ಕೇರಳ : ಕಾಂಗ್ರೆಸ್‌ನ ಕೇರಳ ಮುಖ್ಯಮಂತ್ರಿ ಹುದ್ದೆಯ ಸಸ್ಪೆನ್ಸ್ ಅಂತ್ಯಗೊಂಡಿದೆ. 61 ವರ್ಷದ, ರಾಜ್ಯ ವಿಧಾನಸಭೆಯಲ್ಲಿ ಮಾಜಿ ವಿರೋಧ ಪಕ್ಷದ ನಾಯಕ, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಅವರ ಸ್ಪರ್ಧೆಯನ್ನು ಹಿಂದಿಕ್ಕಿ, ವಿ.ಡಿ. ಸತೀಶನ್ ಆಯ್ಕೆಯಾಗಿದ್ದಾರೆ.
ನಿನ್ನೆ ಸಂಜೆಯೇ ವಿ.ಡಿ.ಸತೀಶನ್ ಹೆಸರು ಅಂತಿಮಗೊಂಡಿತ್ತು. ಇಂದು ಅವರ ಹೆಸರನ್ನು ಘೋಷಿಸಲಾಯಿತು. ಕೊನೆಗೂ 10 ದಿನಗಳ ಸಸ್ಪೆನ್ಸ್ ಕೊನೆಗೊಂಡಿತು.
“ಕಾಂಗ್ರೆಸ್ ಶಾಸಕಾಂಗ ಪಕ್ಷವು ತಿರುವನಂತಪುರಂನಲ್ಲಿ ಸಭೆ ಸೇರಿ ಕಾಂಗ್ರೆಸ್ ಅಧ್ಯಕ್ಷರಿಗೆ ಸಿಎಲ್‌ಪಿ ನಾಯಕನನ್ನು ಆಯ್ಕೆ ಮಾಡಲು ಸರ್ವಾನುಮತದಿಂದ ಅಧಿಕಾರ ನೀಡಿತು. ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ (ಸೋನಿಯಾ ಗಾಂಧಿ) ಮತ್ತು ವಿರೋಧ ಪಕ್ಷದ ನಾಯಕ (ರಾಹುಲ್ ಗಾಂಧಿ) ಮತ್ತು ಮಾಜಿ ಪಿಸಿಸಿ ಮುಖ್ಯಸ್ಥರು ಸೇರಿದಂತೆ ಅನೇಕ ಇತರ ನಾಯಕರೊಂದಿಗೆ ವ್ಯಾಪಕ ಚರ್ಚೆ ನಡೆಸಿದರು.
ಈ ಎಲ್ಲಾ ಚರ್ಚೆಗಳ ಆಧಾರದ ಮೇಲೆ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ ಎಂದು ನಿರ್ಧರಿಸಲಾಗಿದೆ” ಎಂದು ದಾಸ್‌ಮುನ್ಷಿ ಘೋಷಿಸಿದರು.
ಈ ಮೊದಲು ಸಚಿವ ಸ್ಥಾನವನ್ನು ಸತೀಶನ್ ಪಡೆದಿರಲಿಲ್ಲ. ಬಳಿಕ ಮಾತನಾಡಿದ ಸತೀಶನ್, ತಮ್ಮ ದೊಡ್ಡ ಬಡ್ತಿಗೆ ಟೀಮ್ ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ಬೆಂಬಲ ಕಾರಣ. ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಟೀಮ್ ಯುಡಿಎಫ್‌ನ ಬೆಂಬಲದಿಂದ ನಾನು ಇದನ್ನು ಸಾಧಿಸಿದೆ ಎಂದು ಅವರು ತಮ್ಮ ಬಡ್ತಿಯ ನಂತರ ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆಸಿ ವೇಣುಗೋಪಾಲ್ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಶಾಸಕರ ಬೆಂಬಲ ಹಾಗೂ ಹೈಕಮಾಂಡ್ ಒಲವು ಇವರ ಪರ ಹೆಚ್ಚಾಗಿತ್ತು.
ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಎಲ್‌ಡಿಎಫ್ ಸರ್ಕಾರದ ವಿರುದ್ಧ ಮುಂಚೂಣಿಯಲ್ಲಿ ಹೋರಾಡಿದ್ದ ವಿ.ಡಿ. ಸತೀಶನ್ ತನಗೆ ಸಿಎಂ ಪಟ್ಟ ನೀಡದಿದ್ದರೆ ಬೇರೆ ಯಾವುದೇ ಸಚಿವ ಸ್ಥಾನ ಬೇಡ ಎಂಬ ಬಿಗಿ ನಿಲುವನ್ನು ತಳೆದಿದ್ದರು.

