ಟಿಎಂಸಿಯ ಸೇಡು ಮತ್ತು ಹಿಂಸಾ ರಾಜಕಾರಣದಿಂದಾಗಿ ಇವತ್ತು ಬಂಗಾಳದಲ್ಲಿ ಬಿಜೆಪಿ ಗದ್ದುಗೆ ಏರಿದೆ ಎನ್ನುವುದೇನೊ ಸತ್ಯ. ಅದಕ್ಕಾಗಿ ಮಮತಾ ಬ್ಯಾನರ್ಜಿಯನ್ನು ಕೇಡಿಯಂತೆ ಚಿತ್ರಿಸುವುದನ್ನೂ ಒಪ್ಪಬಹುದು. ಅದಕ್ಕೆ ಮಮತಾ ಅರ್ಹರೂ ಹೌದು. ಆದರೆ, ಮಮತಾ ಹಾಗೆ ಆಗಲು ಕಾರಣ ಯಾರು? ಆ ಸೇಡಿನ ರಾಜಕಾರಣದ ರಕ್ತಚರಿತ್ರೆಯನ್ನು ಶುರು ಮಾಡಿದ್ದು ಯಾರು? ಮಮತಾ ರಾಜಕಾರಣ ಶೈಲಿಯ ಮೇಲೆ ಕಮ್ಯುನಿಷ್ಟರ ಪ್ರಭಾವ ಮತ್ತು ಪ್ರೇರಣೆಗಳನ್ನು ಬದಿಗಿಟ್ಟು, ಕೇವಲ ಮಮತಾರನ್ನು ಖಳರಾಗಿಸುವುದು ನ್ಯಾಯವೇ? -ಮಾಚಯ್ಯ ಎಂ ಹಿಪ್ಪರಿಗಿ, ರಾಜಕೀಯ ವಿಶ್ಲೇಷಕರು
ಮೊದಲನೆಯದಾಗಿ, ಇದು ಮಮತಾ ಬ್ಯಾನರ್ಜಿಯನ್ನು ಸಮರ್ಥಿಸಿಕೊಳ್ಳುವ ಬರಹವಲ್ಲ. ಆದರೆ ತಪ್ಪಿನ ಮೂಲಗಳನ್ನು ಆಳಕ್ಕಿಳಿದು ನೋಡದೆ ಹೋದರೆ, ಸರಿಪಡಿಸುವ ಸಮರ್ಥ ಪರಿಹಾರಗಳು ನಮ್ಮ ಮುಂದೆ ತೆರೆದುಕೊಳ್ಳಲಾರವು ಎಂಬ ಉದ್ದೇಶದಿಂದ ಸತ್ಯವನ್ನು ವಿಸ್ತರಿಸಿ ನೋಡುವ ಪ್ರಯತ್ನವಷ್ಟೆ.
ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಸೋತು, ಹದಿನೈದು ವರ್ಷಗಳ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆಳ್ವಿಕೆ ತಾತ್ಕಾಲಿಕವಾಗಿ ಕೊನೆಗೊಂಡಿದೆ. ಬಿಜೆಪಿ ಜೊತೆಗಿನ ಆರಂಭಿಕ ಸಖ್ಯ, ಆರೆಸ್ಸೆಸ್ ಎಡೆಗಿನ ಅಸ್ಪಷ್ಟ ನಿಲುವು, ಮುಂದಾಲೋಚನೆಯ ಕೊರತೆ, ಸಾಮಾಜಿಕ ಬದ್ಧತೆಗಿಂತ ರಾಜಕೀಯ ಜಿದ್ದಿಗೆ ಪ್ರಾಮುಖ್ಯತೆ ಕೊಟ್ಟಿದ್ದು, ಭ್ರಷ್ಟಾಚಾರದೆಡೆಗಿನ ನಿರ್ಲಕ್ಷ್ಯ, ಅಭಿವೃದ್ಧಿಯ ಅನುಪಸ್ಥಿತಿ ಇವೆಲ್ಲವೂ ಮಮತಾ ಸೋಲಿನ ಸ್ವಯಂಕೃತ ದೋಷಗಳು. ಇನ್ನು ಚುನಾವಣಾ ಆಯೋಗವನ್ನು ಮುಂದಿಟ್ಟುಕೊಂಡು ಬಿಜೆಪಿ ನಡೆಸಿದ ಎಸ್ಐಆರ್ ಎನ್ನುವ ಮಹಾಮೋಸವನ್ನು ಪರಿಗಣಿಸಿದರೆ ಮಮತಾ ಅಲ್ಲಿ ಸೋಲದೆ ಉಳಿಯಲು ಸಾಧ್ಯವೇ ಇರಲಿಲ್ಲ.
ಇದು ಮಮತಾ ಸೋಲಷ್ಟೇ ಅಲ್ಲ; ಬೇರೆಲ್ಲ ಪಕ್ಷಗಳಿಗೆ, ಮುಖ್ಯವಾಗಿ ಪ್ರಾದೇಶಿಕ ಪಕ್ಷಗಳಿಗೆ, ಬಿಜೆಪಿ-ಆರೆಸ್ಸೆಸ್ ಸಖ್ಯ ಮುಂದೊಂದು ದಿನ ತಮ್ಮ ಅಸ್ತಿತ್ವಕ್ಕೆ ಎಷ್ಟು ದುಬಾರಿಯಾಗಲಿದೆ ಎಂಬ ಸಾರ್ವತ್ರಿಕ-ಪುನರಾವರ್ತಿತ ಪಾಠವೂ ಹೌದು.

