ರಾಜಕೀಯದಲ್ಲಿ ಧರ್ಮ ಹಾಗೂ ಧರ್ಮದಲ್ಲಿ ರಾಜಕೀಯ ಬೆರೆತ ಸಂಕೀರ್ಣ ವ್ಯವಸ್ಥೆಯಲ್ಲಿ ಬಸವಾದಿ ಶರಣರ ಕುರಿತು ನಾಟಕ ಮಾಡುವುದು ತುಂಬಾ ಸೂಕ್ಷ್ಮ ವಿಚಾರ. ಇದನ್ನು ಬಸವಲಿಂಗಯ್ಯನವರು ‘ವಚನ ಕಲ್ಯಾಣ’ ದಲ್ಲಿ ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಈ ನಾಟಕದ ಅಸ್ತಿತ್ವ ನಿಂತಿದೆ. ಆರಂಭದಿಂದಲೂ ಒಂದಿಲ್ಲಾ ಒಂದು ಅಡೆತಡೆ ತಾಪತ್ರಯ ಸಮಸ್ಯೆಗಳನ್ನು ಎದುರಿಸುತ್ತಾ ಏದುಸಿರು ಬಿಡುತ್ತಿರುವ ‘ವಚನ ಕಲ್ಯಾಣ’ ಈಜಿ ದಡ ಸೇರುತ್ತದಾ? ಅಂದುಕೊಂಡಂತೆ ಯೋಜನೆ ಕಾರ್ಯರೂಪಕ್ಕೆ ಬರುತ್ತದಾ? ಎಂಬುದನ್ನು ಮುಂಬರುವ ಕಾಲವೇ ನಿರ್ಧರಿಸಬೇಕಿದೆ – ಶಶಿಕಾಂತ ಯಡಹಳ್ಳಿ, ರಂಗಕರ್ಮಿ.
“ವಚನ ಕಲ್ಯಾಣ ” ಎನ್ನುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುತ್ತಿರುವ ಮೆಗಾ ನಾಟಕದ ಈವೆಂಟ್ ಯೋಜನೆ. ಬಸವಾದಿ ಶರಣರ ವಚನಗಳನ್ನಾಧರಿಸಿದ 9 ಗಂಟೆಗಳ ಅಹೋರಾತ್ರಿ ನಾಟಕ ಪ್ರದರ್ಶಿಸುವ ಅಪರೂಪದ ಪ್ರಯೋಗಶೀಲ ಯೋಜನೆ.
2015 ರಲ್ಲಿ ಆರಂಭಗೊಂಡ ಈ ಯೋಜನೆಯ ತಯಾರಿಗೆ ಕಳೆದು ಹತ್ತು ವರ್ಷಗಳಿಂದ ಒಂದಿಲ್ಲೊಂದು ಅಡಚಣೆ ತಾಪತ್ರಯಗಳು ಬರುತ್ತಲೇ ಇವೆ. ಸರಕಾರಗಳು ಬದಲಾದಂತೆ ಸಮಿತಿಯ ಅಧ್ಯಕ್ಷ ಸದಸ್ಯರುಗಳು ಬದಲಾಯಿಸಲ್ಪಟ್ಟಿದ್ದಾರೆ. ಸಂಸ್ಕೃತಿ ಇಲಾಖೆಯ ಅನೇಕ ಸಚಿವರುಗಳು ಹಾಗೂ ನಿರ್ದೇಶಕರುಗಳು ಬದಲಾಗಿದ್ದಾರೆ. ಈ ಮೆಗಾ ನಾಟಕದ ನಿರ್ದೇಶಕರಾದ ಮಾನ್ಯ ಸಿ.ಬಸವಲಿಂಗಯ್ಯನವರು ಹಾಗೂ ನಾಟಕಕಾರರಾದ ಡಾ.ಕೆ.ವೈ.ನಾರಾಯಣ ಸ್ವಾಮಿಯವರು ಮಾತ್ರ ಮೊದಲಿನಿಂದಲೂ ಹಾಗೆಯೇ ಉಳಿದಿದ್ದಾರೆ. ಬಾಕಿ ಎಲ್ಲವೂ ಬದಲಾಗಿದೆ..
