‘ಡಾ. ರಾಜಕುಮಾರವರು ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ, ನೈತಿಕತೆಗೆ ಮಾದರಿಯಾಗಿದ್ದಾರೆ, ಸರಳತೆಗೆ ಆದರ್ಶವಾಗಿದ್ದಾರೆ, ಆದ್ದರಿಂದ ಅವರ ಸಮಾಧಿಯ ಸ್ಥಳ ಇರುವಲ್ಲಿ ಒಂದಿಷ್ಟು ಜಾಗವನ್ನು ಸರಕಾರ ಕೊಟ್ಟಿದೆ’ ಎಂದು ಅಭಿಮಾನಿಗಳು ಉತ್ತರಿಸಿದ್ದರೆ ಇಷ್ಟೊಂದು ವಾದ ವಿವಾದವೇ ಆಗುತ್ತಿರಲಿಲ್ಲ. ಆದ್ದರಿಂದ ಪ್ರಶ್ನಿಸುವವರು ಮತ್ತು ಆಕ್ರೋಶವನ್ನು ವ್ಯಕ್ತಪಡಿಸುವವರು ಡಾ. ರಾಜಕುಮಾರವವರ ಸಹನೆ ತಾಳ್ಮೆ ಗುಣಗಳನ್ನು ಅಳವಡಿಸಿಕೊಂಡರೆ ಒಳ್ಳೆಯದು. ಅಭಿಮಾನ ಇರಲಿ ಅದು ಎಂದೂ ಅಂಧಾಭಿಮಾನ ಆಗದಿರಲಿ -ಶಶಿಕಾಂತ ಯಡಹಳ್ಳಿ, ರಂಗಕರ್ಮಿ.
ನಟ ಚೇತನ್ ಅಹಿಂಸಾ ರವರು ಡಾ. ರಾಜಕುಮಾರ್ ಅವರ ಕುರಿತು ಅಪಾರವಾದ ಗೌರವವನ್ನು ಇಟ್ಟುಕೊಂಡೆ ಅವರ ಸಮಾಧಿ ಜಾಗದ ಕುರಿತು ತಮ್ಮ ಅನಿಸಿಕೆಯನ್ನ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
“ನಾವು ರಾಜಕುಮಾರ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ ಬೆಂಗಳೂರು ನಗರದ ಮಧ್ಯಭಾಗದಲ್ಲಿ 2006ರಲ್ಲಿ ಒಬ್ಬ ನಟನ ಸಮಾಧಿಯ ಕಾಂಪ್ಲೆಕ್ಸ್ ಗಾಗಿ ಎರಡೂವರೆ ಎಕರೆ ಭೂಮಿಯನ್ನು ಸರಕಾರ ನೀಡುವುದು ತಿಳುವಳಿಕೆಯ ನಿರ್ಧಾರವಾಗಿತ್ತೇ” ಎಂದು ಚೇತನ್ ಪ್ರಶ್ನಿಸಿದ್ದಾರೆ. “ಸರ್ಕಾರವು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕರ ಉಪಯೋಗಕ್ಕೆ ತಕ್ಕಂತೆ ಆ ಭೂಮಿಯನ್ನು ಹಂಚಿಕೆ ಮಾಡಬೇಕು, ಮತಗಳ ಲಾಭದ ಉದ್ದೇಶದಿಂದ ಹಂಚಬಾರದು” ಎಂದೂ ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಹೇಳಿಕೆ ಡಾ.ರಾಜಕುಮಾರ್ ರವರ ಕೆಲವು ಅಭಿಮಾನಿಗಳನ್ನ ಕೆರಳಿಸಿದೆ. ಶೇಷಾದ್ರಿಪುರದಲ್ಲಿರುವ ಚೇತನ್ ರವರ ಮನೆಗೆ ಸಾರಾ ಗೋವಿಂದುರವರ ನೇತೃತ್ವದಲ್ಲಿ ಎ.25 ರಂದು ನೂರಾರು ಅಭಿಮಾನಿಗಳು ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಚೇತನ್ ರವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಗಲಾಟೆ ಮಾಡಿದ್ದಾರೆ, ಕ್ಷಮೆ ಯಾಚಿಸಲು ಒತ್ತಾಯಿಸಿದ್ದಾರೆ. ಈ ರೀತಿಯ ಒತ್ತಡಗಳಿಂದ ವಿಚಲಿತರಾದ ಚೇತನ್ ಕೊನೆಗೂ ಕ್ಷಮೆ ಯಾಚಿಸಿದ್ದಾರೆ. ಅವರ ಮನೆಯ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಚೇತನ್ ರವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ.

ಈ ಎಲ್ಲಾ ಘಟನೆಗಳು ನಿಜಕ್ಕೂ ಆತಂಕಕಾರಿಯಾಗಿವೆ. ಯಾಕೆಂದರೆ ಈ ರೀತಿ ಚೇತನ್ ರವರು ಬಹಿರಂಗವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು ಡಾ.ರಾಜ್ ರವರ ಅಭಿಮಾನಿ ವಲಯಕ್ಕೆ ಖಂಡಿತ ನೋವಾಗಿರಬಹುದು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ತಮ್ಮ ಅನಿಸಿಕೆಯನ್ನು ಹೇಳುವ, ಪ್ರಶ್ನಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇದೆ. ಆದರೆ “ಯಾರೂ ಪ್ರಶ್ನಿಸಲೇಬಾರದು , ಹಾಗೇನಾದ್ರೂ ಒಂದು ವೇಳೆ ಪ್ರಶ್ನಿಸಿದರೆ ಗುಂಪು ಕಟ್ಟಿಕೊಂಡು ಬಂದು ಮುತ್ತಿಗೆ ಹಾಕಲಾಗುವುದು” ಎನ್ನುವುದು ಕಾನೂನು ವಿರೋಧಿ ಕೆಲಸವಾಗಿದೆ. ಚೇತನ್ ರವರ ಹೇಳಿಕೆಯಲ್ಲಿ ನೋವಾಗುವಂತಹ ಸಂಗತಿ ಇದ್ದರೆ ಅದರ ವಿರುದ್ಧ ಹೇಳಿಕೆ ನೋಡುವ, ಸಾಮಾಜಿಕ ಜಾಲತಾಣದಲ್ಲೇ ಆಕ್ಷೇಪ ವ್ಯಕ್ತಪಡಿಸುವ, ಪ್ರೆಸ್ ಮೀಟ್ ಮಾಡುವ ಅಥವಾ ಕಾನೂನಾತ್ಮಕ ಕ್ರಮಕ್ಕೆ ಆಗ್ರಹಿಸುವ ಎಲ್ಲಾ ಸಾಂವಿಧಾನಿಕ ಸಾಧ್ಯತೆಗಳು ಇವೆ. ಆದರೆ ಹೀಗೆ ಗುಂಪು ಕಟ್ಟಿಕೊಂಡು ಅವರ ಮನೆಗೆ ಹೋಗಿ ಗಲಾಟೆ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿ ಕ್ಷಮೆಯಾಚನೆಗೆ ಬಲವಂತ ಪಡಿಸುವುದು ಖಂಡಿತ ಸ್ವೀಕಾರಾರ್ಹವಲ್ಲ.
ಯಾಕೆಂದರೆ ಚೇತನ್ ಕನ್ನಡ ಚಲನಚಿತ್ರರಂಗದ ಭಾಗವಾಗಿದ್ದಾರೆ. ಸಾಮಾಜಿಕ ಹೋರಾಟಗಾರ ರಾಗಿದ್ದಾರೆ. ಆದರೆ ಅವರ ಒಂದು ಹೇಳಿಕೆ ಇಷ್ಟೊಂದು ಆಕ್ರೋಶಕ್ಕೆ ಕಾರಣವಾಗುವ ಅಗತ್ಯ ಇರಲಿಲ್ಲ. ಅವರು ಡಾ. ರಾಜಕುಮಾರ್ ಅವರಿಗೆ ಎಲ್ಲೂ ಅವಮಾನವನ್ನುಂಟು ಮಾಡಿಲ್ಲ. ಆದರೂ ದೊಡ್ಡ ಅಪರಾಧ ಮಾಡಿದ್ದಾರೋ ಎನ್ನುವ ರೀತಿಯಲ್ಲಿ ಬಿಂಬಿಸುವುದು ಸಮಂಜಸವಲ್ಲ.
