“ಹಾಸನ ಮಣ್ಣಿನ ಹೆಣ್ಣು ಬೇರುಗಳು”
ಹಾಸನ ಜಿಲ್ಲೆಯ ರಾಜಕೀಯವು ಬಹುತೇಕ ಮೊದಲಿಂದಲೂ ಪುರುಷ ಪ್ರಧಾನವಾಗಿಯೇ ಇತ್ತು. ಈಗಲೂ ಹಾಗೇ ಇದೆ ಮತ್ತು ಈಗಲೂ ಮುಂದುವರಿದಿದೆ. 1957-62ರಲ್ಲಿ ಗಂಡಸಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ದುದ್ದ ಹೋಬಳಿಯ ದ್ಯಾವಮ್ಮ ಮಂಜಪ್ಪಗೌಡರು ಸ್ಪರ್ಧಿಸಿ, ಮೊದಲ ಮಹಿಳಾ ಶಾಸಕಿಯಾಗಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದರು. ಅವರೇ ಹಾಸನ ಜಿಲ್ಲೆಯ ಮೊದಲ ಮಹಿಳಾ ಶಾಸಕಿ ಮತ್ತು ಆರಂಭಿಕ ಮಹಿಳಾ ರಾಜಕೀಯ ನಾಯಕಿಯೆಂದು ಇತಿಹಾಸದಲ್ಲಿ ದಾಖಲಾಗಿದ್ದಾರೆ – ಗಿರಿಜಾ ಎಸ್.ಜಿ.
ಭಾರತೀಯ ರಾಜಕೀಯ ಕ್ಷೇತ್ರವು ಅಂದಿನಿಂದ ಇಂದಿನವರೆಗೆ ಬಹುತೇಕ ಪುರುಷ ಪ್ರಧಾನವಾಗಿಯೇ ಇತ್ತು. ಇದೀಗ ಒಂದಿಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. 1992ರಲ್ಲಿ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ನಿಗದಿಯಾದ ನಂತರ, ಮಹಿಳೆಯರು ಸಕ್ರಿಯವಾಗಿ ತಳಹಂತದ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಮುಂದಾದರು. ಹಾಗೆಯೇ ಶಾಸನ ಸಭೆಗಳು ಹಾಗೂ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ನೀಡಬೇಕೆಂದು ದಶಕಗಳಿಂದ ಹೋರಾಟ ನಡೆಯುತ್ತಿದ್ದರೂ ಅದಿನ್ನೂ ಕಾರ್ಯರೂಪಕ್ಕೆ ಬರಲಿಲ್ಲ. ಯಾವುದೇ ಸರ್ಕಾರವಿರಲಿ ಒಟ್ಟು ಸಚಿವರ ಪೈಕಿ ಹೆಚ್ಚಾಗಿ ಒಬ್ಬ ಮಹಿಳೆಗೆ ಅವಕಾಶ ನೀಡುತ್ತಾ ಬರಲಾಗಿದೆ. 2-3 ಮಹಿಳೆಯರಿಗೂ ಸಚಿವ ಸ್ಥಾನ ದೊರಕುವುದು ಈ ಆಧುನಿಕ ಕಾಲಘಟ್ಟದಲ್ಲಿಯೂ ಅಪರೂಪದಲ್ಲಿ ಅಪರೂಪ. ಅದರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಥಾನ ಮಾತ್ರ ಖಾಯಂ ಎಂಬಂತಾಗಿದೆ.
ಈ ಹಿನ್ನೆಲೆಯಲ್ಲಿ ನೋಡುವುದಾದರೆ ಹಾಸನ ಜಿಲ್ಲೆಯ ರಾಜಕೀಯವು ಬಹುತೇಕ ಮೊದಲಿಂದಲೂ ಪುರುಷ ಪ್ರಧಾನವಾಗಿಯೇ ಇತ್ತು. ಈಗಲೂ ಹಾಗೇ ಇದೆ ಮತ್ತು ಈಗಲೂ ಮುಂದುವರಿದಿದೆ. 1957-62ರಲ್ಲಿ ಗಂಡಸಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ದುದ್ದ ಹೋಬಳಿಯ ದ್ಯಾವಮ್ಮ ಮಂಜಪ್ಪಗೌಡರು ಸ್ಪರ್ಧಿಸಿ, ಮೊದಲ ಮಹಿಳಾ ಶಾಸಕಿಯಾಗಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದರು. ಅವರೇ ಹಾಸನ ಜಿಲ್ಲೆಯ ಮೊದಲ ಮಹಿಳಾ ಶಾಸಕಿ ಮತ್ತು ಆರಂಭಿಕ ಮಹಿಳಾ ರಾಜಕೀಯ ನಾಯಕಿಯೆಂದು ಇತಿಹಾಸದಲ್ಲಿ ದಾಖಲಾಗಿದ್ದಾರೆ. ಸಾಮಾನ್ಯ ಚುನಾವಣೆಯಲ್ಲಿ ಶಾಸನ ಸಭೆಗೆ ಜಿಲ್ಲೆಯಿಂದ ಮಾತ್ರವಲ್ಲದೆ ಮೈಸೂರು ಭಾಗದಲ್ಲಿಯೇ ಮಹಿಳಾ ರಾಜಕೀಯಕ್ಕೆ ದೊಡ್ಡ ಧೈರ್ಯ ನೀಡಿದಂತಹ ದಿಟ್ಟ ಮಹಿಳಾ ಶಾಸಕಿ ದ್ಯಾವಮ್ಮನವರು. ಇವರು ಗ್ರಾಮೀಣ ಸಮಸ್ಯೆಗಳನ್ನು ನೇರವಾಗಿ ಸರ್ಕಾರಕ್ಕೆ ಮುಟ್ಟುವ ಹಾಗೆ ಶಾಸನ ಸಭೆಗಳಲ್ಲಿ ಮಾತನಾಡುತ್ತಿದ್ದರು. ಮಹಿಳೆಯರು ಹೆಚ್ಚಿನದಾಗಿ ಪಂಚಾಯಿತಿ ಸಭೆಗಳಲ್ಲಿ ಭಾಗವಹಿಸುವಂತೆ ಪ್ರೇರಣೆಯಾಗಿದ್ದರು. ಶಾಸಕಿಯಾಗುವ ಮೊದಲು ಅದೇ ರೀತಿಯಲ್ಲಿ ಗ್ರಾಮ ಸಭೆ, ಸಾಮಾಜಿಕ ಚಳವಳಿ, ರೈತ ಸಭೆ, ಜನಪರ ಸಮಸ್ಯೆಗಳ ಬಗ್ಗೆ ಗಮಹರಿಸುತ್ತಿದ್ದರು. ಜನರ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ನೇರವಾಗಿ ಹೇಳುವಂತಹ ಚತುರತೆ ಇದ್ದು, ಜನಪರರಾಗಿದ್ದರು.

ನಂತರ ಹಾಸನ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದವರು ಯಶೋಧರಾ ದಾಸಪ್ಪನವರು. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ, ಸತ್ಯಾಗ್ರಹಗಳಲ್ಲಿ ಪಾಲ್ಗೊಂಡಿದ್ದ ಅಸಾಮಾನ್ಯ ಮಹಿಳೆ. ರಾಜಕೀಯ ಧುರೀಣ ತಂದೆ ಕೆ.ಎಚ್.ರಾಮಯ್ಯ ಅವರ ಬೆಂಬಲ ಸದಾ ಜೊತೆಗಿತ್ತು. ಇಂಗ್ಲಿಷ್ ಶಿಕ್ಷಣ ದೊರೆತದ್ದರಿಂದ ವಿಸ್ತಾರವಾದ ಓದಿನ ಹರವಿತ್ತು. ಮುಂದೆ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಹೆಚ್.ಸಿ.ದಾಸಪ್ಪನವರನ್ನು ವಿವಾಹವಾಗಿದ್ದರಿಂದ ರಾಜಕೀಯವಾಗಿ ಇನ್ನಷ್ಟು ಪಳಗಲು ಸಾಧ್ಯವಾಯ್ತು. ಸಾಮಾಜಿಕವಾಗಿ, ಸಂಘಟನಾತ್ಮಕವಾಗಿ ಕೆಲಸ ಮಾಡುತ್ತಾ ನೊಂದ ಮಹಿಳೆಯರ ಬಾಳಿಗೆ ಯಶೋಧರಾ ಧ್ವನಿಯಾಗಿದ್ದರು. ಗಾಂಧೀಜಿಯವರ ಸಲಹೆಯಂತೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಸ್ತೂರಬಾ ಗ್ರಾಮದಲ್ಲಿ ನೆಲೆ ನಿಂತು, ಕಸ್ತೂರಬಾ ಆಶ್ರಮವನ್ನು ಕಟ್ಟಿ ಬೆಳೆಸಿದರು. ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆದ್ದರು. 1962ರಲ್ಲಿ ಎಸ್.ಆರ್.ಕಂಠಿಯವರ ಸರ್ಕಾರದಲ್ಲಿ ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಮೊದಲ ಮಹಿಳಾ ಸಚಿವೆಯಾಗಿದ್ದ ಹೆಮ್ಮೆ ಯಶೋಧರಾ ದಾಸಪ್ಪನವರದ್ದು. ಮಹಿಳೆಯರ, ದೀನ ದಲಿತರ ಜೀವನದಲ್ಲಿ ಸುಧಾರಣೆ ಅವರ ಪ್ರಮುಖ ಆದ್ಯತೆಯಾಗಿತ್ತು. ಅದಕ್ಕೆಂದೇ ಅವಿರತ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡೇ ರಾಜಕಾರಣವನ್ನೂ ಮಾಡಿದ ಧೀಮಂತ ಮಹಿಳೆ ಇವರು.
