ತಮಿಳುನಾಡು ಚುನಾವಣಾ ಫಲಿತಾಂಶ ವಿಶ್ಲೇಷಣೆ
ಯಾವಯಾವ ಕಾರಣಗಳಿಗಾಗಿ ಬಿಜೆಪಿ ತಮಿಳುನಾಡಿನಲ್ಲಿ ಪ್ರಬಲವಾಗಬಾರದೆಂದು ನಾವು ಬಯಸಿದ್ದೆವೋ, ಅದಕ್ಕೆ ಪೂರಕವಾಗಿಯೇ ಅಲ್ಲಿನ ಜನ ತೀರ್ಪು ನೀಡಿ ಬಿಜೆಪಿಯ ರಾಜಕಾರಣವನ್ನು ತಿರಸ್ಕರಿಸಿದ್ದಾರೆ; ಆದರೆ, ಯಾರನ್ನು ಆಯ್ಕೆ ಮಾಡಬೇಕು ಎಂಬ ವಿಚಾರ ಬಂದಾಗ, ದೂರದವರ ನಮ್ಮ ಕಾರಣಗಳಿಗಿಂತ ಭಿನ್ನವಾಗಿ ತಳಮಟ್ಟದ ಅವರದೇ ಆಡಳಿತವಿರೋಧಿ ಕಾರಣವನ್ನು ಪರಿಗಣಿಸಿ ಟಿವಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಷ್ಟೆ! – ಮಾಚಯ್ಯ ಎಂ ಹಿಪ್ಪರಿಗಿ, ರಾಜಕೀಯ ವಿಶ್ಲೇಷಕರು.
ತಮಿಳುನಾಡಿನಲ್ಲಿ ಡಿಎಂಕೆ ಹೀನಾಯವಾಗಿ ಸೋತು, ನಟ ವಿಜಯ್ ಅವರ ಟಿವಿಕೆ ಪಕ್ಷ ಭರ್ಜರಿ ಗೆಲುವು ದಾಖಲಿಸಿದೆ. ಈ ಫಲಿತಾಂಶದ ಕುರಿತು ನಮ್ಮ ಪ್ರಗತಿಪರ-ಜಾತ್ಯತೀತ ಸ್ನೇಹಿತರು ಸೋಷಿಯಲ್ ಮೀಡಿಯಾದಲ್ಲಿ ಭ್ರಮಾನಿರಸನ ಹೊರಹಾಕುತ್ತಿದ್ದಾರೆ. ಅವರ ಕಾಳಜಿ ಅರ್ಥವಾಗುವಂತದ್ದೆ. ಬಿಜೆಪಿ ಮತ್ತು ಅದರ ಕೋಮುವಾದಿ-ಯಜಮಾನಿಕೆಯ ಅಜೆಂಡಾ ವಿರುದ್ಧ ದಿಟ್ಟವಾಗಿ ಸಿಡಿದೆದ್ದಿದ್ದ ಸ್ಟಾಲಿನ್ ಅವರ ಡಿಎಂಕೆ ಗೆಲ್ಲಬೇಕಿತ್ತು ಎಂದು ಅವರು ಅಪೇಕ್ಷಿಸುತಿದ್ದುದರಲ್ಲಿ ತಪ್ಪಿರಲಿಲ್ಲ. ಹಾಗಂತ ಡಿಎಂಕೆ ಸೋಲಿಗೆ ಇಷ್ಟೊಂದು ಸೂತಕಭಾವ ಅನುಭವಿಸುವ ಅಗತ್ಯವೂ ಇಲ್ಲ. ಬಿಜೆಪಿಯ ಬ್ರಾಹ್ಮಣಶಾಹಿ ಮನುವಾದವನ್ನು ಧಿಕ್ಕರಿಸುವುದೇ ನಮ್ಮ ನಿರೀಕ್ಷೆಯ ಕಾಳಜಿಯಾಗಿದ್ದರೆ, ಅದಕ್ಕೆ ಪೂರಕವಾಗಿಯೇ ಈ ಫಲಿತಾಂಶವಿದೆ ಅನ್ನೋದನ್ನು ಅಂಕಿಅಂಶಗಳು ಬಿಡಿಸಿ ಹೇಳುತ್ತವೆ.