ಈ ಫಲಿತಾಂಶವನ್ನು ಮುಂದಿಟ್ಟುಕೊಂಡು ಮಮತಾ ಬ್ಯಾನರ್ಜಿಯವರ ದೋಷಗಳನ್ನು ವಿಶ್ಲೇಷಿಸುವ ಕೆಲವೊಂದು ಪ್ರಯತ್ನಗಳಲ್ಲಿ, ಆಕೆ ವಿರೋಧ ಪಕ್ಷಗಳ ವಿರುದ್ಧ, ನಿರ್ದಿಷ್ಟವಾಗಿ ಕಮ್ಯುನಿಷ್ಟ್ (ಸಿಪಿಐಎಂ) ಪಕ್ಷದ ವಿರುದ್ಧ, ತೋರಿದ ಆಕ್ರಮಣಕಾರಿ ಸೇಡಿನ ರಾಜಕಾರಣವನ್ನೂ ಚರ್ಚಿಸಲಾಗುತ್ತಿದೆ. ನಿಜ! ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಷ್ಟ್ ಪಕ್ಷ ಹೀಗೆ ನಿಶ್ಶೇಷ ಸ್ಥಿತಿಗೆ ತಲುಪುವಲ್ಲಿ, ಮಮತಾ ಬ್ಯಾನರ್ಜಿಯ ಅಪ್ರಜಾತಾಂತ್ರಿಕ, ಆಕ್ರಮಣಶೀಲ ಜಿದ್ದಿನ ರಾಜಕಾರಣದ ಕೊಡುಗೆ ಇದೆ. ಬಹುಶಃ ಆ ಕೊಡುಗೆ ಇವತ್ತು, ಅಲ್ಲಿ ಬಿಜೆಪಿ ಇಷ್ಟು ಬಲಾಢ್ಯವಾಗಿ ಬೇರೂರಲು ಕಾರಣವಾಗಿರಬಹುದು. ಹಾಗಂತ, ಈ ಸೇಡು-ಹಿಂಸಾ ರಾಜಕಾರಣದ ಇಡೀ ತಪ್ಪನ್ನು ಕೇವಲ ಮಮತಾ ಬ್ಯಾನರ್ಜಿಯ ಹೆಗಲಿಗೇರಿಸಿ ವಿಲನ್ ಮಾಡುವುದು ಎಷ್ಟು ಸರಿ? ಕಮ್ಯುನಿಷ್ಟ್ ಪಕ್ಷಗಳ ಮೇಲೆ ಅಷ್ಟು ಆಕ್ರಮಣಕಾರಿಯಾಗಿ ವರ್ತಿಸಲು ಆಕೆಗೆ ಪ್ರೇರಣೆ ಬಂದದ್ದು ಎಲ್ಲಿಂದ? ಈ ಸೇಡಿನ ರಾಜಕಾರಣದ ಚರಿತ್ರೆ ಕೇವಲ, ಮಮತಾ ಬ್ಯಾನರ್ಜಿಯ ಆಳ್ವಿಕೆ ಶುರುವಾದ ನಂತರ ಆರಂಭಗೊಂಡಿದ್ದೇ? ಅದಕ್ಕು ಮೊದಲು 34 ವರ್ಷಗಳ ಕಾಲ ಪಶ್ಚಿಮ ಬಂಗಾಳವನ್ನು ಸುಭದ್ರವಾಗಿ ಆಳಿದ ಕಮ್ಯುನಿಷ್ಟರ ಕಾಲದಲ್ಲಿ ವಿರೋಧ ಪಕ್ಷಗಳ ಮೇಲೆ ಇಂತಹ ಸೇಡಿನ ಚರಿತ್ರೆ ಇರಲಿಲ್ಲವೇ?
ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳದೆ ಕೇವಲ ಮಮತಾ ಬ್ಯಾನರ್ಜಿಯ ಸೇಡನ್ನಷ್ಟೇ ಪಟ್ಟಿ ಮಾಡುವುದು, ಬಹುಶಃ ಪೂರ್ವಗ್ರಹವೆನಿಸಿಬಿಡಬಹುದು. ಜೊತೆಗೆ, ಹೆಣ್ಣೆಂಬ ಕಾರಣಕ್ಕೆ ಸೆಲೆಕ್ಟಿವ್ ಚರಿತ್ರೆಯ ಮೂಲಕ ಆಕೆಯನ್ನು ವಿಲನೈಸ್ಗೊಳಿಸುವ ಲಿಂಗ ತಾರತಮ್ಯದ ಆರೋಪಕ್ಕೂ ಗುರಿಯಾಗಬಹುದು.
ಹಾಗಾದರೆ, ಪಶ್ಚಿಮ ಬಂಗಾಳದ ಸೇಡಿನ ರಾಜಕಾರಣದ ನಿಜ ಚರಿತ್ರೆ ಏನು?
ಕಮ್ಯುನಿಷ್ಟ್ ಪಕ್ಷವನ್ನು ನಿರ್ನಾಮ ಮಾಡಲು ಮಮತಾ ಬ್ಯಾನರ್ಜಿ ಯಾವೆಲ್ಲಾ ಆಕ್ರಮಣಕಾರಿ ತಂತ್ರಗಳನ್ನು ಅನುಸರಿಸಿದರು ಎಂದು ಹೇಳಲಾಗುತ್ತಿದೆಯೋ, ಅಂದರೆ ಎದುರಾಳಿ ಕಾರ್ಯಕರ್ತರ ಮೇಲೆ ದಾಳಿ, ಕಗ್ಗೊಲೆ, ಬೂತ್ ಕ್ಯಾಪ್ಚರಿಂಗ್, ಸಿಪಿಎಂ ಕಚೇರಿಗಳ ಧ್ವಂಸ, ಕಮ್ಯುನಿಷ್ಟ್ ಕೇಡರ್ಗೆ ಧಮಕಿ, ಇವ್ಯಾವುವೂ ಹೊಸದಾಗಿರಲಿಲ್ಲ; ಹಿಂದೆ ಕಮ್ಯುನಿಷ್ಟ್ ಪಕ್ಷ ಅಧಿಕಾರದಲ್ಲಿದ್ದಾಗ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಯೋಗಿಸಿದ ತಂತ್ರಗಳೇ ಆಗಿದ್ದವು!
