‘ತ್ರಿಭಾಷಾ ನೀತಿಯ’ ಮತ್ತಷ್ಟು ಗೊಂದಲಗಳನ್ನು ಕೆದಕುತ್ತಾ….

ಹಿಂದಿ ಭಾಷೆಯ ಸುತ್ತ ಭುಗಿಲೆದ್ದಿರುವ ವಿವಾದವನ್ನು ಗ್ರಹಿಸುವಲ್ಲಿ ಕೆಲವು ಸ್ನೇಹಿತರಿಗೆ ಒಂದಷ್ಟು ಗೊಂದಲಗಳು ಕಾಡುತ್ತಿವೆ. ಹಿಂದಿ ಹೇರಿಕೆಯನ್ನು ವಿರೋಧಿಸುವ ಭರದಲ್ಲಿ ತ್ರಿಭಾಷಾ ನೀತಿಯನ್ನೇ ತಪ್ಪು ಎನ್ನುವುದು ಎಷ್ಟು ಸರಿ? ತ್ರಿಭಾಷಾ ನೀತಿಯಿಂದ ತೊಂದರೆ ಏನಿದೆ? ತ್ರಿಭಾಷಾ ನೀತಿಯನ್ವಯ ಹಿಂದಿಯನ್ನೇ ಕಲಿಯಬೇಕು ಎಂದೇನು ಇಲ್ಲವಲ್ಲಾ, ಬೇರೆ ಭಾಷೆಗಳನ್ನೂ ಕಲಿಯಲು ಅವಕಾಶ ಇದೆಯಲ್ಲವೇ? ಹಾಗಿರುವಾಗ ತ್ರಿಭಾಷಾ ನೀತಿಯನ್ನು ಸಮಗ್ರವಾಗಿ ಏಕೆ ವಿರೋಧಿಸಿ, ದ್ವಿಭಾಷಾ ನೀತಿಗೆ ಒತ್ತಾಯಿಸಬೇಕು?

ಮೊದಲನೆಯದಾಗಿ, ಈಗ ವಿವಾದಕ್ಕೀಡಾಗಿರುವ ತ್ರಿಭಾಷಾ ನೀತಿ ಎನ್ನುವುದು ಕೇವಲ ಶೈಕ್ಷಣಿಕ ಪರಿಕಲ್ಪನೆಯಷ್ಟೇ ಅಲ್ಲ; ಅದೊಂದು ಆಡಳಿತಾತ್ಮಕ ಕಟ್ಟಳೆಯೂ ಹೌದು. ಈ ಕಟ್ಟಳೆಯನ್ನು ರೂಪಿಸಿದ್ದು 1968ರಲ್ಲಿ ಅಧಿಕಾರದಲ್ಲಿದ್ದ ಇಂದಿರಾಗಾಂಧಿಯವರ ಕಾಂಗ್ರೆಸ್‌ ಸರ್ಕಾರ. ರಾಷ್ಟ್ರೀಯ ಶಿಕ್ಷಣ ನೀತಿ-1968ರ ಮೂಲಕ ಈ ತ್ರಿಭಾಷಾ ನೀತಿಯನ್ನು ಕಟ್ಟಳೆಯಾಗಿ ಜಾರಿಗೆ ತರಲಾಯ್ತು. ಭಾರತದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದ್ದರೂ, ಕಾಯ್ದೆ-ಕಟ್ಟಳೆಗಳಾಗಿ ರೂಪು ತಳೆಯುವ ಬಹುಪಾಲು ನೀತಿಗಳು ಅಧಿಕಾರಶಾಹಿ-ಬಂಡವಾಳಶಾಹಿ-ಬ್ರಾಹ್ಮಣಶಾಹಿ ಹಿತಚಿಂತನೆಯೊಂದಿಗೇ ಮೈದಳೆಯುತ್ತವೆ. ಅವುಗಳನ್ನು ಆಳಕ್ಕಿಳಿದು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ. ಹಾಗಾಗಿ  ವಿವಾದಿತ ತ್ರಿಭಾಷಾ ನೀತಿಯನ್ನು ಕೂಡಾ, ಹಲವು ಭಾಷೆಗಳ ಕಲಿಯುವಿಕೆಯ ಕಲಿಕಾ ಆಯಾಮದಿಂದ ನೋಡುವುದು ಸೂಕ್ತವಲ್ಲ. ಹಾಗೆ ನೋಡಲು ಮುಂದಾದಾಗ, ನಮ್ಮ ಮಕ್ಕಳು ಹೆಚ್ಚೆಚ್ಚು ಭಾಷೆ ಕಲಿಯುವುದರಿಂದ ಅವರಿಗೆ ಅನುಕೂಲವಲ್ಲವೇ ಎಂಬ ಸರಳೀಕೃತ ಅಭಿಪ್ರಾಯ ನಮ್ಮಲ್ಲಿ ಮೂಡುತ್ತದೆ. ಆದರೆ ಕಟ್ಟಳೆ ಸ್ವರೂಪದ ಈ ನೀತಿಯ ಆಳದಲ್ಲಿ ಇಂತಹ ಸರಳೀಕೃತ ಉದ್ದೇಶವಿಲ್ಲ. ಆದ್ದರಿಂದ ಇದನ್ನು ಆಡಳಿತಾತ್ಮಕ ಕಟ್ಟಳೆಯ ರೂಪದಲ್ಲಿಯೇ ಒಡೆದು ನೋಡಿ, ಅದರಲ್ಲಿರುವ ಸರಿ-ತಪ್ಪುಗಳನ್ನು  ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಗೊಂದಲಗಳಿಂದ ಮುಕ್ತವಾಗಿ ನಾವು ತ್ರಿಭಾಷಾ ನೀತಿಯ ವಿಚಾರದಲ್ಲಿ ಒಂದು ಸ್ಪಷ್ಟ ನಿಲುವು ತಳೆಯಬಹುದು.