ಅದಕ್ಕೂ ಮೊದಲು, ಈ ಫಲಿತಾಂಶ ನಮ್ಮಲ್ಲಿ ಇಷ್ಟು ಗಾಢ ನಿರಾಸೆಯನ್ನೇಕೆ ಮೂಡಿಸುತ್ತಿದೆ ಅನ್ನೋದಕ್ಕೆ ಕಾರಣ ಕಂಡುಕೊಳ್ಳೋಣ. ಆಗ, ಸುಲಭವಾಗಿ ಅದರಿಂದ ಆಚೆ ಬಂದು, ಈ ಜನಾದೇಶದಲ್ಲಿರುವ ಪೂರಕ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳಬಹುದು.
ಹಿಂದಿ ಹೇರಿಕೆ, ಪ್ರಾದೇಶಿಕ ಅಸಮಾನತೆ, ಒಕ್ಕೂಟ ವ್ಯವಸ್ಥೆಗೆ ದ್ರೋಹದಂತಹ ಮೋದಿ ಸರ್ಕಾರದ ಕುತಂತ್ರಗಳ ವಿರುದ್ಧ ತಮಿಳುನಾಡಿನ ಸಿಎಂ ಸ್ಟಾಲಿನ್ ದಿಟ್ಟವಾಗಿ ಪ್ರತಿರೋಧಿಸುತ್ತಾ ಬಂದದ್ದು, ನಾವು ಅವರನ್ನು ಅಪಾರವಾಗಿ ಅಭಿಮಾನಿಸುವಂತೆ ಮಾಡಿತ್ತು. ತಮಿಳುನಾಡಿನ ರಾಜಕಾರಣವನ್ನು ತಳಮಟ್ಟದಲ್ಲಿ ಕಾಣದ ನಮಗೆ, ಸ್ಟಾಲಿನ್ ಅವರ ಈ ನಿಲುವೇ ತಮಿಳುನಾಡಿನ ರಾಜಕಾರಣದ ಸಮಸ್ತವೂ ಎಂಬಂತೆ ಭಾಸವಾಗಿತ್ತು. ಕೇರಳದ ಪಿಣರಾಯಿ ವಿಜಯನ್, ಆಂಧ್ರದ ರೇವಂತ್ ರೆಡ್ಡಿ, ನಮ್ಮದೇ ಸಿದ್ದರಾಮಯ್ಯನವರು ಕೂಡಾ ಈ ಪ್ರತಿರೋಧವನ್ನು ತೋರಿದರಾದರೂ ರಾಷ್ಟ್ರೀಯ ಪಕ್ಷಗಳ ಪ್ರತಿನಿಧಿಗಳಾದ ಅವರಿಗಿದ್ದ ಮಿತಿಗಳು, ಪಕ್ಕಾ ಪ್ರಾದೇಶಿಕ ಪಕ್ಷವಾದ ಡಿಎಂಕೆಗೆ ಇರಲಿಲ್ಲ. ಹಾಗಾಗಿ ಮಿಕ್ಕೆಲ್ಲರಿಗಿಂತ ಅವರಿಗೆ ಪ್ರತಿರೋಧದ ಸ್ಪೇಸ್ ಹೆಚ್ಚಿತ್ತು. ಅದನ್ನವರು ಬಳಸಿಕೊಂಡರು ಕೂಡಾ. ಹಾಗಾಗಿ ಸ್ಟಾಲಿನ್ ಮುಂದೆ ಮಿಕ್ಕವರ ಪ್ರತಿರೋಧ ಸಪ್ಪೆ ಅಥವಾ ಕಾಟಾಚಾರದ್ದು ಅಂತಲೂ ಕೆಲವರಿಗೆ ಅನ್ನಿಸಿರಬಹುದು. ಒಟ್ಟಾರೆ ಇಂತಹ ಅಭಿಪ್ರಾಯ ಸ್ಟಾಲಿನ್ ಅವರ ಕುರಿತು `ಬಿಜೆಪಿಯ ಪ್ರತಿರೋಧ ನಾಯಕನ’ ಚಿತ್ರಣವನ್ನು ಕಟ್ಟಿಕೊಟ್ಟಿತು. ಹಾಗಾಗಿ ಸ್ಟಾಲಿನ್ ಅವರ ಡಿಎಂಕೆ ಅಲ್ಲದೇ ಬೇರಾವುದೇ ಪಕ್ಷ ತಮಿಳುನಾಡಿನಲ್ಲಿ ಗೆದ್ದರೂ, ಅದು ಬಿಜೆಪಿಯ ಗೆಲುವು ಎಂಬ ಒಟ್ರಾಸಿ opinion ರೂಪುತಳೆಯಿತು.