1977ರಲ್ಲಿ ಮೊದಲ ಬಾರಿಗೆ ಅಲ್ಲಿ ಕಮ್ಯುನಿಷ್ಟ್ (ಸಿಪಿಐಎಂ) ಪಕ್ಷ ಅಧಿಕಾರಕ್ಕೇರಿತು. 2011ರವರೆಗೆ ನಿರಂತರವಾಗಿ 34 ವರ್ಷಗಳ ಕಾಲ ಆಳ್ವಿಕೆ ನಡೆಸಿತು. ಈ ಅವಧಿಯಲ್ಲಿ ವಿರೋಧ ಪಕ್ಷಗಳ ಜೊತೆಗೆ ಕಮ್ಯುನಿಷ್ಟರು ಹೇಗೆ ನಡೆದುಕೊಂಡಿದ್ದರು ಅನ್ನುವುದರ ಕೆಲವು ಉದಾಹರಣೆಗಳನ್ನು ನೋಡೋಣ.
ಶೋಷಣೆರಹಿತ ಸಮಸಮಾಜದ ನಿರ್ಮಾಣ ಎಂಬ ಉದಾತ್ತ ಚಿಂತನೆಯ ಕಮ್ಯುನಿಷ್ಟರು, ಅದನ್ನು ಸಾಧಿಸಲು ಹಿಂಸೆಯ ಮಾರ್ಗ ಹಿಡಿದರೂ ತಪ್ಪಿಲ್ಲ ಎನ್ನುವ ನಿಲುವಿನವರು. ಅವರ ನಿಲುವು ಸರಿಯಾಗಿರಲೂಬಹುದು, ತಪ್ಪಾಗಿರಲೂಬಹುದು. ಅದು ಬೇರೆಯ ಚರ್ಚೆ. ಆದರೆ, ಅವರ ಸೈದ್ಧಾಂತಿಕ ಸಂರಚನೆಯಲ್ಲೆ ಹಿಂಸೆಗೆ space ಇದೆ ಎನ್ನುವುದು ಅರ್ಥವಾಗುತ್ತದೆ.
ಆ ಹಿಂಸೆ, ಪಶ್ಚಿಮ ಬಂಗಾಳದ ಕಮ್ಯುನಿಷ್ಟರ ಆಳ್ವಿಕೆಯಲ್ಲಿ ಅತಿರೇಕದ ರೂಪದಲ್ಲಿ ವ್ಯಕ್ತವಾಗುತ್ತಾ ಬಂತು. ಅಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕು ಕೆಲ ವರ್ಷಗಳ ಹಿಂದಿನಿಂದಲೇ, ಅಂದರೆ 1967ರಲ್ಲಿ ನಕ್ಸಲ್ಬರಿಯ ಹಿಂಸಾರೂಪದ ರೈತ ಹೋರಾಟದ ಪ್ರಭಾವದಿಂದಾಗಿ ಕಮ್ಯುನಿಷ್ಟರು ವಿಸ್ತರಣಾ ಹಂತದಲ್ಲಿದ್ದಾಗಿನಿಂದಲೇ ಸೇಡಿನ ಈ ಕುರುಹುಗಳು ಗೋಚರಿಸಲಾರಂಭಿಸುತ್ತವೆ.
1970ರಲ್ಲಿ ನಡೆದ ಸಾಯನ್ಬರಿ ಹತ್ಯೆ ಇದಕ್ಕೊಂದು ಉದಾಹರಣೆ. ಕಾಂಗ್ರೆಸ್ ಪಕ್ಷದ ಮುಂಚೂಣಿ ಕಾರ್ಯಕರ್ತರಾಗಿದ್ದರೆಂಬ ಕಾರಣಕ್ಕೆ ಬರ್ದಮನ್ ಎಂಬಲ್ಲಿಯ ಸಾಯನ್ ಕುಟುಂಬದ ಮೇಲೆ ದಾಳಿ ನಡೆಸಿ, ಪ್ರಣಬ್ ಮತ್ತು ಸುಧೀರ್ ಎಂಬ ಸೋದರರನ್ನು ಅವರ ತಾಯಿಯ ಮುಂದೆಯೇ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ತನ್ನದೇ ಮಕ್ಕಳ ರಕ್ತವನ್ನು ಅನ್ನದಲ್ಲಿ ಕಲಸಿ, ಅದನ್ನು ಆ ತಾಯಿಗೆ ತಿನ್ನಿಸಲಾಗಿತ್ತು ಎಂದು ಹೇಳಲಾಗುತ್ತದಾದರೂ, ಆ ಕುರಿತು ಅಧಿಕೃತ ಪುರಾವೆಗಳಿಲ್ಲ. ಆದರೆ ಪ್ರಕರಣದ ತನಿಖೆಗೆಂದು ನೇಮಿಸಲಾದ ಮುಖರ್ಜಿ ಆಯೋಗವು, ಕೃತ್ಯದಲ್ಲಿ ಕಮ್ಯುನಿಷ್ಟ್ ಕಾರ್ಯಕರ್ತರ ಪಾತ್ರವನ್ನು, ರಾಜಕೀಯ ಜಿದ್ದಿನ ಪ್ರೇರಣೆಯನ್ನು ದೃಢೀಕರಿಸಿತ್ತು. ಅದನ್ನು ಆಧರಿಸಿ ಬಿನಾಯ್ ಕೊನಾರ್, ನಿರುಪಂ ಸೇನ್ (ಮುಂದೆ ಕೈಗಾರಿಕಾ ಸಚಿವರಾದರು) ಮೊದಲಾದ ಸಿಪಿಐಎಂ ನಾಯಕರು ಸೇರಿದಂತೆ 83 ಕಮ್ಯುನಿಷ್ಟ್ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಲಾಯ್ತು. ಆದರೆ 1977ರಲ್ಲಿ ಕಮ್ಯುನಿಷ್ಟ್ ಸರ್ಕಾರ ಅಧಿಕಾರಕ್ಕೇರಿದ ನಂತರ ಅಲಿಪುರ್ ಜಿಲ್ಲಾ ನ್ಯಾಯಾಧೀಶರಾದ ಆರ್.ಕೆ. ಕರ್ ಅವರು ಮೇ 6, 1978ರಂದು ತೀರ್ಪು ಪ್ರಕಟಿಸಿ ಎಲ್ಲಾ 83 ಆರೋಪಿಗಳನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದರು! ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಸೆಕ್ಷನ್ 321ರ ಅಡಿ ಕೋರ್ಟಿಗೆ ಅರ್ಜಿ ಸಲ್ಲಿಸಿ, ಕೇಸು ವಾಪಾಸು ತೆಗೆದುಕೊಳ್ಳಲು ಮನವಿ ಮಾಡಿಕೊಂಡಿದ್ದು ಆ ತೀರ್ಪಿಗೆ ಕಾರಣ!!
