ಯುದ್ಧದ ನಿಜವಾದ ಮುಖವನ್ನು ರಾಜಕೀಯ ವೇದಿಕೆಗಳ ಮೇಲೆ ನಡೆಯುವ ಭಾಷಣಗಳಲ್ಲಿ ನೋಡಬಾರದು. ಅವಶೇಷಗಳ ನಡುವೆ ಅಳುತ್ತಿರುವ ಮಕ್ಕಳ ಕಣ್ಣಲ್ಲಿ ನೋಡಬೇಕು. ಮನೆ, ಮಠ, ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ಪರದೇಸಿಗಳಾಗಿ ಅಲೆದಾಡುತ್ತಿರುವ ಜನರ ನಿರಾಶೆಯಲ್ಲಿ ನೋಡಬೇಕು. ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಸೈನಿಕರ ಕುಟುಂಬಗಳ ಮೌನ ದುಃಖದಲ್ಲಿ ನೋಡಬೇಕು. ತಮ್ಮ ದೇಶವನ್ನು ಬಿಟ್ಟು ಬೇರೆ ದೇಶಗಳಿಗೆ ಪಲಾಯನ ಮಾಡಬೇಕಾದ ಜನರ ಅಸ್ಥಿರ ಬದುಕಿನಲ್ಲಿ ನೋಡಬೇಕು. ಅಲ್ಲಿ ಮಾತ್ರ ಯುದ್ಧದ ನಿಜವಾದ ಭೀಕರತೆ ಗೋಚರಿಸುತ್ತದೆ –ಸುಚಿತ್ರಾ ಎಸ್ ಎ, ವಕೀಲರು, ರಾಜಕೀಯ ವಿಶ್ಲೇಷಕರು.
ಬಂದೂಕಿನ ನಳಿಕೆಯಲ್ಲಿ ಗುಬ್ಬಿ ಗೂಡು ಕಟ್ಟುವ ದಿನಗಳು. ಬಹುಶಃ ಈ ನಾಡಿನ ಪ್ರತಿಯೊಂದು ಮಗುವೂ ಶಾಲಾ ಕಾಲೇಜುಗಳಲ್ಲಿ ಕೇಳಿದ ಕಥೆ, ಕವನ ಇವನ್ನೇ ಸಾರುತ್ತಿದ್ದವು. ಒಂದಾನೊಂದು ಕಾಲದಲ್ಲಿ ಕವಿಗಳು ಮತ್ತು ಕನಸುಗಾರರು ಕಲ್ಪಿಸಿದ್ದ ಆ ದೃಶ್ಯ – ಮನುಷ್ಯನು ತನ್ನ ಯುದ್ಧ, ಆಯುಧ, ಸಮರವನ್ನು ಮರೆತು ಪ್ರಕೃತಿಯೊಂದಿಗೆ ಸಹಜವಾಗಿ ಬದುಕುವ ದಿನಗಳು. ಈ ಕನಸು ಇಂದು ನಿಧಾನವಾಗಿ ನಮ್ಮ ಕಣ್ಣೆದುರೇ ಮಸುಕಾಗುತ್ತಿರುವಂತೆ ಕಾಣುತ್ತಿದೆ. ಜ್ಞಾನದಲ್ಲಿ, ವಿಜ್ಞಾನದಲ್ಲಿ, ತಂತ್ರಜ್ಞಾನದಲ್ಲಿ, ಕೃತಕ ಬುದ್ಧಿಮತ್ತೆಯಲ್ಲಿ ಮನುಷ್ಯನು ಎಷ್ಟು ಮುಂದೆ ಬಂದಿದ್ದರೂ, ಅವನ ಮನಸ್ಸಿನ ಒಳಗಿರುವ ಯುದ್ಧದ ಹುಚ್ಚು ಇನ್ನೂ ಸಂಪೂರ್ಣವಾಗಿ ನಶಿಸಿಲ್ಲ. ಎಷ್ಟೋ ದಾರ್ಶನಿಕರು, ತತ್ವಜ್ಞಾನಿಗಳು, ನಾಯಕರುಗಳು, ಶಾಂತಿ ದೂತರು, ಕವಿಗಳು, ವಿಜ್ಞಾನಿಗಳು ಎಲ್ಲರೂ ಕೂಡ ಮನುಕುಲವನ್ನು ಯುದ್ಧದ ವಿರುದ್ಧ ಎಚ್ಚರಿಸಿದರೂ, ಯುದ್ಧ ಎನ್ನುವುದು ನಿಲ್ಲುವುದೇ ಇಲ್ಲವೇನೋ ಎನ್ನುವ ಮಟ್ಟಕ್ಕೆ ಯುದ್ಧಗಳು ನಮ್ಮ ಪ್ರಪಂಚವನ್ನು ವ್ಯಾಪಿಸಿವೆ.
“ಯುದ್ಧದಲ್ಲಿ ಯಾರೂ ಜಯಶಾಲಿ ಎಂದಿಲ್ಲ (There is no winner in a war)” ಎಂಬ ನುಡಿ ಕೇಳಲು ಸರಳವಾದರೂ ಅದರೊಳಗೆ ಮಾನವ ಇತಿಹಾಸ ಅನುಭವಿಸಿದ ಮಾರಣಹೋಮದ ಕಹಿ ಅನುಭವ ಅಡಗಿದೆ. ಯುದ್ಧದ ನಂತರ ಯಾವುದೇ ರಾಷ್ಟ್ರ ಕೂಡ ವಿಜಯ ಘೋಷಿಸಬಹುದು. ರಾಜಕೀಯ ನಾಯಕರು ಜಯದ ಭಾಷಣ ಮಾಡಬಹುದು. ಸೈನಿಕ ವಿಜಯವನ್ನು ರಾಷ್ಟ್ರದ ಗೌರವವಾಗಿ ಬಣ್ಣಿಸಬಹುದು. ಆದರೆ ಯುದ್ಧದ ನಿಜವಾದ ಪರಿಣಾಮವನ್ನು ನೋಡಿದರೆ, ಅದು ಒಂದು ಸಮಾಜದ ಹೃದಯದಲ್ಲಿ ಕೊನೆಯವರೆಗೂ ಮಾಸಲಾಗದ ಗಾಯವಾಗಿಯೇ ಉಳಿಯುತ್ತದೆ. ಮನುಕುಲ ಕಂಡ ಯುದ್ಧಗಳಿಗೆ ಲೆಕ್ಕವಿಲ್ಲ. ಎಲ್ಲ ಯುದ್ಧಗಳಲ್ಲೂ ಸೋತವನು ಸತ್ತಿದ್ದಾನೆ, ಗೆದ್ದವನು ಸೋತಿದ್ದಾನೆ ಎಂದು ನಮ್ಮ ಕಣ್ಮುಂದಿನ ಇತಿಹಾಸವೇ ಹೇಳುತ್ತದೆ.
