ಬೆಂಗಳೂರು : ಸ್ವಾತಂತ್ರ್ಯ ಸೇನಾನಿ ದಿ. ಎಚ್.ಎಸ್. ದೊರೆಸ್ವಾಮಿ ಅವರಿಗೆ ಕರ್ನಾಟಕದ ಗೌರವಾರ್ಪಣೆ ಕಾರ್ಯಕ್ರಮವನ್ನು ನಾಳೆ ಅಂದರೆ ಮೇ 26 ರಂದು ಬೆಳಗ್ಗೆ 10.30 ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಎಚ್.ಎಸ್ .ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನ, ಡಾ.ಮನಮೋಹನ್ ಸಿಂಗ್ ಬೆಂಗಳೂರು ವಿಶ್ವವಿದ್ಯಾಲಯ, ಮಹಾತ್ಮ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಗೌರಿ ಮೀಡಿಯಾ ಟ್ರಸ್ಟ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಗೌರಿ ಮೀಡಿಯಾ ಟ್ರಸ್ಟ್ ವತಿಯಿಂದ ಪ್ರಕಟಗೊಂಡಿರುವ ದೊರೆಸ್ವಾಮಿ ಅವರ ಅಂಕಣ ಬರಹಗಳ ಕೊನೆಯ ಕಂತು ʼನೂರರ ನೋಟʼ ಭಾಗ -2 ಕೃತಿ ಲೋಕಾರ್ಪಣೆಗೊಳ್ಳಲಿದೆ.
ಮುಖ್ಯ ಅತಿಥಿಗಳಾಗಿ ಮಾನವ ಹಕ್ಕುಗಳ ಹೋರಾಟಗಾರರಾದ ತೀಸ್ತಾ ಸೆಟಲ್ವಾಡ್, ಸಚಿವರಾದ ದಿನೇಶ್ ಗುಂಡೂರಾವ್, ಎಂ.ಸಿ. ಸುಧಾಕರ್, ಯುವ ಹೋರಾಟಗಾರ ಜಿಗ್ನೇಶ್ ಮೇವಾನಿ, ಶಾಸಕ ರಿಜ್ವಾನ್ ಆರ್ಷದ್ ಭಾಗವಹಿಲಿದ್ದಾರೆ.



ಇದೇ ಸಂದರ್ಭದಲ್ಲಿ ಡಾ.ಎಚ್.ಎಸ್. ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಮನವಿ ಪತ್ರವನ್ನು ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನದ ಟ್ರಸ್ಟಿ ಸಿರಿಮನೆ ನಾಗರಾಜ್ ಸಲ್ಲಿಸಲಿದ್ದಾರೆ.
ಬಳಿಕ ದೊರೆಸ್ವಾಮಿ ಅವರ ಬದುಕು ಮತ್ತು ಸ್ವಾತಂತ್ರ್ಯ ಚಳವಳಿ, ರಚನಾತ್ಮಕ ಕಾರ್ಯಚಟುವಟಿಕೆಗಳು, ಎಡೆಬಿಡದ ಹೋರಾಟಗಳು, ಕನಸು-ಪ್ರಸ್ತುತತೆ ಕುರಿತು ಸುದೀರ್ಘ ಗೋಷ್ಠಿಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ನ್ಯಾ. ವಿ. ಗೋಪಾಲಗೌಡ, ಡಾ.ಸಿ.ಎನ್. ಮಂಜುನಾಥ್, ದರ್ಶನ್ ಪುಟ್ಟಣ್ಣಯ್ಯ, ಡಾ.ಎಲ್. ಹನುಮಂತಯ್ಯ, ಟಿ.ಎ. ನಾರಾಯಣಗೌಡ, ಪ್ರೊ.ಬಿ.ಕೆ ಚಂದ್ರಶೇಖರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