ಸಂತ್ರಸ್ತ ಕುಟುಂಬ ದಶಕಗಳ ನಿರಂತರವಾಗಿ ಹೋರಾಡುತ್ತಲೇ ಬಂದಿತು. ಕೊಲ್ಕೊತ್ತಾ ಹೈಕೋರ್ಟ್ನಲ್ಲಿ ವಿಚಾರಣೆಗೆ ಬರುವ ವೇಳೆಗೆ, ಕೇಸಿಗೆ ಸಂಬಂಧಪಟ್ಟ ಮೂಲ ಕಡತಗಳೇ ಕಳೆದುಹೋಗಿವೆ ಎನ್ನಲಾಯ್ತು. ದುರಂತವೆಂದರೆ, ಇಬ್ಬರು ಸೋದರರನ್ನು ಕಳೆದುಕೊಂಡಿದ್ದ ಆ ಕುಟುಂಬದ ಮತ್ತೋರ್ವ ಸೋದರನನ್ನು 1972ರಲ್ಲಿ ತಲೆ ಕತ್ತರಿಸಿ ಹತ್ಯೆ ಮಾಡಲಾಗಿತ್ತು.

1990ರ ವೇಳೆಗಾಗಲೇ ಕಮ್ಯುನಿಷ್ಟ್ ಕಾರ್ಯಕರ್ತರು ಎಲೆಕ್ಷನ್ ಬೂತ್ಗಳ ರಿಗ್ಗಿಂಗ್ ಮೂಲಕ ಫಲಿತಾಂಶವನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರಲಾರಂಭಿತು. ಆಗಿನ್ನೂ ಮಮತಾ ಬ್ಯಾನರ್ಜಿ ಯೂತ್ ಕಾಂಗ್ರೆಸ್ನ ರಾಜ್ಯಧ್ಯಕ್ಷೆಯಾಗಿದ್ದರು. ಚುನಾವಣಾ ಅಕ್ರಮ ತಪ್ಪಿಸಲು, ಮತದಾರರಿಗೆ ಫೋಟೊ ಇರುವ ಗುರುತಿನ ಚೀಟಿಗಳನ್ನು ನೀಡಬೇಕೆಂದು 1993, ಜುಲೈ 21ರಂದು ಮಮತಾ ನೇತೃತ್ವದಲ್ಲಿ ಯೂತ್ ಕಾಂಗ್ರೆಸ್, ಕೊಲ್ಕೊತ್ತಾದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿತ್ತು. ಸಿಪಿಎಂನ ಬುದ್ಧದೇವ್ ಭಟ್ಟಾಚಾರ್ಯರು ಗೃಹಮಂತ್ರಿಯಾಗಿದ್ದರು. ಹಿಂಸೆಗೆ ಮುಂದಾದರು ಎಂಬ ಕಾರಣ ನೀಡಿ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗೋಲಿಬಾರ್ ನಡೆಸಲು ಅನುಮತಿ ನೀಡಲಾಯ್ತು. ಗುಂಡಿನ ದಾಳಿ ಮತ್ತು ಕಾಲ್ತುಳಿತದಿಂದಾಗಿ 13 ಜನ ಸ್ಥಳದಲ್ಲೆ ಮೃತರಾದರು. ಕಮ್ಯುನಿಷ್ಟ್ ಸರ್ಕಾರ ಇದ್ದಷ್ಟು ದಿನ ಆ ಕುರಿತು ತನಿಖೆ ಪ್ರಗತಿ ಕಾಣಲಿಲ್ಲ. ಮಮತಾ ಸಿಎಂ ಆದ ನಂತರ ನಿವೃತ್ತ ನ್ಯಾ. ಸುಶಾಂತ್ ಚಟರ್ಜಿಯವರ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದರು. 2014ರಲ್ಲಿ ವರದಿ ಸಲ್ಲಿಸಿದ ಆಯೋಗವು ಅದೊಂದು ಉದ್ದೇಶಪೂರ್ವಕ, ಅಪ್ರಚೋದಿತ ದಾಳಿಯಾಗಿದ್ದು, ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಸಮಾನಾದುದು ಎಂದು ಹೇಳಿತು. ಇವತ್ತಿಗೂ ಜುಲೈ 21 ಅನ್ನು ಹುತಾತ್ಮ ದಿನವಾಗಿ ಟಿಎಂಸಿ ಆಚರಿಸುತ್ತಾ ಬಂದಿದೆ.