ಯುದ್ಧದಲ್ಲಿ ಅಂತಿಮವಾಗಿ ಸೋಲುವುದು ಸಾಮಾನ್ಯ ಮನುಷ್ಯ. ಅವನಿಗೆ ಅಧಿಕಾರವಿಲ್ಲ, ಸಂಪತ್ತಿಲ್ಲ, ನಿರ್ಧಾರ ಮಾಡುವ ಶಕ್ತಿಯೂ ಇಲ್ಲ. ಆದರೆ ಯುದ್ಧದ ಹೊರೆ ಅವನ ಮೇಲೇ ಬೀಳುತ್ತದೆ. ತನ್ನ ಕುಟುಂಬದ ಸದಸ್ಯರನ್ನೋ, ಆಸ್ತಿಯನ್ನೋ, ಮನೆಯನ್ನೋ, ಹಣವನ್ನೋ, ತನ್ನ ಸ್ವಾತಂತ್ರ್ಯವನ್ನೋ ಅಥವಾ ಕೆಲವೊಮ್ಮೆ ಎಲ್ಲವನ್ನೂ ಕಳೆದುಕೊಂಡು ನಿಜವಾದ ಸೋಲನ್ನು ಉಣ್ಣುವವನು ಸಾಮಾನ್ಯ ಪ್ರಜೆ. ತನ್ನ ಮಕ್ಕಳ ಭವಿಷ್ಯ ಯುದ್ಧದ ಕತ್ತಲೆಯೊಳಗೆ ಕಣ್ಮರೆಯಾಗುವುದನ್ನು ನೋಡುವವನು ಅವನೇ. ಯುದ್ಧದ ಹೊಗೆ ಮತ್ತು ಗುಂಡಿನ ಸದ್ದು ನಡುವೆ ತಮ್ಮ ಬಾಲ್ಯ ಕಳೆದುಕೊಳ್ಳುವವರು ಮಕ್ಕಳು. ತಮ್ಮ ಕುಟುಂಬಗಳನ್ನು ಕಳೆದುಕೊಳ್ಳುವವರು, ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವವರು ಕೂಡ ಮಹಿಳೆಯರು. ಜಗತ್ತಿನಲ್ಲಿ ಇಂದಿನವರೆಗೆ ನಡೆದ ಎಲ್ಲ ಯುದ್ಧಗಳಲ್ಲೂ ಕೂಡ ಒಂದಲ್ಲ ಒಂದು ದೇಶದ, ಒಂದಲ್ಲ ಒಂದು ನಗರದ, ಒಂದಲ್ಲ ಒಂದು ಹಳ್ಳಿಯ, ಒಂದಲ್ಲ ಒಂದು ಕುಟುಂಬದ, ಒಂದಲ್ಲ ಒಂದು ತಲೆಮಾರಿನ ಕನಸುಗಳು ಯುದ್ಧದ ಭಸ್ಮದಲ್ಲಿ ಕರಗಿ ಹೋಗಿರುವುದನ್ನು ಇತಿಹಾಸದ ಪುಟಗಳು ನಮ್ಮ ಕಣ್ಮುಂದೆ ಇರಿಸುತ್ತವೆ.

ಹಾಗಾದರೆ ಯುದ್ಧದಲ್ಲಿ ಲಾಭ ಪಡೆಯುವವರು ಯಾರು? ಸಾಮಾನ್ಯವಾಗಿ ಯುದ್ಧದ ಮೈದಾನದಲ್ಲಿ ರಕ್ತ ಸುರಿಸುವವರು ಸಾಮಾನ್ಯ ಜನರು; ಆದರೆ ಯುದ್ಧದ ಲಾಭವನ್ನು ಪಡೆಯುವವರು ಶಕ್ತಿಶಾಲಿ ವರ್ಗಗಳು. ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಂಪನಿಗಳು, ಯುದ್ಧವನ್ನು ರಾಜಕೀಯವಾಗಿ ಬಳಸಿಕೊಳ್ಳುವ ನಾಯಕರು, ಶಕ್ತಿಯ ರಾಜಕೀಯವನ್ನು ನಡೆಸುವ ರಾಷ್ಟ್ರಗಳು. ಇವರು ಯುದ್ಧದ ನೆರಳಿನಲ್ಲಿ ತಮ್ಮ ಲಾಭವನ್ನು ಕಂಡುಕೊಳ್ಳುತ್ತಾರೆ. ಯುದ್ಧವು ಕೆಲವರಿಗೆ ವ್ಯವಹಾರವಾಗುತ್ತದೆ; ಕೆಲವರಿಗೆ ಅಧಿಕಾರವನ್ನು ಬಲಪಡಿಸುವ ಸಾಧನವಾಗುತ್ತದೆ.
