ಬೆಂಗಳೂರು: ಎಲ್ಲರ ಮುಂದೆ ಬಾಸುಂಡೆ ಬರುವ ಹಾಗೇ ಹೊಡೆದಿದ್ದಕ್ಕೆ ಮನನೊಂದು 7ನೇ ತರಗತಿ ವಿದ್ಯಾರ್ಥಿ ಕಟ್ಟಡದಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಾಲೆಯಲ್ಲಿ ಶಿಕ್ಷಕರು ನೀಡಿದ ಅತಿಯಾದ ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು ತಾಳಲಾರದೆ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಬಿಲ್ಡಿಂಗ್ ಮೇಲಿಂದ ಹಾರಿದ್ದಾನೆ. ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮರಿಯಪ್ಪನಪಾಳ್ಯದಲ್ಲಿರುವ 13 ವರ್ಷದ ವಿದ್ಯಾರ್ಥಿ ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಶಾಲೆಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಮನನೊಂದ ವಿದ್ಯಾರ್ಥಿ ಮರಿಯಪ್ಪನಪಾಳ್ಯದಲ್ಲಿರುವ ತನ್ನ ಮನೆಯ ಬಿಲ್ಡಿಂಗ್ನಿಂದ ಬಿದ್ದ ರಭಸಕ್ಕೆ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡು ಅಸ್ವಸ್ಥನಾಗಿದ್ದು, ತಕ್ಷಣವೇ ಆತನನ್ನು ನಾಯಂಡಹಳ್ಳಿಯ ನೇಟಸ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗೆ ತುರ್ತು ಚಿಕಿತ್ಸೆ ಮುಂದುವರಿದಿದೆ.