2000ರಲ್ಲಿ ನಡೆದ ನನೂರ್ ಹತ್ಯಾಕಾಂಡ ಇಂತಹ ಮತ್ತೊಂದು ರಾಜಕೀಯ ಸೇಡಿನ ಉದಾಹರಣೆ. ಭಿರ್ಬುಮ್ ಜಿಲ್ಲೆಯ ನನೂರ್ ಸಮೀಪದ ಸಚ್ಪುರ್ ಎಂಬಲ್ಲಿ ಸಿಪಿಐಎಂ ಕಾರ್ಯಕರ್ತರು 11 ಭೂರಹಿತ ಕಾರ್ಮಿಕರ ಹತ್ಯೆ ಮಾಡಿದ್ದರು. ಆರಂಭದಲ್ಲಿ, ಅವರೆಲ್ಲ ಡಕಾಯಿತರು, ಹಾಗಾಗಿ ಹತ್ಯೆ ಮಾಡಲಾಗಿದೆ ಎಂದು ಬಿಂಬಿಸಲಾಗಿತ್ತು. ಆದರೆ ಅವರು ಡಕಾಯಿತರಾಗಿರಲಿಲ್ಲ. ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದರು. ಸ್ಥಳೀಯ ಕಮ್ಯುನಿಷ್ಟ್ ನಾಯಕನ ಭೂಕಬಳಿಕೆ ವಿರುದ್ಧ ಧ್ವನಿ ಎತ್ತಿದ್ದರಿಂದ ಆ ಮುಸ್ಲಿಂ ಕಾರ್ಮಿಕರ ಹತ್ಯೆ ಮಾಡಲಾಗಿತ್ತು. ವಿಚಾರಣೆ ನಡೆಸಿದ ಸುರಿ ನ್ಯಾಯಾಲಯ 2010ರಲ್ಲಿ, ಕಮ್ಯುನಿಷ್ಟ್ ನಾಯಕನೂ ಸೇರಿದಂತೆ ಒಟ್ಟು 44 ಜನರನ್ನು ದೋಷಿಗಳೆಂದು ತೀರ್ಪು ಪ್ರಕಟಿಸಿತು.
1998 ರಿಂದ 2001ರ ನಡುವೆ ಮಿಡ್ನಾಪುರ್ ಜಿಲ್ಲೆಯ ಕೇಶವ್ಪುರ-ಗರ್ಬೇಟಾದಲ್ಲಿ ನಡೆದ ಸೇಡಿನ ರಾಜಕಾರಣ ಇನ್ನೂ ಗಂಭೀರದ್ದು. ಗ್ರಾಮೀಣ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ಪ್ರಭಾವಿಯಾಗಿ ಬೆಳೆಯುತ್ತಿದ್ದುದನ್ನು ತಪ್ಪಿಸಲು ಕಮ್ಯುನಿಷ್ಟ್ ಪಕ್ಷ ತನ್ನ ಸಶಸ್ತ್ರ ಕಾರ್ಯಕರ್ತರನ್ನು ಕಣಕ್ಕಿಳಿಸಿತ್ತು ಎನ್ನಲಾಗುತ್ತೆ. ಅಲ್ಲಿಯ ಜನ ಕಮ್ಯುನಿಷ್ಟ್ ಕಾರ್ಯಕರ್ತರನ್ನು ‘ಹರ್ಮದ್ ಬಹೀನಿ’ ಅಂತ ಕರೆಯುತ್ತಿದ್ದರು. ಪೋರ್ಚುಗಿಸ್ ಭಾಷೆಯಲ್ಲಿ ಹರ್ಮದ್ ಎಂದರೆ ಕಡಲ್ಗಳ್ಳರು (ಪೈರೇಟ್) ಎಂದರ್ಥ. ಸುಂದರ್ಬನ್ ಕಡಲತೀರದಲ್ಲಿ ಈ ಕಡಲ್ಗಳ್ಳರು ಭೀತಿಯ ವಾತಾವರಣ ನಿರ್ಮಿಸಿದ್ದರು. ಕಮ್ಯುನಿಷ್ಟ್ ಕಾರ್ಯಕರ್ತರು ಕೂಡಾ ಅಷ್ಟೇ ಭಯ ಮೂಡಿಸಿದ್ದರು, ಆ ಹೆಸರಿನಿಂದ ಕರೆಯಲಾಗುತ್ತಿತ್ತು. ಟಿಎಂಸಿ ಪಕ್ಷದತ್ತ ಒಲವು ತೋರುವ ಊರುಗಳ ಮೇಲೆ ಈ ಕಾರ್ಯಕರ್ತರು ದಾಳಿ ಮಾಡಿ ಬೆದರಿಕೆ ಹಾಕುತ್ತಿದ್ದರು. ಚೋಟೊ ಅಂಗಾರಿಯಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡ ಈ ತೀವ್ರತೆಗೆ ಸಾಕ್ಷಿ. ಜನವರಿ 4, 2001ರಂದು ಹನ್ನೊಂದು ಟಿಎಂಸಿ ಕಾರ್ಯಕರ್ತರನ್ನು ಮನೆಯೊಳಗೆ ಕೂಡಿಹಾಕಿ, ಜೀವಂತ ಸುಟ್ಟುಹಾಕಲಾಯ್ತು. ತಪನ್ ಘೋಷ್ ಮತ್ತು ಸುಕುರ್ ಅಲಿ ಎಂಬ ಕಮ್ಯುನಿಷ್ಟ್ ಕಾರ್ಯಕರ್ತರ ಮೇಲೆ ಕೇಸು ದಾಖಲಾಯ್ತು. ಆದರೆ ಅವರು ನಾಪತ್ತೆಯಾದರು. 2007ರ ನಂದಿಗ್ರಾಮ ಪ್ರತಿಭಟನೆ ವೇಳೆ, ಕಮ್ಯುನಿಷ್ಟ್ ಗುಂಪಿನಲ್ಲಿ ಕಾಣಿಸಿಕೊಂಡ ಈ ಇಬ್ಬರನ್ನು ಅರೆಸ್ಟ್ ಮಾಡಲಾಯಿತಾದರೂ, ಸತ್ತವರ ಶವಗಳೇ ಲಭ್ಯವಾಗಿಲ್ಲ ಎಂಬ ಕಾರಣಕ್ಕೆ ಕೇಸನ್ನೇ ವಜಾ ಮಾಡಲಾಯ್ತು.