ಇಂದು ಪ್ರಪಂಚವನ್ನು ಗಮನಿಸಿದರೆ, ಯಾವುದೇ ಒಂದು ಭೂಖಂಡವನ್ನು ತೆಗೆದುಕೊಂಡರೂ ಒಂದಲ್ಲ ಒಂದು ರೀತಿಯ ಸಂಘರ್ಷ ನಡೆಯುತ್ತಿರುವುದು ಗೋಚರಿಸುತ್ತದೆ. ಕೆಲವೆಡೆ ಅದು ಎಲ್ಲರ ಪರಿಭಾಷೆಗೆ ಅರ್ಥವಾಗುವ ಯುದ್ಧ; ಇನ್ನೂ ಕೆಲವೆಡೆ ಅದು ಮೌನ ಯುದ್ಧ. ಕೆಲವೆಡೆ ಗುಂಡಿನ ಸದ್ದು ಕೇಳಿಸುತ್ತದೆ; ಇನ್ನೂ ಕೆಲವೆಡೆ ಆರ್ಥಿಕ ಮತ್ತು ರಾಜಕೀಯ ಒತ್ತಡಗಳ ರೂಪದಲ್ಲಿ ಯುದ್ಧ ನಡೆಯುತ್ತದೆ. ಮಾನವಕುಲವು ಇನ್ನೂ ಹಸಿವು, ದಾರಿದ್ರ್ಯ, ಶಿಕ್ಷಣ ಮತ್ತು ಆರೋಗ್ಯದಂತಹ ಮೂಲಭೂತ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸಿಲ್ಲ. ಆದರೆ ಅದೇ ಸಮಯದಲ್ಲಿ ಯುದ್ಧ ಸಾಮಗ್ರಿಗಳ ಉತ್ಪಾದನೆ ಮತ್ತು ವ್ಯಾಪಾರದಲ್ಲಿ ಯಾವತ್ತೂ ಕೊರತೆ ಕಾಣುವುದಿಲ್ಲ. ಬದಲಿಗೆ ವರ್ಷದಿಂದ ವರ್ಷಕ್ಕೆ ಅದಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಇದು ಇಂದು ಪ್ರಪಂಚವೇ ಕಾಣುತ್ತಿರುವ ವಿಚಿತ್ರ ವೈಪರೀತ್ಯ. ಒಂದು ಕಡೆ ಲಕ್ಷಾಂತರ ಜನರಿಗೆ ಕುಡಿಯುವ ನೀರು ಸಿಗುವುದಿಲ್ಲ; ಇನ್ನೊಂದು ಕಡೆ ಕೋಟ್ಯಂತರ ಡಾಲರ್ಗಳು ಹೊಸ ಆಯುಧಗಳ ಅಭಿವೃದ್ಧಿಗೆ ಖರ್ಚಾಗುತ್ತವೆ. ಒಂದು ಕಡೆ ಮಕ್ಕಳು ಶಿಕ್ಷಣಕ್ಕಾಗಿ ಹೋರಾಡುತ್ತಿದ್ದಾರೆ; ಇನ್ನೊಂದು ಕಡೆ ರಾಷ್ಟ್ರಗಳು ಹೊಸ ಕ್ಷಿಪಣಿಗಳು ಮತ್ತು ಯುದ್ಧವಿಮಾನಗಳನ್ನು ತಯಾರಿಸಲು ಸ್ಪರ್ಧಿಸುತ್ತಿವೆ.
ಮಾನವ ಇತಿಹಾಸವನ್ನು ಒಂದಿಷ್ಟು ಗಮನವಿಟ್ಟು ಪರಿಶೀಲಿಸಿದರೆ – ಯುದ್ಧದ ಕಥೆಯನ್ನು ಹಲವಾರು ಪದಪುಂಜಗಳಿಂದ ಎಷ್ಟೇ ವರ್ಣಮಯವಾಗಿ ಬಣ್ಣಿಸಿದರೂ, ಯುದ್ಧವು ಯಾವತ್ತೂ ವಿಜಯದ ಕಥೆಯಾಗಿ ಕಾಣಿಸುವುದಿಲ್ಲ; ಅದು ವಿನಾಶದ ಬುನಾದಿಯಾಗಿಯೇ ಕಾಣಿಸುತ್ತದೆ. ಇಪ್ಪತ್ತನೇ ಶತಮಾನದಲ್ಲಿಯೇ ನಡೆದ ಎರಡು ಮಹಾಯುದ್ಧಗಳು ಇದಕ್ಕೆ ಸ್ಪಷ್ಟ ಉದಾಹರಣೆ. ಮೊದಲ ಮಹಾಯುದ್ಧದಲ್ಲಿ ಸುಮಾರು 1.5 ರಿಂದ 2 ಕೋಟಿ ಜನರು ಪ್ರಾಣ ಕಳೆದುಕೊಂಡರು. ಅದರ ಕೆಲವು ದಶಕಗಳ ನಂತರ ನಡೆದ ಎರಡನೇ ಮಹಾಯುದ್ಧದಲ್ಲಿ ಸುಮಾರು 7 ಕೋಟಿ ಜನರು ಸಾವನ್ನಪ್ಪಿದರು. ಇಂದಿಗೂ ಕೂಡ, ಮಾನವ ಇತಿಹಾಸದಲ್ಲಿಯೇ ಅತಿ ದೊಡ್ಡ ದುರಂತವಾಗಿ ಅದು ಉಳಿದಿದೆ.
ಮಧ್ಯಪ್ರಾಚ್ಯದ ಯುದ್ಧಗಳು ಕೂಡ ಇದೇ ಕಹಿ ಕಥೆಯನ್ನು ಮತ್ತೆ ಮತ್ತೆ ಹೇಳುತ್ತಿವೆ. ಕಳೆದ ಕೆಲವು ದಶಕಗಳಲ್ಲಿ ಮಧ್ಯಪ್ರಾಚ್ಯ ಪ್ರದೇಶವು ಮಾನವ ಇತಿಹಾಸದ ಅತ್ಯಂತ ದೀರ್ಘ ಮತ್ತು ದುರಂತಕರ ಸಂಘರ್ಷಗಳಿಗೆ ಸಾಕ್ಷಿಯಾಗಿದೆ. ಇರಾನ್–ಇರಾಕ್ ಯುದ್ಧದಲ್ಲಿ ಸುಮಾರು ಐದು ಲಕ್ಷ ಜನರು ಪ್ರಾಣ ಕಳೆದುಕೊಂಡರು ಎಂದು ಅಂದಾಜಿಸಲಾಗುತ್ತದೆ; ಒಟ್ಟು ಗಾಯಗೊಂಡವರು ಮತ್ತು ನಾಶವಾದ ಬದುಕುಗಳನ್ನು ಸೇರಿಸಿದರೆ ಒಂದು ಕೋಟಿಗೂ ಹೆಚ್ಚು ಜನರ ಜೀವನವೇ ಈ ಯುದ್ಧಗಳಿಂದಾಗಿ ಅಸ್ತವ್ಯಸ್ತವಾಗಿದೆ ಎಂದು ಹೇಳಲಾಗುತ್ತದೆ. ನಂತರ ನಡೆದ ಗಲ್ಫ್ ಯುದ್ಧ ಹಾಗೂ ಅದರ ಬಳಿಕದ ಇರಾಕ್ ಸಂಘರ್ಷಗಳು ಕೂಡ ಲಕ್ಷಾಂತರ ಜನರ ಜೀವಗಳನ್ನು ಕಸಿದುಕೊಂಡವು. ಈ ಯುದ್ಧಗಳ ಪರಿಣಾಮವಾಗಿ ಅನೇಕ ರಾಷ್ಟ್ರಗಳ ಆರ್ಥಿಕತೆ ನೂರಾರು ಬಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದೆ. ಅನೇಕ ನಗರಗಳು, ಸಂಪನ್ಮೂಲಗಳು, ರಸ್ತೆ ವ್ಯವಸ್ಥೆಗಳು, ವಿದ್ಯುತ್ ಘಟಕಗಳು ಮತ್ತು ಸಾರ್ವಜನಿಕ ಮೂಲಸೌಕರ್ಯಗಳು ಭಸ್ಮವಾಗಿಹೋಗಿವೆ.