ಮೂಲತಃ ಹಾಸನ ಜಿಲ್ಲೆ, ಆಲೂರು ತಾಲೂಕಿನವರಾದ ಕೆ.ಎಸ್.ನಾಗರತ್ನಮ್ಮನವರು ಚಿಕ್ಕವಯಸ್ಸಿನಲ್ಲಿ ವಿವಾಹವಾಗಿ ಕೌಟುಂಬಿಕ ಜವಾಬ್ದಾರಿಗಳ ಜೊತೆಗೇ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷರಾಗಿ, ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದರು. ನಂತರ ರಾಜಕೀಯ ಅಖಾಡಕ್ಕೆ ಇಳಿದು, 1957ರಲ್ಲಿ ಸ್ವತಂತ್ರ ರಾಜಕಾರಣಿಯಾಗಿ ರಾಜ್ಯದ ಮೈಸೂರು ಭಾಗದ ಗುಂಡ್ಲುಪೇಟೆ ಕ್ಷೇತ್ರದಿಂದ ಸತತವಾಗಿ ಏಳು ಬಾರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ, ಮೊದಲ ಚುನಾವಣೆಯಲ್ಲಿಯೇ 24,955 ಮತಗಳಿಸುವ ಮೂಲಕ ಯಶಸ್ಸಿನ ಹೆಜ್ಜೆಯಿಟ್ಟು ಮೊದಲ ಮಹಿಳಾ ವಿರೋಧ ಪಕ್ಷದ ನಾಯಕಿ ಮಾತ್ರವಲ್ಲದೆ, ಕರ್ನಾಟಕದ ವಿಧಾನಸಭೆಯ ಮೊದಲ ಮಹಿಳಾ ಸಭಾಪತಿ(ಸ್ಪೀಕರ್)ಯಾಗಿದ್ದರೆಂಬುದು ಹೆಮ್ಮೆ. ಚಿತ್ರನಟಿ ಶೃತಿಯವರು ಹಾಸನ ಜಿಲ್ಲೆಯ ಹೊಳೆನರಸೀಪುರದ ರಂಗಭೂಮಿ ಕಲಾವಿದರ ಮನೆತನದಿಂದ ಬಂದವರು. ತಮ್ಮ ತಾರಾ ವರ್ಚಸ್ಸನ್ನು ಬಳಸಿಕೊಂಡು 2008ರಲ್ಲಿ ಬಿಜೆಪಿಗೆ ಸೇರುವ ಮೂಲಕ ರಾಜಕೀಯಕ್ಕೆ ಸೇರ್ಪಡೆಗೊಂಡು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಮಹಿಳೆಯರು ಅಲ್ಲಿಲ್ಲಿ ಅಷ್ಟಿಷ್ಟು ರಾಜಕಾರಣದಲ್ಲಿ ತೊಡಗಿಕೊಂಡಿದ್ದರೂ ಶಾಸಕ, ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಮುಂದೆ ಬಂದವರ ಸಂಖ್ಯೆ ಕಡಿಮೆಯೇ. ಹಾಗೆಯೇ ಹಾಸನ ಜಿಲ್ಲೆಯಲ್ಲಿ ಹಿರಿಯ ರಾಜಕಾರಣಿ ಬಿ.ಬಿ.ಶಿವಪ್ಪನವರ ಪತ್ನಿ ಸುಶೀಲಮ್ಮ ಬಿಜೆಪಿ ಪಕ್ಷದಿಂದ ಒಂದು ಬಾರಿ ಲೋಕಸಭಾ ಅಭ್ಯರ್ಥಿಯಾಗಿದ್ದರು. ಜಯಲಕ್ಷ್ಮಿ ರಾಜಣ್ಣಗೌಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದು ಗಂಡಸಿ ಕ್ಷೇತ್ರದಿಂದ ಸ್ಪರ್ಧಿಸಿದರು. ಅನುಪಮಾ ಮಹೇಶ್ ಹೊಳೆನರಸೀಪುರ ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ, ಕೀರ್ತನ ರುದ್ರೇಶಗೌಡ ಬೇಲೂರು ಕ್ಷೇತ್ರಕ್ಕೆ, ಬಿಕ್ಕೋಡಿನ ಚಂದ್ರಕಲಾ ಕಾಂಗ್ರೆಸ್ ಪಕ್ಷದ ಬೇಲೂರು ಕ್ಷೇತ್ರಕ್ಕೆ- ಸ್ಪರ್ಧಿಸಲು ಎರಡು ಬಾರಿ ಪ್ರಯತ್ನಿಸಿದರಾದರೂ ಟಿಕೆಟ್ ಸಿಗದೆ ವಂಚಿತರಾದರು. ಆದರೆ ಚಂದ್ರಕಲಾ ಅವರು ಮೊದಲ ಸಲ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಬೋರ್ಡ್ ನಿರ್ದೇಶಕಿಯಾಗಿದ್ದರು. 1967ರ ಚುನಾವಣೆಯಲ್ಲಿ ಶಕುಂತಲಾ ಶ್ರವಣಬೆಳಗೊಳ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದಿದ್ದರು.
“ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ”ವು ಜನಪರ, ಮಹಿಳಾಪರ ಸಂಘಟನೆಗಳ ಜಾಲವಾಗಿದ್ದು ಕಳೆದ ಹದಿಮೂರು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಾಥಾ, ಸಮಾವೇಶ, ಜಾಗೃತಿ ಕಾರ್ಯಕ್ರಮ ನಡೆಸುವುದರೊಂದಿಗೆ ಜನಪರ ಹೋರಾಟಗಳಲ್ಲಿ ಸಹಭಾಗಿತ್ವ ನೀಡುತ್ತಾ ಬಂದಿದೆ. ತನ್ನ 14 ನೆಯ ಸಮಾವೇಶವನ್ನು ಹಾಸನದಲ್ಲಿ ನಡೆಸಲಿದ್ದು ಈ ಹಿನ್ನೆಲೆಯಲ್ಲಿ “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಎಂಬ ಪುಸ್ತಕವನ್ನು ಹೊರತರುತ್ತಿದೆ. ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೇ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಅವರ ಕುರಿತು ಒಂದು ಪುಟ್ಟ ದಾಖಲೀಕರಣ ಮಾಡುವ ಪ್ರಯತ್ನ ಇದಾಗಿದೆ.
ಹಾಗೆಯೇ, ಎಚ್.ಡಿ.ದೇವೇಗೌಡರ ಸೊಸೆ ಹಾಗೂ ಎಚ್.ಡಿ.ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಜಾತ್ಯಾತೀತ ಜನತಾದಳ ಪಕ್ಷದಿಂದ ಬೇಲೂರು ಮತ್ತು ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಯತ್ನಿಸಿದರೂ ಅವರದೇ ಪಕ್ಷದಿಂದ ಟಿಕೆಟ್ ನೀಡಲಿಲ್ಲ. ಇವರ ಪಕ್ಷದ ಚಿನ್ಹೆ ತೆನೆ ಹೊತ್ತ ಮಹಿಳೆ! ಆದರೆ ಜನತಾದಳ ಪಕ್ಷದಲ್ಲಿ ಮಹಿಳೆಯರ ಪ್ರಾಮುಖ್ಯತೆಗೆ, ಸಾಧನೆಗಳಿಗೆ, ಮಹಿಳೆಯ ಸಬಲೀಕರಣಕ್ಕೆ ಯಾವುದೇ ಹೆಚ್ಚಿನ ಅವಕಾಶಗಳನ್ನು ಪಕ್ಷದಲ್ಲಿ ಕಲ್ಪಿಸಿ ಕೊಡಲಿಲ್ಲ. ಕನಿಷ್ಠ ಅರ್ಹ ಮಹಿಳೆಯರನ್ನು ಪಕ್ಷದೊಳಗೆ ಒಳಗೊಳ್ಳಲೂ ಪ್ರಯತ್ನಿಸಲಿಲ್ಲ. ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಭವಾನಿ ರೇವಣ್ಣ ರಾಜಕೀಯದಲ್ಲಿ ಬಹಳಷ್ಟು ಸಾಧನೆ ಮಾಡಬೇಕೆಂಬ ಹಂಬಲವಿಟ್ಟುಕೊಂಡಿದ್ದರು. ಅದಕ್ಕೆ ತಕ್ಕಂತೆ ದಿಟ್ಟತನವೂ ಅವರಿಗಿತ್ತು. ಆದರೆ ಅವರದೇ ಪಕ್ಷದ ಗಂಡಾಳ್ವಿಕೆಯ ಲೆಕ್ಕಾಚಾರಗಳು ಭವಾನಿಯವರಿಗೆ ಮುಳುವಾಯಿತು.
ನಮ್ಮ ಪಕ್ಷದಲ್ಲಿ ಮಹಿಳೆಯರಿಗೆ ಮೊದಲ ಸ್ಥಾನ. ಅವರ ಗೌರವ ಹಾಗೂ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಹೇಳಿಕೊಳ್ಳುವ ಜನತಾದಳ ಪಕ್ಷದ ನಾಯಕರು, ತಮ್ಮದೇ ಪಕ್ಷದ ನಾಯಕ ಪ್ರಜ್ವಲ್ ರೇವಣ್ಣ, ಬೇರೆ ಹೆಣ್ಣುಮಕ್ಕಳಿರಲಿ- ತಮ್ಮದೇ ಪಕ್ಷದ ಕಾರ್ಯಕರ್ತೆಯರು ಹಾಗೂ ಕೆಲವು ಉನ್ನತ ಅಧಿಕಾರ ಸ್ಥಾನದಲ್ಲಿದ್ದ ಮಹಿಳೆಯರ ಜೊತೆಗೆ ಕಾಮುಕವಾಗಿ ನಡೆದುಕೊಂಡಿರುವುದು ತಿಳಿದಾಗಲೂ ಆ ಸಂತ್ರಸ್ತ ಮಹಿಳೆಯರ ಪರವಾಗಿ ಪಕ್ಷ ನಿಲ್ಲಲಿಲ್ಲ. ಯಾವುದೇ ಸಮಾಧಾನದ ನುಡಿಗಳನ್ನೂ ಆಡಲಿಲ್ಲ. ಮಹಿಳೆಯರನ್ನು ಗುಲಾಮರಂತೆ, ಬಳಸಿ ಬಿಸಾಡುವಂತೆ ಕಾಣುತ್ತಿದ್ದವರಿಗೆ ಹಾಗೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುತ್ತೇವೆಂದು ಸುಳ್ಳು ಭರವಸೆ ನೀಡುತ್ತಿದ್ದ ಪಕ್ಷಕ್ಕೆ ಪ್ರತಿ ಪಾಠವನ್ನು ಕಲಿಸಿದ್ದೆ ಹಾಸನದ ದಿಟ್ಟ ಹೆಣ್ಣು ಬೇರುಗಳು!