ಈ ಪ್ರಾಜೆಕ್ಟಿಗೆ ಹಣದ ಕೊರತೆ ಏನಿಲ್ಲ. ಎನ್ ಎಸ್ ಡಿ ಬ್ಯಾಂಕ್ ಅಕೌಂಟಿನಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ 75 ಲಕ್ಷ ಹಾಗೂ ಬಿಜೆಪಿ ಸರಕಾರ ಇದ್ದಾಗ 25 ಲಕ್ಷ ಠೇವಣಿ ಇಡಲಾಗಿದ್ದು ಅದಕ್ಕೆ ಸೇರ್ಪಡೆಯಾದ ಬ್ಯಾಂಕ್ ಬಡ್ಡಿಯೇ 50 ಲಕ್ಷ ಆಗಿದೆ. ಬ್ಯಾಂಕಿನಲ್ಲಿಟ್ಟಿದ್ದ ಬಡ್ಡಿ ಬೆಳೆಯಿತೇ ಹೊರತು ಯೋಜನೆ ಟೇಕಾಫ್ ಆಗಲೇ ಇಲ್ಲ. ಆಗ ಒಂದು ಕೋಟಿ ಇದ್ದದ್ದು, ಈಗ ಟೋಟಲ್ ಪ್ರಾಜೆಕ್ಟ್ ಕಾಸ್ಟ್ ಎರಡು ಕೋಟಿ ನಲವತ್ತು ಲಕ್ಷಕ್ಕೇರಿದೆ. ಅಂದರೆ ಒಂದೂವರೆ ಪಟ್ಟು ಜಾಸ್ತಿಯಾಗಿದೆ. ಎರಡು ವರ್ಷಗಳ ಪರಿಶ್ರಮದಿಂದ ಕೆವೈಎನ್ ನೇತೃತ್ವದ ತಂಡ 250 ಪುಟಗಳ ನಾಟಕದ ಸ್ಕ್ರಿಪ್ಟ್ ಸಿದ್ಧಪಡಿಸಿದೆ. ಈ ಸ್ಕ್ರಿಪ್ಟ್ ಬಗ್ಗೆಯೂ ಸಮಿತಿಯ ಸದಸ್ಯರುಗಳಲ್ಲಿ ಚರ್ಚೆಯಾಗಿ ತಕರಾರು ಶುರುವಾಗಿ ಸದಸ್ಯರಾಗಿದ್ದ ರಂಜಾನ್ ದರ್ಗಾರವರು ಇತ್ತೀಚೆಗೆ ಸಮಿತಿಗೆ ರಾಜೀನಾಮೆ ಕೊಟ್ಟು ಹೊರಗೆ ಬಂದಿದ್ದು ಈ ಯೋಜನೆಗೆ ಮತ್ತೊಂದು ಆಘಾತ ತಂದಿದೆ. ಅಧ್ಯಕ್ಷರಾದಿಯಾಗಿ ಕೆಲವು ಸದಸ್ಯರುಗಳಲ್ಲಿ ನಾಟಕದ ಸ್ಕ್ರಿಪ್ಟ್ ಮೇಲೆ ತಕರಾರುಗಳಿವೆ. ಇನ್ನೂ ಚರ್ಚೆ ಜಾರಿಯಲ್ಲಿದೆ. ಸದಸ್ಯರೆಲ್ಲರೂ ಬಹುಮತದಿಂದ ಒಪ್ಪಿಕೊಳ್ಳುವ ಲಕ್ಷಣಗಳಿಲ್ಲ.
ಏನಾದರೂ ಮಾಡಿ ಈ “ವಚನ ಕಲ್ಯಾಣ” ವನ್ನು ಕಟ್ಟಲೇಬೇಕು ಎಂದು ಸಿ.ಬಸವಲಿಂಗಯ್ಯನವರು ತಮ್ಮ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಈಗ ಸಿದ್ಧವಾಗಿರುವ ನಾಟಕವನ್ನು ಸರಿಪಡಿಸಿ ಹೇಗಾದರೂ ಉತ್ತಮ ನಾಟಕವನ್ನು ನಿರ್ದೇಶಿಸುವ ಮಹತ್ವಾಂಕಾಕ್ಷೆ ಹೊಂದಿದ್ದಾರೆ. ಆದರೆ ಸಮಿತಿಯ ಕೆಲವರು ಹಾಗೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಬಸವಲಿಂಗಯ್ಯನವರೂ ಆಸಕ್ತಿ ಕಳೆದುಕೊಂಡರೆ ಈ ಬೃಹನ್ನಾಟಕ ಪ್ರದರ್ಶನಗೊಳ್ಳುವುದೇ ಅನುಮಾನವಾಗಿದೆ. ಇದಕ್ಕೆ ಕಾರಣಗಳೂ ಹಲವಾರಿವೆ.
