ನಾವು ಯಾರ ಜೊತೆಗೂ ದ್ವೇಷ ಕಟ್ಟಿಕೊಳ್ಳುವುದಿಲ್ಲ ಎಂಬುದರ ಅರ್ಥ, ಸರದಿ ಸಾಲಿನಲ್ಲಿ ಎಲ್ಲರನ್ನೂ ತಬ್ಬಿಕೊಳ್ಳುತ್ತಾ ಸಾಗುವುದಲ್ಲ; ಎಲ್ಲರಿಂದಲೂ ಸಮಾನ ಅಂತರ ಕಾಯ್ದುಕೊಳ್ಳುವುದು! ಸರಿ, ತಪ್ಪುಗಳ ಕುರಿತು ನಮ್ಮ ನಿಲುವನ್ನು ಯಾರ ಮುಲಾಜಿಲ್ಲದೆ ಹೇಳುತ್ತಾ ಹೋಗುವುದು!! ಅದುವೇ ಅಲಿಪ್ತ ನೀತಿಯ ಜೀವಾಳ – ಮಾಚಯ್ಯ ಎಂ ಹಿಪ್ಪರಿಗಿ, ರಾಜಕೀಯ ವಿಶ್ಲೇಷಕರು.
ಇರಾನಿನ ಮೇಲೆ ಇಸ್ರೇಲ್ ತನ್ನ ಮೊದಲ ದಾಳಿ ನಡೆಸಿದ್ದು ಫೆಬ್ರವರಿ 28ನೇ ತಾರೀಖು. ಅದಕ್ಕೂ ಕೇವಲ ಎರಡು ದಿನ ಹಿಂದೆ, ಅಂದ್ರೆ ಫೆಬ್ರವರಿ 25 ಮತ್ತು 26ರಂದು ನಮ್ಮ ಮಾನ್ಯ ಪ್ರಧಾನಮಂತ್ರಿಗಳು ಉಭಯ ಭೇಟಿಯ ಭಾಗವಾಗಿ ಇಸ್ರೇಲಿನಲ್ಲಿದ್ದರು. ನಮ್ಮ ದೇಶದ ಇಂಟೆಲಿಜೆನ್ಸ್ ತಂಡ ಅದಿನ್ನೆಂಥಾ ನಾಲಾಯಕ್ ಇರಬೇಡ ನೀವೇ ಯೋಚಿಸಿ?
ಯುದ್ಧಕ್ಕೆ ಅಣಿಯಾಗಿ ಕೊತಕೊತ ಕುದಿಯುತ್ತಿರುವ ಇಸ್ರೇಲಿನ ಪ್ರಕ್ಷುಬ್ಧತೆಯ ವಾಸನೆ ಹಿಡಿಯುವುದು ಇವರಿಗೆ ಸಾಧ್ಯವಾಗಲಿಲ್ಲವೇ? ಹಾಗೊಮ್ಮೆ ಅಂತಹ ಅಂದಾಜು ನಮ್ಮ ಗುಪ್ತಚರ ಜೇಮ್ಸ್ ಬಾಂಡುಗಳಿಗೆ ಸಿಕ್ಕಿದ್ದಿದ್ದರೆ ‘ಅಲ್ಲಿ ಪರಿಸ್ಥಿತಿ ಸರಿಯಿಲ್ಲ, ಸದ್ಯಕ್ಕೆ ನೀವು ಇಸ್ರೇಲ್ ಭೇಟಿ ಮುಂದೂಡಿ’ ಎಂದು ಪ್ರಧಾನಿಯವರನ್ನು ತಡೆಯಬೇಕಿತ್ತಲ್ಲವೇ? ಅಕಸ್ಮಾತ್ ಇಸ್ರೇಲ್ನ ಸಮರ ತಯಾರಿಯ ಸುಳಿವು ಇರಾನ್ಗೆ ಸಿಕ್ಕಿ, ಅದು ಎರಡು ದಿನ ಮೊದಲೇ ಇಸ್ರೇಲ್ ಮೇಲೆ ದಾಳಿ ಮಾಡಿದ್ದಿದ್ದರೆ ನಮ್ಮ ಪ್ರಧಾನಿಗಳು ಎಂಥಾ ಅಪಾಯಕ್ಕೆ ಸಿಲುಕುತ್ತಿದ್ದರು! ಅದಕ್ಕೇ ಹೇಳಿದ್ದು, ನಮ್ಮ ಇಂಟೆಲಿಜೆನ್ಸ್ ತಂಡ ನಾಲಾಯಕ್ ಅಂತ!!
