ಇರಾನ್ : ಅಮೆರಿಕದ ಹಿಂದಿನ ವಾಯುದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಬುಧವಾರ ಬಹ್ರೇನ್ ಮತ್ತು ಕುವೈತ್ ಮೇಲೆ ದಾಳಿ ನಡೆಸಿತು. ಬಹ್ರೇನ್‌ನಲ್ಲಿರುವ ಅಮೆರಿಕದ 5ನೇ ನೌಕಾಪಡೆಯ ಪ್ರಧಾನ ಕಚೇರಿ ಹಾಗೂ ಕುವೈತ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನ ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ.
ಕದನ ವಿರಾಮ ಪರಿಣಾಮಕಾರಿಯಾಗಿ ಕೊನೆಗೊಂಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ನಂತರ ಅಮೆರಿಕ ಹೊಸ ದಾಳಿಗಳನ್ನು ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕುವೈತ್ ಮೇಲೆ ದಾಳಿ ನಡೆಸಿದ್ದು, ಗುರುವಾರ ತನ್ನ ವಾಯು ರಕ್ಷಣಾ ವ್ಯವಸ್ಥೆಗಳು “ಪ್ರತಿಕೂಲ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು” ತಡೆದಿವೆ ಎಂದು ಕುವೈತ್ ಸೇನೆ ಹೇಳಿದೆ.
90 ಮಿಲಿಟರಿ ಗುರಿಗಳ ಮೇಲೆ ದಾಳಿ
ಇರಾನ್‌ನ ಸರ್ಕಾರಿ ಮಾಧ್ಯಮಗಳ ವರದಿ ಪ್ರಕಾರ, ಅಬು ಮೂಸಾ ದ್ವೀಪದಲ್ಲಿ ಒಟ್ಟು 10 ಸ್ಫೋಟಗಳು ಸಂಭವಿಸಿವೆ. ಚಾಬಹಾರ್ ಮತ್ತು ಕೊನಾರಕ್‌ನಲ್ಲಿಯೂ ಹತ್ತು ಸ್ಫೋಟಗಳು ಸಂಭವಿಸಿವೆ. ಈ ವೇಳೆ ಅಗ್ನಿಜ್ವಾಲೆ ಮುಗಿಲೆತ್ತರಕ್ಕೆ ಚಿಮ್ಮುತ್ತಿರುವುದು ಕಂಡುಬಂದಿದೆ. ಈ ಫೋಟೋವನ್ನ ಖುದ್ದು ಅಮೆರಿಕ ಅದ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರುತ್ ಸೋಷಿಯಲ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚಿನ ದಾಳಿಯ ಅಲೆಯಲ್ಲಿ ಸುಮಾರು 90 ಇರಾನಿನ ಮಿಲಿಟರಿ ಗುರಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಸೇನಾ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಗುರಿಗಳಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳು, ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹಣಾ ಸೌಲಭ್ಯಗಳು ಮತ್ತು ಇತರ ಮಿಲಿಟರಿ ಸ್ವತ್ತುಗಳು ಸೇರಿವೆ.
ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ (CENTCOM) X ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯ ಪ್ರಕಾರ, “ಹೋರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗು ಸಾಗಣೆ ಮತ್ತು ಮುಗ್ಧ ನಾಗರಿಕ ನಾವಿಕರ ಮೇಲೆ ದಾಳಿ ಮಾಡುವ ಇರಾನ್‌ನ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸಲು ಅಮೆರಿಕ ಜುಲೈ 8 ರಂದು ಇರಾನ್ ವಿರುದ್ಧ ಹೆಚ್ಚುವರಿ ಸುತ್ತಿನ ದಾಳಿಗಳನ್ನು ಪೂರ್ಣಗೊಳಿಸಿತು.” ಎಂದು ಹೇಳಿಕೆ ನೀಡಿದೆ.

