ಪ್ರಸ್ತುತ ನಡೆಯುತ್ತಿರುವ ಇರಾನ್ ಇಸ್ರೇಲ್ ಮತ್ತು ಅಮೆರಿಕ ಯುದ್ಧದ ಬಗೆಗೆ ಭಾರತದ ನಿಲುವು ಮತ್ತು ಭಾರತ ಸರ್ಕಾರದ ನಿರ್ಧಾರಗಳ ಬಗ್ಗೆ ಪ್ರತಿಪಕ್ಷಗಳಲ್ಲಿ ಮತ್ತು ಜನ ಸಮೂಹದಲ್ಲಿ ಭಾರಿ ಟೀಕೆಯನ್ನು ಎದುರಿಸುತ್ತಿರುವ ಮೋದಿ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದುಕೊಂಡ ‘ದ ವಾಯ್ಸ್ ಆಫ್ ಹಿಂದ್ ರಾಜಬ್, ಸಿನೆಮಾವನ್ನು ಸೆಂಟ್ರಲ್ ಬೋರ್ಡ್ ಆಫ್ ಸರ್ಟಿಫಿಕೇಶನ್ (ಸಿಬಿಎಫ್ಸಿ) ಭಾರತದಲ್ಲಿ ನಿಷೇಧಿಸಿ ಸರ್ಕಾರ ಮತ್ತೊಮ್ಮೆ ಪ್ರತಿಪಕ್ಷಗಳ ಟೀಕೆಯನ್ನು ತನ್ನತ್ತ ಎಳೆದುಕೊಂಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಸರ್ಕಾರದ ಈ ನಿಲುವನ್ನು ಖಂಡಿಸಿದ್ದಾರೆ. “ಇದು ತುಂಬಾ ನಾಚಿಕೆಗೇಡಿನ ಸಂಗತಿ. ಪ್ರಜಾಪ್ರಭುತ್ವದಲ್ಲಿ ಸಿನೆಮಾವನ್ನು ಪ್ರದರ್ಶಿಸುವುದು ನಮ್ಮ ಸಮಾಜದ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಬಿಂಬವಾಗಿದೆ ಮತ್ತು ಸರ್ಕಾರ ಮತ್ತು ಸರ್ಕಾರದ ನಡುವಿನ ಸಂಬಂಧಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ವಿದೇಶಗಳಿಗೆ ಅಪರಾಧ ಉಂಟುಮಾಡಬಹುದು ಎಂಬ ಕಾರಣಕ್ಕಾಗಿ ಸಿನೆಮಾಗಳು ಅಥವಾ ಪುಸ್ತಕಗಳನ್ನು ನಿಷೇಧಿಸುವ ಈ ಅಭ್ಯಾಸವು ತಕ್ಷಣವೇ ನಿಲ್ಲಬೇಕು. ಇದು ಪ್ರಬುದ್ಧ ಪ್ರಜಾಪ್ರಭುತ್ವಕ್ಕೆ ಅನರ್ಹವಾಗಿದೆ ಎಂದು ಬರೆದುಕೊಂಡಿದ್ದಾರೆ.” ಮತ್ತೆ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೇತ್ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ.
ಯಾವುದು ಈ ಸಿನೆಮಾ ಅದರ ಹಿನ್ನೆಲೆ ಏನು?