ಪ್ರಕ್ಷುಬ್ಧತೆ ಪರಿಸ್ಥಿತಿಯಿರುವ ದೇಶಕ್ಕೆ ಹೋಗಿ ಆಟವಾಡಲು ಕ್ರಿಕೆಟ್ ಪಟುಗಳೇ ಹಿಂದೇಟು ಹಾಕುತ್ತಾರೆ. ಎಷ್ಟೋ ಪಂದ್ಯಗಳು, ಸರಣಿಗಳು ಈ ಕಾರಣಕ್ಕೆ ರದ್ದಾದ ಉದಾಹರಣೆಗಳಿವೆ. ಅಂತಹ ದೇಶಗಳಿಗೆ ತೆರಳದಂತೆ ಆಯಾ ದೇಶಗಳು ತಮ್ಮ ನಾಗರಿಕರಿಗೆ ಎಚ್ಚರಿಕೆ ನೀಡಿದ್ದನ್ನೂ ಕಂಡಿದ್ದೇವೆ. ಅಂತದ್ದರಲ್ಲಿ ನಾಳೆ ಕಳೆದು, ನಾಡಿದ್ದಿಗೆ ಯುದ್ಧ ಮಾಡಲು ರೆಡಿಯಾಗಿರುವ ಇಸ್ರೇಲಿಗೆ ನಮ್ಮ ಪ್ರಧಾನಿಗಳು ಹೋಗಿ, ಅಲ್ಲಿನ ಸಂಸತ್ತಿನಲ್ಲಿ ಭಾಷಣ ಮಾಡಿ, ಆರಾಮಾಗಿ ಮೆಡಲ್ ಹಾಕಿಸಿಕೊಂಡು ಬರುತ್ತಾರೆಂದರೆ, ಇದು ನಮ್ಮ ಇಂಟೆಲಿಜೆನ್ಸಿಯ ವೈಫಲ್ಯವಲ್ಲವೇ?
ಈಗ ಅರ್ಥ ಆಯ್ತಾ, ನಮ್ಮಲ್ಲಿ ಪುಲ್ವಾಮಾ, ಪೆಹಲ್ಗಾಮ್, ದೆಹಲಿಯೊಳಕ್ಕೆ ಭಯೋತ್ಪಾದಕರು ನೂರಾರು ಕೆಜಿಗಟ್ಟಲೆ ಆರ್ಡಿಎಕ್ಸ್, ಮದ್ದುಗುಂಡುಗಳ ಸಮೇತ ನುಗ್ಗಿ, ದಾಳಿ ಮಾಡಿ ಅಷ್ಟು ಸಲೀಸಾಗಿ ಯಾಕೆ ಪರಾರಿಯಾಗುತ್ತಾರೆ ಅಂತ!

