ಕೇರಳದಲ್ಲಿ ಕಾಂಗ್ರೆಸ್ ನ ವಿ.ಡಿ.ಸತೀಶನ್ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ‘ಮಿನಿಮೋಹನ್ ಮೋಹನ್’ ಅವರು ಬರೆದ ಈ ಲೇಖನ ಅನೇಕ ಒಳನೋಟಗಳನ್ನು ಪರಿಚಯಿಸುತ್ತದೆ. ಅವರು ಕೇರಳಂ ರಾಜಕೀಯವು ಕಾರ್ಯಕರ್ತರು, ವಿದ್ಯಾರ್ಥಿ ಚಳುವಳಿ, ತಳಮಟ್ಟದ ಸಂಘಟನೆಯ ದಿನಗಳಿಂದ ಡಿಜಿಟಲ್ ಯುಗದ, ವ್ಯಕ್ತಿತ್ವ ಮೇಲುಗೈ ಪಡೆದ ಮತ್ತು ಒಂದು ಬಗೆಯ ಮ್ಯಾನುಪಲೇಶನ್ ರಾಜಕೀಯಕ್ಕೆ ಮಗ್ಗಲು ಬದಲಿಸಿದೆಯೇ ಎನ್ನುವ ಚರ್ಚೆ ಮಂಡಿಸಿದ್ದಾರೆ. ಅನೇಕ ಆಯಾಮಗಳನ್ನು ಒಳಗೊಂಡ, ಪೂರ್ವಗ್ರಹಪೀಡಿತ ಅಲ್ಲದ ಮತ್ತು ಮುಕ್ತ ಸಂವಾದಕ್ಕೆ ಆಹ್ವಾನಿಸುವ ಈ ಪೊಲಿಟಿಕಲ್ ಬೀಟ್ ಇತ್ತೀಚಿನ ಜರ್ನಲಿಸಂನಲ್ಲಿ ಕಂಡು ಬಂದಿರಲಿಲ್ಲ. ಸ್ಥೂಲವಾಗಿ ಕೇರಳದ ಮುಂದಿನ ರಾಜಕೀಯ ಚಿತ್ರಣವನ್ನು ಕಟ್ಟಿಕೊಡುವ ಈ ಪೊಲಿಟಿಕಲ್ ಬರಹ ಮಹತ್ವದ್ದಾಗಿದೆ. ಈ ಕಾರಣಕ್ಕೆ ಅನುವಾದಿಸಿದ್ದೇನೆ – ಬಿ ಶ್ರೀಪಾದ ಭಟ್,
ಸಮಕಾಲೀನ ಕೇರಳ ರಾಜಕೀಯದಲ್ಲಿ ವಿ. ಡಿ. ಸತೀಶನ್ ಅವರ ನಾಯಕತ್ವದ ಅಧಿಕಾರವು ಬಹುಶಃ ಅತ್ಯಂತ ಮಹತ್ವದ ರಾಜಕೀಯ ಬೆಳವಣಿಗೆಯಾಗಿದೆ. ಕೇರಳದಲ್ಲಿ ಇದಕ್ಕೂ ಮೊದಲು ಮುಖ್ಯಮಂತ್ರಿಗಳು ಬಂದಿದ್ದಾರೆ, ಹೋಗಿದ್ದಾರೆ. ಜನಪ್ರಿಯ ನಾಯಕರು ಕೂಡ ಉದಯಿಸಿದ್ದಾರೆ. ಆದರೆ ಸತೀಶನ್ ಅವರ ರಾಜಕೀಯ ಬೆಳವಣಿಗೆಯೇ ಮೂಲತಃ ವಿಭಿನ್ನವಾಗಿದೆ. ಇದು ಕೇವಲ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒಳಗಿನ ಸಾಮಾನ್ಯ ಅಧಿಕಾರ ಹಸ್ತಾಂತರವಲ್ಲ.
ಇದು ಕಾಂಗ್ರೆಸ್ ಒಳಗಿನ ರಾಜಕೀಯ ಅಧಿಕಾರ ಸಮತೋಲನದಲ್ಲಿನ ಒಂದು ರಚನಾತ್ಮಕ ಬದಲಾವಣೆ, ಕಾಂಗ್ರೆಸ್ ಮತ್ತು ಐಯುಎಂಎಲ್(ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್) ನಡುವಿನ ಸಂಬಂಧದ ಪುನರ್ ರಚನೆ, ಮತ್ತು ಬಹುಶಃ ಕೇರಳದ ರಾಜಕೀಯ ಸಂಸ್ಕೃತಿಯ ಹೊಸ ಯುಗದ ಆರಂಭವೂ ಆಗಬಹುದು.
ದಶಕಗಳ ಕಾಲ ಕೇರಳದ ಕಾಂಗ್ರೆಸ್ ಪಕ್ಷವು ಜಾತಿ ಸಮೀಕರಣಗಳು, ಪ್ರಾದೇಶಿಕ ಶಕ್ತಿಕೇಂದ್ರಗಳು, ಗುಂಪು ರಾಜಕೀಯ ಮತ್ತು ಹೈಕಮಾಂಡ್ ಮಧ್ಯಸ್ಥಿಕೆಗಳ ಸಮತೋಲನದ ಮೂಲಕ ಕಾರ್ಯನಿರ್ವಹಿಸಿತು.