ಹಾಗಾದರೆ ತ್ರಿಭಾಷಾ ನೀತಿ ಎಂಬ ಆಡಳಿತಾತ್ಮಕ ಕಟ್ಟಳೆಯಲ್ಲಿರುವ ಲೋಪಗಳೇನು?

ಮಾಜಿ ಪ್ರಧಾನಿ ಜವಾಹರ ಲಾಲ್‌ ನೆಹರೂ ಅವರು ಶೈಕ್ಷಣಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ತಳಹದಿಯ ಮೇಲೆ ಈ ದೇಶವನ್ನು ಕಟ್ಟಲು ಬಯಸಿದ್ದರು. ಅವರ ಆಶಯಕ್ಕೆ ಪೂರಕವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರಲು 1964ರಲ್ಲಿ ಅಂದಿನ ಯುಜಿಸಿ ಛೇರ್‍ಮನ್‌ ಆಗಿದ್ದ ಡಾ. ಡಿ. ಎಸ್. ಕೊಠಾರಿಯವರ ನೇತೃತ್ವದಲ್ಲಿ ಶಿಕ್ಷಣ ಆಯೋಗವನ್ನು ರಚಿಸಲಾಯಿತು. ಆಯೋಗದ ಶಿಫಾರಸ್ಸುಗಳನ್ನು ಆಧರಿಸಿ ಜಾರಿಗೆ ಬಂದಿದ್ದೇ 1968ರ ರಾಷ್ಟ್ರೀಯ ಶಿಕ್ಷಣ ನೀತಿ.

ಶಿಕ್ಷಣ ವ್ಯವಸ್ಥೆಯಲ್ಲಿ ವೈಜ್ಞಾನಿಕತೆ ಮತ್ತು ಐಕ್ಯತೆಯನ್ನು ಸಾಧಿಸುವ; ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಖಾತ್ರಿಗೊಳಿಸುವ; ಶಿಕ್ಷಕರ ಸ್ವಾಯತ್ತೆ ಕಾಪಾಡುವ; ಶಿಕ್ಷಣ ಅವಕಾಶಗಳನ್ನು ಸಮಾನಗೊಳಿಸುವ ನಿಟ್ಟಿನಿಂದ ಈ ಶಿಕ್ಷಣ ನೀತಿಯು ಸ್ವಾಗತಾರ್ಹ ಎನಿಸಬಹುದಾದರೂ, ತನ್ನ ತ್ರಿಭಾಷಾ ನೀತಿಯ ವಿಚಾರದಲ್ಲಿ ಎಡವಿದ್ದು ಸ್ಪಷ್ಟ. ಅದು ಹೇಗೆ? ನೋಡೋಣ…

ಶಿಕ್ಷಣ ನೀತಿಯ 3ನೇ ಪರಿಚ್ಛೇದವು Development of Languages ಬಗ್ಗೆ ಚರ್ಚಿಸುತ್ತದೆ. ಈ ಪರಿಚ್ಛೇಧದ ಬಿ ನಿಬಂಧನೆಯು ಸ್ಪಷ್ಟವಾಗಿ ತ್ರಿಭಾಷಾ ನೀತಿಯನ್ನು ಪ್ರಸ್ತಾಪಿಸುತ್ತದೆ. ಅದರ ಧ್ವನಿ ಹೀಗಿದೆ… “At the secondary stage, the State Governments should adopt, and vigorously implement, the three-language formula which includes the study of a modern Indian language, preferably one of the southern languages, apart from Hindi and English in the Hindi-speaking States, and of Hindi along with the regional language and English in the Non-Hindi-speaking States.”

ತ್ರಿಭಾಷಾ ನೀತಿಯ ವಂಚನೆ ಇಲ್ಲಿಂದಲೇ ಶುರುವಾಗುತ್ತದೆ. ಹಿಂದಿ-ಭಾಷಿಕವಲ್ಲದ ರಾಜ್ಯಗಳು ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್‌ ಜೊತೆಗೆ ನಿರ್ದಿಷ್ಟವಾಗಿ ಹಿಂದಿಯನ್ನು ಕಲಿಯಬೇಕು ಎಂದು ಹೇಳುವ ನೀತಿಯು, ಹಿಂದಿ-ಭಾಷಿಕ ರಾಜ್ಯಗಳ ವಿಚಾರಕ್ಕೆ ಬಂದಾಗ ಹಿಂದಿ-ಇಂಗ್ಲಿಷ್‌ ಜೊತೆಗೆ ಯಾವುದಾದರು ಒಂದು ದಕ್ಷಿಣ ಭಾಷೆಯನ್ನು ಕಲಿಯಬೇಕು ಎಂದು ‘ಕಡ್ಡಾಯ’ಗೊಳಿಸುವುದಿಲ್ಲ. ಬದಲಿಗೆ, ಹಿಂದಿ ಮಕ್ಕಳು ತೃತೀಯ ಭಾಷೆ ಆಯ್ಕೆ ಮಾಡಿಕೊಳ್ಳುವಾಗ ದಕ್ಷಿಣ ಭಾಷೆಗಳಿಗೆ ‘ಆದ್ಯತೆ’ ನೀಡಬೇಕು ಎಂದು ಹೇಳುತ್ತದೆ. ದ್ರಾವಿಡ ಮಕ್ಕಳಿಗೆ ಹಿಂದಿಯನ್ನು ಕಡ್ಡಾಯಗೊಳಿಸುವ ತ್ರಿಭಾಷಾ ನೀತಿ, ಹಿಂದಿ ಮಕ್ಕಳಿಗೆ ದಕ್ಷಿಣ ರಾಜ್ಯ ಭಾಷೆಗಳನ್ನು `ಆದ್ಯತೆ’ಗೆ ಇಳಿಸುತ್ತದೆ. ಈ ಲೋಪವನ್ನೇ ಬಳಸಿಕೊಂಡ ಹಿಂದಿ ಭಾಷಿಕ ರಾಜ್ಯಗಳು ತೃತೀಯ ಭಾಷೆಯಾಗಿ ದಕ್ಷಿಣ ಭಾಷೆಗಳ ಬದಲು ಸಂಸ್ಕೃತವನ್ನು ಆಯ್ಕೆ ಮಾಡಿಕೊಂಡವು. ಯಾಕೆಂದರೆ ಹಿಂದಿ ಮತ್ತು ಸಂಸ್ಕೃತ ಎರಡೂ ದೇವನಾಗರಿ ಲಿಪಿಯ ಸಾಮ್ಯತಾ ಭಾಷೆಗಳು. (ಸಂಸ್ಕೃತದಿಂದಲೇ ಹಿಂದಿ ಹುಟ್ಟಿಕೊಂಡಿತೆಂಬ ವಾದವೂ ಇದೆ).