ಆದರೆ 2011ರಲ್ಲಿ ಟಿಎಂಸಿ ಅಧಿಕಾರಕ್ಕೇರಿದ ನಂತರ ಕಮ್ಯನಿಷ್ಟ್ ನಾಯಕ ಸುಶಾಂತ್ ಘೋಷ್ ಅವರ ಮನೆ ಬಳಿ ಏಳು ಅಸ್ಥಿಪಂಜರಗಳು ಲಭಿಸಿದವು. ಡಿಎನ್ಎ ಮ್ಯಾಚ್ ಮಾಡಿದ ನಂತರ, ಅಷ್ಟೂ ಅಸ್ಥಿಗಳು 2001ರ ಗಲಭೆಯ ನಂತರ ಕಾಣೆಯಾಗಿದ್ದ ಟಿಎಂಸಿ ಕಾರ್ಯಕರ್ತರವು ಎಂಬುದು ದೃಢವಾಯ್ತು!
ಇನ್ನು ಸಿಂಗೂರು ಮತ್ತು ನಂದಿಗ್ರಾಮ ಪ್ರತಿಭಟನೆಯ ವೇಳೆ ಕಮ್ಯುನಿಷ್ಟ್ ಸರ್ಕಾರ, ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ವಿರೋಧ ಪಕ್ಷಗಳ ನಾಯಕರು, ಕಾರ್ಯಕರ್ತರ ವಿರುದ್ಧ ಹೇಗೆಲ್ಲಾ ವರ್ತಿಸಿತು ಅನ್ನೋದು ಕಣ್ಣಮುಂದಿರುವ ಸತ್ಯ. ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಕ್ಕೆ ತಾಪಸಿ ಮಲಿಕ್ ಎಂಬ ಯುವ ಕಾರ್ಯಕರ್ತೆಯನ್ನು ಫ್ಯಾಕ್ಟರಿ ಆವರಣದಲ್ಲೆ ಅತ್ಯಾಚಾರ ಮಾಡಿ, ಬೆಂಕಿ ಹಾಕಿ ಸುಡಲಾಯ್ತು. ಪ್ರತಿಭಟನೆಗಳನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ಬಳಸುವುದರ ಜೊತೆಗೆ ತನ್ನ ಕಾರ್ಯಕರ್ತರನ್ನೂ ಕಮ್ಯುನಿಷ್ಟ್ ಸರ್ಕಾರ ಬಳಸಿಕೊಂಡ ಆರೋಪಗಳಿವೆ. ಸರ್ಕಾರ, ಪಕ್ಷ ಮತ್ತು ಆಡಳಿತಾಂಗದ ನಡುವೆ ವ್ಯತ್ಯಾಸವೇ ಇಲ್ಲದಂತಹ ವಾತಾವರಣ ನಿರ್ಮಾಣವಾಗಿತ್ತು.
ಪ್ರತಿಭಟನೆಗಳನ್ನು ಪ್ರಜಾತಾಂತ್ರಿಕವಾಗಿ ಎದುರಿಸಬೇಕಿದ್ದ ಸರ್ಕಾರ, ತನ್ನ ಕಾರ್ಯಕರ್ತರನ್ನು ಬಳಸಿಕೊಂಡು ಹಿಂಸಾತ್ಮಕ ರೂಪಕ್ಕೆ ತಿರುಗಿಸಿದ್ದು ಎಷ್ಟು ಸರಿ? ಕಮ್ಯುನಿಷ್ಟ್ ಕಾರ್ಯಕರ್ತರು “ಭೂಮಿ ಉಚ್ಚೋದ್ ಪ್ರತಿರೋಧ್ ಕಮಿಟಿ”ಯಿಂದ ನಂದಿಗ್ರಾಮವನ್ನು ಹಿಂಸಾ ಹೋರಾಟದ ಮೂಲಕ ವಾಪಾಸು ಪಡೆದುಕೊಂಡಾಗ, ಅಂದಿನ ಮುಖ್ಯಮಂತ್ರಿಯಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ ಅವರು “ಅವರಿಗೆ (ಪ್ರತಿಭಟನಾಕಾರರಿಗೆ) ಅವರದೇ ನಾಣ್ಯಗಳನ್ನು ತಿರುಗಿಸಿ ಕೊಟ್ಟಿದ್ದೇವೆ” ಎಂಬ ಕುಖ್ಯಾತ ಹೇಳಿಕೆಯ ಮೂಲಕ ಸಮರ್ಥಿಸಿಕೊಂಡಿದ್ದರು!

