ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಇಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿತವಾದ ಪದಗಳಿಂದ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರ ಬಜೆಟ್ ಕೇವಲ ಅಂಕಿ-ಅಂಶಗಳ ಆಟವಾಗಿದ್ದು, ರಾಜ್ಯವನ್ನು ದಿವಾಳಿ ಮಾಡಿದೆ ಎಂದು ಅವರು ಆರೋಪಿಸಿದರು.
ಬಜೆಟ್ ಕುರಿತು ಸುನಿಲ್ ಕುಮಾರ್ ಎತ್ತಿದ ಪ್ರಮುಖ ಪ್ರಶ್ನೆಗಳು:
ಸಿದ್ದರಾಮಯ್ಯ ಅವರು ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದರೂ, ರಾಜ್ಯವನ್ನು ಅತೀ ಹೆಚ್ಚು ಸಾಲದ ಕೂಪಕ್ಕೆ ತಳ್ಳಿದವರು ಅವರೇ. ರಾಜ್ಯದ ಸಾಲದ ಅನುಪಾತ (GSDP Ratio) 24.94% ಕ್ಕೆ ತಲುಪಿದ್ದು, ಇದು ಅಪಾಯಕಾರಿ ಮಟ್ಟದಲ್ಲಿದೆ.
ಧಾರವಾಡದಲ್ಲಿ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯನ್ನು ತಣ್ಣಗಾಗಿಸಲು 56,000 ಹುದ್ದೆಗಳ ಭರ್ತಿಯ ಘೋಷಣೆ ಮಾಡಲಾಗಿದೆ. ಆದರೆ ಈ ನೌಕರರಿಗೆ ಸಂಬಳ ನೀಡಲು ಬಜೆಟ್ನಲ್ಲಿ ಎಲ್ಲಿಯೂ ಅನುದಾನ ಕಲ್ಪಿಸಿಲ್ಲ. ಇದು ಕೇವಲ ಕಣ್ಣೊರೆಸುವ ತಂತ್ರ ಎಂದು ಟೀಕಿಸಿದರು.
ಕೇಂದ್ರದ ನರೇಗಾ ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲಿನ 40% ಹಣ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಯೋಜನೆಯನ್ನು ಕಡೆಗಣಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಬಾಕಿ ಹಣದ ಬಗ್ಗೆ ಸರ್ಕಾರ ಮೌನವಾಗಿರುವುದು ಜನರಿಗೆ ಮಾಡುತ್ತಿರುವ ಮೋಸ ಎಂದು ಆಕ್ರೋಶ ಹೊರಹಾಕಿದರು.
ಸುಮಾರು ₹500 ಕೋಟಿ ವೆಚ್ಚದಲ್ಲಿ ಸಿದ್ಧವಾದ ಜಾತಿ ಗಣತಿ (ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ) ವರದಿ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪವೇ ಇಲ್ಲ. ಕಾಂತರಾಜು ಮತ್ತು ಜಯಪ್ರಕಾಶ್ ಹೆಗಡೆ ವರದಿಗಳನ್ನು ಸರ್ಕಾರ ಕಸದ ಬುಟ್ಟಿಗೆ ಹಾಕಿದ ರೀತಿಯಲ್ಲೆ ಮಧುಸೂದನ್ ಅವರ ವರದಿಯನ್ನು ಕೂಡ ಸರ್ಕಾರ ಕಸದ ಬುಟ್ಟಿಗೆ ಹಾಕುತ್ತಿದೆ ಎಂದು ದೂರಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ರಾಜಕೀಯ ಕಾರಣಕ್ಕೆ ರದ್ದು ಮಾಡಿ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಲಾಗಿದೆ. ಆದರೆ ಇನ್ನೂ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.
“ಜನರಿಗೆ ಇಂದಿರಾ ಕಿಟ್ ಜೊತೆಗೆ ಚೊಂಬನ್ನೂ ಕೊಡಿ, ಏಕೆಂದರೆ ನಿಮ್ಮ ಆಡಳಿತದಲ್ಲಿ ಜನರಿಗೆ ಉಳಿದಿರುವುದು ಅಷ್ಟೇ” ಎಂದು ವ್ಯಂಗ್ಯವಾಡಿದರು.