ನಾವೀಗ ಅಲ್ಪಸ್ವಲ್ಪ `ಸುಭದ್ರತೆ’ಯನ್ನು ಫೀಲ್ ಮಾಡುತ್ತಿದ್ದೇವೆ ಅಂದರೆ, ಅದಕ್ಕೆ ಕಾರಣ ದಶಕಗಳ ಕಾಲ ನಮ್ಮ ದೇಶ ಜಗತ್ತಿನ ಮುಂದೆ ಪಾಲಿಸಿಕೊಂಡು ಬಂದಿರುವ ಅಲಿಪ್ತ ನೀತಿ. ಒಂದೆರಡು ನೆರೆಹೊರೆಯ ದೇಶಗಳ ಜೊತೆಗಿನ ಗಡಿಸಮಸ್ಯೆಯ ಹಗೆತನವನ್ನು ಹೊರತುಪಡಿಸಿದರೆ, ಜಾಗತಿಕ ಮಟ್ಟದಲ್ಲಿ ನಮ್ಮ ದೇಶ ಯಾವತ್ತೂ ದುಷ್ಮನಿ ಕಟ್ಟಿಕೊಂಡಿಲ್ಲ. ಬಲಾಢ್ಯ ದೇಶಗಳೇ ಎರಡು ಧ್ರುವಗಳಾಗಿ ಹಂಚಿಹೋದಾಗಲೂ, ನಿಮ್ಮನಿಮ್ಮ ಲಾಭಕೋರ ಹಿಂಸೆಗೆ ನಾವು ಬಲುಪಶುವಾಗಲಾರೆವು, ನಮಗೆ ನಮ್ಮದೇ ಆದ್ಯತೆಗಳಿವೆ, ಅವುಗಳೇ ನಮಗೆ ಮುಖ್ಯ ಎಂದು ತೃತೀಯ ಧ್ವನಿಯನ್ನು ಮೊಳಗಿಸಿದ್ದು ನಮ್ಮ ದೇಶ. ಆ ನಮ್ಮ ಧ್ವನಿಯಲ್ಲಿ ಪ್ರಾಮಾಣಿಕತೆ ಮತ್ತು ಸತ್ಯ ಇತ್ತು. ಹಾಗಾಗಿ ಬೇರೆಲ್ಲ ದೇಶಗಳು ನಮ್ಮನ್ನು ಗೌರವಿಸಿದವು, ಎರಡೂ ಬಣಗಳಿಂದ ಸ್ನೇಹದ ಹಸ್ತ ಚಾಚಿ ಬಂದವು. ಆ ಮೈತ್ರಿಯ ವಾತಾವರಣದ ಫಲವಾಗಿಯೇ ಇವತ್ತಿನ ಜಾಗತಿಕ ಪ್ರಕ್ಷುಬ್ಧತೆಯಲ್ಲೂ ನಾವು ತಕ್ಕಮಟ್ಟಿಗೆ ಸುಭದ್ರತೆಯನ್ನು ಫೀಲ್ ಮಾಡುತ್ತಿದ್ದೇವೆ.
ಆದರೆ ಈಚೀಚೆಗೆ ನಮ್ಮ ದೇಶದ ಆ ವಿದೇಶಾಂಗ ನೀತಿ ಹಳಿತಪ್ಪುತ್ತಿದೆ. ಅಲಿಪ್ತ ಅಸ್ಮಿತೆಯನ್ನು ಕಳೆದುಕೊಂಡು ನಮ್ಮ ಮಿತ್ರರ್ಯಾರು? ಶತ್ರುಗಳ್ಯಾರು? ಎಂಬ ಗೊಂದಲಕ್ಕೆ ಈಡಾಗುತ್ತಿದ್ದೇವೆ. ಇವತ್ತು ಟ್ರಂಪ್ ಜೊತೆ ಕೈಕುಲುಕುತ್ತಿದ್ದವರು, ನಾಳೆ ಚೀನಾದ ಕ್ಸಿ ಜಿನ್ಪಿಂಗ್ ಜೊತೆ ನಗುತ್ತಿರುತ್ತೇವೆ; ಪುತಿನ್ ಜೊತೆ ಒಂದೇ ಕಾರಿನಲ್ಲಿ ಪ್ರಯಾಣಿಸಿ ಗಳಸ್ಯ-ಕಂಠಸ್ಯ ಎನ್ನುತ್ತಲೇ ಅಮೆರಿಕಾಗೆ ಹೆದರಿ ರಷ್ಯಾ ತೈಲ ಖರೀದಿಯನ್ನೇ ನಿಲ್ಲಿಸಿಬಿಡುತ್ತೇವೆ; ನಮ್ಮದೇ ರೂಪಾಯಿ ವಹಿವಾಟಿನಲ್ಲಿ ತೈಲ ಕೊಟ್ಟು, ಛಬಹಾರ್ ಬಂದರು ನಿರ್ಮಿಸಿಕೊಳ್ಳಲು ಜಾಗವನ್ನೂ ಕೊಟ್ಟ ಇರಾನನ್ನು ಐತಿಹಾಸಿಕ ಮಿತ್ರ ಎನ್ನುತ್ತಲೇ, ಇಸ್ರೇಲನ್ನು ಫಾದರ್ಲ್ಯಾಂಡ್ ಎಂದು ಕರೆಯುತ್ತಿದ್ದೇವೆ. ಹಾಗಾದರೆ ಜಗತ್ತಿನ ರಾಜಕಾರಣದಲ್ಲಿ ನಮ್ಮ ಅಸ್ತಿತ್ವವೇನು? ನಿಲುವೇನು?
ನಾವು ಯಾರ ಜೊತೆಗೂ ದ್ವೇಷ ಕಟ್ಟಿಕೊಳ್ಳುವುದಿಲ್ಲ ಎಂಬುದರ ಅರ್ಥ, ಸರದಿ ಸಾಲಿನಲ್ಲಿ ಎಲ್ಲರನ್ನೂ ತಬ್ಬಿಕೊಳ್ಳುತ್ತಾ ಸಾಗುವುದಲ್ಲ; ಎಲ್ಲರಿಂದಲೂ ಸಮಾನ ಅಂತರ ಕಾಯ್ದುಕೊಳ್ಳುವುದು! ಸರಿ, ತಪ್ಪುಗಳ ಕುರಿತು ನಮ್ಮ ನಿಲುವನ್ನು ಯಾರ ಮುಲಾಜಿಲ್ಲದೆ ಹೇಳುತ್ತಾ ಹೋಗುವುದು!! ಅದುವೇ ಅಲಿಪ್ತ ನೀತಿಯ ಜೀವಾಳ. ಅಂತಹ ಅಲಿಪ್ತನೀತಿಯ ಕಾರಣಕ್ಕೆ ನಮಗೆ ಇದುವರೆಗೆ ಲಭಿಸಿದ್ದ ಗೌರವಯುತ ಅಸ್ಮಿತೆ ಶಿಥಿಲಗೊಳ್ಳುತ್ತಿದೆ. ಕಿಡಿಗೇಡಿ ಪಾಕಿಸ್ತಾನವನ್ನು ಸೆದೆಬಡಿಯುವ ಎಲ್ಲಾ ಅವಕಾಶವಿದ್ದಾಗ್ಯೂ, ದಿಢೀರ್ ‘ಸೀಝ್ಫೈರ್’ ಮಾಡಿಕೊಳ್ಳುವ ನಮ್ಮ ಆಡಳಿತನೀತಿಯ ವೈಖರಿಯೇ ಅರ್ಥವಾಗುತ್ತಿಲ್ಲ. ಅಮೆರಿಕೆಯ ಲಾಭಕ್ಕಾಗಿ ನಮ್ಮ ರೈತರು ಮತ್ತು ಉತ್ಪಾದನಾ ವಲಯವನ್ನು ಸಂಕಷ್ಟಕ್ಕೆ ತಳ್ಳುವ ತರಾತುರಿಯ ಟ್ರೇಡ್ ಡೀಲ್ಗೆ ಸಹಿ ಹಾಕುವ ಒತ್ತಡದ ಅಂದಾಜು ನಮಗೆ ದಕ್ಕುತ್ತಿಲ್ಲ. ಕಣ್ಣಮುಂದಿನ ಇಂತಹ ಸುಡುಸತ್ಯಗಳನ್ನು ನಿರ್ಲಕ್ಷಿಸಿ ಇನ್ನೆಷ್ಟು ದಿನ ಹುಸಿ ಉನ್ಮಾದದಲ್ಲೇ ಮೈಮರೆಯುವುದು?