ಇತ್ತ ಹೊಸದಾಗಿ ಉದಯಿಸಿದ್ದ ವಿಜಯ್ ಅವರ ಟಿವಿಕೆ ಪಕ್ಷ ತನ್ನ ideological stand ಅನ್ನು ಸ್ಪಷ್ಟವಾಗಿ establish ಮಾಡಲಿಲ್ಲ. ಸಹಜವಾಗಿ ಮತ್ತು ಅನಿವಾರ್ಯವಾಗಿ ಆತ ತನ್ನ ರಾಜಕೀಯ ಪ್ರಧಾನ ಎದುರಾಳಿಯಾದ ಡಿಎಂಕೆಯ ಆಡಳಿತ ವೈಫಲ್ಯಗಳನ್ನು ಟೀಕಿಸಿದ್ದು, ವಾಗ್ದಾಳಿಗೆ ಮುಂದಾಗಿದ್ದು, ಕರೂರು ಕಾಲ್ತುಳಿತಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ಕೈಗೊಂಬೆಯಂತಾಗಿರುವ ಸಿಬಿಐ ಆತನನ್ನು ವಿಚಾರಣೆಗೆ ಕರೆಸಿಕೊಂಡಿದ್ದನ್ನು ಕಂಡು ಆತ ಬಿಜೆಪಿಯತ್ತ ಜಾರಬಹುದೆನ್ನುವ ಅಪಾಯ ಸಹಜವಾಗಿಯೇ ನಮ್ಮನ್ನು ಕಾಡಿತು. ಈ ಎಲ್ಲಾ ಕಾರಣಗಳಿಂದ ತಮಿಳುನಾಡಿನ ರಾಜಕಾರಣವನ್ನು ದೂರದಿಂದಲೇ ಗಮನಿಸುವ ನಮಗೆ, ಸ್ಟಾಲಿನ್ ಗೆಲುವು ಮಾತ್ರವೇ ಬಿಜೆಪಿಯ ಸೋಲಿನ ದೃಢೀಕರಣ ಅಂತ ಅನ್ನಿಸಲು ಶುರುವಾಯ್ತು.

ಯಾವಾಗ ಡಿಎಂಕೆ ಹೀನಾಯವಾಗಿ ಸೋತು, ವಿಜಯ್ ನಿರೀಕ್ಷೆ ಮೀರಿ ಗೆದ್ದರೋ ಆಗ ನಮ್ಮ ಲೆಕ್ಕಾಚಾರದಂತೆ ಇದು `ಬಿಜೆಪಿ-ಪ್ರತಿರೋಧ ನಾಯಕತ್ವಕ್ಕೆ’ ಉಂಟಾದ ಗೆಲುವು ಎಂದು ಈ ಗಾಢ ನಿರಾಸೆ ಆವರಿಸುತ್ತಿದೆ.
ಆದರೆ ಫಲಿತಾಂಶದ ಅಂಕಿಅಂಶಗಳು ಈ ನಿರಾಸೆಯನ್ನು ಖಾತ್ರಿಪಡಿಸುತ್ತವೆಯೇ?
ನಾವು ಸ್ಟಾಲಿನ್ ಅವರು ಗೆಲ್ಲಬೇಕೆಂದು ಹಂಬಲಿಸಿದ್ದು, ಬಿಜೆಪಿಯ ಕೋಮುವಾದಿ ಅಜೆಂಡಾ ಸೋಲಬೇಕು ಎಂಬ ಕಾರಣದಿಂದ. ಅದೇ ನಮ್ಮ ನಿಜವಾದ ಕಾಳಜಿಯಾಗಿದ್ದರೆ, ಫಲಿತಾಂಶದ ಅಂಕಿಅಂಶಗಳು ಏನು ಹೇಳುತ್ತವೆ ಅನ್ನೋದನ್ನ ನೋಡೋಣ.