ಎಷ್ಟೇ ಪ್ರಭಾವಿ ನಾಯಕನಾಗಿದ್ದರೂ ಸಂಘಟನಾ ಕಟ್ಟಳೆಯನ್ನು ಸಂಪೂರ್ಣವಾಗಿ ಮೀರಿ ಹೋಗಲು ಸಾಧ್ಯವಾಗಿರಲಿಲ್ಲ. ಕೆ. ಕರುಣಾಕರನ್ ಅಥವಾ ಊಮ್ಮನ್ ಚಾಂಡಿ ಅವರಂತಹ ದಿಗ್ಗಜ ನಾಯಕರು ಕೂಡ ಕಾಂಗ್ರೆಸ್ ಪಕ್ಷ ವ್ಯವಸ್ಥೆಯ ಮಿತಿಗಳೊಳಗೆಯೇ ಕಾರ್ಯನಿರ್ವಹಿಸಿದರು.
ಅವರ ಅಧಿಕಾರವು ಸಂಘಟನೆಯನ್ನು ರೂಪಿಸುವಲ್ಲಿ ಗಮನ ಹರಿಸುವುದರಿಂದ, ಸಾಮಾಜಿಕ ಮೈತ್ರಿಗಳನ್ನು ಸಮತೋಲನಗೊಳಿಸುವುದರಿಂದ ಮತ್ತು ನಿಷ್ಠಾವಂತ ಜಾಲವನ್ನು ಉಳಿಸಿಕೊಳ್ಳುವುದರ ಮೂಲಕ ಬೆಳೆದು ಬಂದಿದೆ. ಸತೀಶನ್ ಅವರ ನಾಯಕತ್ವದ ಬೆಳವಣಿಗೆ ಇವರಿಗಿಂತ ಸಂಪೂರ್ಣವಾಗಿ ಭಿನ್ನವಾದ ರಚನೆಯನ್ನು ಹೊಂದಿದೆ. ಅವರು ಕೇರಳದಲ್ಲಿ ಕಾಂಗ್ರೆಸ್ ಸಂಘಟನೆಯ ಮೇಲಿನ ಅವಲಂಬನೆಯಿಂದ ಮುಕ್ತವಾದ ಮೊದಲ ಕಾಂಗ್ರೆಸ್ ನಾಯಕನಾಗಿ ಹೊರಹೊಮ್ಮಿದ್ದಾರೆ ಎನ್ನಬಹುದು. ಬದಲಾಗಿ ಈಗ ಸಂಘಟನೆಯೇ ಅವರ ಮೇಲೆ ಅವಲಂಬಿತವಾಗಿರುವಂತೆ ಕಾಣುತ್ತಿದೆ.
2026ರ ಚುನಾವಣಾ ತೀರ್ಪು ಇದನ್ನು ಸ್ಪಷ್ಟವಾಗಿ ತೋರಿಸಿದೆ. ಇದು ಕೇವಲ ಒಬ್ಬ ರಾಜಕಾರಣಿಯ ಜಯವಲ್ಲ, ಕೇರಳ ಕಾಂಗ್ರೆಸ್ ಒಳಗಿನ ಪರಂಪರಾನುಗತ ಅಧಿಕಾರ ರಚನೆಯೇ ತಿರುಗುಮುರುಗಾಗಿದೆ.
ತಕ್ಷಣದ ಭವಿಷ್ಯದಲ್ಲಿ ಇದರ ಅರ್ಥ ಏನೆಂದರೆ ಅನೇಕ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಸ್ವತಂತ್ರ ರಾಜಕೀಯ ಹೊಣೆಗಾರಿಕೆ ಇಲ್ಲದವರಾಗಿ ಕಾಣಬಹುದು. ಸಾಂಸ್ಥಿಕವಾಗಿ ಕಾಂಗ್ರೆಸ್ ಸರ್ಕಾರದ ಆಡಳಿತವಾಗಿರಬಹುದು, ಆದರೆ ರಾಜಕೀಯವಾಗಿ ಅದು ಕ್ರಮೇಣ ‘ಸತೀಶನ್ ಸರ್ಕಾರ’ ಎಂದು ಪರಿಗಣಿಸಲ್ಪಡುತ್ತದೆ. ಈ ವ್ಯತ್ಯಾಸ ಅತ್ಯಂತ ಮಹತ್ವದ್ದು.
ಕೇರಳವು ಈ ಹಿಂದೆ ಪ್ರಭಾವಶಾಲಿ ಮುಖ್ಯಮಂತ್ರಿಗಳನ್ನು ಕಂಡಿದೆ. ಆದರೆ ಕಾಂಗ್ರೆಸ್ ಒಂದು ವ್ಯಕ್ತಿತ್ವದ ಸುತ್ತ ತಿರುಗುವ ಹಂತಕ್ಕೆ ತಲುಪಿದೆ ಮತ್ತು ಈ ಬೆಳವಣಿಗೆ ಅಪರೂಪ ಎನ್ನಬಹುದು.
ಈ ಬದಲಾವಣೆಯ ಪರಿಣಾಮಗಳು ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ಮೇಲೆಯೂ ಬೀಳುತ್ತದೆ. ಪರಂಪರೆಯಂತೆ ಕೇರಳದ ನಾಯಕರು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು, ಮಾನ್ಯತೆ ಪಡೆಯಲು ಮತ್ತು ಮೇಲೇಳಲು ದೆಹಲಿಯ ಮೇಲೆ ಅವಲಂಬಿತರಾಗಿದ್ದರು. ನಾಯಕತ್ವ ಬದಲಾವಣೆಗಳನ್ನು ಹೈಕಮಾಂಡ್ ನಿರ್ಧರಿಸುತ್ತಿತ್ತು, ಗುಂಪುಗಾರಿಕೆಯನ್ನು ದೆಹಲಿಯಲ್ಲೇ ಬಗೆಹರಿಸಲಾಗುತ್ತಿತ್ತು ಮತ್ತು ಅಂತಿಮವಾಗಿ ಕೇಂದ್ರ ನಾಯಕತ್ವದ ಅಧಿಕಾರವಾಗಿತ್ತು. ಆದರೆ ಈಗ ಸಮೀಕರಣವೇ ತಲೆಕೆಳಗಾದಂತೆ ಕಾಣುತ್ತಿದೆ. ಈ ಬದಲಾವಣೆಯ ಸಾಂಕೇತಿಕ ಕೇಂದ್ರವೇ ವಯನಾಡು.