ಪಕ್ಕದ ಮನೆಗೆ ಸಿಡಿಲು ಬಡಿದಾಗ, ಅದು ಸಿಡಿಲಿನಿಂದ ಬಚಾವಾದ ನಮ್ಮ ಅದೃಷ್ಟವಾಗಿರುತ್ತದೆಯೇ ಹೊರತು, ಸಿಡಿಲಿನಿಂದ ಬಚಾವಾದ ನಮ್ಮ ಸಾಮರ್ಥ್ಯವಾಗಿರುವುದಿಲ್ಲ. ನಾಳೆಯೋ, ನಾಡಿದ್ದೋ ಆ ಸಿಡಿಲು ನಮ್ಮ ಮನೆಯತ್ತ ಹರಿದುಬರದಂತೆ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು, ಅಕಸ್ಮಾತ್ ಬಡಿದರೂ ರಕ್ಷಣೆಗೆ ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂದು ಯೋಚಿಸುತ್ತಲೇ ಪಕ್ಕದ ಮನೆಯ ಸಂತ್ರಸ್ತರ ತಾಪ ತಗ್ಗಿಸಲು ನಮ್ಮ ಕೈಯಿಂದಾದ ಮಾನವೀಯ ನೆರವಿನ ಹಸ್ತ ಚಾಚುವುದೇ ಅಲಿಪ್ತ ನೀತಿ. ಅಂತಹ ಅಲಿಪ್ತತೆ ಕಳೆದುಕೊಂಡು ಪಕ್ಕದ ಮನೆಯ ಸಿಡಿಲನ್ನು ಎಂಜಾಯ್ ಮಾಡುವುದಾಗಲಿ; ನಮ್ಮ ಮನೆಗೆ ಇನ್ನು ಸಿಡಿಲು ಬಡಿದಿಲ್ಲದಿರುವುದರಿಂದ, ಬಡಿಯುವುದೇ ಇಲ್ಲವೆಂದು ಮೈಮರೆಯುವುದಾಗಲಿ ವಿದೇಶಾಂಗ ನೀತಿ ಎನಿಸಿಕೊಳ್ಳದು. ಸುಸ್ಥಿರ ಭದ್ರತೆಯ ಭಾವವನ್ನೂ ಅದು ಹುಟ್ಟಿಸದು!
ಇಂಥಾ ಗಂಭೀರ ಪ್ರಶ್ನೆಗಳೆ ನಮ್ಮನ್ನು ಕಾಡುತ್ತಿರುವ ಸಮಯದಲ್ಲಿ ಈ ಗುಪ್ತಚರ ಜೇಮ್ಸ್ ಬಾಂಡ್ಗಳು ಹೀಗೆ ಮೈಮರೆತು ಪ್ರಧಾನಿಯವರನ್ನೇ ಅಪಾಯಕ್ಕೆ ತಳ್ಳಿದರೆ, ಜನಸಾಮಾನ್ಯರ ಕತೆ ಏನು?
ಮಾಚಯ್ಯ ಎಂ ಹಿಪ್ಪರಿಗಿ
ರಾಜಕೀಯ ವಿಶ್ಲೇಷಕರು
ಇದನ್ನೂಓದಿ- ‘ಆಧೇ ಅಧೂರೇ’- ಅನುವಾದಿತ ನಾಟಕದ ಆಪ್ತ ಓದು


