ಉಡುಪಿ: ನಟ ಪ್ರಕಾಶ್ ರಾಜ್ ಅವರನ್ನು ಉದ್ದೇಶಿಸಿ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ನೀಡಿರುವ “ಮೀನಿಗೆ ಆಹಾರವಾಗಬಹುದು” ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.
ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ವಿರುದ್ಧ ಇಲ್ಲಿನ ಜಟ್ಕಾ ಸ್ಟಾಂಡ್ ಬಳಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ಈ ಬೆದರಿಕೆ ಒಡ್ಡಲಾಗಿದೆ.
ಈಗ ಕಲಾವಿದರ ತಲೆಯಲ್ಲೂ ವಿಷಬೀಜ ಬಿತ್ತುವ ಕಾರ್ಯ ನಡೆಯುತ್ತಿದೆ. ಕರಾವಳಿಯವರೇ ಆದ ಪ್ರಕಾಶ್ ರಾಜ್ ಅವರೇ, ಒಂದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ, ಇಲ್ಲಿಗೆ ಬಂದು ಅಧಿಕಪ್ರಸಂಗ ಮಾಡಿದರೆ ಸಮುದ್ರದಲ್ಲಿ ಏಳಬೇಕಾದೀತು. ನಿಮ್ಮ ಜೀವನ ಮೀನುಗಳಿಗೆ ಆಹಾರವಾಗಬಹುದು ಎಂದು ಹೇಳಿದ್ದಾರೆ
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕ ವ್ಯಕ್ತಿಯೊಬ್ಬರಿಗೆ ಜನಪ್ರತಿನಿಧಿಯೇ ಇಂತಹ ಭಾಷೆ ಬಳಸಿರುವುದು ಸೂಕ್ತವೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ್ ರಾಜ್ ಇತ್ತೀಚೆಗೆ ಪಾರದರ್ಶಕ ತನಿಖೆ ನಡೆಸಬೇಕು ಹಾಗೂ ಸತ್ಯ ಹೊರಬರಬೇಕು ಎಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಬಿಜೆಪಿ ನಾಯಕರು ಮತ್ತು ಕೆಲ ಹಿಂದೂಪರ ಸಂಘಟನೆಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ. ಅಷ್ಟೇ ಅಲ್ಲದೆ ಕಾಕ್ರೋಚ್ ಜನತಾ ಪಾರ್ಟಿ ಸಂಘಟಿಸಿದ್ದ ವಿದ್ಯಾರ್ಥಿಗಳ ಪರವಾದ ಪ್ರತಿಭಟನೆಯಲ್ಲಿ ಪ್ರಕಾಶ್ ರಾಜ್ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಯಶ್‌ಪಾಲ್ ಸುವರ್ಣ ಅವರ ಈ ಹೇಳಿಕೆಗೆ ಸಂಬಂಧಿಸಿದಂತೆ ಪ್ರಕಾಶ್ ರಾಜ್ ಅವರಿಂದ ತಕ್ಷಣದ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಈ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳು ಬಳಸುವ ಭಾಷೆ ಮತ್ತು ರಾಜಕೀಯ ಸಂವಾದದ ಮಟ್ಟದ ಕುರಿತು ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.