ಈ ಬರಹ ಬರೆಯುವ ಸಂದರ್ಭದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಟಿವಿಕೆ ಪಕ್ಷ 107, ಡಿಎಂಕೆ 62 ಸ್ಥಾನಗಳಲ್ಲಿ ಗೆದ್ದಿದ್ದರೆ ಎನ್ಡಿಎ ಮೈತ್ರಿಕೂಟದ ಎಡಿಎಂಕೆ 46 ಹಾಗೂ ಬಿಜೆಪಿ 1 ಸ್ಥಾನದಲ್ಲಿ ಗೆದ್ದಿದೆ. ಇನ್ನು ಓಟ್ ಶೇರ್ ಪರಿಗಣಿಸುವುದಾದರೆ ಟಿವಿಕೆ ತನ್ನ ಮೊದಲ ಯತ್ನದಲ್ಲೆ 34.87% ಓಟ್ ಶೇರ್ ಪಡೆದಿದ್ದರೆ, ಡಿಎಂಕೆ ಪಕ್ಷವು ಆಡಳಿತವಿರೋಧಿ ಅಲೆಯಿಂದಾಗಿ ಕಳೆದ ಸಲಕ್ಕಿಂತ ಸುಮಾರು 13% ಕಳೆದುಕೊಂಡು, ಈ ಸಲ 24.21% ಗೆ ಕುಸಿದಿದೆ.
ಈ ಕುಸಿತ, ಕೇವಲ ಡಿಎಂಕೆ ಪಕ್ಷದಲ್ಲಿ ಮಾತ್ರ ಆಗಿರುವಂತದ್ದಲ್ಲ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಎಡಿಎಂಕೆ ಕೂಡಾ ಸರಿಸುಮಾರು ಡಿಎಂಕೆಯಷ್ಟೇ ಓಟ್ಶೇರ್ ಕಳೆದುಕೊಂಡಿದೆ. 2021ರ ಚುನಾವಣೆಯಲ್ಲಿ 33.29% ಮತಗಳಿಕೆಯೊಂದಿಗೆ 66 ಸ್ಥಾನಗಳಲ್ಲಿ ಗೆದ್ದಿದ್ದ ಎಡಿಎಂಕೆ, ಈ ಸಲ ಸುಮಾರು 12% ವೋಟ್ಶೇರ್ ಕಳೆದುಕೊಂಡು 46 ಸ್ಥಾನಕ್ಕೆ (21.80% ವೋಟ್ಶೇರ್) ಕುಸಿದಿದೆ. ಇನ್ನು ಕಳೆದ ಬಾರಿ 4 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಸಲ ಕೇವಲ 1 ಸ್ಥಾನಕ್ಕೆ ಕುಸಿದಿದೆ. ಮೂರು ಸ್ಥಾನಗಳನ್ನು ಅದು ಕಳೆದುಕೊಂಡಿದೆ. ಆದರೆ ಅದರ ಓಟ್ಶೇರ್ ಕಳೆದ ಬಾರಿಗಿಂತ 0.4% ಏರಿಕೆಯಾಗಿದೆ. ಹಾಗಂತ ಇದು ಬಿಜೆಪಿ ಪರವಾಗಿ ತಮಿಳುನಾಡಿನ ಜನ ಒಲವು ತೋರಿದ್ದಾರೆ ಎಂದರ್ಥವಲ್ಲ. ಯಾಕೆಂದರೆ, 2021ರ ಚುನಾವಣೆಯಲ್ಲಿ ಬಿಜೆಪಿ ಕೇವಲ 20 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ ಈ ಬಾರಿ 26 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಈ ಆರು ಹೆಚ್ಚುವರಿ ಕ್ಷೇತ್ರಗಳಲ್ಲಿ ಅದು ಪಡೆದ ಮತಗಳಿಂದಾಗಿ 0.4% ಮತ ಏರಿಕೆಯಾಗಿದೆಯಷ್ಟೆ.