ಇತ್ತೀಚಿನ ರಷ್ಯಾ–ಉಕ್ರೇನ್ ಯುದ್ಧವೂ ಇದೇ ದುರಂತದ ಇನ್ನೊಂದು ಅಧ್ಯಾಯವಾಗಿ ನಮ್ಮ ಕಣ್ಮುಂದೆ ನಡೆಯುತ್ತಿದೆ. ಸಾವಿರಾರು ಜೀವಗಳು ಈಗಾಗಲೇ ಕಳೆದುಹೋಗಿವೆ; ಲಕ್ಷಾಂತರ ಜನರು ತಮ್ಮ ಮನೆಮನೆಗಳನ್ನು ಬಿಟ್ಟು ಬೇರೆ ಬೇರೆ ದೇಶಗಳಲ್ಲಿ ಒಂದು ಸೂರಿಗಾಗಿ ಅಲೆದಾಡುತ್ತಿದ್ದಾರೆ. ಇದೇ ಸಮಯದಲ್ಲಿ ಗಾಝ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷವು ಮರಣಹೋಮದಂತೆಯೇ ಕಾಣುತ್ತಿದೆ. ದಿನವೂ ಹೊಸ ಸಾವು-ನೋವುಗಳ ಸುದ್ದಿಗಳು ಕೇಳಿಬರುತ್ತಿವೆ. ಯುದ್ಧಗಳು ಕೇವಲ ಜೀವಗಳನ್ನು ಮಾತ್ರ ಕಸಿದುಕೊಳ್ಳುವುದಿಲ್ಲ; ಅವು ರಾಷ್ಟ್ರಗಳ ಸಂಪತ್ತನ್ನು, ಮೂಲಸೌಕರ್ಯವನ್ನು, ಮತ್ತು ಒಂದು ಸಂಪೂರ್ಣ ತಲೆಮಾರಿನ ಕನಸುಗಳನ್ನು ಸಹ ನಾಶಮಾಡುತ್ತವೆ. ಎಷ್ಟೋ ತಲೆಮಾರುಗಳೇ ನಾಶವಾಗಿ ಹೋಗುತ್ತವೆ.
ಪ್ರಸ್ತುತ, ನಮ್ಮ ಕಣ್ಮುಂದೆ ನಡೆಯುತ್ತಿರುವ ಇರಾನ್–ಇಸ್ರೇಲ್ ಹಾಗೂ ಅಮೇರಿಕಾದೊಂದಿಗೆ ಉಂಟಾಗುತ್ತಿರುವ ಉದ್ವಿಗ್ನತೆ ಪ್ರಪಂಚವೇ ಮತ್ತೊಂದು ದೊಡ್ಡ ಯುದ್ಧದ ಅಂಚಿನತ್ತ ಸಾಗುತ್ತಿದೆ ಎಂಬ ಭಾವನೆಯನ್ನು ಉಂಟುಮಾಡುತ್ತಿದೆ. ಇಂತಹ ಸಂದರ್ಭಗಳಲ್ಲಿ ಜಾಗತಿಕ ಅನಿಶ್ಚಿತತೆ ಸಾಮಾನ್ಯ ಜನರ ಜೀವನದಲ್ಲಿ ತಕ್ಷಣದ ಪರಿಣಾಮ ಬೀರುತ್ತದೆ. ಪ್ರತಿಯೊಂದು ಮನೆಯಲ್ಲೂ ಒಂದು ಆತಂಕ – ಯಾವಾಗ, ಎಲ್ಲಿ, ಯಾರು, ಯಾವುದನ್ನು ತೆರಬೇಕಾದೀತು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅದು ಮನುಷ್ಯನ ಪ್ರಾಣದಿಂದ ಹಿಡಿದು, ವಸ್ತುಗಳು, ದುಡಿಮೆ, ಉದ್ಯೋಗ, ಸ್ವಾತಂತ್ರ್ಯ ಹೀಗೆ – ನಾವು ತೆರಬೇಕಾದ ಬೆಲೆ ಏನು ಎನ್ನುವುದು ಕಲ್ಪಿಸಲೂ ಅಸಾಧ್ಯ. ಜಾಗತಿಕ ರಾಜಕೀಯದಲ್ಲಿ ನಡೆಯುವ ಪ್ರತಿಯೊಂದು ಸಂಘರ್ಷವೂ ಈ ಪ್ರಪಂಚದಲ್ಲಿನ ಪ್ರತೀ ಮನೆಗೂ ತಲುಪುತ್ತದೆ ಎನ್ನುವುದು ಅತಿಶಯೋಕ್ತಿಯಲ್ಲ.
ಇದರ ಇನ್ನೊಂದು ಕಠಿಣ ವಾಸ್ತವವೂ ನಮ್ಮ ಮುಂದೆ ಇದೆ. ನಮ್ಮ ದೇಶದ ನಾನಾ ಭಾಗಗಳಿಂದ ಸಾವಿರಾರು ಯುವಕರು ಮಧ್ಯಪ್ರಾಚ್ಯದ ದೇಶಗಳಿಗೆ ಉದ್ಯೋಗಕ್ಕಾಗಿ ತೆರಳಿದ್ದಾರೆ. ಅವರ ಜೀವನ, ಭಾರತದಲ್ಲಿ ಇರುವ ಅವರ ಕುಟುಂಬಗಳ ಜೀವನ – ಆ ಪ್ರದೇಶದ ಆರ್ಥಿಕತೆ ಮತ್ತು ರಾಜಕೀಯ ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿದೆ. ಯುದ್ಧದ ನೆರಳು ಗಾಢವಾದಾಗ ಮೊದಲಿಗೆ ಅನಿಶ್ಚಿತತೆಯನ್ನು ಎದುರಿಸಬೇಕಾಗುವುದು ಅವರೇ. ಅವರ ಕೆಲಸ, ಸುರಕ್ಷತೆ ಮತ್ತು ಬದುಕಿನ ಭವಿಷ್ಯ ಎಲ್ಲವೂ ಒಂದೇ ಕ್ಷಣದಲ್ಲಿ ಪ್ರಶ್ನಾರ್ಥಕವಾಗಬಹುದು ಎನ್ನುವುದು ನಮಗೆ ಈಗಾಗಲೇ ಮನವರಿಕೆಯಾಗಿದೆ.
