ಬೆಂಗಳೂರು : ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿ ಬಿಟ್ಟಿರುವ ವಾಹನಗಳ ತೆರವು ಹಾಗೂ ಹರಾಜು ಹಾಕಲು ಜಿಬಿಎ ನಿರ್ಧರಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ನಗರ ಪಾಲಿಕೆಗಳಲ್ಲಿ ಜಿಬಿಎ (GBA) ಕಾಯ್ದೆ 2024 ಸೆಕ್ಷನ್ 324ರ ಅನ್ವಯ ಜುಲೈ 10 ರಿಂದ ಅನಾಥ ವಾಹನಗಳ ತೆರವು ಕಾರ್ಯವನ್ನು ಆರಂಭಿಸಲಾಗುತ್ತಿದೆ.
ರಸ್ತೆಗಳು ತೆರೆದ ಪ್ರದೇಶಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ದಿನಗಳಿಂದ ಅನಾಥವಾಗಿ ಬಿಡಲಾದ ವಾಹನಗಳನ್ನು ಗುರುತಿಸಿ 5 ನಗರ ಪಾಲಿಕೆಗಳು ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳು ಅವುಗಳ ವಿರುದ್ಧ ಜಂಟಿ ಕಾರ್ಯಾಚರಣೆಯ ಮೂಲಕ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ.
ಸಾರ್ವಜನಿಕರಿಗೆ ಸೂಚನೆ: ರಸ್ತೆಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಯಾವುದೇ ವಾಹನಗಳನ್ನು ಬಿಟ್ಟಿದ್ದರೆ ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ, ಸದರಿ ವಾಹನಗಳನ್ನು ನಿಮ್ಮ ಸ್ವಂತ ಜಾಗಕ್ಕೆ ಸ್ಥಳಾಂತರಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ತಪ್ಪಿದಲ್ಲಿ ವಾಹನಗಳನ್ನು ಜಪ್ತಿ ಮಾಡಿ ಹರಾಜು ಹಾಕಲಾಗುವುದು ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ನೋಟಿಸ್ ಅವಧಿ: ಗುರುತಿಸಲಾದ ಅನಾಥ ವಾಹನಗಳಿಗೆ 7 ದಿನಗಳ ಕಾಲಾವಕಾಶ ನೀಡಿ ಅಧಿಕೃತ ಸ್ಪೀಕರ್ ಮಾದರಿಯ ನೋಟಿಸ್ ಅಂಟಿಸಲಾಗುವುದು. ನೋಟಿಸ್ ಅಂಟಿಸಿದ ವಾಹನಗಳ ಚಕ್ರಕೆ, ವೀಲ್ ಕ್ಯಾಂನ್ ಅಳವಡಿಸಲಾಗುವುದು.
ವಾಹನ ಜಪ್ತಿ : ನೋಟಿಸ್ ನೀಡಿದ 7 ದಿನಗಳ ಒಳಗಾಗಿ ವಾಹನಗಳ ಮಾಲೀಕರು ವಾಹನಗಳನ್ನು ತೆರವುಗೊಳಿಸದಿದ್ದರೆ, ಅಂತಹ ವಾಹನಗಳನ್ನು ಎಳೆದುಕೊಂಡು ಹೋಗಿ (Tow) ಜಪ್ತಿ ಮಾಡಲಾಗುವುದು.
ಬಹಿರಂಗ ಹರಾಜು: ಜಪ್ತಿ ಮಾಡಲಾದ ಎಲ್ಲಾ ವಾಹನಗಳನ್ನು ನಿಯಮಾನುಸಾರ ಬಹಿರಂಗ ಹರಾಜು ಮಾಡಲು ಜಿಬಿಎ ನಿರ್ಧಾರ ಮಾಡಿದೆ.

