ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಇಂತಹ ಆತಂಕದ ಪರಿಸ್ಥಿತಿಯ ನಡುವೆಯೂ ಭಾರತಕ್ಕೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು, ಕಚ್ಚಾ ತೈಲವನ್ನು ಹೊತ್ತ ‘ಜಗ್ ಲಾಡ್ಕಿ’ (Jag Ladki) ಹೆಸರಿನ ಬೃಹತ್ ಹಡಗು ಯಶಸ್ವಿಯಾಗಿ ಭಾರತಕ್ಕೆ ಬಂದು ತಲುಪಿದೆ.
ಈ ಹಡಗಿನಲ್ಲಿ ಸುಮಾರು 80 ಸಾವಿರ ಮೆಟ್ರಿಕ್ ಟನ್ ಕಚ್ಚಾ ತೈಲವಿದ್ದು, ಯುದ್ಧದ ಕಾರಣದಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕಕ್ಕೆ ಸದ್ಯಕ್ಕೆ ತೆರೆಬಿದ್ದಿದೆ. ಕೆಂಪು ಸಮುದ್ರ ಮತ್ತು ಹಾರ್ಮೋಸ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಪಾಯವಿದ್ದರೂ ಸಹ, ಭಾರತಕ್ಕೆ ತೈಲ ಪೂರೈಕೆ ನಿರಂತರವಾಗಿ ನಡೆಯುತ್ತಿರುವುದು ಆರ್ಥಿಕ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ಜಾಗತಿಕವಾಗಿ ತೈಲ ಬೆಲೆ ಏರಿಳಿತ ಕಾಣುತ್ತಿರುವ ಈ ಸಂದರ್ಭದಲ್ಲಿ ಈ ಪೂರೈಕೆಯು ದೇಶದ ಇಂಧನ ಭದ್ರತೆಗೆ ಹೆಚ್ಚಿನ ಬಲ ನೀಡಿದೆ.