ಹಿಂದಿ ಭಾಷಿಕ ರಾಜ್ಯಗಳಿಗೆ ಆದ್ಯತೆಯ ಅವಕಾಶ ನೀಡಿ, ಹಿಂದಿಯೇತರ ರಾಜ್ಯಗಳಿಗೆ ಹಿಂದಿಯನ್ನು ಕಡ್ಡಾಯ ತೃತೀಯ ಭಾಷೆಯಾಗಿ ಪ್ರಸ್ತಾಪಿಸಿದ್ದು, ನ್ಯಾಯಬದ್ಧವಾದ ಏಕರೂಪ ನೀತಿಯಾಗಲು ಹೇಗೆ ಸಾಧ್ಯ?

ಕೆಲವರಿಗೆ ಇಲ್ಲೊಂದು ಪ್ರಶ್ನೆ ಉದ್ಭವಿಸಬಹುದು. ತ್ರಿಭಾಷಾ ನೀತಿಯು ದಕ್ಷಿಣ ರಾಜ್ಯಗಳಿಗೆ ಹಿಂದಿಯನ್ನು ಕಡ್ಡಾಯ ತೃತೀಯ ಭಾಷೆಯಾಗಿಸಿದೆ ಎನ್ನುವುದಾದರೆ, ಪ್ರಸ್ತುತ ನಮ್ಮಲ್ಲಿ ತೃತೀಯ ಭಾಷೆಯಾಗಿ ಹಿಂದಿಯಲ್ಲದೆ ಸಂಸ್ಕೃತ, ತೆಲುಗು, ತಮಿಳು ಮೊದಲಾದ ಬೇರೆಬೇರೆ ಭಾಷೆಗಳನ್ನೂ ಕಲಿಸಲಾಗುತ್ತಿದೆಯಲ್ಲಾ? ಇಲ್ಲೊಂದು ತಿರುವಿದೆ.

ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಶಿಕ್ಷಣವು ರಾಜ್ಯ ಪಟ್ಟಿಗೆ ಒಳಪಡುತ್ತದೆ. ಅಂದರೆ ಕೇಂದ್ರ ಸರ್ಕಾರ ಶಿಕ್ಷಣ ವ್ಯವಸ್ಥೆಗೆ ಶಿಫಾರಸ್ಸು ಮಾಡಬಹುದಾದರೂ, ಅದನ್ನು ಅನುಷ್ಠಾನಗೊಳಿಸುವ ಸ್ವಾತಂತ್ರ್ಯ ಇರುವುದು ರಾಜ್ಯ ಸರ್ಕಾರಗಳಿಗೆ. ಈ ಅವಕಾಶವನ್ನು ಬಳಸಿಕೊಂಡೇ, ತಮಿಳುನಾಡು ತಾನು ಸುತಾರಾಂ ತ್ರಿಭಾಷಾ ನೀತಿಯನ್ನು ಒಪ್ಪುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿತು. ತ್ರಿಭಾಷಾ ನೀತಿಯ ಬಗ್ಗೆ, ಹಿಂದಿ ಹೇರಿಕೆಯ ಬಗ್ಗೆ ಕರ್ನಾಟಕಕ್ಕೂ ವಿರೋಧವಿತ್ತು. ಆದರೆ ಇಲ್ಲಿ ಆಳ್ವಿಕೆಯಲ್ಲಿದ್ದದ್ದೂ ಕಾಂಗ್ರೆಸ್‌ ಸರ್ಕಾರ. ತನ್ನದೇ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ಹೋಗಲಾಗದೆ, ತ್ರಿಭಾಷಾ ನೀತಿಯನ್ನು ಒಪ್ಪಿಕೊಂಡಿತು. ಆದಾಗ್ಯೂ ಶಿಕ್ಷಣದ ಮೇಲಿನ ತನ್ನ ಸ್ವಾತಂತ್ರ್ಯ ಬಳಸಿ, ಹಿಂದಿ ಮಾತ್ರವಲ್ಲದೆ ಬೇರೆ ಭಾಷೆಗಳನ್ನೂ ತೃತೀಯ ಭಾಷೆಯಾಗಿ ಆಯ್ದುಕೊಳ್ಳುವ ಅವಕಾಶವನ್ನು ಕರ್ನಾಟಕ ಸೃಷ್ಟಿಸಿಕೊಂಡಿತು.