ಕಾಂಗ್ರೆಸ್ ಹೈಕಮಾಂಡ್ ಈಗ ಕೇರಳದ ಮೇಲಿನ ತನ್ನ ಭಾವನಾತ್ಮಕ ಮತ್ತು ರಾಜಕೀಯ ಹೂಡಿಕೆ ಅದರಲ್ಲೂ ವಯನಾಡಿನ ಪ್ರತಿಷ್ಠೆಯು ಬಹುಮಟ್ಟಿಗೆ ಸತೀಶನ್ ಅವರ ರಾಜಕೀಯ ಪ್ರಾಬಲ್ಯದ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಅರಿತುಕೊಂಡಿದೆ. ಇದು ಅಧಿಕಾರ ಹಂಚಿಕೆಯನ್ನು ಶಾಶ್ವತವಾಗಿ ಬದಲಾಯಿಸುತ್ತದೆ.

ಸತೀಶನ್ ಅವರು ಇನ್ನೂ ಶಿಸ್ತು, ನಿಷ್ಠೆ ಮತ್ತು ಸಂಘಟನಾ ವಿಧೇಯತೆಯ ಆಚರಣೆಗಳನ್ನು ಮುಂದುವರಿಸಬಹುದು, ಆದರೆ ಈಗ ಅದು ಅವಲಂಬನೆಯಿಂದಲ್ಲ, ಬದಲಿಗೆ ಬಲಿಷ್ಠ ಸ್ಥಾನದ ಮೇಲಿನ ಹಿಡಿತದಿಂದ. ಅವರು ವಿಧೇಯರಾಗಿರುವುದು ತಮಗೆ ಅಗತ್ಯವಿರುವ ಕಾರಣದಿಂದಲ್ಲ, ಅದು ರಾಜಕೀಯವಾಗಿ ಉಪಯುಕ್ತ ಆಗಿರುವುದರ ಕಾರಣಕ್ಕೆ.
ಆದ್ದರಿಂದ ಸತೀಶನ್ ಅವರ ನಾಯಕತ್ವದ ಬೆಳವಣಿಗೆಯೆ ಕೇವಲ ಕಾಂಗ್ರೆಸ್ ಒಳಗಿನ ತಲೆಮಾರಿನ ಬದಲಾವಣೆ ಎಂದು ಅರ್ಥೈಸಬಾರದು. ಇದು ಕೇರಳದಲ್ಲಿ ಸಂಪೂರ್ಣ ಹೊಸ ರೀತಿಯ ರಾಜಕೀಯ ನಾಯಕತ್ವದ ಉದಯ ಮತ್ತು ಅದು ಮಾಧ್ಯಮಗಳ ಪರಿವರ್ತನೆಯೊಡನೆ ಆಳವಾಗಿ ಜೋಡಿಸಿಕೊಂಡಿದೆ.
ಹಿಂದಿನ ಪೀಳಿಗೆಯ ಕೇರಳ ರಾಜಕಾರಣಿಗಳು ಪಕ್ಷ ಸಂಘಟನೆಗಳು, ವಿದ್ಯಾರ್ಥಿ ಚಳವಳಿಗಳು, ಕಾರ್ಮಿಕ ಸಂಘಟನೆಗಳು, ಸಿದ್ಧಾಂತ ತರಬೇತಿ, ಪತ್ರಿಕೆಗಳು ಮತ್ತು ವಿಧಾನಸಭಾ ಹೋರಾಟಗಳ ಉತ್ಪನ್ನವಾಗಿದ್ದರು. ಸತೀಶನ್ ಡಿಜಿಟಲ್ ರಾಜಕೀಯದ ಯುಗಕ್ಕೆ ಸೇರಿದವರು. ಅವರ ಅಧಿಕಾರ ಮೆಟ್ಟಿಲುಗಳ ಏರಿಕೆ ಸಾಮಾಜಿಕ ಮಾಧ್ಯಮ ಆಧಾರಿತ ಸಮೂಹ ಸಂವಹನ, ಪಾಡ್‌ಕಾಸ್ಟ್ ರಾಜಕೀಯ, ಸಣ್ಣ ಸಣ್ಣ ವಿಡಿಯೋ ಕಥನಗಳು ಮತ್ತು ವ್ಯಕ್ತಿತ್ವ ಕೇಂದ್ರಿತ ಬ್ರಾಂಡಿಂಗ್‌ನ ಪ್ರಚಾರಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.
ಚುನಾವಣಾ ಪ್ರಚಾರದ ವೇಳೆ ಅವರ ದೀರ್ಘ ಡಿಜಿಟಲ್ ಸಂಭಾಷಣೆಗಳ ಮಹತ್ವವನ್ನು ವಿವರಿಸಬಹುದು.
