ನವದೆಹಲಿ: ಅಮೆರಿಕ ಮತ್ತು ಇರಾನ್ ಕದನ ವಿರಾಮ ಒಪ್ಪಂದ ಮಾಡಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತು ದ್ವಿಪಕ್ಷೀಯ ಸಹಕಾರದ ಬಗ್ಗೆ ಫೋನ್ ಕರೆಯಲ್ಲಿ ಚರ್ಚಿಸಿದರು. ಸುಮಾರು 40 ನಿಮಿಷಗಳ ಕಾಲ ನಡೆದ ಸಂಭಾಷಣೆಯಲ್ಲಿ, ಹಾರ್ಮುಜ್ ಜಲಸಂಧಿಯನ್ನು ಮುಕ್ತ ಮತ್ತು ಸುರಕ್ಷಿತವಾಗಿಡುವ ಅಗತ್ಯವನ್ನು ಉಭಯ ನಾಯಕರು ಒತ್ತಿ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಬದ್ಧವಾಗಿವೆ ಎಂದು ಪ್ರಧಾನಿ ಮೋದಿ ದೂರವಾಣಿ ಕರೆಯ ನಂತರ ಆನ್‌ಲೈನ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ನನ್ನ ಸ್ನೇಹಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಕರೆ ಬಂದಿದೆ. ವಿವಿಧ ವಲಯಗಳಲ್ಲಿ ನಮ್ಮ ದ್ವಿಪಕ್ಷೀಯ ಸಹಕಾರದಲ್ಲಿ ಸಾಧಿಸಿರುವ ಗಣನೀಯ ಪ್ರಗತಿಯನ್ನು ನಾವು ಪರಿಶೀಲಿಸಿದ್ದೇವೆ” ಎಂದು ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.
“ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ಸಹ ನಾವು ಚರ್ಚಿಸಿದ್ದೇವೆ ಮತ್ತು ಹಾರ್ಮುಜ್ ಜಲಸಂಧಿಯನ್ನು ಮುಕ್ತ ಮತ್ತು ಸುರಕ್ಷಿತವಾಗಿರಿಸುವ ಮಹತ್ವವನ್ನು ಒತ್ತಿ ಹೇಳಿದ್ದೇವೆ” ಎಂದು ಅವರು ಹೇಳಿದರು.
ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್, ಅಧ್ಯಕ್ಷರು ಪ್ರಧಾನಿಯವರಿಗೆ ನಿಯಮಿತವಾಗಿ ಮಾಹಿತಿ ನೀಡುತ್ತಿರುತ್ತಾರೆ . ಭಾರತದ ಪ್ರಧಾನಿ ಹಾಗೂ ಅಮೆರಿಕ ಅಧ್ಯಕ್ಷರು ಕೆಲವು ನಿಮಿಷಗಳ ಹಿಂದೆ ಫೋನ್ ಮೂಲಕ ಸಂಭಾಷಣೆ ನಡೆಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಅಧ್ಯಕ್ಷರು ಮಾಹಿತಿಯನ್ನು ನೀಡಿದರು, ಜೊತೆಗೆ ಅಮೆರಿಕ ಮತ್ತು ಭಾರತ ನಡುವೆ ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ಕೆಲವು ದೊಡ್ಡ ವಿಷಯಗಳ ಕುರಿತು ಚರ್ಚೆ ನಡೆಸಿದರು ಎಂದು ಗೋರ್ ತಿಳಿಸಿದ್ದಾರೆ. .
ಫೋನ್ ಸಂಭಾಷಣೆಯ ವೇಳೆ ಪ್ರಧಾನಿ ಮೋದಿ, ಟ್ರಂಪ್ ಅವರಿಗೆ “ಭಾರತದ ಜನರು ನಿಮ್ಮನ್ನು ಪ್ರೀತಿಸುತ್ತಾರೆ” ಎಂದು ಹೇಳಿದರು ಎನ್ನಲಾಗಿದೆ.
ಮಾರ್ಚ್ 24 ರಂದು ಇಬ್ಬರೂ ನಾಯಕರು ಕೊನೆಯದಾಗಿ ಮಾತನಾಡಿದ್ದರು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಟ್ರಂಪ್‌ಗೆ ಭಾರತವು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಸಾಧ್ಯವಾದಷ್ಟು ಬೇಗ ಬೆಂಬಲಿಸುತ್ತದೆ ಎಂದು ಹೇಳಿದರು.
ಹಾರ್ಮುಜ್ ಜಲಸಂಧಿಯ ಮುಕ್ತ, ಸುರಕ್ಷಿತ ಮತ್ತು ಸುಲಭವಾಗಿ ತಲುಪಬಹುದಾದ ರೀತಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವ ಬಗ್ಗೆಯೂ ಇಬ್ಬರೂ ನಾಯಕರು ಚರ್ಚಿಸಿದರು, ಇದು ಜಗತ್ತಿಗೆ ಅತ್ಯಗತ್ಯ ಎಂದು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