ಜಯಲಕ್ಷ್ಮಿ ರಾಜಣ್ಣಗೌಡ ತಮ್ಮ ಪಿಯುಸಿ ಶಿಕ್ಷಣ ಮುಗಿಸಿದ ನಂತರ ರಾಜಕಾರಣಿಯಾಗಿದ್ದ ತನ್ನ ತಂದೆಯ ಆಸೆಯಂತೆ 22ರ ಕಿರಿಯ ವಯಸ್ಸಿನಲ್ಲಿಯೇ ರಾಜಕೀಯಕ್ಕೆ ಪ್ರವೇಶಿಸಿದರು. ಅರಸೀಕೆರೆ ತಾಲ್ಲೂಕಿನ ಬಾಗೀವಾಳು ಗ್ರಾಮಕ್ಕೆ ಸೊಸೆಯಾಗಿ ಹೋದರು. 1985ರಲ್ಲಿ ಗಂಡಸಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿದ್ದರು. 1989ರಲ್ಲಿ ಬಿ.ಎಂ.ಶ್ರೀಕಂಠಯ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾಗ ಜಯಲಕ್ಷ್ಮಿಯವರಿಗೆ ಪ್ರತಿ ಅಭ್ಯರ್ಥಿಯಾಗಿದ್ದ ಶಿವರಾಂ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಟ್ಟು ಇವರಿಗೆ ವಂಚಿಸಲಾಯ್ತು. 1992ರಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಸ್ಪರ್ಧಿಸಿ ಗೆದ್ದರು. ಇವರು ಬಡಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟು ಸಾಕಷ್ಟು ಕೆಲಸ ಮಾಡಿದರು. ಹಲವು ಮಹಿಳಾ ಘಟಕದ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರಾಗಿ ಕಾರ್ಯನಿರ್ವಹಿಸಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು.
ಇದನ್ನೂ ಓದಿ- ಸ್ತ್ರೀ ಆರೋಗ್ಯ ಸೇವೆಯ ಅನನ್ಯ ಮಾದರಿ- ಡಾ.ಪುಟ್ಟಮ್ಮ
ಪಾರ್ವತಮ್ಮ ನಂಜುಂಡಾಚಾರ್ ಹಾಸನದವರು. ಜಿಲ್ಲಾ ಪಂಚಾಯಿತಿಗೆ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಶಿಕ್ಷಣದಿಂದ ವಂಚಿತರಾಗಿದ್ದ ಪಾರ್ವತಮ್ಮ ಹೆಬ್ಬೆಟ್ಟಿನಲ್ಲಿ ಸಹಿ ಮಾಡುತ್ತಿದ್ದರಂತೆ. ಉಡುಪು, ಶಿಸ್ತು, ಬರವಣಿಗೆಯಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಾ, ರಾಜಕಾರಣವನ್ನು ಕಲಿಯುತ್ತಾ ಇತರ ಮಹಿಳೆಯರನ್ನು ಬೆಳೆಸುತ್ತಾ ಬಂದವರು ಇವರು. ಮಹಿಳೆ ಮನಸ್ಸು ಮಾಡಿದರೆ ಯಾವ ಕೆಲಸವೂ ಕಷ್ಟವಿಲ್ಲ ಎಂಬುದಕ್ಕೆ ಇವರು ಪ್ರೇರಣೆಯಾಗಿದ್ದಾರೆ.
ಪಂಚಾಯತ್ ರಾಜ್ ಕಾಯ್ದೆ 1992ರಲ್ಲಿ ತಿದ್ದುಪಡಿಯಾಗಿ ಮಹಿಳಾ ಮೀಸಲಾತಿಯು ಘೋಷಣೆಯಾದ ನಂತರ 1995ರಲ್ಲಿ ಮೊದಲ ಬಾರಿಗೆ, ಕಮಲಮ್ಮ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಮತ್ತು ಪ್ರೇಮ ನಿಂಗಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಮುಂದೆ 2000ನೇ ಇಸವಿಯಲ್ಲಿ ಜಿ.ಟಿ.ಇಂದಿರಾ ಧರ್ಮಪ್ಪ- ಅಧ್ಯಕ್ಷರಾಗಿ, ಚಂದ್ರಕಲಾ ನಾಗೇಶ್, ಪಾರ್ವತಮ್ಮ ನಂಜುಂಡಚಾರ್ ಮತ್ತು ಸುಂದ್ರಮ್ಮ ಚಂದ್ರೆಗೌಡ ಉಪಾಧ್ಯಕ್ಷರಾಗಿ ಆಯ್ಕೆಯಾದರು. ನಂತರ 2006ರಲ್ಲಿ ಕಾಮಾಕ್ಷಿರಾಜ್- ಅಧ್ಯಕ್ಷರಾಗಿ, ಮಹಾದೇವಮ್ಮ- ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 2011ರ ಅವಧಿಯಲ್ಲಿ ವಿ.ಪಿ.ಜ್ಯೋತಿ, ಹೇಮಾವತಿ, ಡಿ.ಜಿ.ಅಂಬಿಕಾ ರಾಮಣ್ಣ ಅಧ್ಯಕ್ಷರಾಗಿ ಆಡಳಿತ ನಡೆಸಿದರು. ಮುಂದೆ 2016ರ ಅವಧಿಗೆ ಬಿ.ಎಸ್.ಶ್ವೇತಾ ದೇವರಾಜ್, ಎಸ್.ವತ್ಸಲಾ ಶೇಖರಪ್ಪ ಮುಂತಾದ ಎಂಟು ಮಂದಿ ಅಧ್ಯಕ್ಷರು ಹಾಗೂ ಐದು ಮಂದಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಇವರಲ್ಲಿ ಅನೇಕರು ರಾಜಕೀಯ ಅಧಿಕಾರಕ್ಕೆ ಹೊಸಬರಾದರೂ ಉತ್ಸಾಹ, ಕಾರ್ಯಕ್ಷಮತೆ ಮತ್ತು ದಿಟ್ಟತನದಿಂದ ಅಧಿಕಾರವನ್ನು ನಿಭಾಯಿಸಿದ್ದೀಗ ಇತಿಹಾಸ.