ಕೈಗೆ ಸಿಗದ ಕನ್ನಡಿಯೊಳಗಿನ ಗಂಟು

ಕೋಟಿಗಳ ನಾಟಕ ಮಾಡಲು ಹಣ ಬೇಕಲ್ಲವೇ? ಕನ್ನಡಿಯೊಳಗಿನ ಗಂಟಿನಂತೆ ಬ್ಯಾಂಕಿನಲ್ಲಿ ಹಣ ಇದೆ, ಆದರೆ ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ. ಇಲ್ಲಿಯವರೆಗೂ ಒಂದೇ ಒಂದು ಪೈಸೆ ಹಣ ಕೂಡಾ ಕೈಗೆ ಸಿಗದಂತಾಗಿದೆ. ಒಂದು ಕೋಟಿ ಅಸಲು ಮತ್ತು 50 ಲಕ್ಷ ಬಡ್ಡಿ ಸೇರಿ ಒಂದೂವರೆ ಕೋಟಿ ಹಣ NSD ಅಕೌಂಟಿನಲ್ಲಿ ಭದ್ರವಾಗಿದೆ. ಈಗ NSD ಯವರು ಈ ಪ್ರಾಜೆಕ್ಟಿನಿಂದ ಹಿಂದೆ ಸರಿದಿದ್ದು ಈ ಹಣವನ್ನು ಯಾರಿಗೆ ವಾಪಸ್ ಕೊಡಬೇಕು ಎನ್ನುವ ಜಿಜ್ಞಾಸೆ ಶುರುವಾಗಿದೆ. ಮೊನ್ನೆ ಮಾರ್ಚ್ 26. ರಂದು ಕಲಾಗ್ರಾಮದಲ್ಲಿ ನಡೆದ ಸಮಿತಿಯ ಲೇಟೆಸ್ಟ್ ಸಭೆಯಲ್ಲಿ ಈ ಪ್ರಾಜೆಕ್ಟ್‌ನ ಉಸ್ತುವಾರಿಯನ್ನು ಮಾನ್ಯ ಕಾ.ತ.ಚಿಕ್ಕಣ್ಣನವರ ನೇತೃತ್ವದ ಸಂತ ಕನಕದಾಸ ಅಧ್ಯಯನ ಪೀಠಕ್ಕೆ ವಹಿಸಬೇಕೆಂದು ನಿರ್ಧರಿಸಲಾಗಿದೆ. NSD ಖಾತೆಯಲ್ಲಿರುವ ಹಣವನ್ನು ಈ ಪೀಠಕ್ಕೆ ವರ್ಗಾಯಿಸಬೇಕೆಂದೂ ಚರ್ಚಿಸಲಾಗಿದೆ. ಅದಕ್ಕೂ ಒಂದಿಷ್ಟು ತಾಂತ್ರಿಕ ಸಮಸ್ಯೆಗಳಿವೆಯೆಂದೂ ಹೇಳಲಾಗುತ್ತಿದೆ. ಇನ್ನೂ ಅಗತ್ಯವಿರುವ ಹೆಚ್ಚುವರಿ 90 ಲಕ್ಷ ಹಣ ಹಣಕಾಸು ಇಲಾಖೆಯ ಪರಿಶೀಲನೆಯ ನಂತರ ಬಿಡುಗಡೆಯಾಗ ಬಹುದಾಗಿದೆ. ಅದಕ್ಕೆ ಸಮಯದ ಮಿತಿ ಇಲ್ಲ. ಹೆಚ್ಚುವರಿಯಾಗಿ ಹಣ ಕೊಡಿಸುವೆನೆಂದು ಭರವಸೆಯಿತ್ತ ಸಂಸ್ಕೃತಿ ಇಲಾಖೆಯ ಸಚಿವರ ಮೌಖಿಕ ಆದೇಶ ನಂಬಿ ಪ್ರಾಜೆಕ್ಟ್ ಶುರುಮಾಡುವುದಂತೂ ಸಮರ್ಥನೀಯವಲ್ಲ.
