ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (NCTC) ಮುಖ್ಯಸ್ಥ ಜೋ ಕೆಂಟ್ (Joe Kent), ಇರಾನ್ ವಿರುದ್ಧದ ಯುದ್ಧದ ನಿರ್ಧಾರವನ್ನು ಪ್ರತಿಭಟಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇವಲ ಎಂಟು ತಿಂಗಳ ಹಿಂದೆಯಷ್ಟೇ ನೇಮಕಗೊಂಡಿದ್ದ ಇವರು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ಅಮೆರಿಕಾ ಫಸ್ಟ್” ನೀತಿಗೆ ವಿರುದ್ಧವಾಗಿ ಈ ಯುದ್ಧ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಕೆಂಟ್, ” ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಇರಾನ್ ಮೇಲೆ ನಡೆಯುತ್ತಿರುವ ಈ ಯುದ್ಧವನ್ನು ಬೆಂಬಲಿಸಲು ಸಾಧ್ಯವಿಲ್ಲ. ನಮ್ಮ ರಾಷ್ಟ್ರಕ್ಕೆ ಇರಾನ್‌ನಿಂದ ಯಾವುದೇ ತಕ್ಷಣದ ಅಪಾಯವಿರಲಿಲ್ಲ. ಆದರೆ ಇಸ್ರೇಲ್ ಮತ್ತು ಅಮೆರಿಕದಲ್ಲಿರುವ ಪ್ರಭಾವಿ ಇಸ್ರೇಲಿ ಲಾಬಿಗಳ ಒತ್ತಡಕ್ಕೆ ಮಣಿದು ನಾವು ಈ ಯುದ್ಧವನ್ನು ಆರಂಭಿಸಿದ್ದೇವೆ ಎಂಬುದು ಸ್ಪಷ್ಟವಾಗಿದೆ.” ಎಂದು ಗಂಭೀರವಾಗಿ ಹೇಳಿದ್ದಾರೆ. ಮಾಜಿ ಸೈನಿಕ ಹಾಗೂ ಸಿಐಎ ಅಧಿಕಾರಿಯಾಗಿದ್ದ ಕೆಂಟ್, ಮಧ್ಯಪ್ರಾಚ್ಯದ ಇಂತಹ “ಅಂತ್ಯವಿಲ್ಲದ ಯುದ್ಧಗಳು” ಅಮೆರಿಕದ ಸಂಪತ್ತು ಮತ್ತು ಸೈನಿಕರ ಬಲಿ ಪಡೆಯುವ ಬಲೆಗಳಾಗಿವೆ ಎಂದು ಎಚ್ಚರಿಸಿದ್ದಾರೆ.
ಯಾರು ಈ ಜೋ ಕೆಂಟ್
ಜೋ ಕೆಂಟ್ ಅವರನ್ನು ರಾಷ್ಟೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ(NCTC) ನಿರ್ದೇಶಕರನ್ನಾಗಿ ನೇಮಕ ಮಾಡುವಾಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆಂಟ್ ಅವರ ಸಾಹಸಗಾಥೆಯನ್ನು ಶ್ಲಾಘಿಸಿದ್ದರು. ಈ ಬಗ್ಗೆ ಈ ಹಿಂದೆ ಪೋಸ್ಟ್ ಮಾಡಿದ್ದ ಟ್ರಂಪ್, “ಜೋ ಕೆಂಟ್ ಒಬ್ಬ ಗ್ರೀನ್ ಬೆರೆಟ್ (Green Beret) ಸೈನಿಕ ಮತ್ತು ಸಿಐಎ (CIA) ಅಧಿಕಾರಿಯಾಗಿ ತಮ್ಮ ಇಡೀ ಜೀವನವನ್ನು ಭಯೋತ್ಪಾದಕರನ್ನು ಬೇಟೆಯಾಡಲು ಮುಡುಪಾಗಿಟ್ಟಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಭಯೋತ್ಪಾದನೆಯ ಭಿಕರತೆಯನ್ನು ಅವರು ವೈಯಕ್ತಿಕವಾಗಿ ಅನುಭವಿಸಿದ್ದಾರೆ,” ಜೋ ಕೆಂಟ್ ಅವರ ಪತ್ನಿ ಶಾನನ್ ಕೆಂಟ್ (Shannon Kent) ಅವರು ಐಸಿಸ್ (ISIS) ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದ ಅಮೆರಿಕನ್ ಹೀರೊ. ಅವರ ಪರಂಪರೆಯನ್ನು ಮುಂದುವರಿಸಲು ಮತ್ತು ಅಮೆರಿಕವನ್ನು ಸುರಕ್ಷಿತವಾಗಿಡಲು ಕೆಂಟ್ ಶ್ರಮಿಸಲಿದ್ದಾರೆ. ವಿಶ್ವದಾದ್ಯಂತ ಇರುವ ಜಿಹಾದಿಗಳಿಂದ ಹಿಡಿದು ಅಮೆರಿಕದ ಗಡಿಯಲ್ಲಿರುವ ಕಾರ್ಟೆಲ್‌ಗಳವರೆಗೆ ಎಲ್ಲಾ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಕೆಂಟ್ ಸಹಾಯ ಮಾಡುತ್ತಾರೆ ಎಂಬ ವಿಶ್ವಾಸದೊಂದಿಗೆ ಅವರನ್ನು ಈ ಉನ್ನತ ಹುದ್ದೆಗೆ ನಾಮನಿರ್ದೇಶನ ಮಾಡಲಾಗುತ್ತಿದೆ ಎಂದು ಟ್ರಂಪ್ ಹೇಳಿಕೊಂಡಿದ್ದರು. ಈ ನೇಮಕಾತಿಯ ಬಗ್ಗೆ ಪ್ರತಿಕ್ರಿಯಿಸಿದ್ದ ಜೋ ಕೆಂಟ್, “ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದಗಳು. ನಮ್ಮ ರಾಷ್ಟ್ರಕ್ಕೆ ಮತ್ತೊಮ್ಮೆ ಸೇವೆ ಸಲ್ಲಿಸುವುದು ನನಗೆ ಸಂದ ಗೌರವ. ನಮ್ಮ ದೇಶವನ್ನು ಸುರಕ್ಷಿತವಾಗಿ ಮತ್ತು ಬಲವಾಗಿಡುವ ಸಮಯ ಬಂದಿದೆ,” ಎಂದು ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದರು. ರಾಜೀನಾಮೆಯ ನಂತರ ಮತ್ತೆ ಆ ಪೋಸ್ಟ್‌ಅನ್ನು ರೀ ಪೋಸ್ಟ್ ಮಾಡಿದ್ದಾರೆ.
ಈ ಬೆಳವಣಿಗೆಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಜೋ ಕೆಂಟ್ ಒಬ್ಬ ಒಳ್ಳೆಯ ವ್ಯಕ್ತಿ, ಆದರೆ ಅವರಿಗೆ ಈ ಜವಾಬ್ದಾರಿಯನ್ನು ನಿಭಾಯಿಸುವ ಸಾಮರ್ಥ್ಯವಿರಲಿಲ್ಲ” ಎಂದು ಹೇಳುವ ಮೂಲಕ ಅವರಿಗೆ ವಿದಾಯ ಹೇಳಿದ್ದಾರೆ. ಸೆಕ್ಯೂರಿಟಿ ವಿಚಾರದಲ್ಲಿ ಕೆಂಟ್ ದುರ್ಬಲರಾಗಿದ್ದರು ಮತ್ತು ಅವರು ತಂಡದಿಂದ ಹೊರಹೋಗಿದ್ದೇ ಒಳ್ಳೆಯದಾಯಿತು ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಈ ರಾಜೀನಾಮೆಯು ಟ್ರಂಪ್ ಆಡಳಿತದ ಒಳಗಿರುವ ವಿದೇಶಾಂಗ ನೀತಿಯ ತೀವ್ರ ಭಿನ್ನಮತವನ್ನು ಈಗ ಬೀದಿಗೆ ತಂದಿದೆ.