ಈ ಹಿಂದೆ ನಡೆದ ಒಂದು ಘಟನೆ ಜ್ಞಾಪಿಸಿಕೊಳ್ಳಬೇಕೆಂದರೆ, ಲಂಕೇಶ್ ಪತ್ರಿಕೆಯಲ್ಲಿ ಲಂಕೇಶ್ ರವರು ರಾಜಕುಮಾರ್ ಅವರನ್ನು ಟೀಕಿಸಿ ಲೇಖನ ಬರೆದಿದ್ದರು. ಆಗ ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದ ಇದೇ ಸಾರಾ ಗೋವಿಂದರವರು ಒಂದಿಷ್ಟು ಉದ್ರಿಕ್ತರ ಗುಂಪನ್ನು ಕರೆದುಕೊಂಡು ಲಂಕೇಶ್ ಪತ್ರಿಕೆಯ ಕಚೇರಿಯನ್ನು ಧ್ವಂಸ ಮಾಡಿ, ಅಲ್ಲಿದ್ದ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದರು. ನಂತರ ಲಂಕೇಶ್ ಅವರು ಕೊಟ್ಟ ದೂರಿನ ಮೇಲೆ ಗೋವಿಂದರವರನ್ನು ಅರೆಸ್ಟ್ ಮಾಡಿ ಕೇಸ್ ಕೂಡ ದಾಖಲಿಸಲಾಗಿತ್ತು. ಸ್ವತಃ ರಾಜಕುಮಾರರವರೇ ಲಂಕೇಶ್ ರವರಿಗೆ ಫೋನ್ ಮಾಡಿ ಸಾರಾ ಗೋವಿಂದು ಹಾಗೂ ಸಂಗಡಿಗರು ಮಾಡಿದ ತಪ್ಪಿಗೆ ಕ್ಷಮೆ ಕೂಡ ಕೇಳಿದ್ರು. ಈಗ ನಿನ್ನೆ ಅದೇ ರೀತಿಯ ಒಂದು ಘಟನೆಯು ಮತ್ತೆ ಜರಗಿ ಹೋಯಿತು. ಚೇತನ್ ರವರ ಮನೆ ಮುಂದೆ ಸಾರಾ ಗೋವಿಂದು ಟೀಮ್ ಗಲಾಟೆ ಮಾಡಿತು. ಡಾಕ್ಟರ್ ರಾಜಕುಮಾರ್ ಅವರು ಇದ್ದಿದ್ರೆ ಖಂಡಿತ ಮನಸ್ಸಿಗೆ ನೋವು ಮಾಡಿಕೊಳ್ಳುತ್ತಿದ್ದರು.
ಈ ಅಂಧಭಕ್ತಿ ಮತ್ತು ವ್ಯಕ್ತಿ ಪೂಜೆ ಎನ್ನುವುದು ಭಾರತೀಯರ ಭಾವನೆಯೇ ಆದಂತಿದೆ. ಆದರೆ ಅದಕ್ಕೆ ಪ್ರತಿರೋಧವೂ ಇರುತ್ತದೆ. ಯಾರು ತಮ್ಮ ಆರಾಧ್ಯ ದೈವದ ಕುರಿತು ಪ್ರಶ್ನಿಸುತ್ತಾರೋ ಅವರನ್ನು ಹೀಗಳೆಯುವ, ನಿಂದಿಸುವ, ಬಲವಂತ ಪಡಿಸುವ ಹಾಗೂ ಅವರ ಮೇಲೆ ಹಲ್ಲೆ ಮಾಡುವ ಸಾಧ್ಯತೆಗಳು ನಡೆಯುತ್ತಲೇ ಇರುತ್ತವೆ. ಮೋದಿ ಸರಕಾರ ಬಂದ ಮೇಲಂತೂ ಈ ಅಂಧಭಕ್ತರ ವ್ಯಕ್ತಿ ಪೂಜೆ ಅತಿಯಾಗಿದೆ. ಇದು ಖಂಡಿತ ಅಪೇಕ್ಷಣೀಯವಲ್ಲ.