ಡೊನಾಲ್ಡ್ ಟ್ರಂಪ್ ಅವರು ಜೋ ರೋಗನ್ ಪಾಡ್‌ಕಾಸ್ಟ್‌ಗಳಂತಹ ವೇದಿಕೆಗಳನ್ನು ಬಳಸಿ ಸಾಂಪ್ರದಾಯಿಕ ಮಾಧ್ಯಮಗಳನ್ನು ಮೀರಿ ಜನರೊಂದಿಗೆ ನೇರ ಸಂಪರ್ಕ ಸಾಧಿಸಿದಂತೆ, ಸತೀಶನ್ ಕೂಡ ಕೇರಳದ ಹೊಸ ಡಿಜಿಟಲ್ ಸಾರ್ವಜನಿಕ ವಲಯವನ್ನು ಬಳಸಿಕೊಂಡು ಮತದಾರರೊಂದಿಗೆ ಹೊಸ ರೀತಿಯ ರಾಜಕೀಯ ಆತ್ಮೀಯತೆಯನ್ನು ನಿರ್ಮಿಸಿದರು.
‘ಅತಿಶಕ್ತಂ’ ವೇದಿಕೆಯಲ್ಲಿ ಶಾರಿಕ್ ಸಂಸುದ್ದೀನ್ ಅವರೊಂದಿಗೆ ನಡೆದ ಅವರ ಸಂಭಾಷಣೆ ರಾಜಕೀಯವಾಗಿ ಪರಿವರ್ತನಾತ್ಮಕವಾಗಿತ್ತು. ಏಕೆಂದರೆ ಅದು ಟಿವಿ ಚರ್ಚೆಗಳು ಉಂಟು ಮಾಡುವ ಪರಿಣಾಮವನ್ನು ಸಾಧಿಸಿತು. ಅದು ಸತೀಶನ್ ಅವರನ್ನು ಕೇವಲ ಹೋರಾಟಗಾರ, ವಿರೋಧ ಪಕ್ಷದ ನಾಯಕ ಎನ್ನುವ ಚಿತ್ರಣದಿಂದ ಹೊರಗೆಳೆದು ಚಿಂತಕ- ತಂತ್ರಜ್ಞ, ಆಡಳಿತಗಾರ ಮತ್ತು ದೃಷ್ಟಿಕೋನವುಳ್ಳ ನಾಯಕನಾಗಿ ಪ್ರತಿಷ್ಠಾಪಿಸಿತು. ಮತದಾರರು ಕೇವಲ ಒಬ್ಬ ರಾಜಕಾರಣಿ ಮಾತನಾಡುವುದನ್ನು ನೋಡುತ್ತಿರಲಿಲ್ಲ, ಅವರು ಭವಿಷ್ಯದ ಮುಖ್ಯಮಂತ್ರಿಯ ವ್ಯಕ್ತಿತ್ವ ನಿರ್ಮಾಣವನ್ನು ನೋಡುತ್ತಿದ್ದರು.
ಆದರೆ ಸತೀಶನ್ ಅವರ ರಾಜಕೀಯ ಬ್ರಾಂಡಿಂಗ್ ಹಲವು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಅವರ ರಾಜಕೀಯ ಬೆಳವಣಿಗೆಯ ಪ್ರಮುಖ ಕ್ಷಣಗಳಲ್ಲಿ ಒಂದಾಗಿ ಸುಮಾರು ಏಳು ವರ್ಷಗಳ ಹಿಂದೆ ಏಷ್ಯಾನೆಟ್‌ನಲ್ಲಿ ನಡೆದ ಟಿವಿ ಚರ್ಚೆಯನ್ನು ಗುರುತಿಸಬಹುದು. ಅಲ್ಲಿ ಅವರು ಎಡ ಸರ್ಕಾರದಲ್ಲಿ ಬೌದ್ಧಿಕವಾಗಿ ಪ್ರಖರವಾಗಿದ್ದ ಸಚಿವರಲ್ಲಿ ಒಬ್ಬರಾದ ಥಾಮಸ್ ಐಸಾಕ್ ಅವರಿಗೆ ತೀಕ್ಷ್ಣವಾಗಿ ಪ್ರತಿವಾದಿಸಿದ್ದರು. ಆ ಚರ್ಚೆಯೇ ‘ವಿ. ಡಿ. ಸತೀಶನ್ ಬ್ರಾಂಡ್’ ಗೆ ಚಾಲನೆ ನೀಡಿತು. ಅದು ಅವರನ್ನು ಕೇವಲ ವಿರೋಧ ಪಕ್ಷದ ಭಾಷಣಗಾರರಲ್ಲ, ನೀತಿ ಮಟ್ಟದ ಮುಖಾಮುಖಿಗೆ ಅಗತ್ಯವಿರುವ ಸಮರ್ಥ ನಾಯಕರ ಎಲೈಟ್ ವರ್ಗಕ್ಕೆ ಸೇರಿಸಿತು.
