುಧ್ಯಗಳಿವೆ ಎಂದು ವರದಿ ಹೇಳಿದೆ.
ನ್ಯೂಸ್ಲಾಂಡ್ರಿ ವರದಿ ಪ್ರಕಾರ, ಪ್ರತಿಭಟನೆಯ ದಿನ ಬೆಳಿಗ್ಗೆ ಜಂತರ್ ಮಂತರ್ ಸಮೀಪ ಕಲ್ಲು ತುಂಬಿದ್ದ ಡಂಪರ್ ಲಾರಿ ಕಂಡುಬಂದಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳು ವೈರಲ್ ಆಗಿದ್ದವು. ಬಳಿಕ ಲಾರಿಯನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು.
ಲಾರಿಯ ನೋಂದಣಿ ಸಂಖ್ಯೆಯನ್ನು ಆಧರಿಸಿ ನಡೆಸಿದ ಪರಿಶೀಲನೆಯಲ್ಲಿ, ಈ ವಾಹನ ಜುಲೈ 16ರಂದು ಸಂಭವಿಸಿದ್ದ ರಸ್ತೆ ಅಪಘಾತದ ಬಳಿಕ ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದ ವಾಹನವಾಗಿದ್ದು, ಸಂಸದ್ ಮಾರ್ಗ ಪೊಲೀಸ್ ಠಾಣೆಯ ಮಲ್ಖಾನಾ (ವಶಪಡಿಸಿಕೊಂಡ ವಸ್ತುಗಳ ಸಂಗ್ರಹ ಘಟಕ) ವ್ಯಾಪ್ತಿಯಲ್ಲಿತ್ತು ಎಂದು ವರದಿ ತಿಳಿಸಿದೆ. ಅಪಘಾತದಲ್ಲಿ ಏಳು ಮಂದಿ ಗಾಯಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿತ್ತು ಎಂದು ನ್ಯೂಸ್ಲಾಂಡ್ರಿ ಉಲ್ಲೇಖಿಸಿದೆ.

ಈ ಲಾರಿ ನಂತರ ಜಂತರ್ ಮಂತರ್, ಭಲಸ್ವಾ ಪ್ರದೇಶ, ಇಂಡಿಯನ್ ಯೂತ್ ಕಾಂಗ್ರೆಸ್ ಕಚೇರಿ ಸಮೀಪ ಸೇರಿದಂತೆ ವಿವಿಧ ಸ್ಥಳಗಳಿಗೆ ಸ್ಥಳಾಂತರಗೊಂಡಿರುವುದಾಗಿ ವರದಿ ಹೇಳಿದೆ. ಆದರೆ, ಈ ಸ್ಥಳಾಂತರದ ಕುರಿತು ದೆಹಲಿ ಪೊಲೀಸರ ವಿವಿಧ ಅಧಿಕಾರಿಗಳು ನೀಡಿರುವ ವಿವರಣೆಗಳು ಪರಸ್ಪರ ಹೊಂದಿಕೆಯಾಗುವುದಿಲ್ಲ ಎಂದು ನ್ಯೂಸ್ಲಾಂಡ್ರಿ ಪ್ರಶ್ನಿಸಿದೆ. ಒಬ್ಬ ಅಧಿಕಾರಿ ಲಾರಿಯನ್ನು ವೈರಲ್ ವಿಡಿಯೊಗಳ ನಂತರ ಖಾಲಿ ಮಾಡಲಾಗಿದೆ ಎಂದರೆ, ಮತ್ತೊಬ್ಬ ಅಧಿಕಾರಿ ಜಾಗದ ಕೊರತೆಯಿಂದ ಸ್ಥಳಾಂತರಿಸಲಾಗಿದೆ ಎಂದಿದ್ದಾರೆ. ಠಾಣೆಯ ಎಸ್ಎಚ್ಒ ಮಾತ್ರ ಲಾರಿಯನ್ನು ಪ್ರತಿಭಟನೆಗೂ ಒಂದು ದಿನ ಮುಂಚೆಯೇ ಖಾಲಿ ಮಾಡಲಾಗಿತ್ತು ಎಂದು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಈ ಮೂರು ಹೇಳಿಕೆಗಳು ಒಂದೇ ವೇಳೆ ಸತ್ಯವಾಗಲು ಸಾಧ್ಯವಿಲ್ಲ ಎಂದು ನ್ಯೂಸ್ಲಾಂಡ್ರಿ ಹೇಳಿದ್ದು, ಲಾರಿ ಯಾವಾಗ, ಏಕೆ ಮತ್ತು ಯಾರ ನಿರ್ದೇಶನದ ಮೇರೆಗೆ ಸ್ಥಳಾಂತರಗೊಂಡಿತು ಎಂಬ ಬಗ್ಗೆ ಸ್ಪಷ್ಟನೆ ಅಗತ್ಯವಿದೆ ಎಂದು ಪ್ರಶ್ನಿಸಿದೆ.
ಆದಾಗ್ಯೂ, ಈ ಲಾರಿಯನ್ನು ಪ್ರತಿಭಟನಾಕಾರರನ್ನು ಸಿಕ್ಕಿಹಾಕಲು ಅಥವಾ ಹಿಂಸಾಚಾರ ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಇರಿಸಲಾಗಿತ್ತು ಎಂಬುದನ್ನು ನ್ಯೂಸ್ಲಾಂಡ್ರಿ ಸಾಬೀತುಪಡಿಸಿಲ್ಲ. ತನ್ನ ತನಿಖೆಯಲ್ಲಿ ಪೊಲೀಸರ ವಶದಲ್ಲಿದ್ದ ವಾಹನದ ಚಲನವಲನ ಮತ್ತು ಅಧಿಕಾರಿಗಳ ಹೇಳಿಕೆಗಳಲ್ಲಿನ ವೈರುಧ್ಯಗಳನ್ನು ಮಾತ್ರ ದಾಖಲಿಸಿದೆ.
ಇನ್ನೊಂದೆಡೆ, ದೆಹಲಿ ಪೊಲೀಸರು ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಲಾರಿಯು ಜುಲೈ 16ರ ಅಪಘಾತದ ನಂತರ ಕಾನೂನು ಪ್ರಕ್ರಿಯೆಯ ಭಾಗವಾಗಿ ವಶದಲ್ಲಿದ್ದ ವಾಹನವಾಗಿತ್ತು ಹಾಗೂ ಪ್ರತಿಭಟನಾ ಸ್ಥಳದ ಬಳಿ ಅದರ ಉಪಸ್ಥಿತಿ ಕಾಕತಾಳೀಯವಾಗಿದ್ದು, ಯಾವುದೇ ಸಂಚಿನ ಭಾಗವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