ವಿಜಯ್ ಟಿವಿಕೆ ಪಕ್ಷ ಪಡೆದ 34.87% ಮತಗಳಲ್ಲಿ ಸ್ಟಾಲಿನ್ ಡಿಎಂಕೆಯ 13% ಹಾಗೂ ಬಿಜೆಪಿ ಮಿತ್ರಪಕ್ಷ ಎಡಿಎಂಕೆಯ ಅಜಮಾಸು ಅಷ್ಟೇ (12%) ಶೇಕಡಾ ಮತಗಳಿವೆ. ಟಿವಿಕೆ ಪಕ್ಷವು, ಡಿಎಂಕೆಗೆ ಮಾಡಿದಷ್ಟೇ ಹಾನಿಯನ್ನು ಎಡಿಎಂಕೆಗೂ ಮಾಡಿದೆ. ಡಿಎಂಕೆ ಪಕ್ಷಕ್ಕಾದರೂ ಆಡಳಿತ ವಿರೋಧಿ ಅಲೆಯಿತ್ತು, ಹಾಗಾಗಿ ಅದು ತನ್ನ ಮತಗಳನ್ನು ಸ್ಟಾರ್ ನಟನ ಅಬ್ಬರಕ್ಕೆ ಕಳೆದುಕೊಂಡಿದ್ದರಲ್ಲಿ ಅರ್ಥವಿದೆ. ಆದರೆ, ಎಡಿಎಂಕೆ ಅಂತಹ ಆಡಳಿತವಿರೋಧಿ ಅಲೆಯೂ ಇಲ್ಲದೆ ವಿಜಯ್ ಟಿವಿಕೆಯಲ್ಲಿ ಕೊಚ್ಚಿ ಹೋಗಿದೆ ಎಂದರೆ, ಅಲ್ಲಿನ ಜನ ಬಿಜೆಪಿ ಕಾರಣಕ್ಕೇ ಆ ಮೈತ್ರಿಯನ್ನು ತಿರಸ್ಕರಿಸಿದ್ದಾರೆ ಎಂದರ್ಥವಲ್ಲವೇ?
ಅಂದರೆ, ಯಾವಯಾವ ಕಾರಣಗಳಿಗಾಗಿ ಬಿಜೆಪಿ ತಮಿಳುನಾಡಿನಲ್ಲಿ ಪ್ರಬಲವಾಗಬಾರದೆಂದು ನಾವು ಬಯಸಿದ್ದೆವೋ, ಅದಕ್ಕೆ ಪೂರಕವಾಗಿಯೇ ಅಲ್ಲಿನ ಜನ ತೀರ್ಪು ನೀಡಿ ಬಿಜೆಪಿಯ ರಾಜಕಾರಣವನ್ನು ತಿರಸ್ಕರಿಸಿದ್ದಾರೆ; ಆದರೆ, ಯಾರನ್ನು ಆಯ್ಕೆ ಮಾಡಬೇಕು ಎಂಬ ವಿಚಾರ ಬಂದಾಗ, ದೂರದವರ ನಮ್ಮ ಕಾರಣಗಳಿಗಿಂತ ಭಿನ್ನವಾಗಿ ತಳಮಟ್ಟದ ಅವರದೇ ಆಡಳಿತವಿರೋಧಿ ಕಾರಣವನ್ನು ಪರಿಗಣಿಸಿ ಟಿವಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಷ್ಟೆ!