ಅದು ಜನವರಿ 29, 2024 ರ ಸಮಯ. ಗಾಝಾದ ಉಪನಗರವಾದ ಟೆಲ್ ಅಲ್ ಹವಾದಲ್ಲಿ ಇಸ್ರೇಲ್ ಕ್ಷಿಪಣಿ ಮತ್ತು ಬಾಂಬ್ಗಳ ದಾಳಿ ನಡೆಸುತ್ತಿದ್ದಾಗ ಪರಿಸ್ಥಿತಿ ಭೀಕರವಾಗಿತ್ತು. ಬಾಂಬ್ ದಾಳಿಯ ನಡುವೆ ಹಿಂದ್ ರಜಬ್ ಮತ್ತು ಆಕೆಯ ಕುಟುಂಬದ ಆರು ಸದಸ್ಯರು ಕಾರಿನಲ್ಲಿ ಪಟ್ಟಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಕಾರು ಪಟ್ಟಣವನ್ನು ಬಿಡುತ್ತಿದ್ದಂತೆಯೇ ಇಸ್ರೇಲಿ ಪಡೆಗಳ ಗುಂಡಿನ ದಾಳಿಗೆ ಕಾರಿನಲ್ಲಿದ್ದ ಎಲ್ಲರೂ ಸಾಯುತ್ತಾರೆ. ರಜಬ್ ಮತ್ತು ಸೋದರ ಸಂಬಂಧಿ ಲಯನ್ ಹಮಾದೆ ಮಾತ್ರ ಬದುಕುಳಿಯುತ್ತಾರೆ. ತನ್ನ ಕುಟುಂಬದ ಸದಸ್ಯರ ಶವಗಳ ನಡುವೆ ಸಿಕ್ಕಿಬಿದ್ದ ರಜಬ್ ಪ್ಯಾಲೇಸ್ಟಿನಿಯನ್ ತುರ್ತು ಸೇವೆಗಳಿಗೆ ಹತಾಶೆಯಿಂದ ಕರೆ ಮಾಡಿ ಇಸ್ರೇಲಿ ಟ್ಯಾಂಕ್ಗಳು ಹತ್ತಿರ ಬರುತ್ತಿದ್ದಂತೆ ಸಹಾಯಕ್ಕಾಗಿ ಆಕೆ ಬೇಡಿಕೊಳ್ಳುತ್ತಾಳೆ. ಸಹಾಯಕ್ಕಾಗಿ ಕಾಯುತ್ತಿದ್ದಾಗ ಪ್ಯಾಲೇಸ್ಟಿನಿಯನ್ ರೆಡ್ ಕ್ರೆಸೆಂಟ್ ಸ್ವಯಂಸೇವಕಿಯೊಂದಿಗೆ ರಜಬ್ ನಡೆಸಿದ ಫೋನ್ ಕರೆಯ ಅಸಲಿ ಆಡಿಯೋವನ್ನು ಸಿನೆಮಾವು ಬಳಸಿಕೊಂಡಿದೆ. ರೆಡ್ ಕ್ರೆಸೆಂಟ್ 2024 ರ ಅಂತ್ಯದಲ್ಲಿ ಅವರ ಸಂಭಾಷಣೆಯ ಆಡಿಯೋ ಫೈಲ್ಗಳನ್ನು ಬಿಡುಗಡೆ ಮಾಡಿತ್ತು. ನಂತರ ಇಸ್ರೇಲಿ ಪಡೆಗಳು ಹತ್ತಿರ ಬಂದಂತೆ ಹಮಾದೆ ಕೂಡ ಕೊಲ್ಲಲ್ಪಟ್ಟಳು. ಕೇವಲ ಐದು ವರ್ಷದ ರಜಬ್ ಈಗ ಕಾರಿನಲ್ಲಿ ಬದುಕುಳಿದ ಏಕೈಕ ವ್ಯಕ್ತಿ. ರೆಡ್ ಕ್ರೆಸೆಂಟ್ ರಜಬ್ ಜೊತೆಗೆ ಸಂವಹನ ನಡೆಸುತ್ತಿತ್ತು. ಅದೇ ಸಮಯದಲ್ಲಿ ಅಂಬ್ಯುಲೆನ್ಸ್ ಕಳುಹಿಸಲು ಇಸ್ರೇಲಿ ಪಡೆಗಳೊಂದಿಗೆ ಮಾತುಕತೆ ನಡೆಸಲು ಪ್ರಾರಂಭಿಸಿತು.