ಮೊನ್ನೆಮೊನ್ನೆ ತನಕ ನಾವು ದೂರದ ದೇಶಗಳಲ್ಲಿ ನಡೆಯುತ್ತಿರುವ ಯುದ್ಧಗಳನ್ನು ಕೇವಲ ಸುದ್ದಿಗಳಲ್ಲಿ ನೋಡುತ್ತಾ, “ಅದು ಅವರ ಸಮಸ್ಯೆ” ಎಂಬ ನಿರ್ಲಿಪ್ತ ಮನೋಭಾವದಲ್ಲಿ ಬದುಕುತ್ತಿದ್ದೇವೆ ಎಂಬ ಭಾವನೆ ಇತ್ತು. ಕೆಲವರು “ಎಲ್ಲೆಡೆ ಯುದ್ಧ ನಡೆಯುತ್ತಿದ್ದರೂ ನಾವು ಭಾರತೀಯರು ನಿಶ್ಚಿಂತೆಯಿಂದ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದೇವೆ” ಎಂದು ಹೇಳುವ ಮಟ್ಟಕ್ಕೂ ಬಂದಿದ್ದೆವು. ಆದರೆ ಜಾಗತಿಕ ಸಂಘರ್ಷಗಳ ಪರಿಣಾಮ ಎಷ್ಟು ವೇಗವಾಗಿ ನಮ್ಮ ದೈನಂದಿನ ಬದುಕಿಗೆ ತಲುಪುತ್ತದೆ ಎಂಬುದಕ್ಕೆ ಇತ್ತೀಚಿನ ಘಟನೆಗಳೇ ಸಾಕ್ಷಿ.

ಒಂದೇ ಕ್ಷಣದಲ್ಲಿ ಗ್ಯಾಸ್ ಸಿಲಿಂಡರ್ ದರವು ಸುಮಾರು ರೂ. 60 ರಷ್ಟು ಏರಿಕೆಯಾಗಿದೆ. ವಾಣಿಜ್ಯ ಸಿಲಿಂಡರ್ಗಳ ಬೆಲೆ ಹೆಚ್ಚಾಗುವುದಷ್ಟೇ ಅಲ್ಲ, ಕೆಲವೆಡೆ ಅವು ದೊರಕುವುದೇ ಕಷ್ಟ ಎನ್ನುವ ಪರಿಸ್ಥಿತಿ ಉಂಟಾಗಿದೆ. ಅದರ ಪರಿಣಾಮವಾಗಿ ದೇಶದ ಅನೇಕ ಭಾಗಗಳಲ್ಲಿ ಸಣ್ಣ ಹೋಟೆಲ್ಗಳು ಮತ್ತು ದರ್ಶಿನಿಗಳ ವ್ಯವಹಾರಗಳು ಸಂಕಷ್ಟಕ್ಕೆ ಸಿಲುಕಿವೆ. ಕೆಲವೆಡೆ ಅವು ಮುಚ್ಚುವ ಹಂತಕ್ಕೂ ತಲುಪಿವೆ. ದೂರದ ದೇಶಗಳಲ್ಲಿ ಹೊತ್ತಿಕೊಂಡ ಯುದ್ಧದ ಕಿಡಿ ಕೊನೆಗೆ ನಮ್ಮ ಊರಿನ ಒಂದು ಸಣ್ಣ ಹೋಟೆಲ್ನ ಒಲೆಗೂ ತಲುಪುತ್ತದೆ ಎಂಬುದು ಈ ಯುಗದ ಕಠಿಣ ವಾಸ್ತವ.
ಇವೆಲ್ಲವುದರ ನಡುವೆ ಗಮನಕ್ಕೆ ಬರುತ್ತಿರುವ ಇನ್ನೊಂದು ಅತ್ಯಂತ ಗಂಭೀರವಾದ ಅಂಶ ದಿನೇ ದಿನೇ ಹೆಚ್ಚುತ್ತಿರುವ ಯುದ್ಧೋನ್ಮಾದ. ಯುದ್ಧದ ಬಗ್ಗೆ ಹುಟ್ಟಿಕೊಳ್ಳುತ್ತಿರುವ ಈ ಉನ್ಮಾದ ಮನೋಭಾವ ಹೊಸದೇನಲ್ಲ; ಅದು ಮಾನವ ಇತಿಹಾಸದ ಬಹುತೇಕ ಪ್ರತಿಯೊಂದು ಕಾಲಘಟ್ಟದಲ್ಲೂ ಕಾಣಿಸಿಕೊಂಡಿದೆ. ಸಾಮ್ರಾಜ್ಯಗಳ ನಿರ್ಮಾಣದ ಕಥೆಗಳನ್ನೇ ನಾವು ಇತಿಹಾಸವೆಂದು ಓದುತ್ತೇವೆ. ಅಲೆಕ್ಸಾಂಡರ್ ಮಹಾನ್ನಿಂದ ಹಿಡಿದು ನೆಪೋಲಿಯನ್ ಬೊನಪಾರ್ಟ್ವರೆಗೆ ಅನೇಕ ನಾಯಕರು ತಮ್ಮ ಸಾಮ್ರಾಜ್ಯಗಳನ್ನು ವಿಸ್ತರಿಸಲು ನಿರಂತರ ಯುದ್ಧಗಳನ್ನು ನಡೆಸಿದರು. ಅವರ ಸಾಹಸಗಳು, ವಿಜಯಗಳು ಮತ್ತು ಆಕ್ರಮಣಗಳು ಇತಿಹಾಸದ ಪುಸ್ತಕಗಳಲ್ಲಿ ವೈಭವದ ಕಥೆಗಳಾಗಿ ಬರೆಯಲ್ಪಟ್ಟಿವೆ. ಆದರೆ ಆ ವಿಜಯಗಳ ಹಿಂದೆ ಅಡಗಿರುವುದು ಸಾವಿರಾರು ಸಾಮಾನ್ಯ ಜನರ ರಕ್ತ ಮತ್ತು ಕಣ್ಣೀರು ಎಂಬ ಸತ್ಯವನ್ನು ನಾವು ಬಹಳಷ್ಟು ಬಾರಿ ಮರೆತುಬಿಡುತ್ತೇವೆ. ಒಂದು ಸಾಮ್ರಾಜ್ಯದ ವಿಜಯಗಾಥೆ ಇನ್ನೊಂದು ಜನಾಂಗದ ದುರಂತಗಾಥೆಯೂ ಆಗಿರುತ್ತದೆ. ರಾಜರು, ಸೇನಾಪತಿಗಳು ಮತ್ತು ಆಡಳಿತಗಾರರು ಇತಿಹಾಸದ ಪುಟಗಳಲ್ಲಿ ವಿಜಯಿಗಳಾಗಿ ಉಳಿದರೂ, ಅವರ ಯುದ್ಧಗಳಿಂದ ನಾಶವಾದ ಜನರ ಬದುಕಿನ ಕಥೆಗಳು ಬಹುಶಃ ಇತಿಹಾಸದ ಅಂಚುಗಳಲ್ಲಿ ಮಾತ್ರ ಉಳಿದುಕೊಳ್ಳುತ್ತವೆ.