ಹೀಗಾಗಿ ಹಣಕಾಸಿನ ಸಮಸ್ಯೆ ಬಗೆಹರಿಯುವವರೆಗೂ ಹಾಗೂ 2.4 ಕೋಟಿ ಹಣ ಕನಕದಾಸ ಅಧ್ಯಯನ ಪೀಠದ ಖಾತೆಗೆ ವರ್ಗಾವಣೆಯಾಗುವವರೆಗೂ ಈ ಮೆಗಾ ಯೋಜನೆಗೆ ವೇಗ ಸಿಗುವುದಿಲ್ಲ. ನಾಟಕವೆಂಬ ಪುಷ್ಪಕ ವಿಮಾನ ಮೇಲಕ್ಕೇರುವುದಿಲ್ಲ.
ಯಾವುದೇ ಸಂಭಾವನೆ, ಮುಂಗಡ ಹಣ ಸಿಕ್ಕದೇ ಇದ್ದರೂ ಕೆವೈಎನ್ ತಂಡ ನಾಟಕವನ್ನು ತಯಾರಿ ಮಾಡಿದೆ. ಅದಕ್ಕಾಗಿ ಕೆವೈಎನ್ ರವರಿಗೆ ಎರಡು ಲಕ್ಷ ಹಾಗೂ ಅವರ ತಂಡದ 8 ಸದಸ್ಯರಿಗೆ ತಲಾ 25 ಸಾವಿರದಂತೆ 2 ಲಕ್ಷ ಪಾವತಿಸಬೇಕಿದ್ದರೂ ಇಲ್ಲಿಯವರೆಗೂ ಒಂದೇ ಒಂದು ರುಪಾಯಿ ಕೂಡಾ ಸಂದಾಯವಾಗಿಲ್ಲ.
ಕಲಾವಿದರ ವೇತನದಲ್ಲಿ ಕಡಿತ
ಹೀಗೇ ಆದರೆ ಈ ಪ್ರಾಜೆಕ್ಟ್ ನಿಂತು ಹೋಗಬಹುದು ಎನ್ನುವ ಆತಂಕಕ್ಕೆ ಒಳಗಾದ ಸಿ.ಬಸವಲಿಂಗಯ್ಯನವರು 70 ಜನ ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನಿಸಿದ್ದಾರೆ. ಸಂದರ್ಶನದ ದಿನಾಂಕವನ್ನೂ ನಿಗದಿ ಪಡಿಸಿದ್ದಾರೆ. ಈಗ ಕಲಾವಿದರಿಗೆ ಸಂದಾಯವಾಗುವ ಸಂಭಾವನೆ ಮೊತ್ತದಲ್ಲಿ ಭಾರಿ ಕಡಿತವನ್ನು ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಮೊದಲು ಅನುಭವವನ್ನು ಆಧರಿಸಿ ಕಲಾವಿದರುಗಳಿಗೆ 30 ರಿಂದ 40 ಸಾವಿರ ಮಾಸಿಕ ವೇತನ ಕೊಡುವುದೆಂದು ನಿರ್ಧರಿಸಲಾಗಿತ್ತು. ಆದರೆ ಈಗ ಪ್ರಾಜೆಕ್ಟ್ ಕಾಸ್ಟ್ ಹೆಚ್ಚಾಗಿರುವುದರಿಂದ ಕಲಾವಿದರ ವೇತನವನ್ನು ಕಡಿತಗೊಳಿಸಲಾಗಿದೆಯಂತೆ. ರಂಗಾನುಭವವನ್ನು ಪರಿಗಣಿಸಿ ತಿಂಗಳಿಗೆ 18 ರಿಂದ 25 ಸಾವಿರ ವೇತನವನ್ನು ಕೊಡಲು ನಿರ್ಧರಿಸಲಾಗಿದೆಯಂತೆ.
ಅದ್ಯಾಕೆ ಕಲಾವಿದರ ಹೊಟ್ಟೆ ಮೇಲೆ ಹೀಗೆ ಹೊಡೀತೀರಿ?’ ಎಂದು ಸಮಿತಿಯ ಸದಸ್ಯರನ್ನು ಪ್ರಶ್ನಿಸಿದರೆ ಮೂರು ತಿಂಗಳ ಅವಧಿಯನ್ನು ನಾಲ್ಕು ತಿಂಗಳಿಗೆ ಏರಿಸಲಾಗಿದೆ ಎಂದು ಉತ್ತರ ಕೇಳಿಬಂತು. ಅಂದರೆ ಮೊದಲಿನ ಯೋಜನೆಯಂತೆ ಮೂರು ತಿಂಗಳು ಕೊಡಮಾಡುವ ಸಂಭಾವನೆಯಲ್ಲಿ ಈಗ ನಾಲ್ಕು ತಿಂಗಳು ಕಲಾವಿದರನ್ನು ಬಳಸಿಕೊಳ್ಳುವ ನಿರ್ಧಾರ ಮಾಡಲಾಗಿದ್ದು ಕಲಾವಿದರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಇದಕ್ಕೆ ಕಾಸ್ಟ್ ಕಟ್ಟಿಂಗ್ ಎಂಬ ಹೆಸರು ಬೇರೆ.

