ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ತೀವ್ರಗೊಂಡಿದ್ದು, ಇರಾನ್ ಮತ್ತು ಇಸ್ರೇಲ್ ನಡುವಿನ ನೇರ ಸಂಘರ್ಷ ಈಗ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಇತ್ತೀಚಿನ ಬೆಳವಣಿಗೆಯ ಪ್ರಕಾರ, ಇರಾನ್ನ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಅಲಿ ಲಾರಿಜಾನಿ ಮತ್ತು ಬಸಿಜ್ ಪಡೆಯ ಕಮಾಂಡರ್ ಘೋಲಮ್ರೆಜಾ ಸೊಲೈಮನಿ ಅವರನ್ನು ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಇರಾನ್ ಅಧಿಕೃತವಾಗಿ ಖಚಿತಪಡಿಸಿದೆ. ಈ ಹತ್ಯೆಗಳಿಗೆ ಪ್ರತೀಕಾರವಾಗಿ ಇರಾನ್ ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದ್ದು, ಇಸ್ರೇಲ್ನ ರಾಮತ್ ಗಾನ್ ಪ್ರದೇಶದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಇರಾಕ್ನ ಬಾಗ್ದಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿವೆ.
ಈ ಉದ್ವಿಗ್ನತೆಯ ನಡುವೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು, ತಮ್ಮ ದೇಶದ ರಾಜಕೀಯ ವ್ಯವಸ್ಥೆಯು ಅತ್ಯಂತ ಸದೃಢವಾಗಿದೆ ಮತ್ತು ನಾಯಕರ ಹತ್ಯೆಯಿಂದ ಇರಾನ್ ದುರ್ಬಲವಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇತ್ತ, ಇರಾನ್ ಉಡಾಯಿಸಿದ ಕ್ಷಿಪಣಿಗಳನ್ನು ಸೌದಿ ಅರೇಬಿಯಾ, ಯುಎಇ, ಕತಾರ್ ಮತ್ತು ಕುವೈತ್ ದೇಶಗಳು ಮಧ್ಯದಲ್ಲೇ ತಡೆಹಿಡಿದಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯ ರಕ್ಷಣೆಗೆ ಸಹಕರಿಸದ ನೇಟೋ (NATO) ರಾಷ್ಟ್ರಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಅಮೆರಿಕವು ಇರಾನ್ ವಿರುದ್ಧ ಏಕಾಂಗಿಯಾಗಿ ದೊಡ್ಡ ಮಟ್ಟದ ಕಾರ್ಯಾಚರಣೆ ಆರಂಭಿಸಿದೆ . ಹಾರ್ಮೋಸ್ ಜಲಸಂಧಿಯಲ್ಲಿರುವ ಇರಾನ್ ಕ್ಷಿಪಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ಸುಮಾರು 5000 ಪೌಂಡ್ ತೂಕದ ʼಬಂಕರ್ ಬಸ್ಟರ್ʼ (GUB-72) ಸ್ಫೋಟಕಗಳನ್ನು ಬಳಸಿ ದಾಳಿ ಮಾಡಿದೆ.