ಇದೇ ಇತಿಹಾಸದಲ್ಲಿ ನಮಗೆ ಒಂದು ಬೇರೆಯಾದ ಪಾಠವನ್ನು ಹೇಳುವ ಕಥೆಯೂ ಇದೆ – ಮೌರ್ಯ ಚಕ್ರವರ್ತಿ ಅಶೋಕನ ಕಥೆ. ಕಳಿಂಗ ಯುದ್ಧದಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿದರು ಎಂದು ಇತಿಹಾಸ ಹೇಳುತ್ತದೆ. ಆ ಯುದ್ಧದ ನಂತರ ಯುದ್ಧಭೂಮಿಯಲ್ಲಿ ಬಿದ್ದಿದ್ದ ಅನೇಕ ಮೃತದೇಹಗಳು, ಅಳುತ್ತಿದ್ದ ಕುಟುಂಬಗಳು ಮತ್ತು ನಾಶವಾದ ಬದುಕುಗಳನ್ನು ಕಂಡ ಅಶೋಕನ ಮನಸ್ಸು ಬದಲಾಯಿತು ಎಂದು ಹೇಳಲಾಗುತ್ತದೆ. ಯುದ್ಧದ ಭೀಕರತೆಯನ್ನು ಅರಿತ ನಂತರ ಅವನು ಆಯುಧದ ದಾರಿಯನ್ನು ಬಿಟ್ಟು ಧರ್ಮ ಮತ್ತು ಶಾಂತಿಯ ದಾರಿಗೆ ತಿರುಗಿದನು. ಅಶೋಕನ ಈ ಪರಿವರ್ತನೆ ಇತಿಹಾಸದಲ್ಲಿ ಒಂದು ಮಹತ್ವದ ತಿರುವಾಗಿ ಉಳಿದಿದೆ. ಯುದ್ಧವು ಕೇವಲ ವಿಜಯವನ್ನೇ ತರುವುದಿಲ್ಲ; ಅದು ಮಾನವ ಮನಸ್ಸಿನ ಒಳಗಿನ ಮಾನವೀಯತೆಯನ್ನು ಕೂಡ ನಾಶಮಾಡುತ್ತದೆ ಎಂಬ ಅರಿವು ಅದರಿಂದ ಹೊರಹೊಮ್ಮುತ್ತದೆ. ಇತಿಹಾಸದ ಅನೇಕ ಕಾಲಘಟ್ಟಗಳಲ್ಲಿ ಇಂತಹ ಯುದ್ಧೋನ್ಮಾದವೇ ಎಷ್ಟೋ ರಾಜರ ಅವನತಿಗೆ ಕಾರಣವಾಗಿದ್ದೂ ಇದೆ. ಅತಿಯಾದ ಸಾಮ್ರಾಜ್ಯ ವಿಸ್ತರಣೆಯ ಹಂಬಲ, ಅತಿಯಾದ ಆಕ್ರಮಣ ಮನೋಭಾವ ಮತ್ತು ಅತಿಯಾದ ಯುದ್ಧಾಸಕ್ತಿ ಕೊನೆಗೆ ಅನೇಕ ಸಾಮ್ರಾಜ್ಯಗಳ ಪತನಕ್ಕೂ ಕಾರಣವಾಗಿದೆ.