ಇದು ಮುಖ್ಯ, ಏಕೆಂದರೆ ಕೇರಳ ರಾಜಕೀಯವು ಸದಾ ವಿಧಾನಸಭೆಯಲ್ಲಿನ ಸಂಸದೀಯ ಪರಿಣಿತಿಯ ಪ್ರದರ್ಶನವನ್ನು ಗೌರವಿಸಿದೆ. ಸತೀಶನ್ ಅವರ ನಿಜವಾದ ರಾಜಕೀಯ ತರಬೇತಿ ನೆಲೆಯೇ ವಿಧಾನಸಭೆ. ಅವರ ಸಾರ್ವಜನಿಕ ಚಿತ್ರಣವು ಬೀದಿ ಹೋರಾಟ ಅಥವಾ ಸಂಘಟನಾ ಅನುಭವದಿಂದ ಅಲ್ಲ, ಬದಲಾಗಿ ತೀಕ್ಷ್ಣ ಸಂಸದೀಯ ಹಸ್ತಕ್ಷೇಪಗಳು, ಅಂಕಿಅಂಶ ಆಧಾರಿತ ಟೀಕೆಗಳು ಮತ್ತು ವಾಕ್ಚಾತುರ್ಯದ ನಿಖರತೆಯಿಂದ ನಿರ್ಮಿತವಾಗಿದೆ.
ಈಗ ಮುಖ್ಯಮಂತ್ರಿಯಾಗಿ ಅವರು ಹಣಕಾಸು ಖಾತೆಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಮೂಲಕ ರಾಜಕೀಯವಾಗಿ ಸಾಹಸಮಯ ಹೆಜ್ಜೆ ಇಟ್ಟಿದ್ದಾರೆ. ಚಾರಿತ್ರಿಕವಾಗಿ ಕೇರಳದ ಮುಖ್ಯಮಂತ್ರಿಗಳು ವಿರಳವಾಗಿಯೇ ಹಣಕಾಸು ಇಲಾಖೆಯನ್ನು ತಮ್ಮಲ್ಲಿಟ್ಟುಕೊಂಡಿದ್ದಾರೆ. ಆರ್. ಶಂಕರ್ ಮತ್ತು ಊಮ್ಮನ್ ಚಾಂಡಿ ಅವರಂತಹ ಕೆಲವೇ ನಾಯಕರು ಹಣಕಾಸು ಇಲಾಖೆಯಿಂದ ಮುಖ್ಯಮಂತ್ರಿಯ ಕಚೇರಿಗೆ ಬಂದಿದ್ದರು. ಆದ್ದರಿಂದ ಸತೀಶನ್ ಅವರ ನಿರ್ಧಾರ ಸಾಂಕೇತಿಕವಾಗಿದೆ.
ಇದನ್ನು ಇನ್ನಷ್ಟು ಗಮನಾರ್ಹವಾಗಿಸುವುದು ಏನೆಂದರೆ, ಅವರು ಪಂಚಾಯತ್ ಮಟ್ಟದಲ್ಲಿಯೂ ಆಡಳಿತಾನುಭವವಿಲ್ಲದೆ ಕೇರಳದ ಹಣಕಾಸಿನ ಮೇಲಿನ ನಿಯಂತ್ರಣ ವಹಿಸಿಕೊಂಡಿದ್ದಾರೆ. ಇದಕ್ಕೆ ಅಪಾರ ಆತ್ಮವಿಶ್ವಾಸ, ಬಹುಶಃ ಅಪರೂಪದ ರಾಜಕೀಯ ಸಾಹಸದ ಅಗತ್ಯವಿದೆ. ವಿಶೇಷವಾಗಿ ಅವರು ಥಾಮಸ್ ಐಸಾಕ್ ಮತ್ತು ಕೆ. ಎನ್. ಬಾಲಗೋಪಾಲ್ ಅವರಂತಹವರಿಂದ ಕಳೆದ ದಶಕದಲ್ಲಿ ರೂಪುಗೊಂಡ ಹಣಕಾಸು ಇಲಾಖೆಯನ್ನು ವಹಿಸಿಕೊಂಡಿದ್ದಾರೆ. ಅದು ಕೇರಳದ ಅತ್ಯಂತ ಕಠಿಣ ಆರ್ಥಿಕ ಅವಧಿಗಳಲ್ಲೊಂದು. ಇಂದಿನ ಕೇರಳವು ರಚನಾತ್ಮಕ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಹೆಚ್ಚುತ್ತಿರುವ ಸಾಲದ ಭಾರ, ಕಲ್ಯಾಣ ಯೋಜನೆಗಳ ವೆಚ್ಚದ ಒತ್ತಡ, ಕೇಂದ್ರದ ಹಣಕಾಸು ನಿರ್ಬಂಧಗಳು, ಜನಸಂಖ್ಯೆಯ ಬದಲಾವಣೆಗಳು, ನಿರುದ್ಯೋಗ ಮತ್ತು ನಿಧಾನಗತಿಯ ಆದಾಯ ವೃದ್ಧಿ ಸಧ್ಯದ ಸವಾಲುಗಳು. ಇಂತಹ ಸಂದರ್ಭದಲ್ಲಿ ಹಣಕಾಸು ಇಲಾಖೆಯನ್ನು ನಿರ್ವಹಿಸುವುದು ಕೇವಲ ಆಡಳಿತಾತ್ಮಕ ಕೆಲಸವಲ್ಲ. ಅದು ರಾಜಕೀಯ ಬದುಕುಳಿಯುವಿಕೆಯೇ ಆಗಿದೆ.
ಸತೀಶನ್ ಅವರು ತಮ್ಮ ಈಗಿನ ರಾಜಕೀಯ ಮಾನ್ಯತೆಯು ರಾಜಕೀಯ ಹಾಗೂ ಆರ್ಥಿಕ ಅಧಿಕಾರವನ್ನು ಮುಖ್ಯಮಂತ್ರಿಯ ಕಚೇರಿಯಲ್ಲಿ ಕೇಂದ್ರೀಕರಿಸಲು ಸಕಾಲವಾಗಿದೆ ಎಂದು ನಂಬಿರುವಂತೆ ಕಾಣುತ್ತಾರೆ. ಇದು ಭಾರೀ ಜೂಜಾಟ.