ಇಲ್ಲಿಯೇ ಇದ್ದದ್ದು ದೊಡ್ಡ ಸವಾಲು. ಗಾಝಾಕ್ಕೆ ಅಂಬ್ಯುಲೆನ್ಸ್ ಕಳುಹಿಸಲು ಸ್ವಯಂಸೇವಕರು ಇಸ್ರೇಲಿ ಸೇನೆಯಿಂದ ಅನುಮೋದನೆ ಪಡೆಯಬೇಕಾಗಿತ್ತು. ಅಂತಹ ಅನುಮೋದನೆಗಾಗಿ ಇಸ್ರೇಲ್ನೊಂದಿಗೆ ನೇರವಾಗಿ ಮಾತುಕತೆ ನಡೆಸುವ ಶಕ್ತಿ ಜೋರ್ಡಾನ್ಗೆ ಮಾತ್ರ ಇತ್ತು. ಯಾಕೆಂದರೆ ಆ ಸಮಯದಲ್ಲಿ ಜೋರ್ಡಾನ್ ಯುದ್ಧ ಸಂಧಾನದ ಮಧ್ಯಸ್ಥಿಕೆ ವಹಿಸಿತ್ತು. ಹಲವು ಗಂಟೆಗಳ ನಂತರ ರೆಡ್ ಕ್ರೆಸೆಂಟ್ ರಜಬ್ ಇದ್ದ ಸ್ಥಳಕ್ಕೆ ಅಂಬ್ಯುಲೆನ್ಸ್ ಕಳುಹಿಸಲು ಸಾಧ್ಯವಾಯಿತು. ಆದರೆ ಅಂಬ್ಯುಲೆನ್ಸ್ ಕಾರಿನ ಹತ್ತಿರ ತಲುಪುತ್ತಿದ್ದಂತೆಯೇ ಅಂಬ್ಯುಲೆನ್ಸ್ ಮೇಲೆ ದಾಳಿ ನಡೆಯಿತು ಮತ್ತು ಆಂಬ್ಯುಲೆನ್ಸ್ ನಲ್ಲಿ ಇದ್ದ ಇಬ್ಬರು ಸಿಬ್ಬಂದಿ ಕೂಡ ಸಾವನ್ನಪ್ಪಿದರು. ಅದಾದ ನಂತರ ಹಿಂದ್ ರಜಬ್ ಜೊತೆಗಿನ ಸಂಪರ್ಕ ಕಡಿತಗೊಂಡಿತು. ನನ್ನ ದೇಶ ನನ್ನ ಸಹಾಯಕ್ಕೆ ಬರುತ್ತದೆ ಎಂದು ಕಾಯುತ್ತಿದ್ದ ಆ ಪುಟ್ಟ ಹಿಂದ್ ರಜಬ್ ಅಂತ್ಯ ಕಾಣುತ್ತಾಳೆ. ಸುಮಾರು ಹದಿನೈದು ದಿನಗಳ ನಂತರ ರಜಬ್, ಆಕೆಯ ಕುಟುಂಬದ ಆರು ಸದಸ್ಯರು ಮತ್ತು ಇಬ್ಬರು ವೈದ್ಯರ ಶವಗಳು ಪತ್ತೆಯಾದವು
ಆ ಆಡಿಯೋದಲ್ಲಿ ಐದು ವರ್ಷದ ಆ ಪುಟ್ಟ ಬಾಲಕಿ “ದಯವಿಟ್ಟು ನನ್ನನ್ನು ಕಾಪಾಡಿ ಅವರು ನನ್ನ ಮೇಲೆ ಗುಂಡು ಹರಿಸುತ್ತಿದ್ದಾರೆ. ನನ್ನನ್ನು ಒಬ್ಬಂಟಿಯಾಗಿ ಬಿಡಬೇಡಿ ನನಗೆ ಕತ್ತಲು ಎಂದರೆ ಭಯ. ಯಾರಾದರೂ ಬಂದು ನನ್ನನ್ನು ಕಾಪಾಡಿ” ಎಂದು ಫೋನ್ನಲ್ಲಿ ಆಕೆ ಬೇಡಿಕೊಳ್ಳುವ ಧ್ವನಿ ಎಂತವರ ಕಣ್ಣಲ್ಲೂ ನೀರು ತರುತ್ತದೆ. ಆದರೂ ಆಕೆಯನ್ನು ಕಾಪಾಡುವಲ್ಲಿ ವಿಫಲರಾಗುತ್ತಾರೆ.
2026 ರಲ್ಲಿ ಅಕಾಡೆಮಿ ಅವಾರ್ಡ್ ನಲ್ಲಿ ಈ ಸಿನೆಮಾ ಅತ್ಯುತ್ತಮ ಅಂತಾರಾಷ್ಟ್ರೀಯ ಸಿನೆಮಾ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತ್ತು. ಅದಲ್ಲದೆ ವೆನಿಸ್ ಚಿತ್ರೋತ್ಸವದಲ್ಲಿ ಸತತ 20 ನಿಮಿಷಗಳ ಕಾಲ ನಿರಂತರ ಚಪ್ಪಾಳೆ ಪಡೆದುಕೊಂಡಿತ್ತು. ಮತ್ತು ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಭಾರತದ ಸಮಸ್ಯೆ ಏನು?