ಇವು ಕೇವಲ ಆಯ್ದ ಉದಾಹರಣೆಗಳು ಮಾತ್ರ. ತನ್ನ 34 ವರ್ಷದ ಸುದೀರ್ಘ ಅವಧಿಯಲ್ಲಿ ಕಮ್ಯುನಿಷ್ಟ್ ಸರ್ಕಾರ ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಇಂತಹ ಪ್ರಯತ್ನಗಳನ್ನು ಮಾಡಿಕೊಂಡೇ ಬಂದಿತ್ತು. ಪಶ್ಚಿಮ ಬಂಗಾಳದ ರಾಜಕಾರಣ ರಕ್ತಚರಿತ್ರೆಯಲ್ಲಿ ಮಿಂದೇಳಲು ಶುರುವಾಗಿದ್ದೇ ಕಮ್ಯುನಿಷ್ಟರ ಆಳ್ವಿಕೆಯ ಅವಧಿಯಲ್ಲಿ. 2011ರಲ್ಲಿ ಮೊದಲ ಸಲ ಮಮತಾ ಬ್ಯಾನರ್ಜಿ ಗೆದ್ದು ಸಿಎಂ ಆದಾಗ ಹೇಳಿದ “ಬೊದ್ಲೊ ನೊಯ್, ಬದ್ಲಾವ್ ಚಾಯ್” (ಸೇಡು ಬೇಡ, ಬದಲಾವಣೆ ಬೇಕು) ಮಾತು ಸಾಕಷ್ಟು ಪ್ರಸಿದ್ಧಿಯಾಗಿತ್ತು. ಸೇಡು ಬೇಡ ಅಂತ ಒಬ್ಬ ವ್ಯಕ್ತಿ ಹೇಳುತ್ತಿದ್ದಾರೆ ಅಂದರೆ ಏನರ್ಥ? ಎದುರಾಳಿಯಿಂದ ನಾವು ದಮನಕ್ಕೆ ತುತ್ತಾಗಿದ್ದೇವೆ, ಆದರೂ ನಾವು ಅದನ್ನು ಮುಂದುವರೆಸುವುದಿಲ್ಲ ಎಂದರ್ಥ. ಕಮ್ಯುನಿಷ್ಟ್ ಸರ್ಕಾರದ ಅವಧಿಯಲ್ಲಿ ಟಿಎಂಸಿ ವಿರುದ್ಧ ನಡೆದಿದ್ದ ಅಟ್ರಾಸಿಟಿಯನ್ನು ಇದು ಸಾಬೀತು ಮಾಡುತ್ತೆ. ದುರಂತವೆಂದರೆ, ಸೇಡು ಬೇಡ ಎಂದಿದ್ದ ಮಮತಾ, ತನ್ನ ಮಾತು ಉಳಿಸಿಕೊಳ್ಳಲು ಸೋತು, ಕಮ್ಯುನಿಷ್ಟರ ನಿರ್ನಾಮದ ಸೇಡಿಗೆ ಮುಂದಾದರು. ಆ ಸೇಡಿನ ರಾಜಕಾರಣದಿಂದ ಪಾರಾಗಲು ಒಂದಷ್ಟು ಕಮ್ಯುನಿಷ್ಟ್ ಕಾರ್ಯಕರ್ತರು ಟಿಎಂಸಿಯನ್ನೇ ಸೇರಿದರೆ, ಬಹುಪಾಲು ಕೇಡರ್ ಮತ್ತು ಮತದಾರರು, ನಿಧಾನವಾಗಿ ಪ್ರತಿರೋಧದ ಸ್ಪೇಸ್ ತುಂಬುತ್ತಾ ಬಂದ ಬಿಜೆಪಿಯತ್ತ ವಾಲಿದರು. ಕಮ್ಯುನಿಷ್ಟರ ಮತಗಳಿಕೆಯ ಕುಸಿತ ಮತ್ತು ಬಿಜೆಪಿಯ ಮತಗಳಿಕೆಯ ಏರಿಕೆಯನ್ನು ತುಲನೆ ಮಾಡಿದರು, ಬಿಜೆಪಿಯನ್ನು ಬೆಂಬಲಿಸುತ್ತಿರುವ ಕೇಡರ್ ಯಾರದ್ದು ಅನ್ನೋದು ಅರ್ಥವಾಗುತ್ತದೆ.
2011ರ ಚುನಾವಣೆಯಲ್ಲಿ ಕೇವಲ 40 ಸ್ಥಾನಗಳಿಗೆ ಕುಸಿದು ಸೋತಾಗಲೂ, ಸಿಪಿಎಂ ಮತಗಳಿಕೆ 30.08% ಇತ್ತು. ಆಗ ಬಿಜೆಪಿ ಮತಗಳಿಕೆ 4.06% ಮಾತ್ರ. ಸೊನ್ನೆ ಶಾಸಕರು. ಆದರೆ 2016ರ ಚುನಾವಣೆ ವೇಳೆಗೆ ಸಿಪಿಎಂ ಮತಪ್ರಮಾಣ ದಿಢೀರ್ 19.75%ಗೆ ಕುಸಿತ ಕಂಡರೆ, ಬಿಜೆಪಿಯ ಮತಗಳಿಕೆ ಮೊದಲ ಸಲ ಎರಡಂಕಿ ದಾಟಿ 10.16% ಏರಿಕೆಯಾಯ್ತು. 2021ರ ಚುನಾವಣೆ ಹೊತ್ತಿಗೆ ಸಿಪಿಎಂ 4.73%ಗೆ ಕುಸಿತಕಂಡರೆ, ಬಿಜೆಪಿ ಅಚಾನಕ್ 37.97 ಮತಗಳಿಗೆ ಏರಿಕೆಯಾಯ್ತು. ಅಂದರೆ 2011ರ ಚುನಾವಣೆಯಲ್ಲಿದ್ದ ಮತಗಳಿಕೆ ಪ್ರಮಾಣ ಸಿಪಿಎಂ-ಬಿಜೆಪಿ ನಡುವೆ ಸಂಪೂರ್ಣ ಅದಲುಬದಲಾದವು. ಅದೀಗ ಇವತ್ತು ಇಲ್ಲಿಗೆ ಬಂದು ಮುಟ್ಟಿದೆ.