ಇನ್ನೊಂದು ಆಘಾತಕಾರಿ ಸಂಗತಿ ಏನೆಂದರೆ ಇದೇ ಸಂಭಾವನೆ ವಿಷಯಕ್ಕೆ, ಕೇಳಿದಷ್ಟು ಹಣ ಕೊಡುತ್ತಿಲ್ಲವೆಂಬ ಬೇಸರಕ್ಕೆ ಈ ಪ್ರಾಜೆಕ್ಟಿನ ಸಂಗೀತ ನಿರ್ದೇಶನದ ಜವಾಬ್ದಾರಿಯಿಂದ ಮಾನ್ಯ ಹಂಸಲೇಖರವರು ಹಿಂದೆ ಸರಿದಿದ್ದಾರೆ. ‘ಎರಡು ಬಿಗ್ ಬಜೆಟ್ ಸಿನೆಮಾ ಪ್ರಾಜೆಕ್ಟ್ ಗಳು ಬಂದಿರುವುದರಿಂದ ವಚನ ಕಲ್ಯಾಣಕ್ಕೆ ಸಂಗೀತ ಸಂಯೋಜನೆ ಮಾಡುವುದಿಲ್ಲ’ ಎಂಬುದು ನಿರಾಕರಣೆಗೆ ಕೊಡುವ ಕಾರಣ. ಅಸಲಿ ಸಂಗತಿ ಏನೆಂದರೆ ಹಂಸಲೇಖರವರು 40 ವಚನಗಳನ್ನು ಕಂಪೋಸ್ ಮಾಡಿ ನಾಟಕಕ್ಕೆ ಹಿನ್ನೆಲೆ ಸಂಗೀತ ಒದಗಿಸಲು 20 ಲಕ್ಷ ಹಣ ಕೇಳಿದ್ದರಂತೆ. ಆದರೆ ಸಮಿತಿಯವರು 15 ಲಕ್ಷ ಕೊಡುತ್ತೇವೆ ಅಂದರಂತೆ. ಹೀಗಾಗಿ ವ್ಯವಹಾರ ಕುದುರದೇ ಹಂಸಲೇಖರವರು ಹಿಂದೆ ಸರಿದರಂತೆ ಎಂಬುದು ಲೇಟೆಸ್ಟ್ ಸುದ್ದಿ. ಈಗ ಹಂಸಲೇಖರವರ ಬದಲಾಗಿ ಅದೇ 15 ಲಕ್ಷಕ್ಕೆ ಫೈಜಲ್ ಖಾನ್ ರವರು ಸಂಗೀತ ಸಂಯೋಜನೆ ಮಾಡಲು ಒಪ್ಪಿಕೊಂಡಿದ್ದಾರಂತೆ.