ಹಾಗಾದರೆ, ನಾವು ಆತಂಕಿಸಿದಂತೆ ವಿಜಯ್, ಈಗ ಬಿಜೆಪಿ ಜೊತೆ ಕೈಜೋಡಿಸುವ ಅಪಾಯ ಇಲ್ಲವೇ? ಖಂಡಿತ ಇದೆ. ಅದು ವಿಜಯ್ ಅವರ ರಾಜಕೀಯ ನಿರ್ಧಾರವಾಗಿರುತ್ತದೆ. ಆದರೆ ಈಗಿನ ಜನಾದೇಶದ ನಿರ್ಧಾರವಲ್ಲ! ವಿಜಯ್ ನಿಜಕ್ಕೂ ಸೂಕ್ಷ್ಮ ರಾಜಕಾರಣಿಯಾಗಿದ್ದರೆ, ಆತ ಜನಾದೇಶದ ಒಳಸುಳಿಯನ್ನು ಅರಿತು ಬಿಜೆಪಿಯ ಕೋಮುವಾದಿ ರಾಜಕಾರಣದಿಂದ ತಮಿಳುನಾಡನ್ನು ದೂರ ಇಡಬೇಕಿದೆ. ಇದು ಆತನ ಮೇಲಿರುವ ಹೊಣೆ. ಇಡಿ, ಐಟಿ, ಸಿಬಿಐ ತರಹದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಅತಂತ್ರ ಜನಾದೇಶಗಳನ್ನು ತನಗೆ ಬೇಕಾದಂತೆ manipulate ಮಾಡಿಕೊಳ್ಳುವ ಬಿಜೆಪಿ, ವಿಜಯ್ ಅವರನ್ನು ಕೆಣಕದೇ ಬಿಡುತ್ತಾ? ಅದು ಬೇರೆಯದೇ ಪ್ರಶ್ನೆ. ಒಂದುವೇಳೆ, ಡಿಎಂಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಈ ಬಗೆಯ ಅತಂತ್ರ ಅಸೆಂಬ್ಲಿ ನಿರ್ಮಾಣವಾಗಿದ್ದರೂ ಬಿಜೆಪಿ ಅಂತಹ ಆಟಗಳನ್ನು ಆಡದೆ ಇರುತ್ತಿರಲಿಲ್ಲ. ಅಂತಹ ಅಪ್ರಜಾತಾಂತ್ರಿಕ ವರ್ತನೆಗಳನ್ನೆ ರಾಜಕೀಯ ತಂತ್ರಗಾರಿಕೆ ಎಂದುಕೊಂಡಿರುವ ಪಕ್ಷ ಅದು. ಆದರೆ ತಮಿಳುನಾಡಿನ ಜನ ಬಿಜೆಪಿಯ ಹಿಂದಿ ಹೇರಿಕೆ, ಪ್ರಾಂತೀಯ ದಬ್ಬಾಳಿಕೆ, ಒಕ್ಕೂಟ ದ್ರೋಹಗಳನ್ನು ಸಾರಾಸಗಟಾಗಿ, ಕಳೆದ ಸಲಕ್ಕಿಂತಲೂ ತೀಕ್ಷ್ಣವಾಗಿ ತಿರಸ್ಕರಿಸಿರುವುದು ಮಾತ್ರ ಸತ್ಯ.
ದ್ರಾವಿಡ ರಾಜಕಾರಣ ಇವತ್ತಿಗೂ ಕೋಮುವಾದಿ ರಾಜಕಾರಣಕ್ಕೆ ಅಭೇದ್ಯ ಎನ್ನುವುದನ್ನು ತಮಿಳುನಾಡಿನ ಜನ ಈ ಫಲಿತಾಂಶದ ಮೂಲಕ ಮತ್ತೆ ರುಜುವಾತು ಮಾಡಿದ್ದಾರೆ. ಈ ತೀರ್ಪನ್ನು ಗೌರವಿಸುವ ಹೊಣೆ ಈಗ ವಿಜಯ್ ಅವರದ್ದು. ಆದರೆ ಒಂದಂತೂ ಸತ್ಯ, ಕುತಂತ್ರಿಗಳ ರಾಜಕೀಯ ಷಡ್ಯಂತ್ರಗಳೆಡೆಗೆ ನಮಗಿರುವ ಆತಂಕ, ಚುನಾವಣಾ ಫಲಿತಾಂಶವನ್ನು ಅಳೆಯುವ ಮಾನದಂಡವಾಗಬಾರದು.
ಮಾಚಯ್ಯ ಎಂ ಹಿಪ್ಪರಿಗಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಟಿವಿಕೆ ಭರವಸೆಗಳ ಮಹಾಪೂರಕ್ಕೆ ಸಾಗರದಂತೆ ಹರಿದು ಬಂದ ಮತಗಳು