ಆದರೆ ಇಂದು ಅತ್ಯಂತ ಚಿಂತಾಜನಕವಾದ ವಿಷಯವೆಂದರೆ, ರಾಜತಂತ್ರಗಳ ಕಾಲದಲ್ಲಿ ಸರ್ವೇ-ಸಾಮಾನ್ಯವಾಗಿದ್ದ ಈ ಯುದ್ಧೋನ್ಮಾದದ ಮನೋಭಾವವು ಇಂದಿನ ಪ್ರಜಾಪ್ರಭುತ್ವದ ಜಗತ್ತಿನಲ್ಲಿಯೂ ಕಾಣಿಸಿಕೊಳ್ಳುತ್ತಿರುವುದು. ಆಧುನಿಕ ಪ್ರಪಂಚವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಆಧಾರವಾಗಿಸಿಕೊಂಡು ನಿರ್ಮಾಣವಾಗಬೇಕಾಗಿತ್ತು. ಪ್ರಜಾಪ್ರಭುತ್ವದ ಮೂಲ ತತ್ವವೇ ಯುದ್ಧವನ್ನು ಕಡಿಮೆ ಮಾಡುವುದು, ಸಮಸ್ಯೆಗಳಿಗೆ ಸಂವಾದದ ಮೂಲಕ, ಸಂಧಾನದ ಮೂಲಕ ಪರಿಹಾರ ಹುಡುಕುವುದು ಮತ್ತು ಸಾಮಾನ್ಯ ಜನರ ಬದುಕನ್ನು ರಕ್ಷಿಸುವುದು. ಹಿಂದಿನ ಶತಮಾನಗಳಲ್ಲಿನ ನಿರಂತರ ಯುದ್ಧಗಳ ಭೀಕರ ಅನುಭವವೇ ಅನೇಕ ರಾಷ್ಟ್ರಗಳನ್ನು ಪ್ರಜಾಪ್ರಭುತ್ವದ ದಾರಿಯತ್ತ ಕರೆದೊಯ್ದಿತು. ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಮೇಲೆ ಬಲಪ್ರಯೋಗ ಮಾಡುವುದಕ್ಕಿಂತ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬ ತತ್ವವೇ ಆಧುನಿಕ ಜಾಗತಿಕ ವ್ಯವಸ್ಥೆಯ ಆಧಾರವಾಗಿದೆ. ಎಲ್ಲ ಸಮಸ್ಯೆಗಳಿಗೆ ಯುದ್ಧವೇ ಪರಿಹಾರವೆಂದು ಜಗತ್ತು ನಂಬಿದ್ದರೆ ಇಂದಿಗೂ ರಾಜತಂತ್ರಗಳು ಮುಂದುವರಿದೇ ಇರುತ್ತಿದ್ದವು. ಯಾರು ಬಲಶಾಲಿಯೋ ಅವನದ್ದೇ ಆಡಳಿತ ಎನ್ನುವ ಅರಣ್ಯನೀತಿ ಇಂದಿಗೂ ಪ್ರಪಂಚವನ್ನು ಆಳುತ್ತಿರುತ್ತಿತ್ತು.
ಹಿಂದಿನ ರಾಜತಂತ್ರಗಳ ಕಾಲದಲ್ಲಿ ಇಂತಹ ಮನೋಸ್ಥಿತಿಯನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗುತ್ತಿತ್ತು. ರಾಜನ ಆಜ್ಞೆಯೇ ಅಂತಿಮ ಸತ್ಯವಾಗಿತ್ತು. ಸಾಮಾನ್ಯನ ಕೈಗೆ ಕತ್ತಿ ಕೊಟ್ಟು “ಶತ್ರುವನ್ನು ಕೊಲ್ಲು” ಎಂದರೆ ಅದನ್ನು ಪ್ರಶ್ನಿಸದೆ ಪಾಲಿಸುವ ಸಮಾಜವನ್ನು ರೂಪಿಸಲಾಗುತ್ತಿತ್ತು. ರಾಜನನ್ನು ಪ್ರಶ್ನಿಸುವ ಧೈರ್ಯ ಸಾಮಾನ್ಯ ಜನರಿಗೆ ಇರಲಿಲ್ಲ. ಯುದ್ಧವೆಂದರೆ ರಾಷ್ಟ್ರದ ಗೌರವ ಎಂಬ ಕಲ್ಪನೆ ಜನರ ಮನಸ್ಸಿನಲ್ಲಿ ಬಿತ್ತಲಾಗುತ್ತಿತ್ತು. ಆದರೆ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರಿಗೆ ಪ್ರಶ್ನಿಸುವ ಹಕ್ಕು ಇದೆ, ಸಂವಾದ ಮಾಡುವ ಅವಕಾಶ ಇದೆ, ಸರ್ಕಾರಗಳನ್ನು ಜವಾಬ್ದಾರಿಗಳನ್ನಾಗಿ ಮಾಡುವ ವ್ಯವಸ್ಥೆಯೂ ಇದೆ. ಆದರೂ ಸಹ ಇಂದಿನ ಜಗತ್ತಿನಲ್ಲಿ ಇದೇ ರೀತಿಯ ಯುದ್ಧೋನ್ಮಾದದ ಮನೋಭಾವಗಳು ಮತ್ತೆ ಬೆಳೆಯುತ್ತಿರುವುದು ನಿಜಕ್ಕೂ ಖೇದಕರ ಸಂಗತಿ.
ಇದಕ್ಕೆ ಕಾರಣವಾಗಿರುವುದು ಕೇವಲ ರಾಜಕೀಯವಲ್ಲ; ಅದರ ಹಿಂದೆ ಹಲವು ಹಿತಾಸಕ್ತಿಗಳ ಜಾಲವಿದೆ. ಪಟ್ಟಭದ್ರ ಹಿತಾಸಕ್ತಿಗಳು, ರಾಜಕೀಯ ಭಾಷಣಗಳು, ಕೆಲವು ಮಾಧ್ಯಮಗಳ ಅತಿರೇಕದ ವರದಿಗಳು, ಯುದ್ಧವನ್ನು ಅವಲಂಬಿಸಿಕೊಂಡಿರುವ ಹೂಡಿಕೆದಾರರು ಮತ್ತು ಶಸ್ತ್ರಾಸ್ತ್ರ ವ್ಯಾಪಾರಿಗಳು. ಹೀಗೆ ಇವೆಲ್ಲವು ಸೇರಿ ಜನರಲ್ಲಿ ಒಂದು ಕಲ್ಪಿತ ಶತ್ರುವಿನ ಭಾವನೆಯನ್ನು ನಿರ್ಮಿಸುತ್ತವೆ. ಸಮಾಜದಲ್ಲಿ ಭಯ ಮತ್ತು ದ್ವೇಷವನ್ನು ನಿಧಾನವಾಗಿ ಬೆಳೆಸಲಾಗುತ್ತದೆ. ಆಗ ಜನರು ಯುದ್ಧವನ್ನು ಒಂದು ದುರಂತ ಎಂದು ನೋಡುವುದಿಲ್ಲ; ಬದಲಿಗೆ ಅದನ್ನು ರಾಷ್ಟ್ರಭಕ್ತಿಯ ಸಂಕೇತವೆಂದು ಕಾಣಲು ಪ್ರಾರಂಭಿಸುತ್ತಾರೆ. ದೇಶದ ಗೌರವಕ್ಕಾಗಿ ಯುದ್ಧ ಅವಶ್ಯಕವೆಂದು ಹೇಳುವ ಘೋಷಣೆಗಳು ಜನರ ಮನಸ್ಸಿನಲ್ಲಿ ಒತ್ತಾಯವಾಗಿ ನೆಲೆಯೂರುತ್ತವೆ. ಈ ಪ್ರಕ್ರಿಯೆಯೇ ಯುದ್ಧೋನ್ಮಾದ. ಅದು ಯುದ್ಧಕ್ಕಿಂತಲೂ ಹೆಚ್ಚು ಅಪಾಯಕಾರಿ, ಏಕೆಂದರೆ ಅದು ಯುದ್ಧವನ್ನು ಸಮರ್ಥಿಸುವ ಮನೋಭಾವವನ್ನು ಸಮಾಜದೊಳಗೆ ನಿರ್ಮಿಸುತ್ತದೆ.

