ಚಂಡೀಗಢ: ರಾಜಸ್ಥಾನ್ ರಾಯಲ್ಸ್ ಬುಧವಾರ ರಾತ್ರಿ ಅಜೇಯರಾಗಿ ಉಳಿದಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲಿನ ರುಚಿ ಉಣಿಸಿತು. ಆದರೆ ಈ ಗೆಲುವಿನ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಅದಕ್ಕೆ ಕಾರಣ, ತಂಡದ ನಾಯಕ ರಿಯಾನ್ ಪರಾಗ್!
ಆರ್‌ಆರ್ ನಾಯಕನಾಗಿ ತಂಡವನ್ನು ಗೆಲ್ಲಿಸಿದ ಸಂಭ್ರಮದ ನಡುವೆಯೇ ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪ್ ಮಾಡುತ್ತಿರುವುದು ಲೈವ್ ಕ್ಯಾಮೆರಾಗಳಲ್ಲಿ ಸೆರೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಬೃಹತ್ ವಿವಾದಕ್ಕೆ ಕಾರಣವಾಗಿದೆ.
ವೇಪಿಂಗ್ ಎಂದರೆ ಎಲೆಕ್ಟ್ರಾನಿಕ್ ಸಿಗರೇಟ್ ಸೇವಿಸುವುದು. ಇದು ಭಾರತದಲ್ಲಿ ಬ್ಯಾನ್ ಆಗಿದೆ. ವೇಪಿಂಗ್ ಗೆ ಭಾರತ ಕಾನೂನಿನ ಅಡಿಯಲ್ಲಿ ಒಂದು ವರ್ಷದವರೆಗೆ ಶಿಕ್ಷೆ ವಿಧಿಸಬಹುದಾಗಿದೆ.
ಸ್ಟೇಡಿಯಂ ಡ್ರೆಸ್ಸಿಂಗ್ ರೂಮ್ ಮತ್ತು ಪ್ರದೇಶದಲ್ಲಿ ಯಾವುದೇ ರೀತಿಯ ಧೂಮಪಾನ ಅಥವಾ ವೇಪಿಂಗ್‌ಗೆ ಸಂಪೂರ್ಣ ನಿಷೇಧವಿದೆ. ಇದು ಕೇವಲ ಬಿಸಿಸಿಐ ನಿಯಮ ಉಲ್ಲಂಘನೆಯಷ್ಟೇ ಅಲ್ಲ, ದೇಶದ ಕಾನೂನಿನ ಉಲ್ಲಂಘನೆಯೂ ಹೌದು.
PECA 2019 ಕಾನೂನು ಪ್ರಕಾರ ಎಲೆಕ್ಟ್ರಾನಿಕ್ ಸಿಗರೆಟ್, ವೇಪ್‌ಗಳ ತಯಾರಿಕೆ, ಮಾರಾಟ, ಖರೀದಿ, ಆಮದು-ರಫ್ತು ಮತ್ತು ಪ್ರಚಾರಕ್ಕೆ ಪೂರ್ಣ ನಿಷೇಧವಿದೆ. ಉಲ್ಲಂಘನೆ ಮಾಡಿದರೆ ಜೈಲು ಶಿಕ್ಷೆ ಹಾಗೂ ಭಾರಿ ದಂಡದ ವಿಧಿಸಬಹುದಾಗಿದೆ.
ಪರಾಗ್ ಈಗ ದೊಡ್ಡ ತೊಂದರೆಯಲ್ಲಿ ಸಿಲುಕಿರುವುದು ಸ್ಪಷ್ಟ. ಬಿಸಿಸಿಐ ಏನು ಕ್ರಮ ತೆಗೆಯುತ್ತದೆ ಎಂಬ ಕುತೂಹಲ ಮೂಡಿದೆ.
ರಿಯಾನ್ ಪರಾಗ್ ಈ ಐಪಿಎಲ್ ನಲ್ಲಿ ಕೆಟ್ಟ ಫಾರ್ಮ್ ನಲ್ಲಿ ಆಡುತ್ತಿದ್ದಾರೆ. ತಂಡ ಚೆನ್ನಾಗಿ ಆಡುತ್ತಿದ್ದರೂ ತಂಡದ ನಾಯಕ ಕಳಪೆ ಪ್ರದರ್ಶನ ನೀಡುತ್ತಿರುವುದು ಆರ್ ಆರ್ ತಂಡದ ಮ್ಯಾನೇಜ್ಮೆಂಟ್ ಗೆ ತಲೆನೋವಾಗಿ ಪರಿಣಮಿಸಿತ್ತು. ಅದರ ನಡುವೆ ವೇಪಿಂಗ್ ಮಾಡಿ ಪರಾಗ್ ಹೊಸ ತಲೆನೋವು ತಂದಿದ್ದಾರೆ. ಪರಾಗ್ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ ತಂಡದ ಬ್ರಾಂಡ್ ಇಮೇಜ್ ಮೇಲೂ ಪರಿಣಾಮ ಬೀರಲಿದೆ.
ಇನ್ನೊಂದೆಡೆ ಐಪಿಎಲ್ ಆಡಳಿತವು ಸಹ ರಿಯಾನ್ ಪರಾಗ್ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಭಾರಿ ದಂಡ, ಪಂದ್ಯಗಳಿಗೆ ನಿಷೇಧ ವಿಧಿಸುವ ಸಾಧ್ಯತೆ ಇದೆ. ಚಂಡೀಗಢ ಪೊಲೀಸರು ಪ್ರಕರಣ ದಾಖಲಿಸುವ ಸಾಧ್ಯತೆಯೂ ಇದೆ.