ಆದರೆ ಸತೀಶನ್ ಅವರ ಅಧಿಕಾರ ಪಡೆದುಕೊಂಡ ಈ ದಿನಗಳಲ್ಲಿ ಅತ್ಯಂತ ಕುತೂಹಲಕಾರಿ ಪರಿಣಾಮವು ಬಹುಶಃ ಮುಸ್ಲಿಂ ಲೀಗ್‌ಗೆ ಸಂಬಂಧಿಸಿದೆ. ದಶಕಗಳ ಕಾಲದಿಂದ ಐಯುಎಂಎಲ್ ಕೇವಲ ಕಾಂಗ್ರೆಸ್ ಮಿತ್ರಪಕ್ಷ ಮಾತ್ರವಾಗಿರಲಿಲ್ಲ. ಅದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಕೇರಳದ ಮುಸ್ಲಿಂ ಮತದಾರರ ನಡುವಿನ ಮುಖ್ಯ ಸೇತುವೆಯಾಗಿತ್ತು. ಕಾಂಗ್ರೆಸ್ ಪಕ್ಷವು ಚುನಾವಣಾ ಮಟ್ಟದಲ್ಲಷ್ಟೇ ಅಲ್ಲ, ಮಾನಸಿಕ ಮತ್ತು ಸಾಮಾಜಿಕವಾಗಿ ಕೂಡ ಮುಸ್ಲಿಂ ಸಮುದಾಯದೊಳಗೆ ಪ್ರವೇಶ ಉಳಿಸಿಕೊಳ್ಳಲು ಲೀಗ್ ಮೇಲೆ ಅವಲಂಬಿತವಾಗಿತ್ತು. ಸತೀಶನ್ ಅವರ ಈಗಿನ ಅಧಿಕಾರವು ಆ ಸಮೀಕರಣವನ್ನೇ ಅಸ್ತವ್ಯಸ್ತಗೊಳಿಸಬಹುದಾಗಿದೆ.
ಕೇರಳ ರಾಜಕೀಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ಅತ್ಯಂತ ಜನಪ್ರಿಯ ರಾಜಕೀಯ ವ್ಯಕ್ತಿತ್ವವು ಮುಸ್ಲಿಂ ಲೀಗ್ ಹೊರಗಿನಿಂದ ಬರಬಹುದು. ಸತೀಶನ್ ಅವರು ಲೀಗ್‌ನ ಸಾಂಪ್ರದಾಯಿಕ ಜಾಲಕೊಂಡಿಗಳ ಮೇಲೆ ಸಂಪೂರ್ಣ ಅವಲಂಬಿತರಾಗದೇ ಮುಸ್ಲಿಂ ಯುವಜನತೆ, ಮಧ್ಯಮ ವರ್ಗ ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಮುಸ್ಲಿಂ ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ಸಾಮರ್ಥ್ಯ ಹೊಂದಿರುವಂತೆ ಕಾಣುತ್ತಾರೆ. ಇದು ಇತಿಹಾಸದಲ್ಲೇ ಅಪೂರ್ವ. ಅದರರ್ಥ ಐಯುಎಂಎಲ್ ಅಪ್ರಸ್ತುತವಾಗಿದೆ ಎನ್ನುವುದಲ್ಲ. ಲೀಗ್ ಇನ್ನೂ ಕೇರಳ ರಾಜಕೀಯದ ಅತ್ಯಂತ ಬಲಿಷ್ಠ ಸಂಘಟನಾ ಪಕ್ಷವಾಗಿದೆ. ಆಳವಾದ ಸಾಮಾಜಿಕ ಮಾನ್ಯತೆ, ಶಿಸ್ತಿನ ಕಾರ್ಯಕರ್ತರ ಜಾಲ ಮತ್ತು ಕ್ಷೇತ್ರ ಮಟ್ಟದ ಚಳವಳಿ ಸಾಮರ್ಥ್ಯ ಅದರಲ್ಲಿದೆ. ಆದರೆ ಮಾನಸಿಕವಾಗಿ ಅಧಿಕಾರದ ಸಮತೋಲನ ಬದಲಾಗಿದೆ.

ಹಿಂದಿನ ಕಾಂಗ್ರೆಸ್ ನಾಯಕತ್ವವು ಮುಸ್ಲಿಂರ ರಾಜಕೀಯ ವಿಶ್ವಾಸ ಉಳಿಸಿಕೊಳ್ಳಲು ಲೀಗ್ ಮೇಲೆ ಅವಲಂಬಿತವಾಗಿರುವಂತೆ ಕಾಣುತ್ತಿತ್ತು. ಸತೀಶನ್ ಅವರು ಆ ಅವಲಂಬನೆಯನ್ನು ಭಾಗಶಃ ಮುರಿದಂತೆ ಕಾಣುತ್ತಾರೆ. ಅದೇ ಸಮಯದಲ್ಲಿ ಅವರು ವಿಶಾಲ ಹಿಂದೂ ಮಧ್ಯಮ ವರ್ಗದ ಮತದಾರರಲ್ಲಿಯೂ ಸ್ವೀಕಾರಾರ್ಹತೆಯನ್ನು ಉಳಿಸಿಕೊಂಡಿದ್ದಾರೆ. ಆ ಸಮತೋಲನ ರಾಜಕೀಯವಾಗಿ ಅಸಾಮಾನ್ಯವಾಗಿದೆ. ಚಾರಿತ್ರಿಕವಾಗಿ ಕೇರಳ ರಾಜಕೀಯವು ಸಮುದಾಯ ಸಮತೋಲನಗಳ ಮೇಲೆ ಕಾರ್ಯನಿರ್ವಹಿಸುತ್ತಿತ್ತು.