ಆಯ್ತು, ಈಗ ಚೇತನ್ ರವರು ಪ್ರಶಿಸಿದ್ದಾರೆ, ವಿರೋಧ ಇದ್ದವರು ಸಾಧ್ಯವಾದರೆ ಅದಕ್ಕೆ ಉತ್ತರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಖಂಡಿಸಿ. ಅದು ಬಿಟ್ಟು ಪ್ರಶ್ನಿಸಿದವರ ಮನೆ ಮೇಲೆ ಮುಗಿಬಿದ್ದು ಕಾನೂನುಬಾಹಿರವಾಗಿ ಗಲಾಟೆ ಮಾಡುವ ಅಗತ್ಯವಾದರೂ ಏನಿದೆ?. ಚೇತನ್ ರವರು ಹಲವಾರು ಸಾರಿ ಬೇರೆ ಬೇರೆ ಸನ್ನಿವೇಶಗಳಲ್ಲಿ ತಮ್ಮ ಪ್ರತಿರೋಧವನ್ನ ವ್ಯಕ್ತಪಡಿಸಿದ್ದಾರೆ. ಆ ಕುರಿತು ಚರ್ಚೆಗಳು ಆಗಿವೆ, ದೂರುಗಳೂ ದಾಖಲೆಯಾಗಿವೆ. ಕೇಸುಗಳು ನಡೆಯುತ್ತಿವೆ. ಇವೆಲ್ಲವೂ ಸಾಂವಿಧಾನಿಕವಾಗಿ ನಡೆಯುವಂತ ಪ್ರಕ್ರಿಯೆಗಳು. ಆದರೆ ಹುಡುಕಿ ಹೋಗಿ ಗಲಾಟೆ ಮಾಡುವ, ಸೀನ್ ಕ್ರಿಯೇಟ್ ಮಾಡುವ, ಆಕ್ರೋಶ ವ್ಯಕ್ತಪಡಿಸುವ, ಕಾನೂನನ್ನು ಕೈಗೆ ತೆಗೆದುಕೊಳ್ಳುವಂತಹ ಕ್ರಮಗಳು ಖಂಡಿತಾ ಉತ್ತಮ ನಡವಳಿಕೆಯಲ್ಲ. ಆದ್ದರಿಂದ ಅಭಿಮಾನಿಗಳಾಗಿರಲಿ, ಇಲ್ಲವೇ ಕನ್ನಡ ಪರ ಸಂಘಟನೆಗಳಾಗಿರಲಿ, ರಾಜಕುಮಾರರವರ ಮೇಲೆ ನಿಜಕ್ಕೂ ಅಭಿಮಾನ ಎನ್ನುವುದಿದ್ದರೆ, ಅವರ ವಿನಯವಂತಿಕೆಯನ್ನ, ಕ್ಷಮಾಗುಣವನ್ನ, ಬೇಡವಾದದ್ದನ್ನು ನಿರ್ಲಕ್ಷಿಸುವ ರೀತಿಯನ್ನ ಅವರ ಅಭಿಮಾನಿಗಳು ಕಲಿತುಕೊಳ್ಳಲಿ. ಅದು ಬಿಟ್ಟು ಈ ರೀತಿ ರಾಜಕುಮಾರ ಅವರ ತತ್ವಾದರ್ಶಗಳಿಗೆ ಧಕ್ಕೆಯಾಗುವಂತಹ ರೀತಿಯಲ್ಲಿ ನಡೆದುಕೊಳ್ಳದೇ ಇರಲಿ.