ಹೀಗೆಯೇ ಒಬ್ಬೊಬ್ಬರೇ ಈ ಪ್ರಸ್ತಾವಿತ ಪ್ರಾಜೆಕ್ಟಿನಿಂದ ನಿರ್ಗಮಿಸಿದರೆ ಬೃಹನ್ನಾಟಕವನ್ನು ದಡ ಸೇರಿಸುವವರಾದರೂ ಯಾರು? ಸಮಿತಿಯ ಸದಸ್ಯರು ನಾಟಕದ ದೃಶ್ಯಗಳಿಗೆ ತಕರಾರು ಎತ್ತುತ್ತಲೇ ಹೋದರೆ ನಾಟಕಕಾರ ಕೆವೈಎನ್ ರವರೂ ಬೇಸತ್ತು “ನೀವೇ ಏನಾದರೂ ಮಾಡಿಕೊಳ್ಳಿ” ಎಂದು ಹೇಳಿ ದೂರವಾಗಬಹುದು. ಅಡೆತಡೆಗಳನ್ನೂ ಮೀರಿ ಸಿ. ಬಸವಲಿಂಗಯ್ಯನವರು ನಿರ್ದೇಶಕರ ಸ್ವಾತಂತ್ರ್ಯವನ್ನು ಬಳಸಿ ನಾಟಕದಲ್ಲಿ ಬದಲಾವಣೆಗಳನ್ನು ಮಾಡಿದ್ದೇ ಆದರೆ ಅದಕ್ಕೂ ತಕರಾರುಗಳು ಎದುರಾಗಿ ಕೊನೆಗೆ ಬಸವಲಿಂಗಯ್ಯನವರೇ “ನಿರ್ದೇಶಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ” ಎಂದು ಹೊರ ಹೋಗಬಹುದು. ಕೊನೆಗೆ ಸಮಿತಿಯಲ್ಲಿರುವವರೇ ತಮ್ಮ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿ ರಂಜಾನ್ ದರ್ಗಾರವರ ಹಾದಿ ಹಿಡಿಯಬಹುದು. ಈಗಿರುವ ಅಧಿಕಾರಿಗಳೇ ಬದಲಾಗಬಹುದು, ಸಚಿವರೇ ಮನಸ್ಸು ಬದಲಾಯಿಸಬಹುದು. ಇಷ್ಟೆಲ್ಲಾ ಅಡೆತಡೆಗಳಿದ್ದರೂ ಒಂದೇ ಒಂದು ಆಶಾಕಿರಣವೇನೆಂದರೆ ಎಲ್ಲವನ್ನೂ ತಮ್ಮ ಸಹನೆಯಿಂದ ನಿಭಾಯಿಸಬಲ್ಲವರಾದ ಮಾನ್ಯ ಕಾ.ತ.ಚಿಕ್ಕಣ್ಣನವರಿಗೆ ಈ ಪ್ರಾಜೆಕ್ಟ್‌ನ ಉಸ್ತುವಾರಿಯನ್ನು ವಹಿಸಿರುವುದು. ಎಲ್ಲರನ್ನೂ ಒಂದುಗೂಡಿಸಿಕೊಂಡು ಮುಂದುವರೆಯುವ ಸಾಮರ್ಥ್ಯ ಅವರಿಗಿದೆ. ಎಲ್ಲರ ಸಕಾರಾತ್ಮಕ ಸಹಕಾರವೂ ಬೇಕಾಗಿದೆ.
ಪ್ರದರ್ಶನ ಪೋಸ್ಟ್‌ಪೋನ್
2026 ರ ಜೂನ್ ತಿಂಗಳಲ್ಲಿ “ವಚನ ಕಲ್ಯಾಣ”ದ ಪ್ರದರ್ಶನ ಬಸವಕಲ್ಯಾಣದಲ್ಲಿ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಬಯಲಿನಲ್ಲಿ ಮೂರ್ನಾಲ್ಕು ವೇದಿಕೆಗಳಲ್ಲಿ ನಾಟಕ ಮಾಡುವುದು ಮಳೆಗಾಲದಲ್ಲಿ ಸೂಕ್ತವಲ್ಲ ಎಂಬ ಆಕ್ಷೇಪಣೆ ಬಂದಿದ್ದರಿಂದಾಗಿ ಹಾಗೂ ಮೇಲೆ ತಿಳಿಸಿದ ಕೆಲವಾರು ಕಾರಣಗಳಿಂದಾಗಿ ‘ವಚನ ಕಲ್ಯಾಣ” ಈಗ ನವೆಂಬರ್ ತಿಂಗಳಿಗೆ ಪೋಸ್ಟ್‌ಪೋನ್ ಆಗಿದೆ. ಹೋಗಲಿ ಆಗಲಾದರೂ ಈ ನಾಟಕ ಪ್ರದರ್ಶನಗೊಳ್ಳುವುದು ಪಕ್ಕಾನಾ? ಗೊತ್ತಿಲ್ಲ. ಅದಕ್ಕೂ ಹಲವಾರು ಅನುಮಾನಗಳಿವೆ.