ಇನ್ನು ಈ ಸಿನೆಮಾವನ್ನು ಭಾರತದಲ್ಲಿ ಮನೋಜ್ ನಂದವಾನ್ ಅವರು ವಿತರಿಸುತ್ತಿದ್ದಾರೆ. ಈ ಸಿನೆಮಾದ ಭಾರತದ ಪ್ರದರ್ಶನವನ್ನು ನಿರಾಕರಿಸಿ ಸಿಬಿಎಫ್ಸಿ ಲಿಖಿತ ರೂಪದಲ್ಲಿ ಯಾವುದೇ ಪತ್ರವನ್ನು ನೀಡದೆ ವಿಷಯವನ್ನು ಪರಿಷ್ಕರಣಾ ಸಮಿತಿಗೆ ವರ್ಗಾಯಿಸುವ ಮೂಲಕ ಸಿನೆಮಾದ ಬಿಡುಗಡೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದಿದ್ದಾರೆ.
ಭಾರತ ಯಾಕೆ ಸಿನೆಮಾವನ್ನು ನಿಷೇಧಿಸುತ್ತಿದೆ ಎಂದರೆ..
ಸಿನೆಮಾದ ವಿತರಕ ಮನೋಜ್ ನಂದವಾನ್ ಅವರ ಪ್ರಕಾರ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ಸಿ) ಸದಸ್ಯರು ಈ ಸಿನೆಮಾವನ್ನು ಪ್ರದರ್ಶಿಸಿದರೆ ಭಾರತ ಮತ್ತು ಇಸ್ರೇಲ್ ನಡುವಿನ ಸೌಹಾರ್ದಯುತ ಸಂಬಂಧಕ್ಕೆ ಧಕ್ಕೆ ಬರಬಹುದು ಎಂದು ಮೌಖಿಕವಾಗಿ ತಿಳಿಸಿದ್ದಾರೆ. ಕಳೆದ ಒಂದು ದಶಕದಲ್ಲಿ ಭಾರತವು ಇಸ್ರೇಲ್ನೊಂದಿಗೆ ರಕ್ಷಣೆ ತಂತ್ರಜ್ಞಾನ ಮತ್ತು ರಾಜತಾಂತ್ರಿಕವಾಗಿ ಅತ್ಯಂತ ನಿಕಟ ಸಂಬಂಧವನ್ನು ಹೊಂದಿದೆ. ಇಸ್ರೇಲಿ ಪಡೆಗಳ ದಾಳಿಯನ್ನು ತೋರಿಸುವ ಈ ಸಿನೆಮಾವು ಆ ದೇಶದೊಂದಿಗಿನ ಬಾಂಧವ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬುದು ಸರ್ಕಾರದ ನಿಲುವು. ಮತ್ತು ಸಿನೆಮಾದ ಸೂಕ್ಷ್ಮ ವಿಷಯ ವಸ್ತು.
ಈ ಸಿನೆಮಾವು ಗಾಝಾದಲ್ಲಿ ಇಸ್ರೇಲಿ ಪಡೆಗಳ ಗುಂಡಿನ ದಾಳಿಗೆ ಸಿಲುಕಿ ಮೃತಪಟ್ಟ 5 ವರ್ಷದ ಬಾಲಕಿಯ ನೈಜ ಕಥೆಯಾಗಿದೆ. ಇದರಲ್ಲಿ ಯಾವುದೇ ಹಿಂಸೆ ನಗ್ನತೆ ಅಥವಾ ವಿವಾದಾತ್ಮಕ ಸಂಭಾಷಣೆಗಳಿಲ್ಲದಿದ್ದರೂ ಇದು ಇಸ್ರೇಲ್ನ ಸೇನಾ ಕ್ರಮಗಳನ್ನು ಅತ್ಯಂತ ಪ್ರಭಾವಶಾಲಿಯಾಗಿ ಪ್ರಶ್ನಿಸುತ್ತದೆ. ಸಿಬಿಎಫ್ಸಿ ಇದನ್ನು ಅತ್ಯಂತ ಸೂಕ್ಷ್ಮ ವಿಷಯ ಎಂದು ವರ್ಗೀಕರಿಸಿದೆ ಮತ್ತು ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯಲ್ಲಿ ಇಂತಹ ಸಿನೆಮಾವನ್ನು ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂದು ಭಾವಿಸಿರಬಹುದು.