ಆದರೆ ಯುದ್ಧದ ನಿಜವಾದ ಮುಖವನ್ನು ರಾಜಕೀಯ ವೇದಿಕೆಗಳ ಮೇಲೆ ನಡೆಯುವ ಭಾಷಣಗಳಲ್ಲಿ ನೋಡಬಾರದು. ಅವಶೇಷಗಳ ನಡುವೆ ಅಳುತ್ತಿರುವ ಮಕ್ಕಳ ಕಣ್ಣಲ್ಲಿ ನೋಡಬೇಕು. ಮನೆ, ಮಠ, ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ಪರದೇಸಿಗಳಾಗಿ ಅಲೆದಾಡುತ್ತಿರುವ ಜನರ ನಿರಾಶೆಯಲ್ಲಿ ನೋಡಬೇಕು. ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಸೈನಿಕರ ಕುಟುಂಬಗಳ ಮೌನ ದುಃಖದಲ್ಲಿ ನೋಡಬೇಕು. ತಮ್ಮ ದೇಶವನ್ನು ಬಿಟ್ಟು ಬೇರೆ ದೇಶಗಳಿಗೆ ಪಲಾಯನ ಮಾಡಬೇಕಾದ ಜನರ ಅಸ್ಥಿರ ಬದುಕಿನಲ್ಲಿ ನೋಡಬೇಕು. ಅಲ್ಲಿ ಮಾತ್ರ ಯುದ್ಧದ ನಿಜವಾದ ಭೀಕರತೆ ಗೋಚರಿಸುತ್ತದೆ.
ಇಂತಹ ಯುದ್ಧೋನ್ಮಾದದಿಂದ ಕೊನೆಗೆ ಲಾಭಪಡುವವರು ಯಾರು ಎಂಬ ಪ್ರಶ್ನೆ ಸಹಜವಾಗಿ ಎದುರಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಂದು ಯುದ್ಧದ ಹಿಂದೆ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳ ಒಂದು ಸಂಕೀರ್ಣ ಜಾಲ ಇರುತ್ತದೆ. ಶಸ್ತ್ರಾಸ್ತ್ರ ಉದ್ಯಮಗಳು, ಭೂರಾಜಕೀಯದ ಸ್ಪರ್ಧೆಗಳು, ಪ್ರಕೃತಿ ಸಂಪನ್ಮೂಲಗಳ ಮೇಲಿನ ನಿಯಂತ್ರಣದ ಹೋರಾಟ, ಜಾಗತಿಕ ಪ್ರಭುತ್ವಕ್ಕಾಗಿ ನಡೆಯುವ ರಾಜಕೀಯ ಪೈಪೋಟಿ. ಇವೆಲ್ಲವು ಯುದ್ಧವನ್ನು ಮುಂದುವರಿಸುವ ಪ್ರಮುಖ ಶಕ್ತಿಗಳಾಗುತ್ತವೆ. ಕೆಲವರಿಗೆ ಯುದ್ಧವೇ ಒಂದು ಉದ್ಯಮವಾಗುತ್ತದೆ; ಇನ್ನೂ ಕೆಲವರಿಗೆ ಅದು ಜಾಗತಿಕ ಪ್ರಭಾವವನ್ನು ಹೆಚ್ಚಿಸುವ ಸಾಧನವಾಗುತ್ತದೆ. ಆದರೆ ಯುದ್ಧದ ಬೆಲೆ ಕಟ್ಟಬೇಕಾಗುವುದು ಸಾಮಾನ್ಯ ಜನರೇ. ಅವರ ಬದುಕು, ಅವರ ಕನಸುಗಳು, ಅವರ ಭವಿಷ್ಯವೇ ಯುದ್ಧದ ಹೊಗೆಯ ನಡುವೆ ಕರಗಿ ಹೋಗುತ್ತದೆ.
ಪ್ರತೀ ಬಾರಿಯೂ ಯುದ್ಧದ ತರುವಾಯ ತತ್ತರಿಸಿದ ಜನಸಾಮಾನ್ಯರು ಶಾಂತಿಯ ಸಾರ ಸಾರುತ್ತಾರೆ. ಬಂದೂಕಿನ ನಳಿಕೆಯಲ್ಲಿ ಗುಬ್ಬಿ ಗೂಡು ಕಟ್ಟುವ ಕನಸು ಕಾಣುತ್ತಾರೆ. ಅಂತಹ ದಿನಗಳು ಬರಲೆಂದು ಪ್ರಾಮಾಣಿಕವಾಗಿ ಹಾರೈಸುತ್ತಾರೆ. ಎಲ್ಲರೂ ಶಾಂತಿಯಿಂದ ಬದುಕುವಂತಾಗಲಿ ಎಂದು ಹಪಹಪಿಸುತ್ತಾರೆ. ಆದರೆ ಯುದ್ಧೋನ್ಮಾದದ ಮೊರೆ ಹೊತ್ತಿರುವ ಮನಸ್ಥಿತಿಗಳು ಇಂದಿಗೂ ಕೂಡ ಈ ಕನಸನ್ನು ನನಸಾಗಿಸಲು ಬಿಡುತ್ತಿಲ್ಲ ಎನ್ನುವುದು ಮನುಕುಲದ ಅತೀ ದೊಡ್ಡ ದುರಂತ.
ಸುಚಿತ್ರಾ ಎಸ್ ಎ
ವಕೀಲರು, ರಾಜಕೀಯ ವಿಶ್ಲೇಷಕರು. ಪ್ರಸ್ತುತ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯೂನಿವರ್ಸಿಟಿಯಲ್ಲಿ ಪಿ ಎಚ್ ಡಿ ಮಾಡುತ್ತಿದ್ದಾರೆ.
ಇದನ್ನೂ ಓದಿ- ಕಥನಗಳಾವರಿತ ಈ ಜಗತ್ತು!