ಹೆಚ್ಚು ಭಾಷೆಗಳನ್ನು ಕಲಿಯುವುದು ಒಳ್ಳೆಯದೇನೊ ನಿಜ. ಭಾಷೆಗಳನ್ನು ಕಲಿಸುವ ಮರೆಯಲ್ಲಿ ಹಿಂದಿ ಪರವಾದ ಇಂತಹ ಪಕ್ಷಪಾತಿ ಧೋರಣೆ ಹೊಂದಿರುವ ತ್ರಿಭಾಷಾ ನೀತಿಯನ್ನು ನ್ಯಾಯಸಮ್ಮತ ಎನ್ನಲು ಸಾಧ್ಯವೇ? ಹಾಗಾಗಿಯೇ ಇದನ್ನು, ಶೈಕ್ಷಣಿಕ ಪರಿಕಲ್ಪನೆಯ ಆಯಾಮಕ್ಕಿಂತ ಆಡಳಿತಾತ್ಮಕ ಕಟ್ಟಳೆಯ ರೂಪದಲ್ಲಿ ಒಡೆದು ನೋಡಬೇಕು ಎಂದು ಹೇಳಿದ್ದು. ನಮ್ಮ ಕೈಗೆ ಬಣ್ಣದ ತಗಡಿನ ತುತ್ತೂರಿಯನ್ನು ಕೊಟ್ಟು, ನಮ್ಮ ಕೈಯಲ್ಲಿರುವ ಚಿನ್ನದ ಚಮಚವನ್ನು ಕಿತ್ತುಕೊಳ್ಳುವ ಹುನ್ನಾರವನ್ನು ನಾವು, ಪಡೆದುಕೊಂಡ ಬಣ್ಣದ ತುತ್ತೂರಿಯ ಆಯಾಮದಿಂದ ನೋಡಬೇಕೊ, ಕಳೆದುಕೊಳ್ಳುತ್ತಿರುವ ಚಿನ್ನದ ಚಮಚದ ಆಯಾಮದಿಂದ ನೋಡಬೇಕೊ?

ಇಷ್ಟಕ್ಕೇ ನಿಲ್ಲುವುದಿಲ್ಲ!

ತ್ರಿಭಾಷಾ ನೀತಿಯ 3(ಸಿ) ನಿಬಂಧನೆಯು ನೇರವಾಗಿ ಹಿಂದಿ ಭಾಷೆಯನ್ನು ಹೇರಲು ಮುಂದಾಗುತ್ತದೆ. “Every effort should be made to promote the development of Hindi. In developing Hindi as the link language….” ಎಂದು ಹೇಳಲಾಗಿದೆ. ಬೇರಾವುದೇ ಭಾಷೆಗೂ ಇಲ್ಲದ ವಿಶೇಷ ಒತ್ತು ಹಿಂದಿಗೆ ಯಾಕೆ? ಅದನ್ನು `ಬೆಸುಗೆ ಸಂವಹನ ಭಾಷೆ’ಯಾಗಿ (link language) ಅಭಿವೃದ್ಧಿ ಪಡಿಸುವುದೆಂದರೆ, ಇನ್ನಿತರೆ ಭಾರತೀಯ ಭಾಷೆಗಳ ಮೇಲೆ ಹಿಂದಿಯನ್ನು ಹೇರಿದಂತಾಗುವುದಿಲ್ಲವೇ?