ಇನ್ನು ಭಾರತದಲ್ಲಿನ ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಸಿನೆಮಾದ ನಿರ್ದೇಶಕಿ ಕೌತರ್ ಬೆನ್ ಹನಿಯಾ “ನಾನು ಭಾರತವನ್ನು ಪ್ರೀತಿಸುತ್ತ ಬೆಳೆದಿದ್ದೇನೆ. ಬಾಲಿವುಡ್ ನನ್ನ ಬಾಲ್ಯದ ಭಾಗವಾಗಿತ್ತು. ಒಂದು ಹಂತದಲ್ಲಿ ನಾನು ಕೂಡ ಭಾರತದ ಮೂಲದವಳೇ ಎಂದು ಕಲ್ಪಿಸಿಕೊಂಡಿದ್ದೇನೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಮಧ್ಯಪ್ರಾಚ್ಯದ ಏಕೈಕ ಪ್ರಜಾಪ್ರಭುತ್ವದ ನಡುವಿನ ಬಾಂಧವ್ಯವು ಎಷ್ಟು ದುರ್ಬಲವಾಗಿದೆಯೇ ಎಂದರೆ ಒಂದು ಸಿನೆಮಾವು ಅದನ್ನು ಮುರಿಯಬಲ್ಲದೇ” ಎಂದು ಸಿಬಿಎಫ್ಸಿ ನ ಈ ಕೆಟ್ಟ ನಿರ್ಧಾರವನ್ನು ಟೀಕಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ದ ವಾಯ್ಸ್ ಆಫ್ ಹಿಂದ್ ರಜಬ್ ಅಮೆರಿಕ ಬ್ರಿಟನ್ ಇಟಲಿ ಮತ್ತು ಫ್ರಾನ್ಸ್ನಂತಹ ದೇಶಗಳಲ್ಲಿ ಬಿಡುಗಡೆಯಾಗಿದೆ. ಈ ಎಲ್ಲಾ ದೇಶಗಳು ಇಸ್ರೇಲ್ ನೊಂದಿಗೆ ಭಾರತಕ್ಕಿಂತ ಒಳ್ಳೆಯ ಸಂಬಂಧ ಹೊಂದಿವೆ. ಆ ಎಲ್ಲಾ ದೇಶಗಳಲ್ಲಿ ಹಾಳಾಗದ ಸೌಹಾರ್ದತೆ ಭಾರತದೊಂದಿಗೆ ಹಾಳಾಗುತ್ತದೆ ಎನ್ನುವುದು ಗಮನಿಸಬೇಕಾದ ಸಂಗತಿ.
ಒಟ್ಟಾರೆಯಾಗಿ ಹೇಳುವುದಾದರೆ ದ ವಾಯ್ಸ್ ಆಫ್ ಹಿಂದ್ ರಜಬ್ ಸಿನೆಮಾದ ಸುತ್ತ ನಡೆಯುತ್ತಿರುವ ಈ ಬೆಳವಣಿಗೆಗಳು ಭಾರತದ ನೈತಿಕತೆ ಎಷ್ಟರ ಮಟ್ಟಿಗೆ ತಳಮಟ್ಟ ತಲುಪುತ್ತಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಕರೆಸಿಕೊಳ್ಳುವ ಮತ್ತು ಅನೇಕ ಐತಿಹಾಸಿಕ ಸಾಧನೆಗಳನ್ನು ಮಾಡಿರುವ ರಾಷ್ಟ್ರವೊಂದು ಯಾವುದೋ ಮೂಲೆಯಲ್ಲಿರುವ ಚಿಕ್ಕ ದೇಶದ ಮುನಿಸಿಗೆ ಹೆದರುವುದು ಎಂದರೆ ಭಾರತದ ಅಸ್ಮಿತೆ ಎಲ್ಲಿಗೆ ಬಂದು ನಿಂತಿದೆ ಎಂಬ ಪ್ರಶ್ನೆ ಮೂಡುತ್ತದೆ.
ಸರ್ಕಾರವು ಕೇವಲ ರಾಜತಾಂತ್ರಿಕ ಸಂಬಂಧಗಳನ್ನು ಉಳಿಸಿಕೊಳ್ಳುವ ಭರದಲ್ಲಿ ಒಂದು ಅತ್ಯುತ್ತಮ ಸಿನೆಮಾವನ್ನು ಜನರಿಗೆ ನೋಡಲು ಬಿಡದೆ ಇರುವುದು ದುರದೃಷ್ಟಕರ. ಇದು ಕೇವಲ ಸಿನೆಮಾದ ನಿಷೇಧವಲ್ಲ ಬದಲಾಗಿ ಭಾರತೀಯರ ಮೂಲಭೂತ ಹಕ್ಕುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸತ್ಯವನ್ನು ತಿಳಿಯುವ ಹಕ್ಕಿನ ಮೇಲಿನ ವ್ಯವಸ್ಥಿತ ದಾಳಿ. ಇತ್ತೀಚೆಗಷ್ಟೇ ಪ್ರಧಾನಿಯವರನ್ನು ಅನುಕರಿಸಿದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಒಬ್ಬರ ವಿಡಿಯೋವನ್ನು ಐಟಿ ಕಾಯ್ದೆ ಬಳಸಿ ಕಿತ್ತುಹಾಕಿದ ಘಟನೆಯನ್ನು ಗಮನಿಸಿದರೆ ಸರ್ಕಾರವು ಟೀಕೆಗಳನ್ನು ಎದುರಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತಿದೆಯೇ ಎಂಬ ಅನುಮಾನ ಕಾಡುತ್ತದೆ.