1987ರಿಂದ 2006ರವರೆಗೆ ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ರೀತಿಯ ಅಧಿಕಾರವಹಿಸಿದ್ದ ಮಹಿಳೆಯರೆಂದರೆ- ತಾರ.ಎ.ಮಂಜು, ಗುಣಾಂಬ ಶಿವಳ್ಳಿ, ಗೌರಮ್ಮ ರಾಮಚಂದ್ರ, ಜಯಮ್ಮ, ಶಂಕರಮ್ಮ, ಗೌರಮ್ಮ ವೆಂಕಟರಾಮೇಗೌಡ, ವನಜಾಕ್ಷಮ್ಮ, ಪಾರ್ವತಮ್ಮ, ಶಾರದಮ್ಮ, ಸರಸ್ವತಿ ಜವರೇಗೌಡ, ವೀಣಾ ಗೋಪಾಲ್, ಸುಧಾರಾಣಿ, ಎನ್.ಎಸ್.ಗೌರಮ್ಮ, ಚಂದ್ರಮಣಿ, ನಾಗರತ್ನ, ಸುನಂದ, ಜಯಲಕ್ಷ್ಮಮ್ಮ, ಸುಶೀಲಮ್ಮ, ಚಂದ್ರಕಲಾ, ರಾಧಾ ಪುಟ್ಟಸ್ವಾಮಿ, ಕೆ.ಎಂ.ಯಶೋಧಮ್ಮ, ವನಮಾಲ, ಶಶಿಕಲಾ, ಶಾಂತಮ್ಮ, ಡಿ.ಕೆ.ಬಸಮ್ಮ, ಭಾಗ್ಯ ರಾಜೇಗೌಡ, ಭಾಗ್ಯ ಕೃಷ್ಣಕುಮಾರ್, ಎಸ್.ಆರ್.ಭಾಗ್ಯ ರಾಮಚಂದ್ರು, ಸೌಭಾಗ್ಯ, ಸುಂದ್ರಮ್ಮ, ಸೌಭಾಗ್ಯ, ಜಿ.ಕೆ.ಸಾಧನ, ಕೆ.ಎಸ್.ಸುಕನ್ಯಾ, ಸವಿತಾ, ಕೆ.ಎಸ್.ದ್ಯಾವಮ್ಮ, ವಿಜಯಲಕ್ಷ್ಮಿ, ಜಯಂತಿ, ಸುನಂದ, ಎಂ.ಡಿ.ಕೌಸಲ್ಯ, ಜಯಮ್ಮ ಕೇಶವೇಗೌಡ, ಸುಲೋಚನಬಾಯಿ, ನಂಜಮ್ಮನವರು…
ಹಾಗೆಯೇ, 2011ರಿಂದ 16ನೆಯ ಸಾಲಿನವರೆಗೆ ಹಾಸನದ ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಾಗಿ ಅಧಿಕಾರದಲ್ಲಿ ತೊಡಗಿಸಿಕೊಂಡ ಮಹಿಳೆಯರೆಂದರೆ- ಭಾಗ್ಯ ಗೋವಿಂದೇಗೌಡ, ಜ್ಯೋತಿ ಗುರುದೇವ, ಸರೋಜಮ್ಮ, ಎಸ್.ಎಲ್.ನಾಗಮಣಿ, ಸಿ.ಎನ್.ರತ್ನಮ್ಮ, ವಿ.ಪಿ.ಜ್ಯೋತಿ ಗಂಗಾಧರ, ಬಿ.ಜಯಶೀಲ ಜಯಶಂಕರ್, ಎಂ.ವಿ.ಹೇಮಾವತಿ ಮಂಜುನಾಥ್, ದೇವಿಕಾ, ಇಂದಿರಾ ಧರ್ಮಪ್ಪ, ಡಿ.ಜಿ.ಅಂಬಿಕಾ ರಾಮಣ್ಣ, ಕುಸುಮ ಬಾಲಕೃಷ್ಣ, ಶಾಂತಮ್ಮ ಹಾಸನ, ವಸಂತ, ಸುಭದ್ರ, ಎಚ್.ಗೌರಮ್ಮ, ಮಂಜುಳ ಬೈರಾಜು, ಸುಲೋಚನಾ ರಾಮಕೃಷ್ಣ, ಹೆಚ್.ಬಿ.ಮಂಜಮ್ಮ ಅವರು.