ಹಿಂದಿ ಪ್ರೋತ್ಸಾಹದ ತನ್ನ ಈ ಕ್ರಮವನ್ನು ಸಮರ್ಥಿಸಿಕೊಳ್ಳಲು ತ್ರಿಭಾಷಾ ನೀತಿಯು ಸಂವಿಧಾನದ ಆರ್ಟಿಕಲ್‌ 351 ನ್ನು ಬಳಸಿಕೊಳ್ಳುತ್ತದೆ. “ಭಾರತದ ಸಂಕೀರ್ಣ ಸಾಂಸ್ಕೃತಿಕ ಘಟಕಗಳೆಲ್ಲದರ ಅಭಿವ್ಯಕ್ತಿ ಮಾಧ್ಯಮವಾಗಿ ಹಿಂದಿ ಭಾಷೆಯನ್ನು ಪ್ರಚುರಪಡಿಸಿ, ಅಭಿವೃದ್ಧಿಪಡಿಸುವುದು ಕೇಂದ್ರ ಸರ್ಕಾರದ ಕರ್ತವ್ಯ” ಎಂದು ಈ ಆರ್ಟಿಕಲ್‌ ಹೇಳುತ್ತದೆ! ಸಂವಿಧಾನ ಸಭೆಯಲ್ಲಿ ಚರ್ಚಿಸಲ್ಪಟ್ಟು, ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಬಾಬಾಸಾಹೇಬ್‌ ಅಂಬೇಡ್ಕರರೂ ಸಮ್ಮತಿಸಿದ ಆರ್ಟಿಕಲ್‌ ಇದು! ಭಾಷಾ ತಾರತಮ್ಯ ಅಥವಾ ಭಾಷಾ ಯಜಮಾನಿಕೆ ಸೃಷ್ಟಿಯಾಗಬಾರದೆಂಬ ಕಾರಣಕ್ಕೆ ಯಾವ ಭಾಷೆಗೂ ರಾಷ್ಟ್ರಭಾಷೆಯ ಸ್ಥಾನಮಾನ ನೀಡದಷ್ಟು ಎಚ್ಚರಿಕೆ ವಹಿಸಿದ್ದ ಸಂವಿಧಾನದಲ್ಲಿ, ಹಿಂದಿಗೆ ಮಾತ್ರ ವಿಶೇಷ ಆದ್ಯತೆ ನೀಡುವ ಈ ಆರ್ಟಿಕಲ್‌ ಬಂದು ಸೇರಿದ್ದು ಹೇಗೆ? ಬಹುಶಃ ಇದರ ವಿವರಣೆಯೇ ಇನ್ನೊಂದು ಸುದೀರ್ಘ ಲೇಖನವಾಗಬಹುದು. ಅದನ್ನು ಮತ್ತೊಮ್ಮೆ ಪ್ರತ್ಯೇಕವಾಗಿ ತಿಳಿದುಕೊಳ್ಳೋಣ. ಆದರೆ, ಈ ಆರ್ಟಿಕಲ್‌ ಬಳಸಿಕೊಂಡು, ಹಿಂದಿ ಅಭಿವೃದ್ಧಿ ಹೆಸರಿನಲ್ಲಿ ಹೇರಿಕೆಗೆ ಮುಂದಾದದ್ದು ಹಿಂದಿಯೇತರ ಭಾಷೆಗಳಿಗೆ ತ್ರಿಭಾಷಾ ನೀತಿ ಮಾಡಿದ ವಂಚನೆಯಲ್ಲವೇ? ಕಲಿಕೆಯ ಭಾಷೆಗಳ ನಡುವೆಯೇ ಹೀಗೆ ತರತಮ ಮಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆಯ ಮಾತಾಡಿದರೆ ಅದು ಸಮಾನ ಶಿಕ್ಷಣ ಹೇಗಾದೀತು? ಹಿಂದಿಗೆ ಪ್ರೋತ್ಸಾಹ ಕೊಡುವ ಮೂಲಕ ಹಿಂದಿ ಭಾಷಿಕ ಮಕ್ಕಳ ಕಲಿಕೆಯನ್ನು ಸುಲಭಗೊಳಿಸಿ, ಹಿಂದಿಯೇತರ ಮಕ್ಕಳಿಗೆ ಹೊರೆಯಾಗಿಸುವುದು ಸಮಾನ ಶಿಕ್ಷಣವೇ?

ಮುಂದುವರೆದು, 3(ಸಿ) ನಿಬಂಧನೆಯು, “…The establishment, in non-Hindi States, of colleges and other institutions of higher education which use Hindi, as the medium of education should be encouraged.” ಎನ್ನುತ್ತದೆ. ಹಿಂದಿಯನ್ನು ಒಂದು ಸಂವಹನ ಭಾಷೆಯನ್ನಾಗಿ ಮಾತ್ರ ಕಲಿಸುವ ಇರಾದೆ ತ್ರಿಭಾಷಾ ನೀತಿಗೆ ಇದ್ದಿದ್ದರೆ ಹಿಂದಿಯೇತರ ರಾಜ್ಯಗಳಲ್ಲಿನ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲೂ ಹಿಂದಿ ಮಾಧ್ಯಮ ಕಲಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳುತ್ತಿತ್ತೇ? ಇದು ಹೇರಿಕೆಯಲ್ಲವೇ? ಹಿರಿಯ ಮತ್ತು ಪ್ರೌಢಶಿಕ್ಷಣ ಹಂತದವರೆಗೆ ಹಿಂದಿ ಕಲಿಕೆಯನ್ನು ಒಂದು ಸಂವಹನ ಭಾಷೆಯಾಗಿ ತಕ್ಕಮಟ್ಟಿಗೆ ಒಪ್ಪಬಹುದು. ಆದರೆ ಕಾಲೇಜುಗಳಲ್ಲೂ, ಹಿಂದಿಯನ್ನು ಕಲಿಕಾ ಮಾಧ್ಯಮವಾಗಿ ಅಳವಡಿಸಿಕೊಂಡ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ ಕೊಡಿ ಎನ್ನುವುದು ಸಂವಹನ ಭಾಷಾ ಕಲಿಕೆಯೋ? ಹೇರಿಕೆ ರೂಪದ ಹಿಂದಿ ಪ್ರಚಾರವೋ?

ಹಿಂದಿಯೇತರ ರಾಜ್ಯಗಳಲ್ಲಿ ಹಿರಿಯ ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿ ಹಿಂದಿಯನ್ನು ಕಲಿಸಲು ಶಿಕ್ಷಕರ ಕೊರತೆ ಎದುರಾಗಿ, ಆ ಮೂಲಕ ಹಿಂದಿ ಕಲಿಕೆಗೆ ಹಿನ್ನಡೆಯಾಗದಿರಲೆಂದು ಹಿಂದಿ ಶಿಕ್ಷಕ ಅಭ್ಯರ್ಥಿಗಳ ಸಂಖ್ಯೆಯನ್ನು ವೃದ್ಧಿಸುವ ಉದ್ದೇಶದಿಂದಲೇ ತ್ರಿಭಾಷಾ ನೀತಿಯು ಹೀಗೆ ಕಾಲೇಜು ಮಟ್ಟದಲ್ಲೂ ಹಿಂದಿ ಕಲಿಕೆಗೆ ಪ್ರೋತ್ಸಾಹ ನೀಡಿತ್ತು. ಒಂದು ಭಾಷೆಯ ಬಗ್ಗೆ ಬೆಳೆಸಿಕೊಂಡ ಈ ತಾರತಮ್ಯ ಭಾವವು ಬೇರೆ ಭಾಷೆಗಳಿಗೆ ಮಾರಕವಲ್ಲವೇ?