ಅಮೆರಿಕ ಬ್ರಿಟನ್ ಮತ್ತು ಫ್ರಾನ್ಸ್ನಂತಹ ಇಸ್ರೇಲ್ನ ಪರಮಾಪ್ತ ರಾಷ್ಟ್ರಗಳಲ್ಲೇ ಈ ಸಿನೆಮಾ ಬಿಡುಗಡೆಯಾಗಿ ಅಲ್ಲಿನ ಸೌಹಾರ್ದತೆ ಕೆಡದಿದ್ದಾಗ ಭಾರತದಲ್ಲಿ ಮಾತ್ರ ಯಾಕೆ ಈ ಭಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಗುರು ಎಂದು ಕರೆಸಿಕೊಳ್ಳಲು ಹವಣಿಸುವ ಭಾರತಕ್ಕೆ ಐದು ವರ್ಷದ ಮಗುವಿನ ಅಂತಿಮ ಧ್ವನಿಯನ್ನು ಆಲಿಸುವಷ್ಟು ಧೈರ್ಯವಿಲ್ಲವೇ?. ಪ್ರಜಾಪ್ರಭುತ್ವದ ಅಡಿಪಾಯವೇ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿದೆ. ಅದನ್ನು ಹತ್ತಿಕ್ಕುವ ಮೂಲಕ ನಾವು ಜಗತ್ತಿಗೆ ಯಾವ ಸಂದೇಶ ನೀಡುತ್ತಿದ್ದೇವೆ?.
ಸತ್ಯವನ್ನು ಎಷ್ಟು ಕಾಲ ಬಚ್ಚಿಟ್ಟರೂ ಅದು ಯಾವುದೋ ರೂಪದಲ್ಲಿ ಹೊರಬಂದೇ ಬರುತ್ತದೆ. ಆದರೆ ಆ ಸತ್ಯವನ್ನು ಹೇಳುವ ಧ್ವನಿಯನ್ನು ಹತ್ತಿಕ್ಕುವ ಮೂಲಕ ನಾವು ನಮ್ಮ ಪ್ರಜಾಪ್ರಭುತ್ವದ ಘನತೆಯನ್ನು ನಾವೇ ಕುಗ್ಗಿಸಿಕೊಳ್ಳುತ್ತಿದ್ದೇವೆ. ಇಸ್ರೇಲ್ನೊಂದಿಗೆ ಗೆಳೆತನ ಮುಖ್ಯವಿರಬಹುದು. ಆದರೆ ಮಾನವೀಯತೆ ಮತ್ತು ಸತ್ಯಕ್ಕಿಂತ ಅದು ದೊಡ್ಡದಲ್ಲ. ಭಾರತ ಸರ್ಕಾರ ಈ ಕೂಡಲೇ ತನ್ನ ನಿರ್ಧಾರವನ್ನು ಮರುಪರಿಶೀಲಿಸದಿದ್ದರೆ ಚರಿತ್ರೆಯ ಪುಟಗಳಲ್ಲಿ ಇದು ಒಂದು ದೊಡ್ಡ ಕಲೆಯಾಗಿ ಉಳಿಯುವುದರಲ್ಲಿ ಸಂಶಯವಿಲ್ಲ.
ನಿರಂಜನ್ ಹೊಸಕೊಪ್ಪ
ಕನ್ನಡ ಪ್ಲಾನೆಟ್
ಇದನ್ನೂ ಓದಿ- ಸೌಜನ್ಯ ಪ್ರಕರಣ : ನಿಷ್ಪಕ್ಷಪಾತ, ನ್ಯಾಯಯುತ ಮರು ತನಿಖೆಗೆ ʼಕೊಂದವರು ಯಾರುʼ ಆಂದೋಲನ ಒತ್ತಾಯ