ಯಾಕೆಂದರೆ.. ಈ “ವಚನ ಕಲ್ಯಾಣ” ನಾಟಕ ಕುವೆಂಪುರವರ “ಮಲೆಗಳಲ್ಲಿ ಮದುಮಗಳು” ನಾಟಕ ಮಾಡಿದಂತಲ್ಲ. ಆ ಮೆಗಾ ನಾಟಕಕ್ಕೆ ಸಿದ್ಧವಾಗಿದ್ದ ಕಾದಂಬರಿ ಆಕರವಾಗಿದ್ದರೂ ಸಹ, ‘ಕುವೆಂಪುರವರ ಕಾದಂಬರಿಯ ಆಶಯಗಳಿಗೆ ಧಕ್ಕೆ ಮಾಡಲಾಗಿದೆ’ ಎಂಬ ಆರೋಪಗಳೂ ಆಗ ಕೇಳಿಬಂದಿದ್ದವು. ಆದರೆ ಈಗ ಪ್ರದರ್ಶನ ಮಾಡಬೇಕೆಂದಿರುವ ನಾಟಕ ಬಸವಾದಿ ಶರಣರ ಕುರಿತಾದದ್ದು. ಆ ಕಾಲಘಟ್ಟದ ಇತಿಹಾಸದ ಕುರಿತು ನಿಖರವಾದ ಸಿದ್ಧ ಮಾಹಿತಿಗಳ ಕೊರತೆ ಇದೆ. ಕೇವಲ ವಚನಗಳ ಆಧಾರದಲ್ಲಿ ನಾಟಕ ಕಟ್ಟಬೇಕಿದೆ. ಬಹುತೇಕ ವಚನಗಳು ಸನಾತನಿ ಪುರೋಹಿತಶಾಹಿಗಳ ಅಸಮಾನತೆ ಹಾಗೂ ಶೋಷಣೆಯನ್ನು ಪ್ರಶ್ನಿಸುವಂತಿವೆ. ಸ್ಥಾವರ ಗುಡಿ ಗುಂಡಾರಗಳನ್ನು ಹುಡಿಗಟ್ಟುವಂತಿವೆ. ವೇದ ಶಾಸ್ತ್ರ ಆಗಮನಗಳನ್ನು ಧಿಕ್ಕರಿಸುವಂತಿವೆ. ಭಗವಂತ ಮತ್ತು ಭಕ್ತರ ನಡುವೆ ಇರುವ ಪೂಜಾರಿ ಪುರೋಹಿತರೆಂಬ ಮಧ್ಯವರ್ತಿಗಳ ಅಗತ್ಯವನ್ನು ತಿರಸ್ಕರಿಸುವಂತಿವೆ. ಹೀಗಿರುವಾಗ ಸನಾತನಿ ಸಂಘಿ ಪರಿವಾರ ಶಕ್ತಿಶಾಲಿಯಾಗಿರುವ ಪ್ರಸ್ತುತ ಕಾಲಘಟ್ಟದಲ್ಲಿ, ದೇಶದ ಆಡಳಿತದ ಚುಕ್ಕಾಣಿಯನ್ನು ಮನುವಾದಿಗಳೇ ಹಿಡಿದಿರುವಂತಹ ಸಂದರ್ಭದಲ್ಲಿ, ಸನಾತನಿ ಪುರೋಹಿತಶಾಹಿಗಳ ಸಿದ್ಧಾಂತವನ್ನೇ ಬುಡಮೇಲು ಮಾಡುವಂತಹ ಬಸವಾದಿ ಶರಣರ ವಚನಗಳನ್ನು ಆಧರಿಸಿದ ನಾಟಕವನ್ನು ಈ ಕೋಮುವಾದಿ ಸಂಘಿ ಮತಾಂಧರು ವಿರೋಧಿಸದೆ ಪುರಸ್ಕರಿಸುತ್ತಾರಾ?
ಹಿಂದಿನ ಸಲ ಲಿಂಗಾಯತ ಧರ್ಮಕ್ಕೆ ಸಿದ್ದರಾಮಯ್ಯನವರು ಚಾಲನೆ ಇತ್ತಿದ್ದಕ್ಕೆ ವೀರಶೈವರು ಹಾಗೂ ಸಂಘಿ ಪರಿವಾರದವರು ಕಾಂಗ್ರೆಸ್ ಸರಕಾರವನ್ನೇ ಚುನಾವಣೆಯಲ್ಲಿ ಪತನಗೊಳಿಸಿದರು. ಈಗಲೂ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಕ್ಕೆ ಒಳಗೊಳಗೆ ಉರಿದುಕೊಳ್ಳುತ್ತಿದ್ದಾರೆ.
