ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕವಿಯುತ್ತಿದ್ದು, ಇರಾನ್ ಮತ್ತು ಅದರ ಸುತ್ತಮುತ್ತಲಿನ ರಾಷ್ಟ್ರಗಳ ನಡುವಿನ ಸಂಘರ್ಷ ಈಗ ಜಾಗತಿಕ ತೈಲ ಮಾರುಕಟ್ಟೆ ಮತ್ತು ಅಂತರರಾಷ್ಟ್ರೀಯ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ದುಬೈ ಬಂದರಿನಲ್ಲಿ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ
ಕುವೈತ್ ಪೆಟ್ರೋಲಿಯಂ ಕಾರ್ಪೊರೇಷನ್ (KPC) ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ದುಬೈ ಬಂದರಿನಲ್ಲಿ ಲಂಗರು ಹಾಕಿದ್ದ ‘ಅಲ್-ಸಾಲ್ಮಿ’ (Al-Salmi) ಎಂಬ ಬೃಹತ್ ತೈಲ ಟ್ಯಾಂಕರ್ ಮೇಲೆ ಇರಾನ್ ಪಡೆಗಳು ದಾಳಿ ನಡೆಸಿವೆ. ಈ ದಾಳಿಯ ತೀವ್ರತೆಗೆ ಟ್ಯಾಂಕರ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸಮುದ್ರಕ್ಕೆ ಅಪಾರ ಪ್ರಮಾಣದ ತೈಲ ಸೋರಿಕೆಯಾಗುವ (Oil Spill) ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಇದು ಕೇವಲ ಆರ್ಥಿಕ ನಷ್ಟವಲ್ಲದೆ, ಸಮುದ್ರದ ಪರಿಸರ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಕುವೈತ್ ಆತಂಕ ವ್ಯಕ್ತಪಡಿಸಿದೆ.
ಹಾರ್ಮುಜ್ ಜಲಸಂಧಿ ಬಂದ್: ಇರಾನ್ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಇರಾನ್ ಭಾಗಶಃ ಮುಚ್ಚಿದೆ. ಈ ಕ್ರಮಕ್ಕೆ ಅಮೆರಿಕ ತೀವ್ರ ಪ್ರತಿಕ್ರಿಯೆ ನೀಡಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅಲ್ ಜಜೀರಾ ವಾಹಿನಿಯೊಂದಿಗೆ ಮಾತನಾಡಿ, “ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯಾವಾಗಲೂ ರಾಜತಾಂತ್ರಿಕ ಮಾತುಕತೆ ಮತ್ತು ಶಾಂತಿಗೆ ಆದ್ಯತೆ ನೀಡುತ್ತಾರೆ. ಆದರೆ, ಇರಾನ್ ಅಂತರರಾಷ್ಟ್ರೀಯ ಜಲಮಾರ್ಗಗಳನ್ನು ಬಂದ್ ಮಾಡುವ ಮೂಲಕ ಕೆಣಕಿದರೆ, ಅದಕ್ಕೆ ತಕ್ಕ ‘ಗಂಭೀರ ಪರಿಣಾಮಗಳನ್ನು’ ಎದುರಿಸಬೇಕಾಗುತ್ತದೆ,” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಲೆಬನಾನ್ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಸೈನಿಕರ ಸಾವು
ಲೆಬನಾನ್ನಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ, ಕಳೆದ 24 ಗಂಟೆಗಳಲ್ಲಿ ವಿಶ್ವಸಂಸ್ಥೆಯ ಇಂಡೋನೇಷ್ಯಾದ ಮೂವರು ಶಾಂತಿಪಾಲನಾ ಸೈನಿಕರು (UN Peacekeepers) ಬಲಿಯಾಗಿದ್ದಾರೆ. ಈ ಘಟನೆಯು ಅಂತರರಾಷ್ಟ್ರೀಯ ಸಮುದಾಯವನ್ನು ಕೆರಳಿಸಿದೆ. ಸೈನಿಕರ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಫ್ರಾನ್ಸ್, ಈ ಕೂಡಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UN Security Council) ತುರ್ತು ಸಭೆಯನ್ನು ನಡೆಸುವಂತೆ ವಿನಂತಿಸಿದೆ. ಶಾಂತಿಪಾಲನಾ ಪಡೆಗಳ ಮೇಲಿನ ದಾಳಿಯು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಎಂದು ಫ್ರಾನ್ಸ್ ದೂರಿದೆ.
ಇನ್ನು ಈ ಘಟನೆಯನ್ನು ವಿಶ್ವಸಂಸ್ಥೆಯ ಭಾರತೀಯ ಮಿಷನ್ ಬಲವಾಗಿ ಖಂಡಿಸಿದೆ, ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಶಾಂತಿಪಾಲನಾ ಸೈನಿಕರ ಸುರಕ್ಷತೆಯು ಆದ್ಯತೆಯಾಗಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಪ್ರಸ್ತುತ ಲೆಬನಾನ್ನಲ್ಲಿರುವ ಒಟ್ಟು 7,500 ವಿಶ್ವಸಂಸ್ಥೆಯ ಸೈನಿಕರಲ್ಲಿ 642 ಜನ ಭಾರತೀಯ ಸೈನಿಕರಿದ್ದು, ಭಾರತವು ಶಾಂತಿಪಾಲನೆಗೆ ಅತಿ ಹೆಚ್ಚು ಸೈನಿಕರನ್ನು ಕಳುಹಿಸುವ ಪ್ರಮುಖ ದೇಶಗಳಲ್ಲಿ ಭಾರತ ಕೂಡ ಒಂದು.
ಜಿದ್ದಾ ಶೃಂಗಸಭೆಯಲ್ಲಿ ಅರಬ್ ರಾಷ್ಟ್ರಗಳ ಒಕ್ಕೂಟದ ನಿರ್ಧಾರ
ಸೌದಿ ಅರೇಬಿಯಾದ ಜಿದ್ದಾ ನಗರದಲ್ಲಿ ಮಹತ್ವದ ಶೃಂಗಸಭೆ ನಡೆದಿದೆ. ಇದರಲ್ಲಿ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (MBS), ಕತಾರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಮತ್ತು ಜೋರ್ಡಾನ್ ರಾಜ ಅಬ್ದುಲ್ಲಾ II ಭಾಗವಹಿಸಿದ್ದರು. ಈ ನಾಯಕರು ಜಂಟಿ ಹೇಳಿಕೆ ನೀಡಿ, ನಾಗರಿಕ ಮೂಲಸೌಕರ್ಯಗಳ ಮೇಲೆ ಇರಾನ್ ನಡೆಸುತ್ತಿರುವ ನಿರಂತರ ದಾಳಿಗಳನ್ನು ಖಂಡಿಸಿದ್ದಾರೆ. ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡಲು ಇರಾನ್ ತನ್ನ ಉದ್ಧಟತನವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

