ಇರಾನ್ : ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಅಮೆರಿಕದ ಎಚ್ಚರಿಕೆ ನಡುವೆ ಇರಾನ್ ಮತ್ತಷ್ಟು ರೊಚ್ಚಿಗೆದ್ದಿದೆ.
ಕೊಲ್ಲಿಯನ್ನು ಪ್ರವೇಶಿಸುವ ಅಮೆರಿಕದ ಹಡಗುಗಳು ಸಮುದ್ರದ ತಳಕ್ಕೆ ಸೇರಲಿವೆ ಎಂದು ಇರಾನ್ ಎಚ್ಚರಿಸಿದೆ.
ಶೀಘ್ರದಲ್ಲೇ ಯುಎಸ್ ನೌಕಾಪಡೆಯು ಹಾರ್ಮುಜ್ ಜಲಸಂಧಿಯ ಮೂಲಕ ಟ್ಯಾಂಕರ್ಗಳಿಗೆ ಬೆಂಗಾವಲು ನೀಡಲು ಆರಂಭಿಸಲಿದೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ, ಇರಾನ್ ಕಡೆಯಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ.
294 ಜನರು ಸಾವು: ಪ್ರತ್ಯೇಕ ದಾಳಿಗಳಲ್ಲಿ ಲೆಬನಾನ್ನಲ್ಲಿ 294 ಜನರು ಸಾವನ್ನಪ್ಪಿದ್ದು, 1,023 ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸಾರ್ವಜನಿಕ ಆರೋಗ್ಯ ಸಚಿವಾಲಯದ ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಇರಾನಿನ 16 ವಿಮಾನ ನಾಶ ಎಂದ ಇಸ್ರೇಲ್ : ಟೆಹ್ರಾನ್ ಮೇಲೆ ರಾತ್ರಿಯಿಡೀ ನಡೆದ ದಾಳಿಯ ವೇಳೆ ಇರಾನ್ನ ಗಡಿಯಾಚೆ ಐಆರ್ಜಿಸಿಯ ಕುದ್ಸ್ ಪಡೆಗೆ ಸೇರಿದ 16 ವಿಮಾನಗಳನ್ನು ನಾಶಪಡಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಇಸ್ರೇಲ್ ಸೇನೆಯ ಹೇಳಿಕೆಯೊಂದರಲ್ಲಿ, ತನ್ನ ವಾಯುಪಡೆಯು ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ದಾಳಿ ಸೇರಿದಂತೆ ಇರಾನ್ ರಾಜಧಾನಿಯಾದ್ಯಂತ ನಿರಂತರ ದಾಳಿ ನಡೆಸಿರುವುದಾಗಿ ತಿಳಿಸಲಾಗಿದೆ.
ಲೆಬನಾನ್ನ ಹೆಜ್ಬುಲ್ಲಾ ಸೇರಿದಂತೆ ಮಧ್ಯಪ್ರಾಚ್ಯದಾದ್ಯಂತ ಸಶಸ್ತ್ರ ಗುಂಪುಗಳಿಗೆ ಶಸ್ತ್ರಾಸ್ತ್ರಗಳು ಮತ್ತು ಹಣವನ್ನು ವರ್ಗಾಯಿಸಲು ಕುದ್ಸ್ ಪಡೆ ಈ ವಿಮಾನ ನಿಲ್ದಾಣವನ್ನು ಕೇಂದ್ರವಾಗಿ ಬಳಸಿಕೊಂಡಿದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ.
ಕುವೈತ್ನಲ್ಲಿ ತೈಲ ಉತ್ಪಾದನೆ ಕಡಿತ: ಎಎಫ್ಪಿ ವರದಿ ಪ್ರಕಾರ, ಗಲ್ಫ್ ಹೈಡ್ರೋಕಾರ್ಬನ್ಗಳ ಪ್ರಮುಖ ಸಾಗಣೆ ಕೇಂದ್ರವಾದ ಹಾರ್ಮುಜ್ ಜಲಸಂಧಿ ಮೇಲೆ ಇರಾನ್ ದಾಳಿ ಮತ್ತು ಬೆದರಿಕೆ ಹಿನ್ನೆಲೆಯಲ್ಲಿ, ಕುವೈತ್ನ ರಾಷ್ಟ್ರೀಯ ತೈಲ ಕಂಪನಿಯು ಶನಿವಾರ ತನ್ನ ಕಚ್ಚಾ ತೈಲ ಉತ್ಪಾದನೆಯನ್ನು ಕಡಿತ ಮಾಡಿರುವುದಾಗಿ ಘೋಷಿಸಿದೆ.
.