ಚೇತನ್ ರವರು ಸಹ ಇದರಿಂದ ಒಂದು ಪಾಠವನ್ನು ಕಲಿಯಬೇಕಾಗಿದೆ ಸಾಮಾಜಿಕ ಮನಸ್ಥಿತಿ ಹಾಗೂ ಅಭಿಮಾನಿಗಳ ಭಾವನೆಗಳನ್ನು ಅರಿತುಕೊಂಡು ಪ್ರಶ್ನಿಸುವ ಕೆಲಸವನ್ನು ಮಾಡಲಿ. ಅವರ ಪ್ರಶ್ನೆ ಸರಿಯಾಗಿಯೇ ಇರಬಹುದು. ಆದರೆ ಈಗ ಇಷ್ಟು ವರ್ಷಗಳ ನಂತರ ಅದನ್ನು ವ್ಯಕ್ತಪಡಿಸುವ ಅಗತ್ಯವೇ ಇರಲಿಲ್ಲ. ನಿರ್ಲಕ್ಷಿಸಬಹುದಾದ ಒಂದು ಸಂಗತಿಯನ್ನು ಇಷ್ಟೊಂದು ದೀರ್ಘಕ್ಕೆ ತೆಗೆದುಕೊಂಡು ಹೋಗುವ ಅಗತ್ಯವೂ ಅಭಿಮಾನಿಗಳಿಗೆ ಬೇಕಿರಲಿಲ್ಲ.
ಇಷ್ಟಕ್ಕೂ ಚೇತನ್ ರವರು ಪ್ರಶ್ನಿಸಿದ್ದು ಡಾ.ರಾಜಕುಮಾರರವರನ್ನಲ್ಲ, ಸರಕಾರವನ್ನ. ಜನೋಪಯೋಗಿ ಆಗಬಹುದಾದ ಸರಕಾರಿ ಜಮೀನನ್ನು ನಟರೊಬ್ಬರ ಸಮಾಧಿಗಾಗಿ ಕೊಟ್ಟಿದ್ದು ತಿಳುವಳಿಕೆಯ ನಿರ್ಧಾರವೇ? ಎಂದು ಪ್ರಶ್ನಿಸಿದ್ದಾರೆ. ಇದರಲ್ಲಿ ತಪ್ಪೇನಿದೆ? ಅದು ಅವರ ಅನಿಸಿಕೆ. ‘ಡಾ. ರಾಜಕುಮಾರವರು ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ, ನೈತಿಕತೆಗೆ ಮಾದರಿಯಾಗಿದ್ದಾರೆ, ಸರಳತೆಗೆ ಆದರ್ಶವಾಗಿದ್ದಾರೆ, ಆದ್ದರಿಂದ ಅವರ ಸಮಾಧಿಯ ಸ್ಥಳ ಇರುವಲ್ಲಿ ಒಂದಿಷ್ಟು ಜಾಗವನ್ನು ಸರಕಾರ ಕೊಟ್ಟಿದೆ’ ಎಂದು ಅಭಿಮಾನಿಗಳು ಉತ್ತರಿಸಿದ್ದರೆ ಇಷ್ಟೊಂದು ವಾದ ವಿವಾದವೇ ಆಗುತ್ತಿರಲಿಲ್ಲ. ಆದ್ದರಿಂದ ಪ್ರಶ್ನಿಸುವವರು ಮತ್ತು ಆಕ್ರೋಶವನ್ನು ವ್ಯಕ್ತಪಡಿಸುವವರು ಡಾ. ರಾಜಕುಮಾರವವರ ಸಹನೆ ತಾಳ್ಮೆ ಗುಣಗಳನ್ನು ಅಳವಡಿಸಿಕೊಂಡರೆ ಒಳ್ಳೆಯದು. ಅಭಿಮಾನ ಇರಲಿ ಅದು ಎಂದೂ ಅಂಧಾಭಿಮಾನ ಆಗದಿರಲಿ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ಬಂದೂಕಿನ ನಳಿಕೆಯಲ್ಲಿ ಗುಬ್ಬಿ ಗೂಡು