ಇಷ್ಟಕ್ಕೇ ನಿಂತುಹೋಗಿದ್ದರೆ, ತ್ರಿಭಾಷಾ ನೀತಿಯು ಹಿಂದಿ ಕಲಿಕೆಯನ್ನು ಕೇವಲ ಒಂದು ಸಂವಹನ ಭಾಷಾ ಆಯಾಮದಿಂದ ಮಾತ್ರ ಪ್ರಚುರಪಡಿಸುತ್ತಿದೆ ಎಂಬ ಒಣವಾದವನ್ನು ಮನ್ನಿಸಬಹುದಿತ್ತು. ಆದರೆ (ಡಿ) ನಿಬಂಧನೆಯು ಹಿಂದಿ ಹೇರಿಕೆಯಿಂದ ಉಂಟಾಗಬಹುದಾದ ಅಪಾಯಕಾರಿ ಸಾಂಸ್ಕೃತಿಕ ರಾಜಕಾರಣವನ್ನು ತೆರೆದಿಡುತ್ತದೆ. “Considering the special importance of Sanskrit to the growth and development of Indian languages and its unique contribution to the cultural unity of the country, facilities for its teaching at the school and university stages should be offered on a more liberal scale” ಎನ್ನುತ್ತದೆ ಈ ನಿಬಂಧನೆ.

ಒಂದು ಭಾಷೆಯಾಗಿ ಸಂಸ್ಕೃತದಲ್ಲಿ ನಾವು ದೋಷವನ್ನು, ಆತಂಕವನ್ನು ಹುಡುಕುವುದು ಸರಿಯಲ್ಲ; ಆದರೆ, ಸಾವಿರಾರು ವರ್ಷಗಳ ಕಾಲ ಶೋಷಕ ಸಮುದಾಯವೊಂದು ಮೂಲನಿವಾಸಿಗಳನ್ನು ಜ್ಞಾನದಿಂದ ವಂಚಿಸಿ ಶೋಷಿಸಲು ಇದೇ ಸಂಸ್ಕೃತವನ್ನು ಒಂದು ಅಸ್ತ್ರವನ್ನಾಗಿ ಮಾಡಿಕೊಂಡಿದ್ದರೆನ್ನಲಾದ ಆಯಾಮದಿಂದ ನೋಡಿದಾಗ, ಸಂಸ್ಕೃತ ಭಾಷೆಯ ಬಗ್ಗೆ ನಾವು ಸದಾ ಸಾಮಾಜಿಕ ಎಚ್ಚರ ವಹಿಸಬೇಕಾಗುತ್ತದೆ. ಸಂವಿಧಾನ-ಭಾರತವನ್ನು ಮರುಬ್ರಾಹ್ಮಣೀಕರಿಸಿ ಮನುವಾದದ ಮೂಲಕ ಹಿಂಚಲನೆಗೆ ಕೊಂಡೊಯ್ಯುವ ಹಿಂದೂತ್ವ ರಾಜಕಾರಣದ ಹಲವು ಹುನ್ನಾರಗಳಲ್ಲಿ ಆರ್ಯ ಮೂಲದ ಸಂಸ್ಕೃತವನ್ನು ದೇಸೀ ಭಾಷೆಗಳ ಮೇಲೆ ಹೇರುವುದೂ ಒಂದು. ಇತ್ತೀಚೆಗೆ ಚಿಂತಕ ಶಿವಸುಂದರ್ ಅವರು ತಮ್ಮದೊಂದು ಬರಹದಲ್ಲಿ ಉಲ್ಲೇಖಿಸಿದಂತೆ 1923ರಲ್ಲೆ ವಿ ಡಿ ಸಾವರ್ಕರ್‍‌ ತಮ್ಮ essentials of Hindutva ಕೃತಿಯಲ್ಲಿ ಈ ಸುಳಿವು ನೀಡಿದ್ದರು. ಸಂಸ್ಕೃತವು ಭಾರತ ಪರಂಪರೆಯ ಶ್ರೇಷ್ಠ ಭಾಷೆಯಾಗಿದ್ದು, ಅದನ್ನು ಈಗಲೇ ರಾಷ್ಟ್ರಭಾಷೆ ಮಾಡಲು ಸಾಧ್ಯವಿಲ್ಲವಾದುದರಿಂದ, ಅಲ್ಲಿಯವರೆಗೆ ಸಂಸ್ಕೃತದಿಂದಲೇ ಅವತರಿಸಿದ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ನಾವು ಸ್ವೀಕರಿಸಬೇಕು ಎಂಬುದು ಸಾವರ್ಕರ್‍‌ ನಿಲುವಾಗಿತ್ತು. ಕರ್ನಾಟಕದ ಬಿಜೆಪಿ ನಾಯಕರು ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದರ ಹಿಂದಿನ ಪ್ರೇರಣೆಯೂ ಇದೇ ನಿಲುವು!

ಹಾಗಾದರೆ ತ್ರಿಭಾಷಾ ನೀತಿ ಕೂಡಾ ಹಿಂದಿಯ ಮೂಲಕ ಭವಿಷ್ಯದಲ್ಲಿ ಸಂಸ್ಕೃತವನ್ನು ದೇಶೀ ಭಾಷೆಗಳ ಮೇಲೆ ಹೇರುವ ಅದೇ ಬ್ರಾಹ್ಮಣೀಕರಣದ ಹುನ್ನಾರವನ್ನು ಹೊಂದಿದೆಯೇ ಎಂಬ ಅನುಮಾನವನ್ನು (ಡಿ) ನಿಬಂಧನೆ ಮೂಡಿಸುತ್ತದೆ. ನೀತಿಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರವೇ ಇರಬಹುದು. ಆದರೆ, ಕಾಂಗ್ರೆಸ್‌ ಪಕ್ಷವು ಸ್ವಾತಂತ್ರೋತ್ತರದ ಕಾಲದುದ್ದಕ್ಕೂ ಸೈದ್ಧಾಂತಿಕ ಗೊಂದಲಗಳಲ್ಲೇ ತೊಳಲುತ್ತಾ ಬಂದ ಪಕ್ಷ. ಆ ಪಕ್ಷದ ಇಂದಿನ ದುಸ್ಥಿತಿಗೆ ಇಂಥಾ ಗೊಂದಲಗಳೇ ಕಾರಣ. ಹಾಗಾಗಿ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿತ್ತೆಂಬ ಕಾರಣಕ್ಕೆ ತ್ರಿಭಾಷಾ ನೀತಿಯ ಹಿಂದಿರುವ ಬ್ರಾಹ್ಮಣ್ಯದ ಹೇರಿಕೆಯನ್ನು ತಳ್ಳಿಹಾಕಲಾಗದು.

ಯಾಕೆಂದರೆ, (ಡಿ) ನಿಬಂಧನೆಯು ಹಲವು ಸುಳ್ಳುಗಳಿಂದ ಕೂಡಿರುವಂತದ್ದು. ದೇಶದ ಸಾಂಸ್ಕೃತಿಕ ಏಕತೆಗೆ ಸಂಸ್ಕೃತ ಭಾಷೆಯು ಅನನ್ಯ ಕೊಡುಗೆ ನೀಡಿದೆ ಎಂದು ಅದು ಹೇಳುತ್ತದೆ. ವಾಸ್ತವದಲ್ಲಿ, ಸಂಸ್ಕೃತವು ಒಂದು ನಿರ್ದಿಷ್ಟ ಸಮುದಾಯದ  ಏಕತೆಯನ್ನು ಸಾಧಿಸಿದ ಭಾಷೆ ಮಾತ್ರ. ಹಾಗಾದರೆ ಆ ಒಂದು ಸಮುದಾಯ ಮಾತ್ರ ಭಾರತವೇ? ಸಂಸ್ಕೃತವನ್ನು ಕಲಿಯದ, ತಿಳಿಯದ, ಬಳಸದ ನೂರಾರು ಸಮುದಾಯಗಳು ತಮ್ಮದೇ ಭಾಷಾ ಪರಂಪರೆಯೊಂದಿಗೆ ಇಲ್ಲಿ ಜೀವಿಸಿವೆ. ಮನುಷ್ಯರನ್ನೇ ಜಾತಿ, ವರ್ಣಗಳ ಆಧಾರದಲ್ಲಿ ವಿಭಜಿಸಿದ ಬ್ರಾಹ್ಮಣ್ಯದ ಅಸ್ತ್ರವಾಗಿ ಬಳಕೆಯಾದ ಸಂಸ್ಕೃತವು ಭಾಷಾ ಪರಂಪರೆಗಳ ನಡುವೆ ಏಕತೆ ಸಾಧಿಸಿತ್ತೆನ್ನುವುದನ್ನು ಒಪ್ಪಲು ಸಾಧ್ಯವೇ?

ಇನ್ನು ಭಾರತೀಯ ಭಾಷೆಗಳ ಉಗಮ ಮತ್ತು ಬೆಳವಣಿಗೆಗೆ ಸಂಸ್ಕೃತ ಕೊಡುಗೆ ನೀಡಿದೆ ಎಂದು ಆ ನಿಬಂಧನೆ ಹೇಳುತ್ತದೆ. ಇದೂ ಅಪ್ಪಟ ಸುಳ್ಳು! ಭಾಷಾ ಸಂಶೋಧಕರು ಹೇಳುವ ಪ್ರಕಾರ ಮೂಲದ್ರಾವಿಡ (Proto-Dravidian) ಭಾಷೆಗಳಿಗೆ ಕ್ರಿ.ಪೂ 4000-3000 ವರ್ಷಗಳ ಇತಿಹಾಸವಿದೆ. ಇಂಡೋ-ಯುರೋಪಿಯನ್‌ ಮೂಲದ ಆರ್ಯರ ಭಾಷೆಯಾದ ಸಂಸ್ಕೃತ ಕ್ರಿ.ಪೂ. 1500-600 ವರ್ಷಗಳ ಇತಿಹಾಸ ಹೊಂದಿರುವಂತದ್ದು. ಈಗಾಗಲೇ ಅಸ್ತಿತ್ವದಲ್ಲಿದ್ದ ಭಾಷೆಗಳನ್ನು ಹೊಸದಾಗಿ ಬಂದ ಭಾಷೆ ಹುಟ್ಟಿಸಿತು, ಬೆಳೆಸಿತು ಎನ್ನುವುದು ಸರಿಯೇ?