ಅಲ್ಲಿ ನಾಯಕರು ನಿರ್ದಿಷ್ಟ ಸಾಮಾಜಿಕ ಬ್ಲಾಕ್‌ಗಳ ಪ್ರತಿನಿಧಿಗಳಾಗಿ ಕಾಣುತ್ತಿದ್ದರು. ಸತೀಶನ್ ಅವರ ಉದಯವು ಗುಂಪು-ಕೇಂದ್ರಿತ ಮತ್ತು ಸಮುದಾಯ-ಕೇಂದ್ರಿತ ರಾಜಕೀಯದಾಚೆಯ ಹೊಸ ನಾಯಕತ್ವ ಶೈಲಿಯ ಉದಯವನ್ನು ಸೂಚಿಸುತ್ತದೆ. ಅದು ಸಾಂಪ್ರದಾಯಿಕ ಸಾಮಾಜಿಕ ಮಧ್ಯವರ್ತಿತ್ವಕ್ಕಿಂತ ಕಡಿಮೆ, ಡಿಜಿಟಲ್ ಕರಿಷ್ಮಾದ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಈ ಮಾದರಿ ಶಾಶ್ವತವಾಗುತ್ತದೆಯೇ ಎಂಬುದು ಸಂಪೂರ್ಣ ಬೇರೆ ಪ್ರಶ್ನೆ. ಏಕೆಂದರೆ ವ್ಯಕ್ತಿತ್ವ ಕೇಂದ್ರಿತ ರಾಜಕೀಯ ಸದಾ ಅಪಾಯಗಳನ್ನು ಹೊತ್ತಿರುತ್ತದೆ. ರಾಜಕೀಯವು ಒಬ್ಬ ವ್ಯಕ್ತಿಯ ಸಂವಹನ ಸಾಮರ್ಥ್ಯದ ಮೇಲೆ ಅತಿಯಾಗಿ ಅವಲಂಬಿತವಾದಾಗ ಅದರ ಕೆಳಗಿನ ಹಂತದ ಸಂಸ್ಥೆಗಳು ದುರ್ಬಲಗೊಳ್ಳಲು ಶುರುವಾಗುತ್ತವೆ. ಸಂಘಟನೆಗಳು ಕುಗ್ಗುತ್ತವೆ. ಒಟ್ಟಾರೆ ಚಿತ್ರಣ ವಿಸ್ತರಿಸುತ್ತದೆ. ಆಂತರಿಕ ಟೀಕೆ ಕುಂಠಿತವಾಗುತ್ತದೆ. ರಾಜಕೀಯ ಸಂಭಾಷಣೆ ಕ್ರಮೇಣ ಪ್ರದರ್ಶನಮಯವಾಗುತ್ತದೆ. ಆಡಳಿತವು ಮಾಧ್ಯಮ ನಿರ್ವಹಣೆ ಮತ್ತು ನಿರ್ದಿಷ್ಟ ದೃಷ್ಟಿಕೋನದ ಜಾಲಕ್ಕೆ ಅಧೀನವಾಗುವ ಅಪಾಯವಿದೆ. ಕೇರಳವು ಈಗಾಗಲೇ ಪಿಣರಾಯಿ ವಿಜಯನ್ ಅವರ ಆಡಳಿತದಲ್ಲಿ ಈ ಪ್ರವೃತ್ತಿಯ ಕೆಲವು ಅಂಶಗಳನ್ನು ಕಂಡಿದೆ.
ಅಲ್ಲಿ ಸಂಪೂರ್ಣ ರಾಜಕೀಯ ಚಳವಳಿಯೇ ನಿಧಾನವಾಗಿ ಒಬ್ಬನ ವ್ಯಕ್ತಿತ್ವದ ಸುತ್ತ ಕೇಂದ್ರೀಕೃತವಾಯಿತು. ಸತೀಶನ್ ಈಗ ಅದಕ್ಕೆ ಸಮಾನವಾದ ಆದರೆ ಸಿದ್ಧಾಂತದ ದೃಷ್ಟಿಯಿಂದ ವಿಭಿನ್ನ ಮಾದರಿಯನ್ನು ನಿರ್ಮಿಸುತ್ತಿರುವಂತೆ ಕಾಣುತ್ತಾರೆ. ಇದು ಕಡಿಮೆ ಕಾರ್ಯಕರ್ತ-ಕೇಂದ್ರಿತ, ಹೆಚ್ಚು ಮಾಧ್ಯಮ-ಕೇಂದ್ರಿತ, ಕಡಿಮೆ ಸಂಘಟನಾ ಶಿಸ್ತಿನ, ಹೆಚ್ಚು ಭಾವನಾತ್ಮಕವಾಗಿ ಮತ್ತು ಡಿಜಿಟಲ್‌ಗೆ ಹೊಂದಿಕೊಳ್ಳುವ ಹಂತಕ್ಕೆ ತಲುಪಿದೆ. ಮುಂದಿನ ವರ್ಷಗಳು ಇದು ನಿಜವಾದ ಆಡಳಿತಾತ್ಮಕ ಪರಿವರ್ತನೆ ತರಬಹುದೇ ಅಥವಾ ಕೇವಲ ಇನ್ನಷ್ಟು ಸುಧಾರಿತ ವ್ಯಕ್ತಿತ್ವ ಕೇಂದ್ರಿತ ರಾಜಕೀಯವೇ ಎಂಬುದನ್ನು ನಿರ್ಧರಿಸಲಿವೆ.