ಈಗ ಮತ್ತೆ ಲಿಂಗಾಯತ ಧರ್ಮದ ವಚನಗಳನ್ನಾಧರಿಸಿದ ಮೆಗಾ ನಾಟಕವನ್ನು ಮಾಡಿದ್ದೇ ಆದರೆ ಈ ಸಂಘ ಪರಿವಾರದ ನಾಯಕರು ಸುಮ್ಮನಿರುತ್ತಾರಾ? ಅದನ್ನೇ “ಹಿಂದೂ ಧರ್ಮವನ್ನು ಒಡೆಯುವ ಕಾಂಗ್ರೆಸ್ ಹುನ್ನಾರ” ಎಂದು ಅಪಪ್ರಚಾರ ಮಾಡದೇ ಇರುತ್ತಾರಾ? 2029 ರ ಚುನಾವಣೆಯಲ್ಲಿ ಈ ನಾಟಕದಿಂದಾಗಿ ಹಿನ್ನಡೆಯಾಗುವ ಅನುಮಾನ ಬಂದರೂ ಸಿದ್ದರಾಮಯ್ಯನವರು ಈ ನಾಟಕವನ್ನೇ ನಿಲ್ಲಿಸಬಹುದು. ಅವರ ಸಚಿವ ಸಂಪುಟದ ಲಿಂಗಾಯತೇತರ ಸಚಿವರ ಒತ್ತಾಯಕ್ಕೂ ಮಣಿಯಬಹುದು. ಇಲ್ಲವೇ ನವೆಂಬರ್ ಒಳಗೆ ರಾಜಕೀಯ ಪಲ್ಲಟವಾಗಿ ಮುಖ್ಯಮಂತ್ರಿಗಳೇ ಬದಲಾಗಬಹುದು.
ರಾಜಕೀಯದಲ್ಲಿ ಧರ್ಮ ಹಾಗೂ ಧರ್ಮದಲ್ಲಿ ರಾಜಕೀಯ ಬೆರೆತ ಸಂಕೀರ್ಣ ವ್ಯವಸ್ಥೆಯಲ್ಲಿ ಬಸವಾದಿ ಶರಣರ ಕುರಿತು ನಾಟಕ ಮಾಡುವುದು ತುಂಬಾ ಸೂಕ್ಷ್ಮ ವಿಚಾರ. ಇದನ್ನು ಬಸವಲಿಂಗಯ್ಯನವರು ‘ವಚನ ಕಲ್ಯಾಣ’ ದಲ್ಲಿ ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಈ ನಾಟಕದ ಅಸ್ತಿತ್ವ ನಿಂತಿದೆ. ಆರಂಭದಿಂದಲೂ ಒಂದಿಲ್ಲಾ ಒಂದು ಅಡೆತಡೆ ತಾಪತ್ರಯ ಸಮಸ್ಯೆಗಳನ್ನು ಎದುರಿಸುತ್ತಾ ಏದುಸಿರು ಬಿಡುತ್ತಿರುವ ‘ವಚನ ಕಲ್ಯಾಣ’ ಈಜಿ ದಡ ಸೇರುತ್ತದಾ? ಅಂದುಕೊಂಡಂತೆ ಯೋಜನೆ ಕಾರ್ಯರೂಪಕ್ಕೆ ಬರುತ್ತದಾ? ಎಂಬುದನ್ನು ಮುಂಬರುವ ಕಾಲವೇ ನಿರ್ಧರಿಸಬೇಕಿದೆ. ಬಸವಾದಿ ಶರಣರ ಆಶಯಗಳನ್ನು ಸಾರುವ ಈ ನಾಟಕ ಕರ್ನಾಟಕದಾದ್ಯಂತ ಪ್ರದರ್ಶನಗೊಂಡು ಹೆಚ್ಚು ಜನರನ್ನು ತಲುಪಬೇಕಿದೆ. ಸರಕಾರಿ ಕೃಪಾ ಪೋಷಿತ ಕೆಲಸ ದೇವರ ಕೆಲಸ ಎನ್ನುವುದರ ಬದಲಾಗಿ ಜನರ ಕೆಲಸ ಎಂದಾಗಬೇಕಿದೆ. ದಶಕದ ನಂತರವಾದರೂ “ವಚನ ಕಲ್ಯಾಣಕ್ಕೆ ಪ್ರದರ್ಶನದ ಭಾಗ್ಯ ಸಿಗಬೇಕಿದೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- http://ನಾಟಕ | ದಶಕದ ಶಾಪ ವಿಮೋಚನೆ; ‘ವಚನ ಕಲ್ಯಾಣ’ಕ್ಕೆ ಚಾಲನೆ