ಸಂಸ್ಕೃತದ ಬಗ್ಗೆ ಇಂತಹ ಮಿಥ್ಯ ಹಿರಿಮೆಯನ್ನು ಹೊಂದಿರುವ ತ್ರಿಭಾಷಾ ನೀತಿ ಕಟ್ಟಳೆಯು ಬೇರೆ ಭಾಷೆಗಳಿಗೆ ಮಾರಕವಲ್ಲ ಎಂದು ನಂಬುವುದು ಹೇಗೆ? ಅದರ ಹಿಂದೆ ಇಷ್ಟೆಲ್ಲ ಸಾಂಸ್ಕೃತಿಕ-ಭಾಷಾ ರಾಜಕಾರಣ ಅಡಗಿರುವುದರಿಂದಲೇ ತಮಿಳುನಾಡಿನಲ್ಲಿ ಬಹುದೊಡ್ಡ ಪ್ರತಿರೋಧ ಎದುರಾಯ್ತು. ಅಂದಹಾಗೆ, ಕೇವಲ ದಕ್ಷಿಣ ರಾಜ್ಯಗಳಿಂದ ಮಾತ್ರವಲ್ಲ ಉತ್ತರದ ರಾಜ್ಯಗಳಿಂದಲೂ ಈ ತ್ರಿಭಾಷಾ ನೀತಿಗೆ ವಿರೋಧ ವ್ಯಕ್ತವಾಗಿತ್ತು. ನಾವು ಬಳಸದ ದ್ರಾವಿಡ ಭಾಷೆಗಳನ್ನು ಕಲಿಯುವ ಹೊರೆ ನಮ್ಮ ಮಕ್ಕಳಿಗೇಕೆ? ಎಂದು ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮೊದಲಾದ ಹಿಂದಿ ರಾಜ್ಯಗಳು ಪ್ರಶ್ನಿಸಿದವು. “ಉತ್ತರ ಪ್ರದೇಶದ ವಿದ್ಯಾರ್ಥಿಯೊಬ್ಬ ಯಾವುದೇ ದಿಕ್ಕಿನಲ್ಲಿ 1000 ಕಿಮೀ ಹೋದರೂ, ಆತನಿಗೆ ಹಿಂದಿಯೇ ಎದುರಾಗುತ್ತದೆ. ಹಾಗಿರುವಾಗ ನಾವೇಕೆ ದಕ್ಷಿಣ ಭಾಷೆಗಳನ್ನು ಕಲಿಬೇಕು” ಎಂಬುದು ಅವರ ವಾದವಾಗಿತ್ತು. ಈ ಹಠದಿಂದಲೇ ಹಿಂದಿ ರಾಜ್ಯಗಳು ದ್ರಾವಿಡ ಭಾಷೆಗಳ ಬದಲು ಸಂಸ್ಕೃತವನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡವು.

ಹಿಂದಿಯನ್ನೇ ಆಗಲಿ, ಅಥವಾ ಮತ್ತಾವುದೆ ಭಾಷೆಯನ್ನಾಗಲಿ ಒಂದು ಭಾಷೆಯಾಗಿ ಕಲಿಯುವುದರಲ್ಲಿ ತಪ್ಪೂ ಇಲ್ಲ; ತಕರಾರೂ ಸಲ್ಲ. ಆದರೆ ನೀತಿಯ ರೂಪದಲ್ಲಿ ಒಬ್ಬರ ಭಾಷೆಯನ್ನು ಇನ್ನೊಬ್ಬರ ಮೇಲೆ ದೇಶದ ಐಕ್ಯತೆ-ಭಾಷಾ ಸೋದರತೆ-ಸಂವಹನದ ಹೆಸರಲ್ಲಿ ಬಲವಂತವಾಗಿ ಹೇರಲು ಮುಂದಾದರೆ ಅಂತಹ ಅನ್ಯಾಯಕಾರಿ ನೀತಿಯನ್ನು ನಾವು ಪ್ರಶ್ನಿಸಲೇಬೇಕಾಗುತ್ತದೆ, ಪ್ರತಿಭಟಿಸಲೇಬೇಕಾಗುತ್ತದೆ. ಅವತ್ತೇನೋ ಅವರು 1000 ಕಿಮೀ ಮೀರಿ ನಡೆದಾಡುತ್ತಿರಲಿಲ್ಲ; ಆದರೆ ಈಗ, 1000 ಕಿಮೀ ಮೀರಿ ದಕ್ಷಿಣದ ರಾಜ್ಯಗಳಿಗೆ ಉದ್ಯೋಗ ಹುಡುಕಿಕೊಂಡು ಬರುತ್ತಿದ್ದಾರೆ. ಈಗಲಾದರೂ ಅವರು ನಮ್ಮ ಭಾಷೆ ಕಲಿಯಬೇಕಲ್ಲವೇ? ಈಗಲು ಕೂಡಾ ತ್ರಿಭಾಷೆಯ ಹೆಸರಿನಲ್ಲಿ ನಾವು ಕಲಿಯುವುದಿಲ್ಲ, ನಮ್ಮ ಅನುಕೂಲಕ್ಕಾಗಿ ನೀವೇ ನಮ್ಮ ಭಾಷೆ ಕಲಿಯಿರಿ ಎಂದಾಗ ನಾವು ಹಿಂದಿಯನ್ನು ಕೇವಲ ಒಂದು ಭಾಷೆಯಾಗಿ ಮಾತ್ರ ನೋಡಬೇಕೋ? ಅಥವಾ ದಬ್ಬಾಳಿಕೆ, ಧಿಮಾಕಿನ ಸರಕಾಗಿ ಕಾಣಬೇಕೋ?

ಮಾಚಯ್ಯ ಎಂ ಹಿಪ್ಪರಿಗಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಕನ್ನಡವನ್ನು ಗೆಲ್ಲಿಸುವರೇ ದಾವಣಗೆರೆ, ಬಾಗಲಕೋಟೆಯ ಜನ?

More articles

Latest article

Most read