ಬೆಂಗಳೂರು: ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಕರ್ನಾಟಕ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ನಿನ್ನೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಕೈಗೆ ಕಟ್ಟಿಕೊಂಡಿದ್ದು ಹದಿಮೂರು ಲಕ್ಷ ರೂ ಬೆಲೆಯ ರೋಲೆಕ್ಸ್ ಗಡಿಯಾರ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಕುರಿತು ʻಕನ್ನಡ ಪ್ಲಾನೆಟ್ʼ ಫ್ಯಾಕ್ಟ್ ಚೆಕ್ ನಡೆಸಿದ್ದು, ನಾರಾಯಣಗೌಡರು ಕಟ್ಟಿಕೊಂಡಿದ್ದ ವಾಚ್ ನ ಹತ್ತಿರದ ಫೊಟೋಗಳನ್ನು ಪಡೆದುಕೊಂಡಿದೆ. ಈ ವಾಚ್ ಪರಿಶೀಲಿಸಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹರಡುತ್ತಿರುವ ಸುದ್ದಿಯ ಹಾಗೆ ಅದು ರೋಲೆಕ್ಸ್ ವಾಚ್ ಅಲ್ಲ ಎಂಬುದು ದೃಢೀಕರಣಗೊಂಡಿದೆ.
ಕನ್ನಡ ಪ್ಲಾನೆಟ್ ಗೆ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್, ಹಲವರು ಪ್ರತಿಪಾದಿಸುತ್ತಿರುವಂತೆ ಅದು ರೋಲೆಕ್ಸ್ ವಾಚ್ ಅಲ್ಲ. ಕರವೇ ನಡೆಸುತ್ತಿರುವ ಹಿಂದಿ ಹೇರಿಕೆ ವಿರುದ್ಧದ ಅಭಿಯಾನದ ವಿರುದ್ಧವಾಗಿರುವ ಶಕ್ತಿಗಳು ಉದ್ದೇಶಪೂರ್ವಕವಾಗಿ ಈ ಸುಳ್ಳುಸುದ್ದಿಯನ್ನು ಹಬ್ಬಿಸಿ, ಜನರನ್ನು ತಪ್ಪುದಾರಿಗೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಎರಡೂವರೆ ದಶಕಗಳಿಂದ ಹಿಂದಿ ಹೇರಿಕೆ ವಿರುದ್ಧ, ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಇದರ ಅರಿವಿಲ್ಲದ ಕೆಲವು ರಾಜಕೀಯ ಶಕ್ತಿಗಳು ಕರವೇ ಹೋರಾಟವನ್ನು ಒಂದು ರಾಜಕೀಯ ಪಕ್ಷದ ವಿರುದ್ಧದ ಹೋರಾಟ ಎಂದು ಬಿಂಬಿಸಲು ಯತ್ನಿಸುತ್ತಿವೆ. ಅಷ್ಟೇ ಅಲ್ಲ, ಈ ಹೋರಾಟದ ಮುಂಚೂಣಿಯಲ್ಲಿರುವ ಕರವೇ ನಾರಾಯಣಗೌಡರ ವಿರುದ್ಧ ಟೀಕಿಸಲು ಏನೂ ಸಿಗದೇ ಹೋದಾಗ ವಾಚ್ ನೆಪದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿವೆ ಎಂದು ಅವರು ಹೇಳಿದ್ದಾರೆ. ನಾರಾಯಣಗೌಡರು ತಮ್ಮದೇ ಆದ ಹಲವು ಸಂಸ್ಥೆಗಳನ್ನು ಕಾನೂನುಬದ್ಧವಾಗಿ ನಡೆಸುತ್ತಿದ್ದಾರೆ. ಅವರ ದುಡಿಮೆಯ ಹಣದಲ್ಲಿ ಅವರು ಏನನ್ನಾದರೂ ಕೊಂಡುಕೊಳ್ಳುತ್ತಾರೆ. ಅದನ್ನು ಪ್ರಶ್ನಿಸಲು ಇವರಿಗೆ ಯಾವ ಅಧಿಕಾರವಿದೆ ಎಂದು ಅವರು ಹೇಳಿದ್ದಾರೆ.
ʻಕನ್ನಡ ಪ್ಲಾನೆಟ್ʼ , ನಾರಾಯಣಗೌಡರ ಕೈಯಲ್ಲಿದ್ದ ವಾಚ್ ಹದಿಮೂರು ಲಕ್ಷ ರುಪಾಯಿ ಮೌಲ್ಯದ ರೋಲೆಕ್ಸ್ ವಾಚ್ ಅಲ್ಲ, ಬದಲಾಗಿ ಸುಮಾರು 80 ಸಾವಿರ ರುಪಾಯಿ ಮೌಲ್ಯದ ರಾಡೋ ವಾಚ್ ಎಂಬುದನ್ನು ಕಂಡುಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪ್ರೊಪಗಂಡ ಸೃಷ್ಟಿಸಲೆಂದು ಈ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ ಎಂಬುದು ಖಚಿತವಾಗಿದೆ.
ಈ ನಡುವೆ ವಾಚ್ ಕುರಿತ ಸುಳ್ಳು ಸುದ್ದಿ ಹರಡುತ್ತಿದ್ದಂತೆ ಈ ಸುದ್ದಿ ಹರಡುವವರ ವಿರುದ್ಧ ಕನ್ನಡಪರರು ಎಕ್ಸ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಹೋರಾಟಗಾರರು ಒಳ್ಳೆಯ ಬಟ್ಟೆ, ವಾಚ್ ಧರಿಸಬಾರದೇ? ಹರಕಲು ಬಟ್ಟೆಯಲ್ಲೇ ಇರಬೇಕೇ? ಹೋರಾಟಗಾರರು ಭಿಕಾರಿಗಳ ರೀತಿಯೇ ಇರಬೇಕೆಂದು ಇವರು ಯಾಕೆ ನಿರೀಕ್ಷಿಸುತ್ತಾರೆ? ಈ ಆಲೋಚನೆಗಳ ಹಿಂದೆ ವಿಕೃತ ಮನಸ್ಥಿತಿ ಇದೆ ಎಂದು ಟೀಕಿಸಿದ್ದಾರೆ. ಕನ್ನಡ ಹೋರಾಟದ ಸೈದ್ಧಾಂತಿಕತೆಯನ್ನು ಎದುರಿಸಲಾರದ ಕೊಳಕು ಮನಸ್ಥಿತಿಗಳು ಇಂಥ ಸುದ್ದಿಗಳನ್ನು ಹರಡಿಸುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