ಮುಂದಿನ ಹಂತವನ್ನು ವಿಶೇಷವಾಗಿ ಕುತೂಹಲಕರವಾಗಿಸುವುದು ಕೇರಳವನ್ನು ಎದುರು ನೋಡುತ್ತಿರುವ ವಿಧಾನಸಭಾ ಮುಖಾಮುಖಿ. 25 ವರ್ಷದ ವಿಧಾನಸಭಾ ಅನುಭವ ಹೊಂದಿರುವ ಸತೀಶನ್ ಈಗ ವಿರೋಧ ಪಕ್ಷದ ನಾಯಕರಾಗಿ ಮೂರು ದಶಕಗಳಿಗಿಂತ ಹೆಚ್ಚಿನ ಶಾಸಕಾಂಗ ಮತ್ತು ಸಂಘಟನಾ ಅಧಿಕಾರ ಹೊಂದಿರುವ ಪಿಣರಾಯಿ ವಿಜಯನ್ ಅವರನ್ನು ಎದುರಿಸಲಿದ್ದಾರೆ. ಇದು ಕೇವಲ ಸಾಮಾನ್ಯವಾಗಿ ಕಂಡುಬರುವ ಸರ್ಕಾರ-ವಿರೋಧ ಪಕ್ಷದ ಪೈಪೋಟಿಯಾಗಿರುವುದಿಲ್ಲ. ಇದು ಎರಡು ರಾಜಕೀಯ ಯುಗಗಳ ನಡುವಿನ ಘರ್ಷಣೆ.
ಒಂದು ಕಡೆ ಸಂಘಟನೆ, ಸಿದ್ಧಾಂತ ಶಿಸ್ತು ಮತ್ತು ಕೇಂದ್ರೀಕೃತ ಪಕ್ಷಾಧಿಕಾರದ ಮೂಲಕ ನಿರ್ಮಿತ ಹಳೆಯ ಕಾರ್ಯಕರ್ತ ಕೇಂದ್ರಿತ ಎಡ ಪರಂಪರೆ ಇದೆ. ಇನ್ನೊಂದು ಕಡೆ ಡಿಜಿಟಲ್ ಸಂವಹನ, ವ್ಯಕ್ತಿತ್ವ ಬ್ರಾಂಡಿಂಗ್, ಭಾವನಾತ್ಮಕ ಕಥನ ನಿರ್ಮಾಣ ಮತ್ತು ಮಾಧ್ಯಮ ಹೊಂದಾಣಿಕೆಯ ಮೂಲಕ ರೂಪುಗೊಂಡ ಹೊಸ ಕಾಂಗ್ರೆಸ್ ಮಾದರಿ ನಿಂತಿದೆ. ಆದರೆ ಆಳವಾದ ಪ್ರಶ್ನೆ ಸತೀಶನ್ ಅವರನ್ನು ಮೀರಿ ಹೋಗುತ್ತದೆ. ಕೇರಳ ರಾಜಕೀಯವು ಈಗ ರಾಜಕೀಯ ಸಂಘಟನೆಗಳಿಗಿಂತ ರಾಜಕೀಯ ವ್ಯಕ್ತಿತ್ವಗಳು ಹೆಚ್ಚು ಮಹತ್ವ ಪಡೆಯುವ ಯುಗಕ್ಕೆ ಪ್ರವೇಶಿಸುತ್ತಿದೆಯೇ? ಸಂವಹನ ಶಕ್ತಿಯ ಮುಂದೆ ಸೈದ್ಧಾಂತಿಕ ರಚನೆಗಳು ದುರ್ಬಲಗೊಳ್ಳುತ್ತಿವೆಯೇ? ಕೇರಳದ ಭವಿಷ್ಯ ರಾಜಕೀಯವನ್ನು ಪಕ್ಷಗಳಿಗಿಂತ ಡಿಜಿಟಲ್ ಭಾವನಾತ್ಮಕ ಕಲ್ಪನೆಗಳ ಮೇಲೆ ಪ್ರಾಬಲ್ಯ ಸಾಧಿಸಬಲ್ಲ ನಾಯಕರು ರೂಪಿಸಲಿದ್ದಾರೆಯೇ?
ಅದು ಸತ್ಯವಾಗಿದ್ದರೆ, ಸತೀಶನ್ ಕೇವಲ ಆರಂಭ ಮಾತ್ರವಾಗಿರಬಹುದು. ಏಕೆಂದರೆ ಕೇರಳದಲ್ಲಿ ಉದಯಿಸಿರುವುದು ಕೇವಲ ಒಬ್ಬ ಹೊಸ ಮುಖ್ಯಮಂತ್ರಿ ಅಲ್ಲ. ಉದಯಿಸಿರುವುದು ಸಂಪೂರ್ಣ ಹೊಸ ರಾಜಕೀಯ ಅಧಿಕಾರದ ವ್ಯಾಕರಣ.
ಮೂಲ : ಮಿನಿಮೋಹನ್ ಮೋಹನ್
ಕನ್ನಡಾನುವಾದ : ಬಿ ಶ್ರೀಪಾದ ಭಟ್
ಇದನ್ನೂ ಓದಿ- ನಾರ್ವೆಯಲ್ಲಿ ಮೋದಿ ಪಲಾಯನ


