ಇರಾನ್ನ ಸುಪ್ರೀಂ ಲೀಡರ್ ಆಗಿದ್ದ ಅಲಿ ಖಮೇನಿ ಅವರ ಹತ್ಯೆಯ ನಂತರ, ಅವರ ಪುತ್ರ ಮುಜ್ತಬಾ ಖಮೇನಿ ಅಧಿಕಾರ ವಹಿಸಿಕೊಂಡು ತಮ್ಮ ಮೊದಲ ಹೇಳಿಕೆ ನೀಡಿದ್ದಾರೆ. ಅದರಲ್ಲಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತೀವ್ರ ವಾಗ್ದಾಳಿ ನೆಡೆಸಿದ್ದಾರೆ. ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟ ಇರಾನಿಯನ್ನರ ರಕ್ತಕ್ಕೆ ಸೇಡು ತೀರಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಶತ್ರುಗಳ ದೌರ್ಬಲ್ಯವನ್ನು ಬಳಸಿಕೊಳ್ಳಲು ‘ಹಾರ್ಮುಜ್ ಜಲಸಂಧಿ’ಯನ್ನು ತಡೆಯುವುದು ಸೂಕ್ತ ಅಸ್ತ್ರ. “ಈ ಪ್ರದೇಶದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಕೂಡಲೇ ಮುಚ್ಚಬೇಕು, ಇಲ್ಲದಿದ್ದರೆ ದಾಳಿಗಳು ಮುಂದುವರಿಯುತ್ತವೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ತಮ್ಮ ಸಂದೇಶದಲ್ಲಿ ನೆರೆಯ ದೇಶಗಳಿಗೂ ಎಚ್ಚರಿಕೆ ನೀಡಿರುವ ಖಮೇನಿ, ಅಮೆರಿಕದ ಸೇನಾ ನೆಲೆಗಳಿಗೆ ಅವಕಾಶ ನೀಡುವುದನ್ನು ನಿಲ್ಲಿಸಬೇಕು ಎಂದು ಸೂಚಿಸಿದ್ದಾರೆ. ಇರಾನ್ ನೆರೆ ರಾಷ್ಟ್ರಗಳೊಂದಿಗೆ ಸ್ನೇಹ ಬಯಸುತ್ತದೆ, ಆದರೆ ನಮ್ಮ ದೇಶದ ಮೇಲೆ ದಾಳಿ ಮಾಡುವವರಿಗೆ ಬೆಂಬಲ ನೀಡುವವರ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇತ್ತ ಖಮೇನಿ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರತಿಕ್ರಿಯಿಸಿ, ಮೊಜ್ತಾಬಾ ಖಮೇನಿ ಅವರು ಕೇವಲ ‘ಕೈಗೊಂಬೆ’ ಎಂದು ಟೀಕಿಸಿದ್ದಾರೆ. ಅವರು ಸಾರ್ವಜನಿಕವಾಗಿ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ ಎಂದು ಇರಾನ್ನ ನೂತನ ಸುಪ್ರೀಂ ಲೀಡರ್ ಅನ್ನು ಟೀಕಿಸಿದ್ದಾರೆ.