ಮುಂದೆ 2016ರಿಂದ 21ನೆಯ ಸಾಲಿನವರೆಗೆ ಹಾಸನದ ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಾಗಿ ಅಧಿಕಾರದಲ್ಲಿ ತೊಡಗಿಸಿಕೊಂಡ ಮಹಿಳೆಯರೆಂದರೆ- ಬಿ.ಎಸ್.ಶ್ವೇತಾ ದೇವರಾಜ್, ಸುಜಾತ ಗಣೇಶ್ ಆಲೂರು, ಎಂ.ರತ್ನಮ್ಮ ಲೋಕೇಶ್, ಲೋಲಾಕ್ಷಮ್ಮ ಮಹದೇವಪ್ಪ, ಎಸ್.ವತ್ಸಲ ಶೇಖರಪ್ಪ, ಲತಾ, ಎಸ್.ಸಿ.ಲೀಲಾ ಧರ್ಮಶೇಖರ್, ಎನ್.ಎಸ್.ಲತಾ ಮಂಜೇಶ್ವರಿ, ದೇವಿಪ್ರಸಾದ್, ರತ್ನಮ್ಮ, ಶ್ವೇತಾ ಆನಂದ್ ಅಣತಿ, ಮಂಜುಳ.ಎಂ.ಶಂಕರ್, ಕೆ.ಎನ್.ಮಮತ ರಮೇಶ್, ದೇವಮ್ಮ ಗವಿರಂಗಯ್ಯ, ಎಂ.ಡಿ.ಸುಧಾ, ವಿ.ಸ್ಮಿತಾ ಪುನೀತ್, ಜಯಮ್ಮ ರಂಗಶೆಟ್ಟಿ, ಪುಷ್ಪ, ಯಶೋಧಮ್ಮ ಕೃಷ್ಣೇಗೌಡ, ಶಾರದಮ್ಮ ಶಿವಣ್ಣ, ಚಂಚಲ ಕುಮಾರಸ್ವಾಮಿ, ಉಜ್ಮರಿಜ್ವಿನ್ ಅವರು.
ಇದನ್ನೂ ಓದಿ – ಅಮೇರಿಕಾದಲ್ಲಿ ಸಾಧನೆ ಮಾಡಿದ ಭೌತವಿಜ್ಞಾನಿ- ಹಾಸನದ ಡಾ.ರತ್ನಾನಾಯಕ್
ಈ ಎಲ್ಲ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಹುದ್ದೆಗಳಿಗೆ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡು ತಕ್ಕಮಟ್ಟಿಗೆ ಸಮರ್ಪಕವಾಗಿಯೇ ದಿಟ್ಟತನದಿಂದ ಕಾರ್ಯ ನಿರ್ವಹಿಸಿದ ಮಹಿಳೆಯರಲ್ಲಿ ಹೆಚ್ಚಿನವರು ತಮ್ಮ ಅಧಿಕಾರಾವಧಿ ಮುಗಿದ ನಂತರ ಸಾಮಾಜಿಕ, ರಾಜಕೀಯ, ಸಾರ್ವಜನಿಕ ಕ್ಷೇತ್ರದಿಂದ ಮರೆಯಾಗಿ ಹೋಗುವುದು ಆತಂಕಕ್ಕೆ ಕಾರಣವಾಗಿದೆ. ಇವರೆಲ್ಲರೂ ನಿರಂತರವಾಗಿ ಸಾಮಾಜಿಕ ಕೇತ್ರದಲ್ಲಿ ಗಟ್ಟಿಯಾಗಿ ನಿಲ್ಲುವಂತಾಗಿದ್ದರೆ, ಸಾರ್ವಜನಿಕ ಕೇತ್ರದಲ್ಲಿ ತೊಡಗಿಕೊಳ್ಳುವಂತಿದ್ದರೆ ರಾಜಕೀಯದಲ್ಲಿ ಮಹಿಳೆಯರು ಹಾಸನ ಜಿಲ್ಲೆಯಲ್ಲಿ ಬಹಳ ದೊಡ್ಡದನ್ನು ಸಾಧಿಸಲು ಸಾಧ್ಯವಾಗುತ್ತಿತ್ತು. ಮುಂದಿನ ದಿನಗಳಲ್ಲಿ ಇವರನ್ನೆಲ್ಲಾ ಒಗ್ಗೂಡಿಸಿ, ಸಂಘಟಿಸಿ- ರಾಜಕೀಯವಾಗಿ ಜಿಲ್ಲೆಯಲ್ಲಿ ಮಹಿಳೆಯರ ಮೂಲಕ ಮಹತ್ವದ ಬೆಳವಣಿಗೆಯಾಗುವುದರ ಕಡೆಗೆ ಎಲ್ಲರೂ ಚಿಂತಿಸಬೇಕಿದೆ.