ಟಿಎಂಸಿಯ ಸೇಡು ಮತ್ತು ಹಿಂಸಾ ರಾಜಕಾರಣದಿಂದಾಗಿ ಇವತ್ತು ಬಂಗಾಳದಲ್ಲಿ ಬಿಜೆಪಿ ಗದ್ದುಗೆ ಏರಿದೆ ಎನ್ನುವುದೇನೊ ಸತ್ಯ. ಅದಕ್ಕಾಗಿ ಮಮತಾ ಬ್ಯಾನರ್ಜಿಯನ್ನು ಕೇಡಿಯಂತೆ ಚಿತ್ರಿಸುವುದನ್ನೂ ಒಪ್ಪಬಹುದು. ಅದಕ್ಕೆ ಮಮತಾ ಅರ್ಹರೂ ಹೌದು. ಆದರೆ, ಮಮತಾ ಹಾಗೆ ಆಗಲು ಕಾರಣ ಯಾರು? ಆ ಸೇಡಿನ ರಾಜಕಾರಣದ ರಕ್ತಚರಿತ್ರೆಯನ್ನು ಶುರು ಮಾಡಿದ್ದು ಯಾರು? ಮಮತಾ ರಾಜಕಾರಣ ಶೈಲಿಯ ಮೇಲೆ ಕಮ್ಯುನಿಷ್ಟರ ಪ್ರಭಾವ ಮತ್ತು ಪ್ರೇರಣೆಗಳನ್ನು ಬದಿಗಿಟ್ಟು, ಕೇವಲ ಮಮತಾರನ್ನು ಖಳರಾಗಿಸುವುದು ನ್ಯಾಯವೇ?
ಬಂಗಾಳದಷ್ಟು ತೀಕ್ಷ್ಣ ಮತ್ತು ಅತಿರೇಕವಲ್ಲದಿದ್ದರೂ, ಇಷ್ಟು ದಿನ ಕಮ್ಯುನಿಷ್ಟ್ ಆಡಳಿತವಿದ್ದ ಕೇರಳದಲ್ಲೂ ಹೊಡಿ, ಬಡಿ ಬಗೆಯ ರಾಜಕಾರಣದ ಝಲಕ್ಕುಗಳು ಗೋಚರಿಸುತ್ತವೆ. ಹಿಂಸಾ ರಾಜಕಾರಣ ಮಮತಾ ಬ್ಯಾನರ್ಜಿಯ ಕೊಡುಗೆಯಷ್ಟೆ ಆಗಿದ್ದರೆ, ಕೇರಳದಲ್ಲೇಕೆ ಅದು ಗೋಚರಿಸಬೇಕಿತ್ತು. ಇಲ್ಲೇನು ಟಿಎಂಸಿ ಇಲ್ಲವಲ್ಲ?
ಹಾಗೆ ನೋಡಿದರೆ, ಇವತ್ತಿನ ರಾಜಕಾರಣದಲ್ಲಿ ಹೊಡೆದಾಟ ಬಡಿದಾಟಗಳು ಎಲ್ಲಾ ಪಕ್ಷಗಳ ಕಾರ್ಯಕರ್ತರಲ್ಲಿ ಕಾಣುತ್ತೇವೆ. ಆದರೆ ಅವರು ಆರ್ಗನೈಸ್ಡ್ ಆಗಿರುವುದಿಲ್ಲ. ಅಲ್ಲಲ್ಲಿ ಸ್ಥಳೀಯ ದುಷ್ಮನಿಗಳು ಆಯಾ ಊರು ಅಥವಾ ಕ್ಷೇತ್ರಕ್ಕೆ ಸೀಮಿತಗೊಂಡ ಕದನಗಳಾಗಿರುತ್ತವೆ. ಆದರೆ ಬಂಗಾಳದಲ್ಲಿ ನಡೆದದ್ದು ಇಂತಹ ಸೀಮಿತ ದುಷ್ಮನಿಯ ರಾಜಕಾರಣವಲ್ಲ.
ತಡವಾಗಿಯಾದರೂ, ಬಿತ್ತಿದ ಬೀಜವೇ ಸಸಿಯಾಗಿ ಮೊಳಕೆ ಕೀಳುತ್ತದೆ. ಕಮ್ಯುನಿಷ್ಟರು ಬಿತ್ತಿ, ಟಿಎಂಸಿ ನೀರೆರೆದ ಹಿಂಸಾ ರಾಜಕಾರಣದ ಫಸಲನ್ನು ಇವತ್ತು ಫ್ಯಾಸಿಸ್ಟ್ ಬಿಜೆಪಿ ಕಟಾವು ಮಾಡಿಕೊಳ್ಳುತ್ತಿದೆ. ಈಗಲಾದರೂ ನಾವು ಸತ್ಯವನ್ನು ಸಂಪೂರ್ಣ ರೂಪದಲ್ಲಿ ಗ್ರಹಿಸಲು ಮುಂದಾಗದಿದ್ದರೆ, ಅಪಾಯ ಇನ್ನಷ್ಟು ಬಲಗೊಳ್ಳುತ್ತಾ ಸಾಗುತ್ತದೆ. ತಿದ್ದಿಕೊಳ್ಳಬೇಕೆಂದರೆ, ಮೊದಲು ನಮ್ಮ ತಪ್ಪುಗಳ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು!
ಮಾಚಯ್ಯ ಎಂ ಹಿಪ್ಪರಿಗಿ
ಇದನ್ನೂ ಓದಿ- ಏಪ್ರಿಲ್, ಭಾರತಕ್ಕೆ ಒಂದು ಎಚ್ಚರಿಕೆ