ರಾಜಕೀಯ ರಂಗದಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಪ್ರಭುತ್ವದ ಯೋಜನೆಗಳ ಫಲಾನುಭವಿಯಾಗಿ, ಆ ಯೋಜನೆಗಳ ವಿಸ್ತರಣಾಕಾರಳಾಗಿಯೇ ಹೊರತು ರಾಜಕೀಯ ಯೋಜನೆಗಳ ನೀತಿ ನಿರೂಪಕಳಾಗಿಯಲ್ಲ! ಮಹಿಳೆಗೆ ರಾಜಕೀಯ ಅಧಿಕಾರ ಚಲಾಯಿಸುವ ಅವಕಾಶ ಮತ್ತಷ್ಟು ಸಿಗಬೇಕು ಎನ್ನುವುದು ನಿಜ. ಈ ನಿಟ್ಟಿನಲ್ಲಿ ಇಡೀ ದೇಶದ ರಾಜಕಾರಣವನ್ನು ಗಮನಿಸಿದರೆ ಕರ್ನಾಟಕದಲ್ಲಿ ಮಹಿಳಾ ಪ್ರಾತಿನಿಧ್ಯ ಅತ್ಯಂತ ಕಡಿಮೆ ಎನ್ನಬಹುದು. ಹಾಸನದಲ್ಲಿಯಂತೂ ಆ ಪ್ರಮಾಣ ಮತ್ತಷ್ಟು ಕಡಿಮೆಯಿದೆ. ರಾಜಕೀಯದಲ್ಲಿ ತೊಡಗಲು ಮಹಿಳೆಯರಿಗೆ ಶಿಕ್ಷಣ ಮತ್ತು ರಾಜಕೀಯ ಜ್ಞಾನ, ಆರ್ಥಿಕ ಸ್ವಾವಲಂಬನೆ ಹಾಗೂ ಕುಟುಂಬ/ಸಮಾಜದ ಬೆಂಬಲ, ಪಕ್ಷಗಳಲ್ಲಿ ನೈಜ ಅವಕಾಶ-ಒಳಗೊಳ್ಳುವಿಕೆ, ಮೀಸಲಾತಿಯ ಬಗ್ಗೆ ಮಹಿಳೆಯರಿಗೆ ಜಾಗೃತಿ ಮೂಡಿಸುವುದು, ಇವೆಲ್ಲಕ್ಕಾಗಿ- ಮಾಧ್ಯಮ ಮತ್ತು ಸಾರ್ವಜನಿಕ ವೇದಿಕೆಯನ್ನು ಮಹಿಳೆಯರು ಕಲ್ಪಿಸಿಕೊಳ್ಳಬೇಕು. ತಳಮಟ್ಟದಿಂದ ಹೋರಾಟ ಮುನ್ನೆಡೆಸುವ ಮೂಲಕ ಮಹಿಳೆಯರೇ ಪರಸ್ಪರರಿಗೆ ಬೆಂಬಲವಾಗಬೇಕು. ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮನೋಭಾವ ಹಿಮ್ಮೆಟ್ಟಿಸಿ, ಮಹಿಳಾ ಹಕ್ಕುಗಳ ಕುರಿತು ಜಾಗೃತಿ ಜೊತೆಗೆ ಮಹಿಳಾ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು. ಅದರಲ್ಲೂ ಮಹಿಳೆಯರಿಗೆ ಸಂವಿಧಾನ, ಹಕ್ಕುಗಳು, ಮತದಾನ ಪ್ರಕ್ರಿಯೆ, ನೀತಿಗಳ ಬಗ್ಗೆ ಮಾಹಿತಿ, ಆತ್ಮವಿಶ್ವಾಸದ ಜೊತೆಗೆ ಶಿಕ್ಷಣ, ಅವಕಾಶ, ಸಮಾಜದ ಬೆಂಬಲ ಈ ಮೂರು ಅಂಶ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಪ್ರಬಲರಾಗಲು ಉತ್ತೇಜಿಸುತ್ತದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹಾಸನದಲ್ಲಿ ಕೆಲಸಗಳಾಗಲಿ. ಹಾಸನ ಜಿಲ್ಲೆಯಲ್ಲಿ ಪ್ರಬಲ ರಾಜಕೀಯ ನಾಯಕಿಯರು ಹೊರಹೊಮ್ಮಲಿ ಎಂದು ಆಶಿಸುತ್ತೇನೆ. ಜೊತೆಗೆ ಈ ದೀರ್ಘ ರಾಜಕೀಯ ಪಯಣದಲ್ಲಿ ಹಿರಿಯ ಬೇರುಗಳಾಗಿ ಕಾರ್ಯನಿರ್ವಹಿಸಿದ ತಾಯಂದಿರಿಗೆ ನನ್ನ ನಮನಗಳು.

ಗಿರಿಜಾ ಎಸ್.ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ,
ಇದನ್ನೂ ಓದಿ- ಜಿಲ್ಲೆಯ ದಲಿತ ಸಂಘರ್ಷ ಸಮಿತಿಯಲ್ಲಿ ಮಹಿಳೆಯರು


